ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಘಟ್ಟ ಉಳಿವಿಗೆ ಪ್ರಾಧಿಕಾರ ರಚಿಸಿ: ಪರಿಸರ ಸಂಘಟನೆ ಸದಸ್ಯರ ಒತ್ತಾಯ

Published 21 ಆಗಸ್ಟ್ 2024, 13:56 IST
Last Updated 21 ಆಗಸ್ಟ್ 2024, 13:56 IST
ಅಕ್ಷರ ಗಾತ್ರ

ಮೈಸೂರು: ‘ಪಶ್ಚಿಮ ಘಟ್ಟದ ಜಾಗತಿಕ ಮಹತ್ವ ಉಳಿಸಲು ಪ್ರಾಧಿಕಾರ ರಚಿಸಿ’ ಎಂದು ಒತ್ತಾಯಿಸಿ ‘ಪರಿಸರಕ್ಕಾಗಿ ನಾವು’ ಪರಿಸರ ಸಂಘಟನೆ ಸದಸ್ಯರು ಗಾಂಧಿ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

‘ಉಳಿಸಿ, ಉಳಿಸಿ ಪಶ್ಚಿಮ ಘಟ್ಟ ಉಳಿಸಿ’, ‘ಪಶ್ಚಿಮ ಘಟ್ಟಗಳ ಸಂರಕ್ಷಣೆ, ಅದುವೇ ನಮ್ಮ ಹೊಣೆ’, ‘ಅಳಿದರೆ ಪಶ್ಚಿಮ ಘಟ್ಟಗಳ ಸಂಪತ್ತು, ಕಾದಿದೆ ಸಕಲ ಜೀವಿಗಳಿಗೆ ಆಪತ್ತು, ‘ಭೂಮಿ ಇರುವುದೊಂದೇ, ಉಳಿಸೋಣ ನಾವಿಂದೇ’, ‘ಪರಿಸರದಿಂದ ನಾವು, ಪರಿಸರಕ್ಕಾಗಿ ನಾವು’ ಇತ್ಯಾದಿ ಬರಹವುಳ್ಳ ಫಲಕ ಹಿಡಿದು ಘೋಷಣೆ ಕೂಗಿದರು.

‘ಈಚೆಗೆ ಪ್ರತೀ ವರ್ಷ ಮುಂಗಾರು ಮಳೆಯ ಕಾಲದಲ್ಲಿ ದೇಶದ ನಾನಾ ಭಾಗಗಳಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ವಯನಾಡ್‌ನಲ್ಲಿ ನಡೆದ ದುರಂತದಲ್ಲಿ ನೂರಾರು ಜನ ತಮ್ಮ ಜೀವ ಕಳೆದುಕೊಂಡಿದ್ದಾರೆ. ಇದನ್ನು ರಾಜ್ಯ ಸರ್ಕಾರ ಮುನ್ನೆಚ್ಚರಿಕೆಯಾಗಿ ತೆಗೆದುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್‌, ಹೋಮ್‌ ಸ್ಟೇ, ಹೋಟೆಲ್‌ಗಳ ಅಕ್ರಮ ನಿರ್ಮಾಣ, ಮಿತಿಮೀರಿದ ಬುಲ್ಡೋಜರ್‌ ಬಳಕೆಯಿಂದ ಪರಿಸರ ಅಪಾಯಕ್ಕೆ ಸಿಲುಕಿದೆ. ಅದರೊಂದಿಗೆ ನಾವೂ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ಮರೆತಿದ್ದೇವೆ. ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವ ಅರಿತು ಪ್ರೊ.ಮಾಧವ ಗಾಡ್ಗೀಳ್‌ ಸಮಿತಿಯು 2011ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ ಅಲ್ಲಿಗೆ ಹಾನಿ ಮಾಡುವ ಯಾವುದೇ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸಬೇಕು ಎಂದು ಸೂಚಿಸಿತ್ತು. ಸರ್ಕಾರ ಈಗಲಾದರೂ ಈ ಬಗ್ಗೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT