ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಕನಕಾಂಬರ ಕೆ.ಜಿ.ಗೆ ₹1,500!

ಮಾರುಕಟ್ಟೆಯಲ್ಲಿ ‘ವರಮಹಾಲಕ್ಷ್ಮಿ’ ಖರೀದಿ ಸಂಭ್ರಮ
Published : 14 ಆಗಸ್ಟ್ 2024, 16:00 IST
Last Updated : 14 ಆಗಸ್ಟ್ 2024, 16:00 IST
ಫಾಲೋ ಮಾಡಿ
Comments

ಮೈಸೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಉಳಿದಿದ್ದು, ಈಗಾಗಲೇ ನಗರದ ಮಾರುಕಟ್ಟೆಗಳು ಗ್ರಾಹಕರಿಂದ ತುಂಬಿ ಹೋಗಿವೆ. ಹೂ–ಹಣ್ಣುಗಳ ಬೆಲೆಯೂ ಗಗನಮುಖಿಯಾಗಿವೆ.

ಬುಧವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ದೇವರಾಜ ಮಾರುಕಟ್ಟೆಯ ಪ್ರಾಂಗಣ ಜನರಿಂದ ಕಿಕ್ಕಿರಿದು ತುಂಬಿತ್ತು. ಒಳಗೆ ಜಾಗ ಸಾಲದೇ, ಚಿಕ್ಕ ಗಡಿಯಾರದ ಸುತ್ತಲೂ ವರ್ತಕರು ಹೂ–ಹಣ್ಣಿನ ರಾಶಿ ಹಾಕಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ನಗರದ ಇತರ ಮಾರುಕಟ್ಟೆಗಳು, ಪ್ರಮುಖ ಬೀದಿಗಳಲ್ಲೂ ಸೇವಂತಿಗೆ ಹೂವನ್ನು ರಾಶಿ ಹಾಕಿ ಮಾರಾಟಕ್ಕೆ ಇಟ್ಟಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಲಕ್ಷ್ಮಿಗೆ ಪ್ರಿಯವಾದದ್ದು ಹೂವು. ಮನೆ–ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ದೇವಿಯ ಅಲಂಕಾರಕ್ಕೆ, ಮನೆಗೆ ಬಂದ ಮಹಿಳೆಯರಿಗೆ ನೀಡುವ ಬಾಗಿನಕ್ಕೆ ಹೂವುಗಳನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಗ್ರಾಹಕರಿಂದ ಈ ಪರಿಯ ಬೇಡಿಕೆಯನ್ನು ಅರಿತೇ ವರ್ತಕರು ಕಳೆದ ಕೆಲವು ದಿನಗಳಿಂದಲೇ ಹೂವಿನ ಬೆಲೆಯನ್ನು ಏರಿಸಿದ್ದಾರೆ. ಬೆಲೆ ಕೇಳಿ ಬೆವರಿದ ಗ್ರಾಹಕರು ಹಬ್ಬಕ್ಕಿದು ಅನಿವಾರ್ಯ ಎಂದು ನಿಟ್ಟುಸಿರು ಬಿಟ್ಟು ಖರೀದಿಸತೊಡಗಿದ್ದಾರೆ.

ಯಾವುದು ಎಷ್ಟು?: ಬುಧವಾರ ಮಾರುಕಟ್ಟೆಯಲ್ಲಿ ಕನಕಾಂಬರ ಬೆಲೆ ಕೇಳಿಯೇ ಗ್ರಾಹಕರು ಹೌಹಾರಿದರು. ಕೆ.ಜಿ.ಗೆ ₹500–600 ದರದಲ್ಲಿ ಮಾರಾಟವಾಗುತ್ತಿದ್ದ ಕನಕಾಂಬರ ಕೆ.ಜಿ.ಗೆ ₹1,000–1,500ರವರೆಗೆ ಬೆಲೆ ಏರಿಸಿಕೊಂಡಿತ್ತು. ಹೀಗಾಗಿ ಕೆ.ಜಿ. ಲೆಕ್ಕದಲ್ಲಿ ಕೊಳ್ಳಲು ಬಂದವರು ಚೌಕಾಸಿ ಮಾಡಿ ಸುಸ್ತಾಗಿ ಕಡೆಗೆ ಗ್ರಾಂ ಲೆಕ್ಕದಲ್ಲಿ ಕೊಂಡೊಯ್ದರು. 100 ಗ್ರಾಂಗೆ ₹150ರ ಬೆಲೆಯಲ್ಲಿ ಮಾರಾಟ ನಡೆಯಿತು.

ಮೈಸೂರು ಮಲ್ಲಿಗೆಗೆ ಹೆಸರುವಾಸಿ. ಆದರೆ, ಬೆಲೆ ಮಾತ್ರ ಗ್ರಾಹಕರಿಗೆ ಕಹಿಯಾಗಿತ್ತು. ಕೆ.ಜಿ.ಗೆ ₹600–700ರವರೆಗೂ ಬೆಲೆ ಏರಿತ್ತು. ಪ್ರತಿ ಮಾರಿಗೆ ₹100ರಂತೆ ಇತ್ತು. ಸೇವಂತಿಗೆ ಪ್ರತಿ ಕೆ.ಜಿ.ಗೆ ₹200ರಂತೆ, ಪ್ರತಿ ಮಾರಿಗೆ ₹80–100ರಂತೆ ವ್ಯಾಪಾರವಾಯಿತು. ಕಮಲದ ಹೂವು ಜೋಡಿಗೆ ₹100 ಇತ್ತು. ಚೆಂಡು ಹೂವು ಕೆ.ಜಿ.ಗೆ ₹150, ಬಿಡಿಗುಲಾಬಿ (ಬಟನ್‌) ₹300 ಇದ್ದರೆ, ತುಳಸಿ ಪ್ರತಿ ಮಾರಿಗೆ ₹80–100ರಂತೆ ಮಾರಾಟ ನಡೆಯಿತು.

ಹಣ್ಣುಗಳೂ ದುಬಾರಿ: ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳೂ ದುಬಾರಿಯಾಗಿವೆ. ಏಲಕ್ಕಿ ಬಾಳೆ ಬೆಲೆ ಇನ್ನಷ್ಟು ಏರಿಸಿಕೊಂಡಿದ್ದು, ಕೆ.ಜಿ.ಗೆ ₹120ರವರೆಗೂ ಮಾರಾಟ ನಡೆದಿದೆ. ಸೇಬು ಪ್ರತಿ ಕೆ.ಜಿ.ಗೆ ₹220–250 ಇದ್ದರೆ, ದಾಳಿಂಬೆ ₹200, ಸೀಬೆ ₹100, ಕಿತ್ತಳೆ ₹120, ಮೂಸಂಬಿ ₹100ರಂತೆ ಮಾರಾಟವಾಗಿತ್ತು. ನಿಂಬೆಹಣ್ಣು ₹10ಕ್ಕೆ 3–4ರಂತೆ ಮಾರಾಟ ನಡೆಯಿತು.

ತರಕಾರಿ, ಸೊಪ್ಪಿನ ದರ ಸ್ಥಿರ: ಈ ವಾರ ತರಕಾರಿಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ಟೊಮೆಟೊ ಇಳಿಕೆ ಹಾದಿಯಲ್ಲಿದ್ದರೆ, ಈರುಳ್ಳಿ ಧಾರಣೆ ಮಾತ್ರ ಅಲ್ಪ ಏರಿಕೆ ಕಂಡಿದೆ. ಸೊಪ್ಪುಗಳು ಅಗ್ಗವಾಗಿಯೇ ಮುಂದುವರಿದಿವೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಿಕ್ಕಗಡಿಯಾರ ವೃತ್ತ ಬುಧವಾರ ಗ್ರಾಹಕರಿಂದ ತುಂಬಿತ್ತು –ಪ್ರಜಾವಾಣಿ ಚಿತ್ರ/ ಅನುಪ್ ರಾಘ.ಟಿ.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಿಕ್ಕಗಡಿಯಾರ ವೃತ್ತ ಬುಧವಾರ ಗ್ರಾಹಕರಿಂದ ತುಂಬಿತ್ತು –ಪ್ರಜಾವಾಣಿ ಚಿತ್ರ/ ಅನುಪ್ ರಾಘ.ಟಿ.
ಚಿಕ್ಕಗಡಿಯಾರ ಬಳಿ ಹೂವಿನ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.
ಚಿಕ್ಕಗಡಿಯಾರ ಬಳಿ ಹೂವಿನ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.

ಕಮಲದ ಮಾದರಿಗೆ ಬೇಡಿಕೆ

ಒಂದೆಡೆ ಮಾರುಕಟ್ಟೆಯಲ್ಲಿ ಜನಸಂದಣಿ ಇದ್ದರೆ ಇನ್ನೊಂದೆಡೆ ಬಳೆ ಮಾರಾಟದ ಮಳಿಗೆಗಳು ಹಾಗೂ ಫ್ಯಾನ್ಸಿ ಸ್ಟೋರ್‌ಗಳು ಹೆಂಗಳೆಯರಿಂದ ತುಂಬಿದ್ದವು. ಲಕ್ಷ್ಮಿ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಬಳಸುವ ಮುಖವಾಡಗಳು ಹಾಗೂ ಕಮಲದ ತಳಹದಿಯ ಅಚ್ಚುಗಳಿಗೆ ಬೇಡಿಕೆ ಕುದುರಿತ್ತು. ಇದಲ್ಲದೆ ಪೂಜೆಗೆ ಬೇಕಾದ ಬಳೆ ಅರಿಸಿನ–ಕುಂಕುಮ ಮೊದಲಾದ ಪೂಜಾ ಸಾಮಗ್ರಿಗಳನ್ನು ಮಹಿಳೆಯರು ಖರೀದಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT