ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾಧ್ವನಿ’ ಬಸ್ ಯಾತ್ರೆ: ಒಕ್ಕಲಿಗರ ಮತ ಸೆಳೆಯಲು ‘ಕೈ’ ತಂತ್ರ

ಸಿದ್ದರಾಮಯ್ಯ ತವರಲ್ಲಿ ಶಿವಕುಮಾರ್ ನೇತೃತ್ವದ ಯಾತ್ರೆ
Last Updated 11 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿರುವ 2ನೇ ಹಂತದ ‘ಪ್ರಜಾಧ್ವನಿ’ ಬಸ್ ಯಾತ್ರೆಯನ್ನು ಜಿಲ್ಲೆಯಲ್ಲಿ ಒಕ್ಕಲಿಗರ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಬಳಸುವ ತಂತ್ರ ರೂಪಿಸಲಾಗಿದೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತವರಾದ ಈ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕ್ಷೇತ್ರವಾರು ಯಾತ್ರೆಯನ್ನು ನಡೆಸಲಾಗುತ್ತಿದೆ.

ಫೆ.15ರಿಂದ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರ ಸಂಚರಿಸಲಿದೆ. 15ರಂದು ಬೆಳಿಗ್ಗೆ 11ಕ್ಕೆ ಹುಣಸೂರು, ಮಧ್ಯಾಹ್ನ 3ಕ್ಕೆ ಎಚ್.ಡಿ.ಕೋಟೆ, 16ರಂದು ಬೆಳಿಗ್ಗೆ 11.30ಕ್ಕೆ ಕೆ.ಆರ್.ನಗರ, ಮಧ್ಯಾಹ್ನ 3.30ಕ್ಕೆ ಪಿರಿಯಾಪಟ್ಟಣ, 20ರಂದು ಬೆಳಿಗ್ಗೆ 11ಕ್ಕೆ ತಿ.ನರಸೀಪುರ, ಮಧ್ಯಾಹ್ನ 2ಕ್ಕೆ ವರುಣಾ ಹಾಗೂ ಸಂಜೆ 5ಕ್ಕೆ ನಂಜನಗೂಡಿನಲ್ಲಿ ಸಮಾವೇಶ ನಡೆಯಲಿದೆ. ಇಲ್ಲೆಲ್ಲವೂ ನೇತೃತ್ವ ವಹಿಸಿರುವುದು ಶಿವಕುಮಾರ್. ಅವರೊಂದಿಗೆ ನಾಯಕರಾದ ಕೆ.ಎಚ್.ಮುನಿಯಪ್ಪ, ಆರ್.ಧ್ರುವನಾರಾಯಣ ಮೊದಲಾದವರೂ ಭಾಗವಹಿಸಲಿದ್ದಾರೆ.

ದಕ್ಷಿಣದ ಜವಾಬ್ದಾರಿ:

ಈಚೆಗೆ ಜಿಲ್ಲಾ ಕೇಂದ್ರಗಳಲ್ಲಿ ನಡೆದಿದ್ದ ‘ಪ್ರಜಾಧ್ವನಿ’ ಯಾತ್ರೆಯಲ್ಲಿ ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್‌ ಜೋಡೆತ್ತಿನಂತೆ ಸಂಚರಿಸಿದ್ದರು. ಈಗ ಕ್ಷೇತ್ರವಾರು ಪ್ರತ್ಯೇಕವಾಗಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಉತ್ತರ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿದ್ದರೆ, ದಕ್ಷಿಣದ ಜವಾಬ್ದಾರಿಯನ್ನು ಶಿವಕುಮಾರ್‌ಗೆ ನೀಡಲಾಗಿದೆ.

‘ಒಕ್ಕಲಿಗರ ಬಾಹುಳ್ಯವಿರುವ ಪ್ರಮುಖ ಜಿಲ್ಲೆಗಳಲ್ಲಿ ಮೈಸೂರು ಒಂದು. ಇಲ್ಲಿ ಜೆಡಿಎಸ್‌ ಪ್ರಾಬಲ್ಯವೂ ಇದೆ. ಹೀಗಾಗಿ, ಒಕ್ಕಲಿಗ ಸಮಾಜದವರ ಮನವೊಲಿಕೆಗೆ ಅದೇ ಸಮಾಜದ ನಾಯಕ ಶಿವಕುಮಾರ್‌ ಅವರನ್ನು ಈ ಯಾತ್ರೆಯ ಮುಂಚೂಣಿಗೆ ತರಲಾಗಿದೆ. ಚುನಾವಣೆಯ ಹೊಸ್ತಿಲಲ್ಲಿ ಒಕ್ಕಲಿಗರಲ್ಲಿ ಕಾಂಗ್ರೆಸ್‌ ಪರವಾದ ಅಭಿ‍ಪ್ರಾಯ ಮೂಡಿಸುವುದಕ್ಕೆ ಈ ಮೂಲಕ ಯತ್ನಿಸಲಾಗುತ್ತಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಒಕ್ಕಲಿಗರ ನಾಯಕನನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿರುವುದನ್ನು ಒತ್ತಿ ಹೇಳಲು ಮತ್ತು ಸ್ಥಳೀಯ ಮಟ್ಟದಲ್ಲಿ ಒಕ್ಕಲಿಗ ಮುಖಂಡರನ್ನು ಪಕ್ಷಕ್ಕೆ ಕರೆತರುವ ತಂತ್ರಕ್ಕೂ ಯೋಜಿಸಲಾಗಿದೆ. ಇದರ ಭಾಗವಾಗಿ ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಪ್ರಮುಖರರಾದ ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಯರಗನಹಳ್ಳಿ ಮಹದೇವ, ಕೆಂಪನಾಯಕ ಮೊದಲಾದವರನ್ನು ಜೆಡಿಎಸ್‌ನಿಂದ ಸೆಳೆಯಲಾಗಿದೆ.

ಒಕ್ಕಲಿಗರ ಸಭೆ:

ಯಾತ್ರೆ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಈಚೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಒಕ್ಕಲಿಗ ಮುಖಂಡರ ಸಭೆ ನಡೆದಿದ್ದು, ಶಿವಕುಮಾರ್‌ ಕೈಬಲಪಡಿಸಲು ಹಾಗೂ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಶ್ರಮಿಸಬೇಕು ಎಂಬ ನಿರ್ಣಯಕ್ಕೆ ಬರಲಾಗಿದೆ. ಈ ಸಭೆಯಲ್ಲಿ ಪಕ್ಷಾತೀತವಾಗಿ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.

‘ಈ ಬಾರಿ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ಪರವಾಗಿ ನಿಲ್ಲಲಿದೆ. ಜೆಡಿಎಸ್‌ ಬಗೆಗಿರುವ ಅಸಮಾಧಾನ ಹಾಗೂ ಬಿಜೆಪಿ ವಿರುದ್ಧದ ಆಕ್ರೋಶ ಈಚೆಗೆ ನಡೆದ ಮುಖಂಡರ ಸಭೆಯಲ್ಲಿ ವ್ಯಕ್ತವಾಯಿತು. ಜೆಡಿಎಸ್‌ನಲ್ಲಿ 2ನೇ ಹಂತದ ನಾಯಕರನ್ನು ಬೆಳೆಸುತ್ತಿಲ್ಲ ಎಂಬ ಕೊರಗು ಹಲವರಲ್ಲಿದೆ. ಈ ಸಂದರ್ಭವನ್ನು ಬಳಸಿಕೊಂಡು ಒಕ್ಕಲಿಗರ ಮತಗಳನ್ನು ಸೆಳೆಯಲು ತಂತ್ರ ರೂಪಿಸಲಾಗಿದೆ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಮಾರ್ಗದರ್ಶನದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಸಂಘಟನೆ ಮಾಡುತ್ತಿದ್ದೇವೆ. ಆದರೆ, ಬಿಜೆಪಿ–ಜೆಡಿಎಸ್‌ನವರು ಕಂದಕ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇಲ್ಲಸಲ್ಲದ ವದಂತಿಗಳನ್ನು ಹರಿಬಿಟ್ಟು ಗೊಂದಲ ಮೂಡಿಸುತ್ತಿದ್ದಾರೆ. ಇದೆಲ್ಲವನ್ನೂ ಸಮಾಜದವರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ನಮ್ಮ ಉದ್ದೇಶವಾಗಿದೆ’ ಎನ್ನುತ್ತಾರೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ.

‘ಸಮಾಜದವರ ಅಭಿಮಾನ–ಪ್ರೀತಿ ಗಳಿಸಿಕೊಳ್ಳುವುದು ಯಾತ್ರೆಯ ಉದ್ದೇಶ‘

‘ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ, ಹಳೆಯ ಮೈಸೂರು ಭಾಗದಲ್ಲಿ ಒಕ್ಕಲಿಗರ ಅಭಿಮಾನ–ಪ್ರೀತಿ ಗಳಿಸುವುದು ಯಾತ್ರೆಯ ಒಂದು ಉದ್ದೇಶವಾದರೆ, ಜೆಡಿಎಸ್‌ನ ಪ್ರಾಬಲ್ಯ ಕುಸಿಯುತ್ತಿರುವ ಸಂದರ್ಭದಲ್ಲಿ ಸ್ಥಳೀಯ ನಾಯಕರಿಗೆ ಆಶ್ರಯವಾಗಿ ನಿಲ್ಲಬೇಕು ಎನ್ನುವ ಯೋಜನೆಯನ್ನೂ ಹೊಂದಲಾಗಿದೆ’ ಎಂದು ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌ ಪ್ರತಿಕ್ರಿಯಿಸಿದರು.

‘2ನೇ ಸುತ್ತಿನಲ್ಲಿ ಸಿದ್ದರಾಮಯ್ಯ ಅವರೂ ಭಾಗವಹಿಸಲಿದ್ದಾರೆ. ಎಲ್ಲೆಲ್ಲಿ ಒಕ್ಕಲಿಗ ಸಮಾಜದ ಮತಗಳು ನಮಗೆ ಕಡಿಮೆ ಇದ್ದವೋ ಅವುಗಳನ್ನು ಪಡೆದುಕೊಳ್ಳಲು ಸಮಾವೇಶ ಸಹಕಾರಿಯಾಗಲಿದೆ. ಜೆಡಿಎಸ್‌ನಿಂದ ಹೊರಬರುತ್ತಿರುವ ಸ್ಥಳೀಯ ನಾಯಕರಲ್ಲಿ ಭರವಸೆ ಮೂಡಿಸುವ ಯೋಜನೆಯನ್ನೂ ಹೊಂದಲಾಗಿದೆ’ ಎನ್ನುತ್ತಾರೆ ಅವರು.

ಮನೆ ಮನೆಗೆ ಕಾರ್ಡ್‌

ಮನೆಗಳಿಗೆ 200 ಯೂನಿಟ್ ವಿದ್ಯುತ್‌ ಉಚಿತ ಪೂರೈಕೆ ಹಾಗೂ ಮನೆಯ ಯಜಮಾನಿಗೆ ತಿಂಗಳಿಗೆ ₹ 2ಸಾವಿರ ನೀಡುವ ಯೋಜನೆಯ ಗ್ಯಾರೆಂಟಿ ಕಾರ್ಡ್‌ಗಳನ್ನು ಮನೆ ಮನೆಗಳಿಗೂ ಹಂಚಲಾಗುವುದು.

–ಎಂ.ಲಕ್ಷ್ಮಣ, ಕೆಪಿಸಿಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT