ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ನಿರಂತರ ಓದಿನಿಂದ ಯಶಸ್ಸು: UPSCಯಲ್ಲಿ 777ನೇ ರ್‍ಯಾಂಕ್‌ ಪಡೆದ ಲೇಖನ್

Published 26 ಏಪ್ರಿಲ್ 2024, 8:32 IST
Last Updated 26 ಏಪ್ರಿಲ್ 2024, 8:32 IST
ಅಕ್ಷರ ಗಾತ್ರ

lನಿಮ್ಮ ಹಿನ್ನೆಲೆ ಮತ್ತು ಕುಟುಂಬದ ಬಗ್ಗೆ ಹೇಳಿ...

–ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯ ತಿಪ್ಪಲಾಪುರ ಗ್ರಾಮದವ. ತಂದೆ ಎಲ್‌.ಮಹದೇವ ಹಾಗೂ ತಾಯಿ ಕೆ.ಟಿ.ಶೈಲಜಾ. ಹನಗೋಡಿನಲ್ಲಿ ತಂದೆ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಹುಣಸೂರಿನ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪಡೆದೆ, ನಂತರ ಮೂಡಬಿದರೆಯ ಆಳ್ವಾಸ್‌ನಲ್ಲಿ ಪಿಯು ಶಿಕ್ಷಣ ಹಾಗೂ ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್ ಪದವಿ ಪಡೆದಿದ್ದೇನೆ.

lಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ಹೇಗಿತ್ತು?

–ನಾಲ್ಕನೇ ಪ್ರಯತ್ನದಲ್ಲಿ ಪಾಸು ಮಾಡಿದ್ದೇನೆ. ಮೊದಲ ಪ್ರಯತ್ನದಲ್ಲಿ ಪೂರ್ವಭಾವಿ ಪರೀಕ್ಷೆ ಪಾಸಾಗಲಿಲ್ಲ. ನಂತರದ ಎರಡು ಪ್ರಯತ್ನಗಳಲ್ಲಿ ಮುಖ್ಯ ಪರೀಕ್ಷೆ ಪಾಸಾಗಲಿಲ್ಲ. ನಾಲ್ಕನೇ ಪ್ರಯತ್ನದಲ್ಲಿ 777 ರ‍್ಯಾಂಕ್ ಬಂದಿದೆ. ಮನೆಯಲ್ಲಿಯೇ ಯೂಟ್ಯೂಬ್‌ ನೋಡಿ, ಈಗಾಗಲೇ ಪಾಸಾದ ಅಭ್ಯರ್ಥಿಗಳ ಮಾತುಗಳನ್ನು ಕೇಳುತ್ತಿದ್ದೆ. ಮೈಸೂರಿನಲ್ಲಿ ಪುಸ್ತಕಗಳನ್ನು ಕೊಂಡು ಓದಲು ಶುರು ಮಾಡಿದೆ. ಹಳೆ ಪ್ರಶ್ನೆಪತ್ರಿಕೆಗಳನ್ನು ಆಧರಿಸಿ ತಯಾರಿ ನಡೆಸಿದೆ.

l ಕೋಚಿಂಗ್ ಬೇಡ ಎಂದೇಕೆ ಅನಿಸಿತು?

–ತಾಯಿ ಒಬ್ಬರೇ ಆಗುತ್ತಾರೆಂದು ಬೇರೆಲ್ಲೂ ಹೋಗಲಿಲ್ಲ. ನಮ್ಮದು ಕೃಷಿ ಕುಟುಂಬ. ಅಮ್ಮನ ಬಳಿ ಇರಬೇಕೆಂದೇ ಹುಣಸೂರಿನಲ್ಲಿ ಓದಿದೆ. ತಂದೆಯವರು 2017ರಲ್ಲಿ ತೀರಿಕೊಂಡಿದ್ದರಿಂದ ಅವರ ಪಿಂಚಣಿ, ಇಡುಗಂಟನ್ನು ನನ್ನ ತಯಾರಿಗೆ ಬಳಸಿ, ವಿಫಲವಾದರೆ ಎಂದು ಹೆದರಿ ಕೋಚಿಂಗ್‌ಗೆ ಹೋಗಲಿಲ್ಲ. ಆದರೆ, ಗೈಡೆನ್ಸ್ ಪಡೆಯಬಹುದಿತ್ತು. ಸಲಹೆ ಪಡೆಯದ್ದರಿಂದ 3 ಪ್ರಯತ್ನಗಳು ವ್ಯರ್ಥವಾದವು. ಗೈಡೆನ್ಸ್ ಪಡೆಯದರ ಬಗ್ಗೆ ಪಶ್ಚಾತಾಪವಿದೆ.

l ಮುಖ್ಯ ಪರೀಕ್ಷೆ (ಮೇನ್ಸ್‌ ಎಕ್ಸಾಂ) ಸಿದ್ಧತೆ ಹೇಗಿತ್ತು?

–ಎರಡು ಬಾರಿ ಮುಖ್ಯ ಪರೀಕ್ಷೆ ಬರೆದಿದ್ದರೂ ತೇರ್ಗಡೆಯಾಗಿರಲಿಲ್ಲ. ಆಗ, ಪರೀಕ್ಷಾ ಸರಣಿಗಳನ್ನು ತೆಗೆದುಕೊಂಡಿದ್ದರೂ ಫೀಡ್‌ಬ್ಯಾಕ್‌ ಚೆನ್ನಾಗಿ ಬರುತ್ತಿರಲಿಲ್ಲ. ಇಂಗ್ಲಿಷ್‌ ಭಾಷೆ ಸರಿಯಿಲ್ಲ ಎಂದೆಲ್ಲಾ ಹೇಳಿದ್ದರು. ಹೀಗಾಗಿ ಈ ಬಾರಿ ಟೆಸ್ಟ್ ಸೀರೀಸ್‌ ಬರೆಯಲಿಲ್ಲ. ಪ್ರಶ್ನೆಗಳಿಗೆ ಉತ್ತರಿಸಲು ಬೇಕಾದ ಅಂಕಿ–ಅಂಶ, ಮುಖ್ಯಾಂಶ ಹಾಗೂ ವಿವರಣೆಗಳನ್ನು ಬರೆದು ಓದಿದ್ದೆ. ಐಚ್ಛಿಕ ಕನ್ನಡಕ್ಕೆ ಮಾತ್ರ ವಾರಾಂತ್ಯದಲ್ಲಿ ಬೆಂಗಳೂರಿಗೆ ಹೋಗಿ ಅಣಕು ಪರೀಕ್ಷೆ ಬರೆಯುತ್ತಿದ್ದೆ. ಜೈಸ್‌ ಅಕಾಡೆಮಿಯ ವೆಂಕಟೇಶಪ್ಪ ಹಾಗೂ ಎಸ್ಸೇಗೆ (ಪ್ರಬಂಧ) ಇನ್‌ಸೈಟ್ಸ್‌ನ ಫರೀದ್‌ ಸರ್‌ ಅವರಿಂದ ಸಲಹೆ ಪಡೆದಿದೆ.

l ಓದುವ ಪ್ಲ್ಯಾನ್‌ ಹೇಗಿತ್ತು?

–ದಿನಕ್ಕೆ ಹತ್ತನ್ನೆರಡು ಗಂಟೆ ಓದಲು ಪ್ಲ್ಯಾನ್ ಮಾಡುತ್ತಿದ್ದೆ, ಆದರೆ, ಓದಲು ಆಗುತ್ತಿದ್ದದ್ದು 6 ಗಂಟೆಯಷ್ಟೇ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಏನೇನು ಓದಬೇಕೆಂದು ಯೋಜಿಸುತ್ತಿದ್ದೆ, ಅದರಂತೆ ಫಾಲೋ ಮಾಡುತ್ತಿದ್ದೆ.

l ಅಧ್ಯಯನ ಸಾಮಗ್ರಿಗಳ ಆಯ್ಕೆ ಹೇಗಿರಬೇಕು?

–ಕಡಿಮೆ ಪುಸ್ತಕಗಳನ್ನು ಹೆಚ್ಚು ಓದಿ ಪಕ್ವತೆ ಪಡೆದುಕೊಳ್ಳಬೇಕು. ಅದರಂತೆ ನಾನೂ ಮಾಡಿದ್ದೇನೆ. ನೋಟ್ಸ್‌ ಮಾಡುವುದು ಇಷ್ಟವಾಗುತ್ತಿರಲಿಲ್ಲ. ಟೆಕ್ಸ್ಟ್‌ ಪುಸ್ತಕದಲ್ಲಿ  ಮುಖ್ಯ ವಿಷಯಗಳಿಗೆ ಗೆರೆ ಎಳೆದು ಗುರುತು ಮಾಡಿಕೊಂಡು ಬಾರಿ ಬಾರಿ ಓದುತ್ತಿದ್ದೆ.

l ಪರೀಕ್ಷೆ ಪಾಸಾಗುತ್ತಿಲ್ಲವಲ್ಲ ಎಂಬ ಹತಾಶೆ ಬಗೆಹರಿಸಿಕೊಂಡಿದ್ದು ಹೇಗೆ?

–ಮನೆಯಲ್ಲಿ ಒಬ್ಬನೇ ಓದುತ್ತಿದ್ದರಿಂದ ಹತಾಶೆ ಇರುತ್ತಿತ್ತು. ತಯಾರಿ ಹೋರಾಟವೇ ಆಗಿತ್ತು. ಮೊದಲಿಂದಲೂ ತಂದೆ– ತಾಯಿ ಬಳಿಯೇ ಎಲ್ಲ ಹೇಳಿಕೊಳ್ಳುತ್ತಿದ್ದೆ. ಚಿಕ್ಕಂದಿನಲ್ಲಿ ತಂದೆಗೆ ನಾನು ಏನಾಗಬೇಕೆಂದು ಕೇಳಿದ್ದೆ. ಆಗ ನೀನು ಡಿ.ಸಿ ಆಗೆಂದಿದ್ದರು. ಆದರೇನು, ಮಾಡೋದು ಇಂದು ತಂದೆ ನನ್ನೊಂದಿಗಿಲ್ಲ. ಯಾವ ಆಸೆಗಳಿಗೋಸ್ಕರ ಗುರಿ ಕಡೆ ಓಡುತ್ತೇವೆಯೋ ಆ ವೇಳೆ ಆಸೆಗಳು ಕೈಚೆಲ್ಲಿ ಹೋಗಿ ಬಿಡುತ್ತವೆ. ಜೀವನ ಬಂದಂತೆ ಸ್ವೀಕರಿಸ ಬೇಕಷ್ಟೆ. ದೇವರು ಉದ್ಯಾನವನ್ನೇ  ಕೊಡಲು ಒಂದು ಗುಲಾಬಿ ದೂರ ಮಾಡುತ್ತಾನೆಂದುಕೊಳ್ಳಬೇಕಷ್ಟೆ.

l ದಿನಪತ್ರಿಕೆ ಓದು ಎಷ್ಟು ಅವಶ್ಯಕ?

–ನಾಲ್ಕು ವರ್ಷದ ತಯಾರಿಯಲ್ಲಿ ನಿತ್ಯ ತಪ್ಪದೇ ಒಂದು ಗಂಟೆ ದಿನಪತ್ರಿಕೆ ಓದುತ್ತಿದ್ದೆ. ಪಿಯು ನಂತರ ಕನ್ನಡ ಓದಿಲ್ಲದೇ ಇದ್ದರಿಂದ ಶಬ್ದ ಸಂಗ್ರಹ ನಮ್ಮಲ್ಲಿ ಇರುವುದಿಲ್ಲ. ಕನ್ನಡ ಸಾಹಿತ್ಯ ಐಚ್ಛಿಕ ವಿಷಯವಾದ್ದರಿಂದ ‘ಪ್ರಜಾವಾಣಿ’ ಓದುತ್ತಿದ್ದೆ. 

l ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಸಿಗಲು ಓದಿನಲ್ಲೇನಾದರೂ ಬದಲಾವಣೆ ಮಾಡಿಕೊಂಡಿದ್ದಿರಾ?

ನನಗೆ ಮುಖ್ಯಪರೀಕ್ಷೆಯೇ ಕಷ್ಟವಾಗಿತ್ತು. ಕನ್ನಡ ಸಾಹಿತ್ಯ ಹಾಗೂ ಪ್ರಬಂಧ ಹೇಗೆ ಬರೆಯುವುದೆಂದು ಗೊತ್ತಿರಲಿಲ್ಲ. ಮೂರನೇ ಪ್ರಯತ್ನದಲ್ಲಿ ಭಯಂಕರವಾಗಿ ಓದಿದ್ದೆ. ಆದರೆ, ಪ್ರಬಂಧ ಪರೀಕ್ಷೆ ವೇಳೆ ಓದಿದ ಒತ್ತಡದಿಂದ ಏನೂ ಬರೆಯ ಲಾಗಲಿಲ್ಲ. ಕನ್ನಡದಲ್ಲೂ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯ ಹೇಳುವಂತೆ ಗೈಡೆನ್ಸ್ ಮಾಡಿದವರು ಸಲಹೆ ನೀಡಿದ್ದರು. ಏನು ಮಾಡಲಾಗಲಿಲ್ಲ. ಆದರೆ, ಈ ಬಾರಿ ಬರೆಯುವ ಶೈಲಿ ಬದಲಾಯಿಸಿದೆ.

l ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನಿಮ್ಮ ಸಲಹೆ ಏನು?

ಕನ್ನಡ ಮಾಧ್ಯಮದಲ್ಲಿ ಮುಖ್ಯ ಪರೀಕ್ಷೆಗಳನ್ನು ಬರೆಯಬಹುದು. ಹೆಚ್ಚು ಶಕ್ತಿಯುತವಾಗಿ ಅಭಿವ್ಯಕ್ತ ಗೊಳಿಸುವ ವಿಶ್ವಾಸವಿದ್ದರೆ ಕನ್ನಡದಲ್ಲಿ ಬರೆಯಬಹುದು. ಈ ಬಾರಿಯೂ ಕನ್ನಡ ಮಾಧ್ಯಮದಲ್ಲಿ ಪಾಸಾದವರನ್ನು ನೋಡಿದ್ದೇನೆ.

l ಕುಟುಂಬದ ಸಹಕಾರ ಹೇಗಿತ್ತು?

–ಮೂರು ಬಾರಿ ಫೇಲಾದರೂ ಅಮ್ಮ ಎಷ್ಟು ಬಾರಿ ಬೇಕಾದರೂ ಬರೆಯೋ ಎನ್ನುತ್ತಿದ್ದರು. ಅಪ್ಪ ಕೂಡ ಚಿಕ್ಕಂದಿನಲ್ಲಿ ಅಂಕ ಕಡಿಮೆ ತೆಗೆದುಕೊಂಡರೂ ಬಯ್ಯುತ್ತಿರಲಿಲ್ಲ. ತಂದೆ ತೀರಿಹೋಗಿದ್ದರಿಂದ ಎಸ್‌ಡಿಎ ಕೆಲಸ ಸಿಗುತ್ತಿತ್ತು. ಅಪ್ಪ ರಾತ್ರಿ ಶಾಲೆಗೆಲ್ಲ ಹೋಗಿ ಕಷ್ಟಪಟ್ಟು ತೆಗೆದುಕೊಂಡ ಕೆಲಸಕ್ಕೆ ನಾನು ಹೋದರೆ, ನನ್ನನ್ನು ಓದಿಸಿದ ಅವರಿಗೆ ಮಾಡುವ ಅವಮಾನವೆಂದು ಹೋಗಲಿಲ್ಲ. ಯುಪಿಎಸ್ಸಿಗೆ ಓದುವಾಗ ಕುಟುಂಬದ ಸಹಕಾರ ದೊಡ್ಡದು. ನೆಂಟರಿಗೆ ಕರೆ ಮಾಡಿ ಮಳೆ ಆಯ್ತಾ, ಬೆಳೆ ಹೇಗೆ ಬಂದಿದೆ ಎಂದೆಲ್ಲ ಕೇಳಿಕೊಳ್ಳುತ್ತಿದ್ದೆ. ಓದಿನ ಏಕತಾನತೆಯನ್ನು ಹಗುರಗೊಳಿಸುತ್ತಿತ್ತು. ಸ್ನೇಹಿತರು ಹಾಗೂ ಕುಟುಂಬದವರು ಪ್ರೋತ್ಸಾಹಿಸಿದರು.

l ಗ್ರಾಮೀಣ ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆ ಏನು?

–ಈಗೆಲ್ಲ ಅಂತರ್ಜಾಲದ ಸೌಲಭ್ಯವಿದೆ. ನನಗೆ ಐಐಟಿ ಎಂದು ಗೊತ್ತಾಗಿದ್ದೆ ಆಳ್ವಾಸ್‌ಗೆ ಹೋದಮೇಲೆ. ಗ್ರಾಮೀಣ ಭಾಗದಲ್ಲಿ ಮಾಹಿತಿ ಕೊರತೆ ಇದೆ. ಆನ್‌ಲೈನ್‌ ವಿಡಿಯೊ ನೋಡಿ ಯಾರದೋ ಓದಿನ ವೇಳಾಪಟ್ಟಿ ಅನುಸರಿಸಲು ಹೋಗಿ ಎಡವಿದ್ದೆ. ಅದೆಲ್ಲ ಮಾಡಬಾರದು. ಗೈಡೆನ್ಸ್ ತೆಗೆದುಕೊಂಡು ನಿರ್ಧರಿಸಿಕೊಳ್ಳಬೇಕು.

ಪರೀಕ್ಷೆಯೇ ಎಲ್ಲ ಅಲ್ಲ. ಜೀವನ ಯುಪಿಎಸ್ಸಿಗಿಂತ ದೊಡ್ಡದೆಂದು ಪ್ರಯತ್ನ ಮಾಡಬೇಕು. ನನ್ನ ನಾಲ್ಕು ವರ್ಷಗಳನ್ನು ಪರೀಕ್ಷೆ ಪಾಸಾಗಲು ವ್ಯಯಿಸಿರುವೆ. ಕಡಿಮೆ ಓದಿ ಹೆಚ್ಚು ಮನನ ಮಾಡಿಕೊಳ್ಳಬೇಕು. ನಿರಂತರತೆ ಕಾಯ್ದುಕೊಳ್ಳಬೇಕು. ಒಂದು ಕಡೆ 10 ಅಡಿ ತೆಗೆಯುವುದಕ್ಕೂ 10 ಕಡೆ ಒಂದು ಅಡಿ ತೆಗೆಯುವುದಕ್ಕೂ ವ್ಯತ್ಯಾಸವಿದೆ. ಹತಾಶೆಯನ್ನೆಲ್ಲ ತುಳಿದು ಮೇಲೆ ಬರಬೇಕು.

l ಪರೀಕ್ಷಾ ಯಶಸ್ಸಿಗೆ ಕೋಚಿಂಗ್‌ ಬೇಕಾ?

ಕೋಚಿಂಗ್‌ಗಿಂತ ಗೈಡೆನ್ಸ್ ಬೇಕು. ಪರೀಕ್ಷೆಯೇ ಎಲ್ಲ ಎಂಬಂತೆ ಕೋಚಿಂಗ್‌ ಕೇಂದ್ರಗಳಲ್ಲಿ ಅತಿಯಾಗಿ ತೋರಿಸಲಾಗುತ್ತದೆ. ಅದರಿಂದ ಇಷ್ಟವಿದೆಯೋ ಇಲ್ಲವೋ ಕೋಚಿಂಗ್‌ಗೆ ಹೆಚ್ಚು ಹಣ ಸುರಿಯುತ್ತಾರೆ. ಈಗಂತೂ ಯುಪಿಎಸ್ಸಿ ಪರೀಕ್ಷೆ ಊಹಾತೀತವಾಗಿದೆ. ಐಪಿಎಸ್‌ ಆಗಿರುವವರೂ ಈ ಬಾರಿಯ ಪ್ರಯತ್ನದಲ್ಲಿ ಪ್ರಿಲಿಮ್ಸ್‌ ಪಾಸ್‌ ಮಾಡಲಾಗಿಲ್ಲ. ಅದರಿಂದ ಸ್ಪರ್ಧಾರ್ಥಿಗಳಿಗೆ ಒತ್ತಡ, ತಮ್ಮ ಬಗ್ಗೆಯೇ ಸಂದೇಹ ದೊಡ್ಡದಾಗುತ್ತದೆ. ಕೋಚಿಂಗ್ ಹಿಂದೆ ಹೋಗುವುದಕ್ಕಿಂತ ಗೈಡೆನ್ಸ್ ತೆಗೆದುಕೊಳ್ಳುವುದು ಒಳ್ಳೆಯದು. ನಾನೂ ಅನರ್ಘ್ಯ ಐಎಎಸ್‌ ಅಕಾಡೆಮಿಯ ಮನೋಜ್ ಅವರಿಂದ ಗೈಡೆನ್ಸ್ ಪಡೆದಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT