ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರಿಗೆ ಸರ್ಕಾರದಿಂದ ಅಗೌರವ: ಸಾಹಿತಿ ಭೈರಪ್ಪ ಆಕ್ರೋಶ

Published 24 ಆಗಸ್ಟ್ 2024, 15:36 IST
Last Updated 24 ಆಗಸ್ಟ್ 2024, 15:36 IST
ಅಕ್ಷರ ಗಾತ್ರ

ಮೈಸೂರು: ‘ಭ್ರಷ್ಟಾಚಾರವನ್ನು ನಿಯಂತ್ರಿಸುವುದು ರಾಜ್ಯಪಾಲರ ಕೆಲಸ. ಆದರೆ, ತನಿಖೆಗೆ ಆದೇಶಿಸಿದ ಅವರಿಗೆ ಇಂದಿನ‌ ರಾಜ್ಯ ಸರ್ಕಾರ ಅಗೌರವ ತರುತ್ತಿದೆ. ಹೀಗಾದರೆ ಪ್ರಜಾಪ್ರಭುತ್ವದ ಕಥೆ ಏನು?’ ಎಂದು ಕಾದಂಬರಿಕಾರ ಎಸ್.ಎಲ್.ಭೈರಪ್ಪ ಆತಂಕ ವ್ಯಕ್ತಪಡಿಸಿದರು.

ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶನಿವಾರ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರಿಗೆ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದೂರು ಬಂದಿದ್ದರಿಂದ ತನಿಖೆಗೆ ಆದೇಶಿಸಿರುವುದರಲ್ಲಿ ತಪ್ಪೇನಿದೆ? ಸರ್ಕಾರ ನಡೆಸುವವರು ಪ್ರಾಮಾಣಿಕರಾಗಿದ್ದರೆ ತನಿಖೆ ಮಾಡಿ ಎನ್ನಬೇಕಿತ್ತು. ಆದರೆ, ಅವರ ಪ್ರಾಮಾಣಿಕತೆ ಎಷ್ಟು ಎಂದು ಜನರಿಗೆ ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.

‘ಸರ್ಕಾರದ ತಪ್ಪನ್ನು ಸರಿಪಡಿಸುವುದು ರಾಜ್ಯಪಾಲರ ಕೆಲಸ. ಆದರೆ, ಇಂದು ಅವರ ವಿರುದ್ಧ ಸರ್ಕಾರವನ್ನೇ ಎತ್ತಿಕಟ್ಟುತ್ತಾರೆ. ಒಂದು ಲಕ್ಷ ಜನರನ್ನು ಸೇರಿಸಿ, ಕೆಟ್ಟ ಮಾತುಗಳನ್ನಾಡಿಸುತ್ತಾರೆ’ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಮಾತನಾಡಿ, ‘ರಾಜ್ಯಪಾಲರಿಗೆ ತೊಂದರೆ ನೀಡುವುದು ಯಾರಿಗೂ ಶೋಭೆ ತರುವುದಿಲ್ಲ. ಅದರಲ್ಲೂ, ಹೊರರಾಜ್ಯದಲ್ಲಿ ಒಂದು ಪಕ್ಷದ ಮುಖ್ಯಸ್ಥರಾಗಿ, ಹಲವು ಹುದ್ದೆ ನಿಭಾಯಿಸಿದ ಅನುಭವವುಳ್ಳವರು ರಾಜ್ಯಪಾಲರಾಗಿ ಬಂದಾಗ ಅವಮಾನಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ರಾಜ್ಯಪಾಲರ ಸ್ಥಾನ, ಘನತೆಗೆ ಕುಂದು ತರಬಾರದು. ಎಲ್ಲರನ್ನು ಗೌರವಯುತವಾಗಿ ನಡೆಸಿಕೊಂಡ ಇತಿಹಾಸವುಳ್ಳ ನಾಡಿನಲ್ಲಿ, ಅದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT