ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಪ್ರಚಾರ ಅಂತ್ಯ, ಮನೆಗೆ ಭೇಟಿ

ಲೋಕಸಭಾ ಚುನಾವಣೆಯ ಪ್ರಮುಖ ಘಟ್ಟಕ್ಕೆಇನ್ನೊಂದೇ ದಿನ ಬಾಕಿ
Published 24 ಏಪ್ರಿಲ್ 2024, 16:22 IST
Last Updated 24 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದ್ದು, ಅಭ್ಯರ್ಥಿಗಳು, ರಾಜಕೀಯ ಪಕ್ಷದವರು ಮತ್ತು ಬೆಂಬಲಿಗರು ಮನೆ ಮನೆಗಳಿಗೆ ತೆರಳಿ ಮತ ಯಾಚಿಸಲು ಅವಕಾಶವಿದೆ.

ಚುನಾವಣೆಯ ಪ್ರಮುಖ ಘಟ್ಟವಾದ ಮತದಾನ ಶುಕ್ರವಾರ (ಏ.26) ನಡೆಯಲಿದ್ದು, ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಕೊನೆಯ ಕ್ಷಣದ ಕಸರತ್ತುಗಳನ್ನು ಆರಂಭಿಸಿದ್ದಾರೆ.

ಯದುವೀರ್ ಅವರು ಬುಧವಾರ ನಗರದ ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ಮತ ಯಾಚಿಸಿದರು. ಅಲ್ಲಿನ ಕೆಲ ವ್ಯಾಪಾರಿಗಳು ಕುಂಬಳಕಾಯಿಯಿಂದ ದೃಷ್ಟಿ ತೆಗೆದು ಹಾರೈಸಿದರು.

ಪ್ರಮುಖ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಎಂ.ಲಕ್ಷ್ಮಣ ಹಾಗೂ ಬಿಜೆಪಿಯ ಯದುವೀರ್‌ ಕೃ‌ಷ್ಣದತ್ತ ಚಾಮರಾಜ ಒಡೆಯರ್‌ ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ಅವರಿಗೆ ಪ್ರಮುಖರು ಸಾಥ್‌ ನೀಡಿದರು.

ಲಕ್ಷ್ಮಣ ಅವರು ಎನ್.ಆರ್. ಮೊಹಲ್ಲಾ, ಆಶೋಕಪುರಂ, ಕೆ.ಜಿ. ಕೊಪ್ಪಲು, ಚಾಮುಂಡೇಶ್ವರಿ ಕ್ಷೇತ್ರದ ವಿವಿಧೆಡೆ ರೋಡ್‌ ಶೋ ನಡೆಸಿ ಮತ ಯಾಚಿಸಿದರು. ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ್‌ ಧ್ರುವನಾರಾಯಣ, ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ‘ಮುಡಾ’ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ಮೊದಲಾದವರು ಜತೆಗೂಡಿ ಮತ ಕೇಳಿದರು.

ಅಶೋಕಪುರಂನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್‌ ಶೋ ಆರಂಭಿಸಲಾಯಿತು. ಕೆ.ಜಿ. ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನ, ಸಿದ್ದಪ್ಪಾಜಿ, ಗಣಪತಿ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ತಿಲಕ್‌ನಗರದಲ್ಲಿ ಶನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರೋಡ್‌ ಶೋ ನಡೆಸಿ ಬೆಂಬಲ ಕೋರಿದರು. ಕುರುಬರಹಳ್ಳಿಯಲ್ಲಿ ಆಯರಹಳ್ಳಿ ಮಾಕಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸ್ಥಳೀಯರಿಂದ ಮತ ಯಾಚಿಸಿದರು.

ಸಂವಿಧಾನ ಉಳಿಸಿಕೊಳ್ಳಲು: ‘ದೇಶದ ಸುರಕ್ಷತೆಗಾಗಿ ಕಾಂಗ್ರೆಸ್ ಪಕ್ಷ ಮಿಡಿಯುತ್ತಿದೆ. ನಮ್ಮ ಪ್ರಾಣವನ್ನದರೂ ಕೊಟ್ಟು ಸಂವಿಧಾನ ಮತ್ತು ನಮ್ಮ ಜನರನ್ನು ರಕ್ಷಣೆ ಮಾಡುತ್ತೇವೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದು ಅದನ್ನು ದುರ್ಬಳಕೆ ಮಾಡಿಕೊಳ್ಳಲೆಂದು ನಾನು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇನೆ. ಮತದಾರರು ಇದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಲಕ್ಷ್ಮಣ ಕೋರಿದರು.

ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ‘ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 10 ಸಾವಿರ ಮತಗಳ ಲೀಡ್‌ ಕೊಡಬೇಕು’ ಎಂದು ಮನವಿ ಮಾಡಿದರು.

‘ಬಿಜೆಪಿ– ಜೆಡಿಎಸ್‌ನವರು ಮೈತ್ರಿ ಮಾಡಿಕೊಂಡಿದ್ದು, ಗೆಲ್ಲುವುದಕ್ಕೆ ನೂರೆಂಟು ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅವರ ತಂತ್ರಗಳಿಗೆ ಮತದಾರರು ಬಲಿಯಾಗಬಾರದು’ ಎಂದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಪಾಲ್ಗೊಂಡಿದ್ದರು.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ವ್ಯಾಪಾರಿಗಳಿಂದ ಮತ ಯಾಚಿಸಿದರು
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ವ್ಯಾಪಾರಿಗಳಿಂದ ಮತ ಯಾಚಿಸಿದರು

‘ಮಹಾರಾಜ ಮನೆಯಲ್ಲೇ ಇರಲಿ’ ‘

ಮುಖ್ಯಮಂತ್ರಿ’ ಚಂದ್ರು ಮಾತನಾಡಿ ‘ಮಹಾರಾಜರು ಸಂಸದರಾಗಲು ಚುನಾವಣೆಗೆ ಬಂದಿದ್ದಾರೆ. ನಾನು ಭೇಟಿಯಾಗುವುದಕ್ಕಾಗಿ ಅವರಿಗೆ ಒಂದು ಪತ್ರ ಬರೆದಿದ್ದೆ. ಆದರೆ ಏನೂ ಪ್ರತಿಕ್ರಿಯೆ ಬರಲಿಲ್ಲ. ಅವರು ಬಿಜೆಪಿಯವರನ್ನು ಬಿಟ್ಟು ಬೇರೆಯವರನ್ನು ಅರಮನೆ ಒಳಗಡೆಗೆ ಸೇರಿಸುವುದಿಲ್ಲ ಎಂಬುದು ಆಗ ಗೊತ್ತಾಯಿತು. ಅವರನ್ನು ಸಾಮಾನ್ಯ ಜನರು ಭೇಟಿಯಾಗುವುದು ಕಷ್ಟ. ಆದರೆ ಲಕ್ಷ್ಮಣ ಸಾಮಾನ್ಯ ಕಾರ್ಯಕರ್ತ. ಜನರ ಒಡನಾಟದಲ್ಲೇ ಬೆಳೆದವರು. ರಾಜರು ಆಸ್ಥಾನದಲ್ಲಿ ಇರಲಿ ಲಕ್ಷ್ಮಣ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಕೋರಿದರು. ‘ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡೆತ್ತುಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಸರ್ವ ಜನಾಂಗದ ಶಾಂತಿಯ ತೋಟ ಮಾಡುವುದಕ್ಕೆ ಶ್ರಮಿಸುತ್ತಿದ್ದಾರೆ. ಆದರೆ ನರೇಂದ್ರ ಮೋದಿ– ಅಮಿತ್‌ ಶಾ ಜೋಡಿ ಸರ್ವನಾಶಕ್ಕೆ ನಾಂದಿ ಹಾಡುತ್ತಿರುವ ಜೋಡಿ. ಪ್ರಜಾಪ್ರಭುತ್ವ ಉಳಿಸಲು ಸಂವಿಧಾನ ಗೌರವಿಸಲು ಹಾಗೂ ಕೋಮುವಾದಿಗಳನ್ನು ಕೊನೆಗಾಣಿಸಲು ಜನರು ಕಾಂಗ್ರೆಸ್‌ಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು. ‘ನಮ್ಮ ಪಕ್ಷವು ದೇಶದಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT