ಸೋಮವಾರ, ಮಾರ್ಚ್ 27, 2023
32 °C
ಸುತ್ತೂರು ಜಾತ್ರೆಯಲ್ಲಿ ಸಿದ್ಧಗೊಂಡಿದೆ ಪ್ರಾತ್ಯಕ್ಷಿಕೆ

ಮೈಸೂರು: ಒಂದೆಕರೆಯಲ್ಲಿ ‘ಸುಸ್ಥಿರ ಕೃಷಿ’ಯ ಪ್ರಯೋಗ

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೃಷಿಯಲ್ಲಿ ಯಶಸ್ಸು ಕಾಣುವುದಕ್ಕೆ ಹೆಚ್ಚಿನ ಜಮೀನು ಬೇಕಾಗುವುದಿಲ್ಲ. ಕೇವಲ ಒಂದು ಎಕರೆಯಲ್ಲೇ ಪ್ರಯೋಗಗಳನ್ನು ನಡೆಸಿ ಆರ್ಥಿಕವಾಗಿ ಲಾಭ ಕಾಣಬಹುದು ಎನ್ನುವ ಪ್ರಾತ್ಯಕ್ಷಿಕೆಯನ್ನು ನೋಡಲು ಮತ್ತು ಮಾರ್ಗದರ್ಶನ ಪಡೆಯುವುದಕ್ಕಾಗಿ ನೀವು ಸುತ್ತೂರು ಶ್ರೀಕ್ಷೇತ್ರದಲ್ಲಿ ಜ.18ರಿಂದ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಬರಬೇಕು.

ಹೌದು. ಸಣ್ಣ ಹಾಗೂ ಅತಿ ಸಣ್ಣ ರೈತರ ಸುಸ್ಥಿರ ಜೀವನೋಪಾಯವನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಖರ್ಚಿನಲ್ಲಿ ಸಮಗ್ರ ಸುಸ್ಥಿರ ಕೃಷಿಯ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಕೃಷಿ ಬ್ರಹ್ಮಾಂಡ ಎನ್ನುವ ಸ್ವಾವಲಂಬಿ ಪರಿಕಲ್ಪನೆಯ ಮೂಲಕ, ಒಂದು ಎಕರೆಯಲ್ಲಿ ಕೃಷಿ, ತೋಟಗಾರಿಕೆ, ಮೇವು, ಔಷಧೀಯ ಸಸ್ಯಗಳು, ವಿವಿಧ ಸೊಪ್ಪಿನ ಬೆಳೆಗಳು, ಪಶುಸಂಗೋಪನೆ, ಮೀನು ಸಾಕಣೆ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗುವುದು ಹೇಗೆ ಎನ್ನುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಗಿದೆ. ಇದೆಲ್ಲವೂ ನೀರಿನ ಮಿತಬಳಕೆಯ ಮೂಲಕ ಸಾಧ್ಯ ಎನ್ನುವುದನ್ನು ತೋರಿಸಲಾಗಿದೆ.

ಮಾರುಕಟ್ಟೆ ತಿಳಿಸಿಕೊಡಲು:

‘ರೈತರು ಒಂದೇ ಎಕರೆಯಲ್ಲೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎನ್ನುವುದನ್ನು ತೋರಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಸಿರಿಧಾನ್ಯ ಬೆಳೆಗಳ ಪ್ರದರ್ಶನ, ವಿಚಾರಸಂಕಿರಣ, ಮಾರುಕಟ್ಟೆ ಕಂಡುಕೊಳ್ಳುವುದು–ಮೌಲ್ಯವರ್ಧನೆಯ ಬಗ್ಗೆ ತಿಳಿಸಿಕೊಡುವುದು, ಚರ್ಚೆ, ಸಿರಿಧಾನ್ಯದಿಂದ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೊಸ ಸಾಧ್ಯತೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡುವುದು ನಮ್ಮ ಉದ್ದೇಶವಾಗಿದೆ’ ಎಂದು ಐಸಿಎಆರ್ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಪ್ರಭಾರ ಮುಖ್ಯಸ್ಥೆ ಎಚ್‌.ವಿ.ದಿವ್ಯಾ ಮಾಹಿತಿ ನೀಡಿದರು.

‘ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಜೊತೆಗೆ ಪ್ರಮುಖ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದೆ. ಮಣ್ಣಿನ ಸವಕಳಿ ತಪ್ಪಿಸಲು ಹಾಗೂ ಔಷಧಿ ಬೆಳೆಯಾಗಿ ಲಾವಂಚ, 18 ದೇಸಿ ದಂಟಿನ ಸೊಪ್ಪಿನ ತಳಿಗಳ ಪ್ರಾತ್ಯಕ್ಷಿಕೆ ಇರಲಿದೆ. 10 ನಿಮಿಷದಲ್ಲಿ ಒಂದು ಎಕರೆಗೆ ಔಷಧಿ ಸಿಂಪಡಿಸಬಹುದಾದ ಡ್ರೋನ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯೂ ಇರುತ್ತದೆ. ಡ್ರೋನನ್ನು 20 ಮೀಟರ್ ಎತ್ತರಕ್ಕೆ ಹಾರಿಸಿ ತೆಂಗು, ಅಡಿಕೆಗೂ ಔಷಧಿ ಸಂ‍ಪಡಿಸಬಹುದು ಎನ್ನುವುದನ್ನು ತೋರಿಸಲಾಗುವುದು’ ಎನ್ನುತ್ತಾರೆ ಅವರು.

ಗ್ರಾಮೀಣ ಜನಜೀವನ:

‘ಗ್ರಾಮೀಣ ಜೀವನ ಬಿಂಬಿಸುವ ವಸ್ತುಪ್ರದರ್ಶನ ಜಾತ್ರೆಯ ಮತ್ತೊಂದು ವಿಶೇಷವಾಗಿದೆ. ಜೆಎಸ್‌ಎಸ್‌ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆಯುರ್ವೇದದ ಮಹತ್ವವನ್ನೂ ತಿಳಿಸಲಾಗುವುದು. ವಿಜ್ಞಾನ ವಿಭಾಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ 200 ಮಾದರಿಗಳನ್ನು ಪ್ರದರ್ಶಿಸಲಾಗಿದ್ದು, ಅವುಗಳು ಕಲಿಕೆಗೆ ಪೂರಕವಾಗಿವೆ. ವಾಣಿಜ್ಯ ಹಾಗೂ ಗೃಹೋಪಯೋಗಿ ಮಳಿಗೆಗಳೂ ಇರಲಿವೆ’ ಎಂದು ವಸ್ತುಪ್ರದರ್ಶನದ ಸಂಯೋಜಕ ಚನ್ನಮಲ್ಲಿಕಾರ್ಜುನ ತಿಳಿಸಿದರು.

‘ಸೈಬರ್ ಅಪರಾಧ ತಡೆಯುವುದು ಹಾಗೂ ಸಂಚಾರ ನಿಯಮಗಳ ಕುರಿತು ಪೊಲೀಸರು ಮಾಹಿತಿ ನೀಡಲಿದ್ದಾರೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಫೋನ್ ಗೀಳಿನ ಬಗ್ಗೆ ಎಚ್ಚರಿಕೆ ನೀಡುವ, ಅದರಿಂದ ದೂರವಿರುವುದು ಹೇಗೆ ಎಂಬುದನ್ನು ತಿಳಿಸಿಕೊಡುವುದು ಈ ಬಾರಿಯ ವಿಶೇಷವಾಗಿದೆ’ ಎನ್ನುತ್ತಾರೆ ಅವರು.

ವಿದೇಶಿ ತರಕಾರಿಗಳು ವಿಶೇಷ

ಲೆಟ್ಯೂಸ್, ಝಕಿನಿ, ಬ್ರೊಕೊಲಿ, ಸೆಲರಿ, ಚೈನೀಸ್ ಕೋಸ್ ಮೊದಲಾದ ವಿದೇಶಿ ತರಕಾರಿಗಳನ್ನು ನೋಡಲು ಹಾಗೂ ಆ ಕೃಷಿಯ ಬಗ್ಗೆ ತಿಳಿದುಕೊಳ್ಳಲು ನೀವು ಜಾತ್ರೆಗೆ ಭೇಟಿ ನೀಡಬಹುದು. ಸಮಗ್ರ ಆಹಾರದ ಅಂಗಗಳಾದ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಕೃಷಿ ಆದಾಯದ ಇತರ ಮೂಲಗಳಾದ ವಾಣಿಜ್ಯ ಬೆಳೆಗಳು, ಮೇವಿನ ಬೆಳೆಗಳು, ವಿವಿಧ ಫಲಪುಷ್ಪಗಳು ಹಾಗೂ ವಿದೇಶಿ ತರಕಾರಿಗಳನ್ನು ಒಳಗೊಂಡ ತೋಟಗಾರಿಕೆ ಬೆಳೆಗಳಿವೆ. ಲಾವಂಚ, ರೇಷ್ಮೆ, ಕೃಷಿ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಿ 150 ಬೆಳೆಗಳು ಮತ್ತು ವಿವಿಧ ತಳಿಗಳ ಪ್ರಾತ್ಯಕ್ಷಿಕೆಯ ತಾಕುಗಳಿವೆ.

ಹೈಡ್ರೋಫೋನಿಕ್ಸ್ (ಜಲ ಕೃಷಿ), ಏರೋಫೋನಿಕ್ಸ್ (ವಾಯು ಕೃಷಿ) ಹಾಗೂ ಮೈಕ್ರೋಗ್ರೀನ್ಸ್ ಪದ್ಧತಿಯ ಕೃಷಿ ಪ್ರಾತ್ಯಕ್ಷಿಕೆಯೂ ಇದೆ. ದೇಸಿ ಜಾನುವಾರುಗಳ ಪ್ರದರ್ಶನದೊಂದಿಗೆ ಮುಧೋಳ ತಳಿಯ ನಾಯಿ, ಕುರಿ, ಕೋಳಿ, ಮೇಕೆಗಳ ಪ್ರದರ್ಶನವೂ ಇರಲಿದೆ. ಬದುವಿನಲ್ಲಿ 10 ರೀತಿಯ ಮರಗಳನ್ನು ಬೆಳೆಸಲಾಗಿದೆ. ‘ಜ್ಯೋತಿ’ ಭತ್ತದ ತಳಿಗೆ ಪರ್ಯಾಯವಾಗಿ ‘ಕೆಎಂಪಿ 220 ತಳಿ’ಯ ಭತ್ತದ ಪ್ರಾತ್ಯಕ್ಷಿಕೆ ತಾಕು ಕೂಡ ಇದೆ. ಕೈತೋಟಗಳೂ ಇವೆ. ಅವುಗಳ ಮಹತ್ವದ ಬಗ್ಗೆ ರೈತರಿಗೆ ತಿಳಿಸಿಕೊಡಲಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು