ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯ ಹೈರಿಗೆ ಕೆರೆ ಪ್ರವಾಸಿ ತಾಣವಾಗಲಿ: ಜನರ ಆಗ್ರಹ

Last Updated 9 ಸೆಪ್ಟೆಂಬರ್ 2021, 4:29 IST
ಅಕ್ಷರ ಗಾತ್ರ

ಹನಗೋಡು: ಮೈಸೂರು ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಹೈರಿಗೆ’ ಗ್ರಾಮದ ಕೆರೆಯನ್ನು ಸುಂದರ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ.

ಮೈಸೂರು– ವಿರಾಜಪೇಟೆ ಮುಖ್ಯರಸ್ತೆಯಲ್ಲಿರುವ ಗ್ರಾಮದ ಕೆರೆಯನ್ನು ಅಭಿವೃದ್ಧಿಪಡಿಸಿ ಬೋಟಿಂಗ್‌, ನಡುಗಡ್ಡೆ, ನಡಿಗೆ ಪಥ ನಿರ್ಮಾಣ, ವಸತಿ ಸೌಲಭ್ಯಗಳನ್ನು ಕಲ್ಪಿಸಿದರೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಬರುವ ಪ್ರವಾಸಿಗರು, ಪರಿಸರ ಆಸಕ್ತರು ಇಲ್ಲಿಗೂ ಭೇಟಿ ನೀಡಬಹುದು. ಕೆರೆಯು ಪ್ರವಾಸಿ ತಾಣವಾಗಿ, ಸ್ಥಳೀಯರಿಗೆ ಅನುಕೂಲವಾಗಲಿದೆ.

525 ಎಕರೆ ವಿಸ್ತೀರ್ಣವುಳ್ಳ ಕೆರೆಗೆ ಹಾರಂಗಿ ಜಲಾಶಯದ ಬಲದಂಡೆ ನಾಲೆಯಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, 0.8 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು. ವರ್ಷಪೂರ್ತಿ ನೀರಿದ್ದು, ಕೋಡಿ ಬಿದ್ದ ನೀರು ಲಕ್ಷ್ಮಣ ತೀರ್ಥ ನದಿಗೆ ಸೇರುತ್ತದೆ.

ಹೈರಿಗೆ, ಹೊನ್ನೇನಹಳ್ಳಿ, ಲಕ್ಷ್ಮಿಪುರ, ಬೀರನಹಳ್ಳಿ, ತಟ್ಟೆಕೆರೆ, ಅಂಗತಹಳ್ಳಿ, ಹೊಸಕೋಟೆ ಗ್ರಾಮಗಳ 1,750 ಎಕರೆ ಪ್ರದೇಶಕ್ಕೆ ಕೆರೆ ನೀರು ಪೂರೈಕೆ ಮಾಡಲಾಗುತ್ತಿದೆ. ಅಂತರ್ಜಲ ವೃದ್ಧಿಗೂ ಮಹತ್ವದ ಪಾತ್ರವಹಿಸುತ್ತಿದೆ. ರೈತರು ಹೊಗೆಸೊಪ್ಪು, ಭತ್ತ, ಜೋಳ, ಶುಂಠಿ, ರಾಗಿ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಐದು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಾಸಕ ಎಚ್.ಪಿ. ಮಂಜುನಾಥ್ ಅವರು ಕೆರೆ ಅಭಿವೃದ್ಧಿಗೆ ₹4 ಕೋಟಿ ಅನುದಾನ ಒದಗಿಸಿದ್ದರು. ಕೆರೆ ಏರಿಗೆ ಟಾರ್ಪಾಲ್ ಹೊದಿಕೆ, ಹೂಳೆತ್ತುವ ಹಾಗೂ ನೀರಿನ ಸೋರಿಕೆ ತಡೆಗಟ್ಟಲು ಕಾಮಗಾರಿ ಕೈಗೊಳ್ಳಲಾಗಿತ್ತು.

ಕೆರೆಯನ್ನು ಪ್ರವಾಸಿ ತಾಣವಾಗಿ ರೂಪಿಸಬೇಕೆಂದು ಅಡಗೂರು ಎಚ್‌.ವಿಶ್ವನಾಥ್‌ ಅವರು, ಮೈತ್ರಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ. ಮಹೇಶ್ ಅವರಿಗೆ ಪ್ರಸ್ತಾವ ಸಲ್ಲಿಸಿದ್ದರು. ನಂತರ ಸರ್ಕಾರ ಪತನವಾಗಿದ್ದರಿಂದ ಅಭಿವೃದ್ಧಿ ಕಾರ್ಯ ನಡೆದಿಲ್ಲ.‌

ಮೀನುಗಾರಿಕೆ: ಮೀನುಗಾರಿಕೆ ಸಹಕಾರ ಸಂಘದಡಿ ಮೀನುಗಾರಿ ಕೆಯನ್ನು ನಡೆಸಲಾಗುತ್ತಿದೆ.
ಒಂದು ಕೋಟಿ ಮೀನು ಮರಿಗಳನ್ನು ಬಿಡಲಾಗಿದೆ. ಮೀನು ಮತ್ತು ಮರಿಗಳ ಮಾರಾಟವೂ
ನಡೆಯುತ್ತಿದೆ.

30 ಎಕರೆ ಒತ್ತುವರಿ ತೆರವು

ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ದೊಡ್ಡ ಹೆಜ್ಜೂರು, ಕುಂಟೇರಿ ಕೆರೆ, ಕಚ್ಚುವಿನಹಳ್ಳಿ, ಹೆಬ್ಬಾಳ ಕೆರೆಗಳು ಪ್ರಮುಖವಾದವು. ಇತ್ತೀಚೆಗೆ ತಹಶೀಲ್ದಾರ್‌ ನೇತೃತ್ವದಲ್ಲಿ ದೊಡ್ಡ ಹೆಜ್ಜೂರು ಕೆರೆಯ 30 ಎಕರೆ ಒತ್ತುವರಿ ತೆರವುಗೊಳಿಸಲಾಗಿತ್ತು. ಉಳಿದ ಕೆರೆಗಳ ಸರ್ವೆ ಕಾರ್ಯ ನಡೆಯಬೇಕಿದೆ.

***

ಹೈರಿಗೆ ಕೆರೆ ಒತ್ತುವರಿಯಾಗಿಲ್ಲ. ಕೆರೆ ಅಭಿವೃದ್ಧಿಗೆ ಪ್ರಸ್ತಾವ ಕಳುಹಿಸಲಾಗಿದೆ. ಇನ್ನೂ ಅನುಮತಿ ಸಿಕ್ಕಿಲ್ಲ.

–ಕುಶಕುಮಾರ್, ಹಾರಂಗಿ ಇಲಾಖೆ ಸಹಾಯಕ ಎಂಜಿನಿಯರ್

***

ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಬೋಟಿಂಗ್‌ ವ್ಯವಸ್ಥೆ ಕಲ್ಪಿಸಬೇಕು.

–ಸಲ್ಮಾನ್‌, ಹೈರಿಗೆ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT