ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ರೈತ ದಿನಾಚರಣೆ: ರೈತ ಮಹಿಳೆಗೆ ಗೌರವ ಸಮರ್ಪಣೆ

ಎಲ್ಲ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಿ: ಕುರುಬೂರು ಶಾಂತಕುಮಾರ್‌
Last Updated 23 ಡಿಸೆಂಬರ್ 2021, 13:23 IST
ಅಕ್ಷರ ಗಾತ್ರ

ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದ ಜಲದರ್ಶಿನಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರೈತ ಮಹಿಳೆ, ತಿ.ನರಸೀಪುರ ತಾಲ್ಲೂಕಿನ ಹುಣಸೂರು ಗ್ರಾಮದ ಚಂದ್ರಿಕಾ ಅವರನ್ನು ಸನ್ಮಾನಿಸಲಾಯಿತು.

ಚಂದ್ರಿಕಾ ಅವರ ಪತಿ ರೈತ ಸಂಘದ ಸದಸ್ಯರಾಗಿದ್ದರು. ಅವರು ನಿಧನರಾದ ಬಳಿಕ ಕೃಷಿಯನ್ನು ಮುಂದುವರಿಸುತ್ತಿದ್ದಾರೆ. 8 ಎಕರೆ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

‘ಐದು ವರ್ಷಗಳಿಂದ ಕೃಷಿಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಗಂಡ ನಡೆಸುತ್ತಿದ್ದ ಸಮಗ್ರ ಕೃಷಿ, ಸಾವಯವ ಕೃಷಿ ಪದ್ಧತಿಯನ್ನು ನಾನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಭತ್ತ, ರಾಗಿ, ಟೊಮೆಟೊ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ನನ್ನನ್ನು ಗುರುತಿಸಿ ಸನ್ಮಾನಿಸಿದ್ದು ಖುಷಿ ನೀಡಿದೆ’ ಎಂದು ಚಂದ್ರಿಕಾ ಸಂತಸ ಹಂಚಿಕೊಂಡರು.

ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ‘ಪ್ರಧಾನಿಯಾಗಿದ್ದ ಚರಣ್‌ ಸಿಂಗ್‌ ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿಯಾಗಿದ್ದೂ ಇವರ ಅವಧಿಯಲ್ಲೇ. ಗಾಂಧಿ, ಅಂಬೇಡ್ಕರ್‌ ಜಯಂತಿಯಂತೆ ರೈತ ದಿನಾಚರಣೆಯನ್ನೂ ರಾಜ್ಯ ಸರ್ಕಾರ ಆಚರಿಸಬೇಕು. ಅಂದು ಎಲ್ಲೆಡೆ ಕೃಷಿ ಮೇಳ ಆಯೋಜಿಸಬೇಕು. ರೈತರ ಎಲ್ಲ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಬೆಲೆ ಖಾತರಿ ಸಿಗುವಂತಹ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಎಲ್ಲ ಬೆಳೆಗಳಿಗೂ ವಿಮೆ ಸಿಗಬೇಕು’ ಎಂದು ಆಗ್ರಹಿಸಿದರು.

‘ರೈತ ದಿನಾಚರಣೆ ಅಂಗವಾಗಿ ಡಿ.26ರಂದು ಬೆಳಿಗ್ಗೆ 11ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಇದರಲ್ಲಿ 5 ಸಾವಿರ ರೈತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಂಘಟನೆಯ ಪದಾಧಿಕಾರಿಗಳೇ ಊಟದ ವ್ಯವಸ್ಥೆ ಮಾಡಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ರೈತರ ಸೇವೆಗಾಗಿ 40 ವರ್ಷಗಳಿಂದ ದುಡಿಯುತ್ತಿರುವ ನನಗೆ ಅಭಿನಂದನೆ ಸಲ್ಲಿಸಲಾಗುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ರೈತ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ಶಿವರಾಜಪ್ಪ, ಡಾ.ಮಹದೇವಯ್ಯ, ನಿವೃತ್ತ ಪ್ರಾಂಶುಪಾಲ ಎನ್‌.ಎನ್‌.ನಾಯಕ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಜಿಲ್ಲಾಧ್ಯಕ್ಷ ಸೋಮಶೇಖರ್‌, ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಕಿರಸಗೂರು ಶಂಕರ್‌ ಇದ್ದರು.

***

ಎಂಇಎಸ್‌ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಡಿ.31ರಂದು ನಡೆಸುತ್ತಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವ ಸಂಬಂಧ ಸಂಘದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇವೆ.

–ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ರೈತ ಸಂಘಟನೆಗಳ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT