ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣದಲ್ಲಿ ರಂಗಭೂಮಿಗೆ ಆದ್ಯತೆ ಸಿಗಲಿ: ಪ್ರೊ.ಎಚ್‌.ಎಸ್. ಉಮೇಶ್

ಜಿಪಿಐಇಆರ್‌ ರಾಷ್ಟ್ರೀಯ ರಂಗೋತ್ಸವ: ವಿಚಾರಗೋಷ್ಠಿ ಆಯೋಜನೆ
Published 1 ಏಪ್ರಿಲ್ 2024, 4:45 IST
Last Updated 1 ಏಪ್ರಿಲ್ 2024, 4:45 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ಪ್ರಾಥಮಿಕ ಶಿಕ್ಷಣವು ಆರಂಭದಿಂದಲೂ ನಿರ್ಲಕ್ಷ್ಯಕ್ಕೆ ಒಳಪಟ್ಟ ಕ್ಷೇತ್ರ. ಅದರಲ್ಲೂ ಪ್ರಾಥಮಿಕ ಶಿಕ್ಷಣದಲ್ಲಿ ರಂಗಭೂಮಿಯನ್ನು ಅನಿವಾರ್ಯ ರಂಗ ಎಂದು ಪರಿಗಣಿಸಿಲ್ಲ’ ಎಂದು ರಂಗ ನಿರ್ದೇಶಕ ಪ್ರೊ.ಎಚ್‌.ಎಸ್. ಉಮೇಶ್ ವಿಷಾದಿಸಿದರು.

ಜಿಪಿಐಇಆರ್‌ ರಾಷ್ಟ್ರೀಯ ರಂಗೋತ್ಸವ ಅಂಗವಾಗಿ ಕಲಾಮಂದಿರದ ಕಿರು ರಂಗಮಂದಿರದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ‘ಪರಿಣಾಮಕಾರಿ ಶಿಕ್ಷಣದಲ್ಲಿ ರಂಗಭೂಮಿಯ ಪಾತ್ರ’ ಕುರಿತು ಅವರು ವಿಚಾರ ಮಂಡಿಸಿದರು.

‘ಜನಪದೀಯ ರಂಗಭೂಮಿ ಬಿಟ್ಟರೆ ನಮಗೆ ತಳಹದಿ ಸಂಸ್ಕೃತ ರಂಗಭೂಮಿ. ಆದರೆ, ಅಲ್ಲಿ‌ಯೂ ಮಕ್ಕಳ ರಂಗಭೂಮಿಗೆ ಹೆಚ್ಚು ಅವಕಾಶ ಇರಲಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ಜಾರಿಗೆ ಬಂದ ಪಾಶ್ಚಾತ್ಯ ಶಿಕ್ಷಣ ನೀತಿಯಲ್ಲಿ ಕೇವಲ ಉನ್ನತ ಶಿಕ್ಷಣ ನೀತಿಗೆ ಆದ್ಯತೆ ದೊರೆತಿದೆಯೇ ಹೊರತು ಪ್ರಾಥಮಿಕ ಶಿಕ್ಷಣಕ್ಕಲ್ಲ. ಈ ನಡುವೆಯೂ ಕರ್ನಾಟಕದಲ್ಲಿ ಮಕ್ಕಳ ರಂಗಭೂಮಿ ವಿಚಾರದಲ್ಲಿ ಕೊಂಚ ಸುಧಾರಣೆ ಕಂಡಿದೆ. ರಂಗಶಿಕ್ಷಣ ಕಲಿತವರನ್ನೇ ರಂಗ ಶಿಕ್ಷಕರನ್ನಾಗಿ ನೇಮಿಸಿಕೊಂಡ ಏಕೈಕ ರಾಜ್ಯ ಕರ್ನಾಟಕ’ ಎಂದು ವಿವರಿಸಿದರು.

ನಿವೃತ್ತ ಸಹ ಪ್ರಾಧ್ಯಾಪಕಿ ಡಿ.ಶೀಲಾಕುಮಾರಿ, ಶಿಕ್ಷಣ ತಜ್ಞೆ ಎಸ್.ಸಪ್ನಾ ಪ್ರತಿಸಂದನೆ ನೀಡಿದರು. ಸಾಹಿತಿ ನಾ. ದಿವಾಕರ ಅಧ್ಯಕ್ಷತೆ ವಹಿಸಿದ್ದರು.

ಉದ್ಘಾಟನೆ: ವಿಚಾರಗೋಷ್ಠಿಯನ್ನು ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಉದ್ಘಾಟಿಸಿ ಮಾತನಾಡಿ, ‘ಶಿಕ್ಷಣ ಎಂದರೆ‌ ಕೇವಲ ಓದು– ಬರಹ ಅಲ್ಲ. ವ್ಯಕ್ತಿತ್ವ ವಿಕಸನವೇ ನಿಜವಾದ ಶಿಕ್ಷಣ.‌ ಅದು ಸಿಗುವುದು ರಂಗಭೂಮಿ ಅಂತಹ ಚಟುವಟಿಕೆಗಳಿಂದ. ಈಚಿನ ದಿನಗಳಲ್ಲಿ ದೃಶ್ಯ ಮಾಧ್ಯಮ‌ ಹೆಚ್ಚು ಪರಿಣಾಮಕಾರಿ.‌ ಅದರಲ್ಲೂ ರಂಗಭೂಮಿಯಂತಹ ಮಾಧ್ಯಮ ಇನ್ನೂ ಪರಿಣಾಮಕಾರಿ ಆಗಿದೆ’ ಎಂದು ಅವರು ವಿವರಿಸಿದರು.

‘ಶಿಕ್ಷಣದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದೆಯಾದರೂ ಪೂರ್ಣ ಅನುಷ್ಠಾನ ಆಗಿಲ್ಲ. ಮಗುವಿನ ದೈಹಿಕ, ಮಾನಸಿಕ‌ ಬೆಳವಣಿಗೆಗೆ, ಬದುಕಿನ ಪರೀಕ್ಷೆಗೆ ಇಂತಹ ಚಟುವಟಿಕೆಗಳು ಅಗತ್ಯವಿದೆ’ ಎಂದರು.

‘ಮೈಮ್‌ ರಮೇಶ ಸಾಂಸ್ಕೃತಿಕವಾಗಿ ಆಗರ್ಭ ಶ್ರೀಮಂತರು. ಜಿಪಿಐಇಆರ್‌ ಮೂಲಕ‌ ನೂರಾರು ಪ್ರತಿಭೆಗಳು ಅವರ ಮಾರ್ಗದರ್ಶನದಲ್ಲಿ ಬದುಕು ರೂಪಿಸಿಕೊಂಡಿವೆ.‌ ಸಮಾಜವನ್ನು ಸದಾ ಕ್ರಿಯಾಶೀಲವಾಗಿಸುವ ಅವರ ಪ್ರಯತ್ನ ಅನುಕರಣೀಯ’ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೈಮ್ ರಮೇಶ್‌ ಮಾತನಾಡಿ, ‘ರಂಗಭೂಮಿ ಇಂದು ಹಣ ಗಳಿಸುವ ಉದ್ಯಮ ಆಗಿದೆ.‌ ವರ್ಷಕ್ಕೆ ಇಂತಿಷ್ಟು ಕಾರ್ಯಕ್ರಮ ಮಾಡಿ ಸರ್ಕಾರಕ್ಕೆ‌ ಲೆಕ್ಕ ತೋರಿಸುವ ಸಂಸ್ಥೆಗಳೇ ಹೆಚ್ಚಾಗಿವೆ’ ಎಂದು ವಿಷಾದಿಸಿದರು.

ರಂಗಕರ್ಮಿ ಅಬ್ದುಲ್‌ ಕರೀಮ್‌, ನಾಟಕೋತ್ಸವದ ಸಂಚಾಲಕ ಹರಿದತ್ತ ಜೊತೆಗಿದ್ದರು.

ಗೋಷ್ಠಿ–ಸಂಗೀತ ಸಂಜೆ

ಮಧ್ಯಾಹ್ನ ‘ಸಮಕಾಲೀನ ಸಂದರ್ಭದಲ್ಲಿ ವೃತ್ತಿ ಮತ್ತು ಉದ್ಯಮವಾಗಿ ರಂಗಭೂಮಿ’ ಕುರಿತು ಚರ್ಚೆ ನಡೆಯಿತು. ರಂಗಕರ್ಮಿಗಳಾದ ಶಶಿಧರ್ ಭಾರಿಘಾಟ್‌ ಹಾಗೂ ಯತೀಶ್‌ ಕೊಳ್ಳೇಗಾಲ ವಿಚಾರ ಮಂಡಿಸಿದರು. ರಂಗನಿರ್ದೇಶಕ ಬಿ. ಸುರೇಶ ಅಧ್ಯಕ್ಷತೆ ವಹಿಸಿದ್ದರು. ಸಂಜೆ ಮಂಗಳೂರಿನ ತತ್ವಮಸಿ ಸಿಂಗಾರಿ ಮೇಳದ ಚಂಡೆ ವಾದನ ಪ್ರೇಕ್ಷಕರನ್ನು ರಂಜಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT