ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಪ್ಲಾಸ್ಟಿಕ್ ತ್ಯಾಜ್ಯ ಕೊಟ್ಟರೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಉಚಿತ

ಮೈಸೂರು ಜಿಲ್ಲಾಡಳಿತದಿಂದ ವಿನೂತನ ಉಪಕ್ರಮ
Published 4 ಜುಲೈ 2024, 7:17 IST
Last Updated 4 ಜುಲೈ 2024, 7:17 IST
ಅಕ್ಷರ ಗಾತ್ರ

ಮೈಸೂರು: ದೊಡ್ಡ ಸವಾಲಾಗಿ ಪರಿಣಮಿಸಿರುವ ಪ್ಲಾಸ್ಟಿಕ್‌ ತ್ಯಾಜ್ಯದ ನಿರ್ವಹಣೆಗೆಂದು ಇಲ್ಲಿನ ಜಿಲ್ಲಾಡಳಿತ ವಿನೂತನ ಉಪಕ್ರಮ ಕೈಗೊಂಡಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ತಂದುಕೊಟ್ಟರೆ ಅವರಿಗೆ ಉಚಿತ ಉಪಾಹಾರ ಹಾಗೂ ಊಟ ನೀಡುವ ಕಾರ್ಯಕ್ರಮ ಜಾರಿಗೊಳಿಸಿದೆ.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಇದು ಅನ್ವಯವಾಗಲಿದೆ.

ಅರ್ಧ ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ ಉಪಾಹಾರ ಹಾಗೂ ಒಂದು ಕೆ.ಜಿ. ಕೊಟ್ಟರೆ ಊಟವನ್ನು ಉಚಿತವಾಗಿ ನೀಡಲಾಗುತ್ತದೆ.

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಮೂಲಕ ನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯ ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತದೆ. ಉಪಾಹಾರಕ್ಕೆ ₹ 5 ಹಾಗೂ ಊಟಕ್ಕೆ ₹10 ದರವನ್ನು ನಿಗದಿಪಡಿಸಲಾಗಿದೆ. ಶ್ರಮಿಕರು, ರಸ್ತೆಬದಿ ವ್ಯಾಪಾರಿಗಳು, ಗ್ರಾಮೀಣ ಪ್ರದೇಶದಿಂದ ಕೆಲಸಕ್ಕೆಂದು ಬರುವವರು, ಆಟೊರಿಕ್ಷಾ ಚಾಲಕರು, ನಿರ್ಮಾಣ ಕಾರ್ಮಿಕರು ಮೊದಲಾದವರನ್ನು ಗುರಿಯಾಗಿಟ್ಟುಕೊಂಡು ಕಡಿಮೆ ದರವನ್ನು ಪಡೆಯಲಾಗುತ್ತದೆ. ಆದರೆ, ಇಲ್ಲಿ ಪ್ಲಾಸ್ಟಿಕ್‌ ತಂದುಕೊಟ್ಟವರು ಈ ಹಣವನ್ನು ಕೂಡ ಕೊಡದೇ ಉಪಾಹಾರ ಅಥವಾ ಊಟವನ್ನು ಉಚಿತವಾಗಿ ಮಾಡಬಹುದಾಗಿದೆ.

ಇದಕ್ಕೆ ಮಿತಿ ಏನಿಲ್ಲ. ಎಷ್ಟು ಬಾರಿ ಬೇಕಾದರೂ ಪ್ಲಾಸ್ಟಿಕ್‌ ತ್ಯಾಜ್ಯ ತಂದು ಕೊಟ್ಟು ಆಹಾರ ಸೇವಿಸುವುದಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಆಶಯವೇನು?:

ಇದರೊಂದಿಗೆ ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುವುದನ್ನು ತಡೆಯಬಹುದು ಹಾಗೂ ವಿಲೇವಾರಿಗೂ ಕ್ರಮ ಕೈಗೊಳ್ಳಬಹುದು ಎನ್ನುವುದು ಜಿಲ್ಲಾಡಳಿತದ ಆಶಯ ಹಾಗೂ ನಿರೀಕ್ಷೆಯಾಗಿದೆ. ತಿಂಗಳಿಂದ ಈ ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ. ಯಾರು ಬೇಕಾದರೂ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ವಿಶೇಷವಾಗಿ, ಪ್ಲಾಸ್ಟಿಕ್‌ ಸಂಗ್ರಹಿಸುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಆರಂಭಿಸಲಾಗಿದೆ.

‘ಪ್ಲಾಸ್ಟಿಕ್‌ ಹಾವಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತದ ಸೂಚನೆಯಂತೆ ಈ ಉಪಕ್ರಮ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್‌ ಅನ್ನು ಅರ್ಧ ಕೆ.ಜಿ. ಅಥವಾ ಒಂದು ಕೆ.ಜಿ.ಯನ್ನೇ ಕೊಡಬೇಕೆಂದೇನಿಲ್ಲ. ಪ್ರಮಾಣ ಕಡಿಮೆ ಇದ್ದರೂ ಊಟ, ಉಪಾಹಾರ ನೀಡುವಂತೆ ಇಂದಿರಾ ಕ್ಯಾಂಟೀನ್‌ ನಡೆಸುವವರಿಗೆ ಸೂಚಿಸಲಾಗಿದೆ. ಕೆಲವರು, ಈ ಅವಕಾಶ ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಚಾರ ನಡೆಸುತ್ತಿದ್ದೇವೆ. ಎಷ್ಟು ಮಂದಿ ಪ್ಲಾಸ್ಟಿಕ್‌ ನೀಡಿದರೂ ಅವರಿಗೆ ಉಚಿತವಾಗಿ ಆಹಾರ ಕೊಡಲಾಗುವುದು’ ಎಂದು ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 11 ಹಾಗೂ ಜಿಲ್ಲೆಯಲ್ಲಿ 5 ಸೇರಿ ಒಟ್ಟು 16 ಇಂದಿರಾ ಕ್ಯಾಂಟೀನ್‌ಗಳಿವೆ.

ಅರ್ಧ ಕೆ.ಜಿ. ಕೊಟ್ಟರೆ ಉಪಾಹಾರ ಫ್ರೀ ಒಂದು ಕೆ.ಜಿ. ಪ್ಲಾಸ್ಟಿಕ್‌ ತ್ಯಾಜ್ಯ ನೀಡಿದರೆ ಊಟ ಉಚಿತ ಜಿಲ್ಲೆಯಲ್ಲಿವೆ 16 ಇಂದಿರಾ ಕ್ಯಾಂಟೀನ್‌ಗಳು
ಸಾಂಸ್ಕೃತಿಕ ನಗರಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಪ್ರೋತ್ಸಾಹ ನೀಡುವುದಕ್ಕಾಗಿ ಉಚಿತ ಆಹಾರದ ಉಪಕ್ರಮ ಆರಂಭಿಸಲಾಗಿದೆ
ಡಾ.ಕೆ.ವಿ. ರಾಜೇಂದ್ರ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT