ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ: ಸಿದ್ದಗಂಗಮ್ಮ

Published 4 ಅಕ್ಟೋಬರ್ 2023, 13:23 IST
Last Updated 4 ಅಕ್ಟೋಬರ್ 2023, 13:23 IST
ಅಕ್ಷರ ಗಾತ್ರ

ಹುಣಸೂರು: ‘ಮಳೆ ಕೊರತೆಯಿಂದ ಬರ ಎಂದು ಘೋಷಿಸಿದ್ದು, ಜನ– ಜಾನುವಾರುಗಳಿಗೆ ನೀರಿನ ಬವಣೆ ಎದುರಾಗದಂತೆ ಕ್ರಮವಹಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಬೇಕು’ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಿದ್ದಗಂಗಮ್ಮ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಈ ಸಾಲಿನಲ್ಲಿ ಮಳೆ ಕೊರತೆ ಕಾಡಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಬೇಕು’ ಎಂದರು.

ಜಿ.ಪಂ ಕುಡಿಯುವ ನೀರು ವಿಭಾಗದ ಎಇಇ ಖಲೀಂ ಮಾತನಾಡಿ, ‘ತಾಲ್ಲೂಕಿನಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಲ್ಲಿ 316 ಗ್ರಾಮಗಳಿಗೆ ಕುಡಿಯುವ ನೀರು ಸಂಪರ್ಕದ ಕಾಮಗಾರಿ ಪ್ರಗತಿಯಲ್ಲಿದೆ. ಈ ಪೈಕಿ ಬಿಳಿಕೆರೆ ಹೋಬಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲಾಗಿದೆ. ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ 13 ಗ್ರಾಮ ಗುರುತಿಸಿದ್ದು, ಪರ್ಯಾಯ ವ್ಯವಸ್ಥೆಗೆ ಸಿದ್ದತೆ ನಡೆದಿದೆ. 8 ತಿಂಗಳ ಒಳಗೆ ತಾಲ್ಲೂಕಿನ ಎಲ್ಲಾ ಗ್ರಾಮಕ್ಕೂ ಕಾವೇರಿ ಕುಡಿಯುವ ನೀರು ಸರಬರಾಜು ಮಾಡಲು ಸಿದ್ದತೆ ನಡೆದಿದೆ’ ಎಂದು ತಿಳಿಸಿದರು.

ಸೆಸ್ಕ್ ಅಧಿಕಾರಿ ಸಿದ್ದಪ್ಪ ಮಾತನಾಡಿ, ‘ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಸರಬರಾಜು ಘಟಕಗಳ ವಿದ್ಯುತ್ ಬಿಲ್ ಪಾವತಿ ಆಗಿಲ್ಲ. ಹುಣಸೂರು ಮತ್ತು ಬಿಳಿಕೆರೆ ವಿಭಾಗದಿಂದ ಒಟ್ಟು ₹31 ಕೋಟಿ ಬಾಕಿ ಉಳಿದಿದೆ. ಸರಬರಾಜು ಸ್ಥಗಿತಗೊಳಿಸುವಂತೆ ಸೂಚನೆ ಇದೆ’ ಎಂದರು.

‘ಅ.12 ರಂದು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಾಕಿ ಪಾವತಿಸಲು ಕ್ರಮವಹಿಸುತ್ತೇವೆ’ ಎಂದು ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಮನು ತಿಳಿಸಿದರು.

‘ಮಳೆ ಕೊರತೆಯಿಂದಾಗಿ ಮುಸುಕಿನಜೋಳ 6,635 ಹೆಕ್ಟೇರ್ ಹಾಗೂ ಹತ್ತಿ 485 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 12,808 ರೈತರ ಬೆಳೆ ಒಣಗಿದ್ದು, ಇದರ ಮೌಲ್ಯ ಅಂದಾಜು ₹ 5.89 ಕೋಟಿ ಎಂದು ಅಂದಾಜಿಸಿ ಪರಿಹಾರಕ್ಕೆ ವರದಿ ಕಳುಹಿಸಿದೆ. ಕ್ಷೇತ್ರದಲ್ಲಿ ಅಲ್ಲಲ್ಲಿ ಬಿದ್ದ ಮಳೆಗೆ 19 ಸಾವಿರ ಹೆಕ್ಟೇರ್ ನಲ್ಲಿ ರಾಗಿ ಬೇಸಾಯ ನಡೆದಿದೆ ಮಳೆ ಬಂದಲ್ಲಿ ಬೆಳೆ ಕೈ ಸೇರಲಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟಾಚಲ ಮಾಹಿತಿ ನೀಡಿದರು.

‘ಆಧಾರ್ ಮತ್ತು ಮೊಬೈಲ್ ಲಿಂಕ್ ಇಲ್ಲದೆ ತಾಲ್ಲೂಕಿನ ಗಿರಿಜನ ಸಮುದಾಯಕ್ಕೆ ಸರ್ಕಾರ ನೀಡುವ ಗ್ಯಾರೆಂಟಿ ಯೋಜನೆ ತಲಪಿಸಲಾಗುತ್ತಿಲ್ಲ. ತಾಲ್ಲೂಕಿನ ಲಕ್ಷ್ಮಿಪುರ ಹಾಡಿಯ ನಿವಾಸಿಗರ ಹೆಸರು ನೊಂದಣಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ತರಿಕಲ್ ಹಾಡಿಯಲ್ಲಿ 154 ಕುಟುಂಬ ಮತ್ತು ಹನಗೋಡು ಹೋಬಳಿಯ 23 ಹಾಡಿಗಳಲ್ಲಿ 450 ಕುಟುಂಬಗಳಿಗೆ ಗ್ಯಾರೆಂಟಿ ಸಿಕ್ಕಿಲ್ಲ ಎಂದರು. ಎಸ್.ಟಿ. ಇಲಾಖೆ ಈಗಾಗಲೇ ಹಾಡಿ ಮತ್ತು ಪುನರ್ವಸತಿ ಕೇಂದ್ರದಲ್ಲಿ ಆಧಾರ್ ಲಿಂಕ್ ಮಾಡಿಸುವ ಶಿಬಿರ ನಡೆಸಿ 424 ಕುಟುಂಬಗಳ ದಾಖಲೆ ಆನ್ ಲೈನ್ ಲಿಂಕ್ ಮಾಡಿಸಿದೆ’ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ್ ಹೇಳಿದರು.

‘ಗ್ಯಾರೆಂಟಿ ಯೋಜನೆ ತಾಲ್ಲೂಕಿನ 3850 ಗಿರಿಜನ ಕುಟುಂಬಗಳಿಗೆ ತಲಪಿಸುವ ಜವಾಬ್ದಾರಿ ಎಸ್.ಟಿ ಇಲಾಖೆಗೆ ಸೀಮಿತಗೊಳಿಸದೆ ನಮ್ಮೊಂದಿಗೆ ಇತರೆ ಇಲಾಖೆ ಅಧಿಕಾರಿಗಳೂ ಸಹಕರಿಸಬೇಕು’ ಎಂದು ಸಭೆಯಲ್ಲಿ ಮನವಿ ಮಾಡಿದರು.

‘ತಾಲ್ಲೂಕಿನಲ್ಲಿ 49 ಅಂಗನವಾಡಿ ಕೇಂದ್ರಗಳಿಗೆ ನಿವೇಶನವಿಲ್ಲದೆ ಕಟ್ಟಡ ನಿರ್ಮಿಸಲಾಗುತ್ತಿಲ್ಲ. 7 ಕಟ್ಟಡಗಳು ಶಿಥಿಲವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಸಿಡಿಪಿಒ ರಶ್ಮಿ ಸಭೆಗೆ ಮಾಹಿತಿ ನೀಡಿದರು. ತಾ.ಪಂ. ಆಡಳಿತಾಧಿಕಾರಿ ಲೋಕೇಶ್ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT