ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗ ಶಿಕ್ಷಕರಿಗೆ ಶರಣೆಂದ ಚೀನಿಯರು!

ವಿವಿಧ ಪ್ರಾಂತ್ಯಗಳಲ್ಲಿದ್ದಾರೆ ಭಾರತದ ಸಾವಿರಕ್ಕೂ ಅಧಿಕ ಯೋಗ ಗುರುಗಳು
Published 21 ಜೂನ್ 2024, 0:30 IST
Last Updated 21 ಜೂನ್ 2024, 0:30 IST
ಅಕ್ಷರ ಗಾತ್ರ

ಮೈಸೂರು: ಯೋಗ ಜಾಗತಿಕ ಮನ್ನಣೆ ಪಡೆದಂತೆಲ್ಲ ವಿದೇಶಗಳಲ್ಲೂ ಇಲ್ಲಿನ ಯೋಗ ಶಿಕ್ಷಕರಿಗೆ ಬೇಡಿಕೆ ಹೆಚ್ಚಿದೆ. ಚೀನಾ ಒಂದರಲ್ಲಿಯೇ ಭಾರತದ ಸಾವಿರಕ್ಕೂ ಅಧಿಕ ಯೋಗ ಗುರುಗಳಿದ್ದು, ಮೈಸೂರಿನವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಚೀನಾ ಸೇರಿದಂತೆ ಏಷ್ಯಾದ ಬಹುತೇಕ ದೇಶಗಳಲ್ಲಿ ಭಾರತದ ಯೋಗ ಶಿಕ್ಷಕರಿಗೆ ಬೇಡಿಕೆ ಇದೆ. ಇದಲ್ಲದೆ ಇಂಗ್ಲೆಂಡ್‌, ಅಮೆರಿಕ ಮೊದಲಾದ ದೇಶಗಳಲ್ಲೂ ಅವಕಾಶಗಳು ಹೆಚ್ಚಿವೆ.

'ಸಂಬಂಧಿತ ಶಿಕ್ಷಣ ಇಲ್ಲವೇ ಪ್ರಮಾಣಪತ್ರ ಪಡೆದವರಿಗೆ ಹೆಚ್ಚು ಅವಕಾಶ ಹಾಗೂ ಉತ್ತಮ ಸಂಪಾದನೆಯ ಮಾರ್ಗವೂ ಇದೆ’ ಎನ್ನುತ್ತಾರೆ ಯೋಗ ಶಿಕ್ಷಕರು.

‘ಕಳೆದೆರಡು ದಶಕದಿಂದ ಚೀನಾದಲ್ಲಿ ಯೋಗದ ಜನಪ್ರಿಯತೆ ಹೆಚ್ಚುತ್ತಿದೆ. ಅದರಲ್ಲೂ ಕೋವಿಡ್ ತರುವಾಯ ಚೀನಿಯರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇನ್ನಿಲ್ಲದ ಮಹತ್ವ ನೀಡತೊಡಗಿದ್ದಾರೆ. ಹೀಗಾಗಿ ಯೋಗಾಭ್ಯಾಸಕ್ಕೆ ಸೇರುವವರ ಸಂಖ್ಯೆಯೂ ಏರತೊಡಗಿದೆ’ ಎಂದು ಹೇಳುತ್ತಾರೆ ಚೀನಾದಲ್ಲಿ ಎರಡು ದಶಕದಿಂದ ಯೋಗ ತರಬೇತುದಾರರಾಗಿರುವ ಮೈಸೂರಿನ ಶಿವಪ್ರಸಾದ್‌.

ಚೀನಾದ ನನ್‌ಹೈ ಜಿಲ್ಲೆಯ ಫೊಶನ್‌ ನಗರದಲ್ಲಿ ‘ವಾಶಿ ಯೋಗ ಕೇಂದ್ರ’ ನಡೆಸುತ್ತಿರುವ ಶಿವಪ್ರಸಾದ್, ಯೋಗಾಭ್ಯಾಸದ ಜೊತೆಗೆ ಚೀನಿಯರಿಗೆ ಯೋಗ ಶಿಕ್ಷಣದ ತರಬೇತಿಯನ್ನೂ ನೀಡುತ್ತಿದ್ದಾರೆ. ‘ಬೆಳಿಗ್ಗೆಯಿಂದ ಸಂಜೆಯವರೆಗೂ ತರಗತಿಗಳನ್ನು ನಡೆಸುತ್ತೇವೆ. ಪೂರ್ಣ ಪ್ರಮಾಣದ ಏಳು ಶಿಕ್ಷಕರು ನಮ್ಮಲ್ಲಿದ್ದಾರೆ’ ಎನ್ನುತ್ತಾರೆ ಅವರು.

‘ಮೊದಲೆಲ್ಲಾ ಯೋಗಾಭ್ಯಾಸ ಗೊತ್ತಿದ್ದರೆ ಇಲ್ಲಿ ಶಿಕ್ಷಕರಾಗಿ ಬರಬಹುದಿತ್ತು. ಈಗ ಯೋಗಕ್ಕೆ ಸಂಬಂಧಿಸಿದ ಕೋರ್ಸ್‌ ಇಲ್ಲವೇ ಪ್ರತಿಷ್ಠಿತ ಯೋಗಗುರುಗಳಿಂದ ಪ್ರಮಾಣಪತ್ರ ಇದ್ದವರಿಗೆ ಅವಕಾಶಗಳು ಸಿಗುತ್ತಿವೆ’ ಎನ್ನುತ್ತಾರೆ ಚೀನಾದ ಲಿಕ್ಸಿಯಾ ಜಿಲ್ಲೆಯ ಜಿನಾನ್‌ ನಗರದಲ್ಲಿ ಸನಾತನ ಯೋಗ ಕೇಂದ್ರವನ್ನು ಮುನ್ನಡೆಸುತ್ತಿರುವ ಯೋಗಗುರು ರೇಣುಕಪ್ರಸಾದ್‌.

‘ಚೀನಾದಲ್ಲಿ ಯೋಗ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವವರು ₹50 ಸಾವಿರದಿಂದ ₹1 ಲಕ್ಷದವರೆಗೂ ವೇತನ ಗಳಿಕೆಯ ಅವಕಾಶ ಹೊಂದಿದ್ದಾರೆ. ಮೈಸೂರಿನವರೇ 50–60 ಮಂದಿ ಪೂರ್ಣ ಪ್ರಮಾಣದಲ್ಲಿ ಯೋಗ ಗುರುಗಳಾಗಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೀನಿಯರೂ ಯೋಗ ಶಿಕ್ಷಕರಾಗಲು ಆಸಕ್ತಿ ತೋರುತ್ತಿದ್ದಾರೆ’ ಎನ್ನುತ್ತಾರೆ ಅವರು.

ಚೀನಿಯರಿಗೆ ಯೋಗ ತರಬೇತಿ ನೀಡುತ್ತಿರುವ ಮೈಸೂರಿನ ರೇಣುಕಪ್ರಸಾದ್‌
ಚೀನಿಯರಿಗೆ ಯೋಗ ತರಬೇತಿ ನೀಡುತ್ತಿರುವ ಮೈಸೂರಿನ ರೇಣುಕಪ್ರಸಾದ್‌
ಚೀನಿಯರಿಗೆ ಯೋಗ ಶಿಕ್ಷಣ ತರಬೇತಿ ನೀಡುತ್ತಿರುವ ಮೈಸೂರಿನ ಶಿವಪ್ರಸಾದ್‌
ಚೀನಿಯರಿಗೆ ಯೋಗ ಶಿಕ್ಷಣ ತರಬೇತಿ ನೀಡುತ್ತಿರುವ ಮೈಸೂರಿನ ಶಿವಪ್ರಸಾದ್‌
ಚೀನಿಯರು ಆರೋಗ್ಯವೇ ದೇವರೆಂದು ನಂಬಿದ್ದಾರೆ. 30 ವರ್ಷ ಮೇಲ್ಪಟ್ಟವರು ಹೆಚ್ಚಾಗಿ ಯೋಗಾಭ್ಯಾಸಕ್ಕೆ ಸೇರುತ್ತಿದ್ದು ದಿನವಿಡೀ ತರಗತಿಗಳು ನಡೆಯುತ್ತಿವೆ
-ರೇಣುಕಾಪ್ರಸಾದ್‌, ಸನಾತನ ಯೋಗ ಕೇಂದ್ರ, ಚೀನಾ
ಯೋಗಾಭ್ಯಾಸದ ಜೊತೆಗೆ ಯೋಗಶಿಕ್ಷಕ ಆಗಲೂ ಚೀನಿಯರು ಆಸಕ್ತಿ ತೋರುತ್ತಿದ್ದಾರೆ. ನಾವೇ ಪ್ರತಿ ಬ್ಯಾಚ್‌ನಲ್ಲಿ 30–40 ಮಂದಿಗೆ ಯೋಗ ಶಿಕ್ಷಣ ತರಬೇತಿ ನೀಡುತ್ತಿದ್ದೇವೆ
-ಶಿವಪ್ರಸಾದ್‌, ವಾಶಿ ಯೋಗ ಕೇಂದ್ರ, ಚೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT