ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Rains | ಹಲವೆಡೆ ಅಬ್ಬರ, ಕೆಲವೆಡೆ ಜಿಟಿಜಿಟಿ ಮಳೆ

Published 3 ಜೂನ್ 2024, 23:41 IST
Last Updated 3 ಜೂನ್ 2024, 23:41 IST
ಅಕ್ಷರ ಗಾತ್ರ

ಮೈಸೂರು/ಮಂಗಳೂರು: ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ವಿವಿಧೆಡೆ ಸೋಮವಾರ ಮಳೆ ಸುರಿಯಿತು. ಕೊಡಗು ಮತ್ತು  ಪುತ್ತೂರಿನಲ್ಲಿ ಭಾರಿ ಮಳೆಯಯಾಯಿತು. ಪುತ್ತೂರಿನ ದರ್ಬೆಯ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿತ್ತು. 

ಮೈಸೂರು ಜಿಲ್ಲೆಯ ಬೆಟ್ಟದಪುರದಲ್ಲಿ ಗುಡುಗು ಸಹಿತ ಮಳೆಯಾಯಿತು. ಸಾಲಿಗ್ರಾಮ, ಜಯಪುರ, ಧರ್ಮಾಪುರ ಹೋಬಳಿ, ಪಿರಿಯಾಪಟ್ಟಣ, ಸರಗೂರು, ನಂಜನಗೂಡು, ತಲಕಾಡು, ಕೆ.ಆರ್‌. ನಗರ ಭಾಗದಲ್ಲಿ ಸಾಧಾರಣ ಮಳೆ ಸುರಿಯಿತು.

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ 45 ನಿಮಿಷಗಳಿಗೂ ಹೆಚ್ಚು ಕಾಲ ಭಾರಿ ವರ್ಷಧಾರೆಯಾಯಿತು. ನಂತರ ಜಿಟಿಜಿಟಿ ಮಳೆ ಬಿದ್ದಿತು. ಗೋಣಿಕೊಪ್ಪಲು ಜೋರು, ಸೋಮವಾರಪೇಟೆ ಹಾಗೂ ವಿರಾಜಪೇಟೆಯಲ್ಲಿ ಸಾಧಾರಣ ಮಳೆಯಾಯಿತು.

ಹಾಸನ ನಗರ, ಜಿಲ್ಲೆಯ ಶ್ರವಣಬೆಳಗೊಳ, ಹಳೇಬೀಡು, ಹಿರೀಸಾವೆ, ಆಲೂರು, ಅರಕಲಗೂಡಿನಲ್ಲಿ ಸಾಧಾರಣ ಮಳೆ ಬಿದ್ದಿತು.

ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಮಧ್ಯಾಹ್ನದ ಬಳಿಕ ಬಿರುಸಿನ ಮಳೆಯಾಗಿದ್ದರೆ, ಯಳಂದೂರು, ಕೊಳ್ಳೇಗಾಲ, ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸಾಧಾರಣ ವರ್ಷಧಾರೆಯಾಗಿದೆ. 

ಚಿಕ್ಕಮಗಳೂರು ವರದಿ: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರಂಭವಾಗಿದ್ದು, ಭಾನುವಾರ ಮಧ್ಯಾಹ್ನದಿಂದ ಅಲ್ಲಲ್ಲಿ ಉತ್ತಮವಾಗಿ ಮಳೆ ಸುರಿಯಿತು.

ಮೂಡಿಗೆರೆ, ಕೊಪ್ಪ, ಆಲ್ದೂರು, ಎನ್.ಆರ್‌.ಪುರ, ಬಾಳೆಹೊನ್ನೂರು, ಚಿಕ್ಕಮಗಳೂರು ಸೇರಿ ಮಲೆನಾಡು ಭಾಗದಲ್ಲಿ ಮಳೆಯಾಗಿದೆ. ಕೆಲವೆಡೆ ಧಾರಾಕಾರವಾಗಿ ಸುರಿದಿದ್ದರೆ, ಇನ್ನೂ ಹಲವೆಡೆ ಜಡಿ ಮಳೆ ಸುರಿಯಿತು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ  ಸಾಧಾರಣ ಮಳೆಯಾಯಿತು. ಬಂಟ್ವಾಳ ತಾಲ್ಲೂಕಿನ ಕೊಡಂಬೆಟ್ಟು ಗ್ರಾಮದ ಸುಬ್ಬೊಟ್ಟು ಮತ್ತು ರಾಮಯ್ಯ ಗುರಿ ಎಂಬಲ್ಲಿ ಸಿಡಿಲು ಬಡಿದು ಸುಬ್ಬೊಟ್ಟು ನಿವಾಸಿ ಅನಿತಾ ಗಿರೀಶ ಪೂಜಾರಿ ಮತ್ತು ರಾಮಯ್ಯ ಗುರಿ ನಿವಾಸಿ ಲೀಲಾವತಿ ಸಿಂಗ ಗಾಯಗೊಂಡಿದ್ದಾರೆ. ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೊಡ್ಡಕೆರೆಗೆ ನೀರು:  ಚಿತ್ರದುರ್ಗ ಜಿಲ್ಲೆಯಲ್ಲಿ ದೊಡ್ಡಕೆರೆಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿದಿದೆ. ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಸಮೀಪದ ಜೆ.ಬಿ. ಹಳ್ಳಿಯಲ್ಲಿ ಹತ್ತಿ, ಬಾಳೆ ಬೆಳೆಗೆ ಹಾನಿಯಾಗಿದೆ. ಹಿರಿಯೂರಿನಲ್ಲಿ 6 ಸೆಂ.ಮೀ. ಮಳೆ ದಾಖಲಾಗಿದೆ. ತಾಲ್ಲೂಕಿನಲ್ಲಿ 15 ನಿಮಿಷ ಬಿರುಸಾಗಿ ಮಳೆ ಸುರಿದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ಚಿತ್ರದುರ್ಗ ತಾಲ್ಲೂಕಿನ ಬೀರಾವರದಲ್ಲಿ ಚೆಕ್‌ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಹೊಲಗಳಲ್ಲಿ ನೀರು ನಿಂತಿದೆ. ಸಿರಿಗೆರೆ ಸುತ್ತಲಿನ ತೋಟಗಳು ಜಲಾವೃತಗೊಂಡಿವೆ.

ಶಿವಮೊಗ್ಗ ವರದಿ: ಜಿಲ್ಲೆಯ ವಿವಿಧೆಡೆ ಸೋಮವಾರ ಮೋಡ ಕವಿದ ವಾತಾವರಣವಿದ್ದು, ಸಾಗರ ತಾಲ್ಲೂಕಿನಲ್ಲಿ ಮಳೆಯಾಗಿದೆ.

ದಾವಣಗೆರೆ ವರದಿ: ಜಿಲ್ಲೆಯ ಕೆಲವೆಡೆ ಭಾನುವಾರ ತಡರಾತ್ರಿ ಬಿರುಸಿನ ಮಳೆ ಸುರಿದಿದ್ದು ಮಾಯಕೊಂಡ, ಮಲೇಬೆನ್ನೂರು, ಹರಿಹರ ಭಾಗದಲ್ಲಿ ಬಿರುಸಿನ ಮಳೆಯಾಗಿದೆ. 

ಕಲಬುರಗಿ ವರದಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಕೊಪ್ಪಳ, ಬೀದರ್‌, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆ ಸುರಿದಿದೆ.  ಬೆಳಿಗ್ಗೆ ಜಿಟಿಜಿಟಿ ಮಳೆಯಾಗಿದ್ದರಿಂದ ವಾತಾವರಣ ತಂಪಾಗಿದೆ.

ಭಾನುವಾರ ರಾತ್ರಿಯಿಂದ ಸೋಮವಾರದ ಬೆಳಗಿನ ಜಾವದ ತನಕ ಕೊಪ್ಪಳ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಇದರಿಂದ ಕೃಷಿ ಚಟುವಟಿಕೆಗಳೂ ಚುರುಕು ಪಡೆದುಕೊಂಡಿವೆ.

ರಾಯಚೂರು ಜಿಲ್ಲೆಯಾದ್ಯಂತ ಭಾನುವಾರ ತಡ ರಾತ್ರಿಯಿಂದ ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೂ ಜಿಟಿಜಿಟಿ ಮಳೆಯಾಗಿದೆ.

ನಗರದ ಹೊರ ವಲಯದಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣ ಹಾಗೂ ಲಿಂಗಸುಗೂರ ಪಟ್ಟಣದಲ್ಲಿ 34.4 ಮಿ.ಮೀ ಮಳೆ ದಾಖಲಾಗಿದೆ. ಈಶಾನ್ಯ ಪದವೀಧರ ಮತಕ್ಷೇತ್ರದ ಮತಗಟ್ಟೆಗಳಲ್ಲಿ ಬೆಳಿಗ್ಗೆ ಮಳೆಯಿಂದಾಗಿ ಮತದಾರರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನ ಮಳೆ ನಿಂತ ಮೇಲೆ ಬಿರುಸಿನ ಮತದಾನ ನಡೆಯಿತು.

‌ಸಿಂಧನೂರು, ಮಾನ್ವಿ, ದೇವದುರ್ಗ, ಕವಿತಾಳ, ಲಿಂಗಸುಗೂರು, ಮುದಗಲ್, ಜಾಲಹಳ್ಳಿ, ತುರ್ವಿಹಾಳದಲ್ಲಿ ಸಾಧಾರಣ ಮಳೆಯಾಗಿದೆ. ರಾತ್ರಿಯಿಡೀ ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಧಗೆ ಕಡಿಮೆಯಾಗಿಲ್ಲ.

ಬೀದರ್‌ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಭಾಲ್ಕಿ, ಕಮಲನಗರದಲ್ಲಿ ಹೆಚ್ಚಿನ ಮಳೆಯಾಗಿದೆ.

ವಿಜಯಪುರ ಜಿಲ್ಲೆ ಹರನಾಳದಲ್ಲಿ 12.2 ಸೆಂ.ಮೀ
ಮಳೆಹುಬ್ಬಳ್ಳಿ: ವಿಜಯಪುರ ಬಾಗಲಕೋಟೆ ಉತ್ತರ ಕನ್ನಡ ಗದಗ ಬಳ್ಳಾರಿ ವಿಜಯನಗರ ಜಿಲ್ಲೆ ಸೇರಿ ವಿವಿಧೆಡೆ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆಯವರೆಗೆ ಧಾರಾಕಾರ ಮಳೆಯಾಯಿತು. ವಿಜಯಪುರ ಜಿಲ್ಲೆಯ ಹರನಾಳದಲ್ಲಿ 12.2 ಸೆಂ.ಮೀ ಭಾರಿ ಮಳೆಯಾಗಿದೆ. ವಿಜಯಪುರದಲ್ಲಿ ಡೋಣಿ ನದಿ ಸೇರಿ ಹಳ್ಳ ಕೊಳ್ಳಗಳು ಉಕ್ಕಿ ಹರಿದಿವೆ. ಹದ ಮಳೆ ಆಗಿರುವುದರಿಂದ ಮುಂಗಾರು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಜಿಲ್ಲೆಯ ಹಿರೂರ 10.01 ಸೆಂ.ಮೀ ಕಣಕಾಲ 9.9 ಬರಟಗಿ 9.2 ಡೋಣೂರ 8.9 ರಾಂಪುರ 8.7ಅರಕೇರಿ 8.6 ಬಿದರಕುಂದಿ 8.5 ನಿಂಬಾಳ ಕೆ.ಡಿ 8.3 ಕವಡಿಮಟ್ಟಿ 8.3 ನಾದ ಕೆ.ಡಿ  8 ಸೆಂ.ಮೀ ಮಳೆ ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಹುನಗುಂದ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಸುರಿದ ಮಳೆಯು ವಾತಾವರಣವನ್ನು ತಂಪಾಗಿಸಿತು. ಹುನಗುಂದ ತಾಲ್ಲೂಕಿನ ವಿವಿಧೆಡೆ ಬಿರುಸಿನ ಮಳೆಯಾಯಿತು.  ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬ್ಯಾಲಹಾಳು ಹನಸಿ ಮತ್ತು ಚಿಲಗೋಡು ಕೆರೆಗಳಿಗೆ ನೀರು ಹರಿದು ಬಂದಿದೆ.  ಬಳ್ಳಾರಿ ಜಿಲ್ಲೆಯ ತೋರಣಗಲ್ ಹೋಬಳಿಯ ಯು.ರಾಜಾಪುರ ಮತ್ತು ಮೆಟ್ರಿಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಸೇತುವೆ ಕೊಚ್ಚಿಹೋಗಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ. ರಾಜಾಪುರ ಉಬ್ಬಳಗಂಡಿ ಕೆರೆರಾಂಪುರ ಗ್ರಾಮಗಳಲ್ಲಿ ಕಲಾ ಒಂದರಂತೆ ಒಟ್ಟು ಮೂರು ಮನೆಗಳಿಗೆ ಹಾನಿಯಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಉತ್ತಮ ಮಳೆಯಾಯಿತು. ಮುಳಗುಂದ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿ ಗುಡುಗು ಸಹಿತ ಜೋರಾದ ಮಳೆ ಸುರಿಯಿತು. ಲಕ್ಷ್ಮೇಶ್ವರ ಭಾಗದಲ್ಲಿ ಜಿಟಿಜಿಟಿ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಿರಸಿ ಸಿದ್ದಾಪುರ ಭಟ್ಕಳ ಭಾಗದಲ್ಲಿ ತುಂತುರು ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT