ಸೋಮವಾರ, ಮಾರ್ಚ್ 27, 2023
31 °C

ಜಾನಪದ ಉಳಿವಿಗೆ ವಿಶೇಷ ಅನುದಾನ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನಾಡಿನ ಜಾನಪದ ಸಂಪತ್ತನ್ನು ಉಳಿಸಿಕೊಳ್ಳಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಅನುದಾನ ನೀಡಲಾಗುವುದು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜಿನಲ್ಲಿ ‘ಕನ್ನಡ ಜಾನಪದ ಪರಿಷತ್‌’ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಾನಪದ ಕ್ಷೇತ್ರದಲ್ಲಿ ಸೇವೆ ಮಾಡಿದವರಿಗೆ ‘ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಜಾನಪದ ಜೀವನದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪಟ್ಟಣಗಳಿಗಿಂತ ಹಳ್ಳಿಗಾಡೇ ಕಲೆಗಳ ನೆಲೆಯಾಗಿದೆ. ಗ್ರಾಮೀಣರ ಮನರಂಜನೆಯಾಗಿರುವ ಕಲೆಗಳನ್ನು ಅವರೇ ಶತಮಾನಗಳಿಂದ ಉಳಿಸಿದ್ದಾರೆ’ ಎಂದರು.

‘ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ವೈವಿಧ್ಯಮಯವಾದ ಜಾನಪದ ಕಲೆಗಳಿವೆ. ಮುಂದಿನ ಪೀಳಿಗೆಗಾಗಿ ಉಳಿಸಬೇಕಾಗಿದೆ. ಸಿದ್ದರಾಮಯ್ಯನ ಹುಂಡಿಯಲ್ಲಿ ನಂಜೇಗೌಡ  ಅವರು 30 ಮಂದಿಗೆ ವೀರಮಕ್ಕಳ ಕುಣಿತವನ್ನು ಕಲಿಸಿದರು. ಅವರೇ ಮರಳಿನಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಅವರಿಲ್ಲದಿದ್ದರೆ ಸರ್ಕಾರಿ ಶಾಲೆಗೆ ಸೇರುತ್ತಿರಲಿಲ್ಲ. ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ’ ಎಂದರು.

‘ಜೀವನದಲ್ಲಿ ವೀರಮಕ್ಕಳ ಕುಣಿತ ಕಲಿಸಿದ ನಂಜೇಗೌಡ, ಶಾಲೆಗೆ ಸೇರಿಸಿದ ರಾಜಪ್ಪ, ರಾಜಕಾರಣದ ದಾರಿ ತೋರಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನನ್ನ ಗುರುಗಳು. ಪರಂಪರೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ’

‘ಜಾನಪದವನ್ನು ಕಲಿಯುವವರು ಮೊದಲಿನಂತೆ ಹಳ್ಳಿಗಳಲ್ಲಿ ಯಾರೂ ಇಲ್ಲ. ಕಲಿಸುವವರೂ ಸಿಗುತ್ತಿಲ್ಲ. ಹೀಗಾಗಿ, ಓದಿನ ಜೊತೆಗೆ ಇಷ್ಟದ ಕಲೆಯನ್ನು ಕಲಿಯಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಜಾನಪದ ಕಲಾವಿದರನ್ನು ಗೌರವಿಸಿದರೆ ಜಾನಪದಕ್ಕೆ ಗೌರವ ನೀಡಿದಂತೆ. ನಾವೇ ಅಧಿಕಾರಕ್ಕೆ ಬಂದ ಕೂಡಲೇ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತೇವೆ’ ಎಂದರು.

ತೋಟೇಗೌಡ ಸಿದ್ಧನಕೊಪ್ಪಲು ಅವರ ‘ಸೃಷ್ಟಿ’, ಮೋಹನ್‌ ಪಾಳೇಗಾರ ಅವರ ‘ಮದರಂಗಿ ಜಾನಪದ ಕಥೆಗಳು’ ಹಾಗೂ ವೆಂಕಟಗಿರಿ ಠಾವುಗೋಡ್ಲು ಅವರ ‘ಅಪರೂಪದ ಒಡವೆ’  ಕೃತಿ ಬಿಡುಗಡೆ ಮಾಡಲಾಯಿತು.

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಮುಖಂಡ ಡಾ.ಎಚ್‌.ಸಿ,ಮಹದೇವ‍ಪ್ಪ, ಕೆ.ಮರೀಗೌಡ, ಶಾಸಕ ಅನಿಲ್‌ ಚಿಕ್ಕಮಾದು, ಪರಿಷತ್‌ ಅಧ್ಯಕ್ಷ ಡಾ.ಎಸ್‌.ಬಾಲಾಜಿ, ಜಿಲ್ಲಾ ಘಟಕದ ಅಧ್ಯಕ್ಷ ಕ್ಯಾತನಹಳ್ಳಿ ಎಚ್‌.ಪ್ರಕಾಶ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಬಿ.ಆನಂದ್‌, ಖಜಾಪ ಡಾ.ಕನಕತಾರ. ಕಾರ್ಯದರ್ಶಿ ವಿಠಲ್‌ ಪೆರುಮನೆ, ವಿಭಾಗೀಯ ಸಂಚಾಲಕ ಡಾ.ಕಾವೇರಿ ಪ್ರಕಾಶ್‌, ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಇದ್ದರು.

ಜಾನಪದ ಪ್ರಪಂಚ ಪ್ರಶಸ್ತಿ ಪುರಸ್ಕೃತರು

ಪ್ರೊ. ಅಂಬಳಿಕೆ ಹಿರಿಯಣ್ಣ (ಶಿವಮೊಗ್ಗ)., ಪ್ರೊ.ನಂಜಯ್ಯ ಹೊಂಗನೂರು (ಮೈಸೂರು), ಡಾ.ಸಿ.ಬಿ.ಹೊನ್ನು ಸಿದ್ಧಾರ್ಥ (ಬೆಂಗಳೂರು ನಗರ), ಡಾ.ಕುರುವ ಬಸವರಾಜ್‌ (ರಾಮನಗರ). ಡಾ.ಚಲುವರಾಜು (ವಿಜಯನಗರ), ಕಂಸಾಳೆ ಮಾದೇವ (ಮೈಸೂರು), ಸೋಬಾನೆ ಕೃಷ್ಣೇಗೌಡ (ಮಂಡ್ಯ), ತಾರಾಬಾಯಿ (ಕಲಬುರಗಿ), ನಂದಿಧ್ವಜ ಮಹಾದೇವಪ್ಪ (ಮೈಸೂರು), ಬಸವರಾಜ್ (ಚಾಮರಾಜನಗರ), ಬಸವರಾಜ್‌ ನೆಲದಾಳ್‌ (ರಾಯಚೂರು), ಮೌಲಾಸಾಬ ನಾನಾಸಾನಬ ಜಹಗೀರ್‌ದಾರ (ವಿಜಯಪುರ), ಸುಳ್ಳಿಮಾಡ ಗೌರಿ ನಂಜಪ್ಪ (ಕೊಡಗು), ಕನರಾಡಿ ವಾದಿರಾಹ ಭಟ್‌ (ಉಡುಪಿ), ಜಾಲಮರ ಸುಬ್ರಾಯ (ಚಿಕ್ಕಮಗಳೂರು) ದೊಡ್ಡಕ್ಕ (ತುಮಕೂರು), ಮುನಿವೆಂಕಟ‍ಮ್ಮ (ಕೋಲಾರ), ಮಲ್ಲೇಶಪ್ಪ ಬಸವಣ್ಣೆಪ್ಪ ಜೋಗಿ (ಉತ್ತರ ಕನ್ನಡ), ಭೀಮಶಿ ಘಂಟಿ ಸಾ.ಶಿರೂರ (ಬಾಗಲಕೋಟೆ), ಸುರೇಶ್‌ ಶೆಟ್ಟಿ ಅಯ್ಯಾಡಿ (ಮಹಾರಾಷ್ಟ್ರ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು