ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಶಿಕ್ಷೆಯಾಗದೇ ಸಂಸ್ಕಾರ ಕಲಿಸಬೇಕು: ವಿದ್ಯಾಧೀಶತೀರ್ಥ ಸ್ವಾಮೀಜಿ

Published 23 ಮೇ 2024, 16:27 IST
Last Updated 23 ಮೇ 2024, 16:27 IST
ಅಕ್ಷರ ಗಾತ್ರ

ಮೈಸೂರು: ‘ಶಿಕ್ಷಣವು ಮಕ್ಕಳಿಗೆ ಶಿಕ್ಷೆಯಾಗಬಾರದು. ಜ್ಞಾನದ ಜತೆ ಸಂಸ್ಕಾರವನ್ನೂ ಕಲಿಸಬೇಕು’ ಎಂದು ಉಡುಪಿಯ ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಕೃಷ್ಣಮೂರ್ತಿಪುರಂನ ರಾಘವೇಂದ್ರ ಸ್ವಾಮಿ ಮಠದ ಸಮೀಪದಲ್ಲಿ ನೂತನವಾಗಿ ನಿರ್ಮಿಸಿರುವ, ವಿಜಯವಿಠ್ಠಲ ವಿದ್ಯಾಶಾಲೆಯ ಉಪಕ್ರಮವಾದ ‘ಬಿಎಸ್‌ಎಸ್‌ ವಿದ್ಯೋದಯ’ ಶಾಲೆಯ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.

‘ಮಕ್ಕಳನ್ನು ‌ಶಿಕ್ಷಕರು ಚೆನ್ನಾಗಿ ಕಾಳಜಿ ಮಾಡಬೇಕು. ಹಾವಾಡಿಗ ಹಾವು ಆಡಿಸುವಂತೆ ಶಿಕ್ಷಕರು ಮಕ್ಕಳನ್ನು ಆಡಿಸಬೇಕು. ಸರಿ ದಾರಿಯಲ್ಲಿ ಅವರನ್ನು ನಡೆಸಬೇಕು. ಆಗ ಅವರಿಗೆ ನಾಗಮಣಿಗಿಂತಲೂ ಮಿಗಿಲಾದುದು ದೊರೆಯುತ್ತದೆ’ ಎಂದು ಹೇಳಿದರು.

‘ವಿದ್ಯೆ ಎನ್ನುವುದು ದೊಡ್ಡ ಸಂಪತ್ತು. ಅದನ್ನು ದಾನ ಮಾಡಿದಷ್ಟು ವೃದ್ಧಿಯಾಗುತ್ತಾ ಹೋಗುತ್ತದೆ. ಗಂಗೆಯಂತೆ ಹರಿಯುತ್ತಿರುತ್ತದೆ’ ಎಂದರು.

ಮಹಿಳೆಯರ ಸ್ಥಿತಿ ಶೋಚನೀಯ:

‘ದೇಶದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಕೊಂದು ರಕ್ತ ಹರಿಯುವಂತೆ ಮಾಡುತ್ತಿರುವುದು ದುಃಖದ ಸಂಗತಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹೆಣ್ಣನ್ನು ಭೋಗದ ವಸ್ತು ಎಂದು ನೋಡದೇ ಭಗಿನಿಯಂತೆ ಕಾಣಬೇಕು. ಸಹೋದರಿಯರಂತೆ ನೋಡಬೇಕು. ಆ ಭಾವನೆ ಎಲ್ಲರಲ್ಲೂ ಬರಬೇಕು’ ಎಂದು ಆಶಿಸಿದರು.

ಸಾನ್ನಿಧ್ಯ ವಹಿಸಿದ್ದ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಮಕ್ಕಳಿಗೆ ವಿದ್ಯೆ ಜೊತೆ ಸಂಸ್ಕಾರ ಬಹಳ ಮುಖ್ಯ. ಆಗ ಅವರು ದಾರಿ ತಪ್ಪುವುದಿಲ್ಲ. ನಾಳೆ ಸರಿ ಹೋಗುತ್ತಾನೆ ಎಂದು ಸಹಿಸಿಕೊಳ್ಳುವ ಭಾವನೆಯನ್ನು ಬಿಟ್ಟು ಇಂದೇ ಸರಿದಾರಿಗೆ ತರುವಂಥ ಹಾಗೂ ಸಂಸ್ಕಾರ ಕಲಿಸುವ ಕೆಲಸವನ್ನು ಪೋಷಕರು ಮಾಡಬೇಕು’ ಎಂದು ಸಲಹೆ ನೀಡಿದರು.

ವಿದ್ಯೆ ಜತೆ ಸಂಸ್ಕಾರ ಅಗತ್ಯ:

ಸಾನ್ನಿಧ್ಯ ವಹಿಸಿದ್ದ ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ‘ಮಕ್ಕಳ ಮುಖದಲ್ಲಿ ನಕ್ಷತ್ರದಂತಹ ಹೊಳಪಿದ್ದರೆ ಅಂತಹ ದೇಶಕ್ಕೆ ಉತ್ತಮ ಭವಿಷ್ಯವಿದೆ. ವಿದ್ಯೆ ಜತೆ ಸಂಸ್ಕಾರವೂ ಇರಬೇಕು. ಅದು ಭವ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ಶಾಲೆಯ ಗೌರವ ಕಾರ್ಯದರ್ಶಿ ವಾಸುದೇವ ಭಟ್ ಮಾತನಾಡಿ, ‘ಹಿಂದೆ ಇಲ್ಲಿ ಭಗಿನಿ ಸೇವಾ ಸಮಾಜದ ಶಾಲೆ ಇತ್ತು. ಶಿಥಿಲಗೊಂಡಿದ್ದ ಅದನ್ನು ಕೆಡವಿ ದಾನಿಗಳ ನೆರವಿನೊಂದಿಗೆ ₹ 30 ಕೋಟಿ ವೆಚ್ಚದಲ್ಲಿ ಹೊಸದಾಗಿ ಹಾಗೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಿಂದಲೇ ಶಾಲೆ ಆರಂಭಗೊಳ್ಳಲಿದೆ. ಈಗಾಗಲೇ 150 ಮಕ್ಕಳು ಪ್ರವೇಶ ಪಡೆದಿದ್ದಾರೆ’ ಎಂದು ತಿಳಿಸಿದರು.

‘ವೈ.ಕೆ. ಅಮೃತಾಬಾಯಿ, ಎಸ್.ಕೆ. ಸುರಮಾಬಾಯಿ ಭಗನಿ ಸೇವಾ ಸಮಾಜ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಜಾಗ ನೀಡಿದೆ. ಸಿಬಿಎಸ್‌ಇ ಪಠ್ಯಕ್ರಮವನ್ನು ಬೋಧಿಸಲಾಗುತ್ತದೆ. ಎನ್ಇಪಿ- 2020 ಪ್ರಕಾರ ಅಗತ್ಯವಾದ ವ್ಯವಸ್ಥೆ ಮಾಡಿದ್ದೇವೆ. 15 ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಪ್ರೀಕೆಜಿ, ಎಲ್‌ಕೆಜಿ, ಯುಕೆಜಿ ಹಾಗೂ 1ರಿಂದ 5ನೇ ತರಗತಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುವುದು. ಗುಣಮಟ್ಟದ ಶಿಕ್ಷಣದೊಂದಿಗೆ‌ ಉತ್ತಮ ಸಂಸ್ಕಾರವನ್ನು ಕೊಡುವ ಆಶಯದೊಂದಿಗೆ ‌ವಿಶೇಷ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಶಾಲೆ ನಿರ್ಮಾಣಕ್ಕೆ ನೆರವಾದ ದಾನಿಗಳನ್ನು ಸನ್ಮಾನಿಸಲಾಯಿತು.

ಉದ್ಯಮಿ ಆರ್. ಗುರು, ಶಾಲೆಯ ಕಾರ್ಯಾಧ್ಯಕ್ಷ ಬಿ.ಶ್ರೀನಿವಾಸ್, ಖಜಾಂಚಿ ಎಚ್‌.ಟಿ.ಸ್ವರಕುಮಾರ್‌ ಹಾಗೂ ಟ್ರಸ್ಟಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT