ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ಪರ ಪಕ್ಷ, ಜನರ ಬೆಂಬಲ: ಎಂ.ಲಕ್ಷ್ಮಣ

ಸತ್ಯವೇ ಗೆಲ್ಲಲಿದೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಿಶ್ವಾಸ
Published : 24 ಸೆಪ್ಟೆಂಬರ್ 2024, 14:02 IST
Last Updated : 24 ಸೆಪ್ಟೆಂಬರ್ 2024, 14:02 IST
ಫಾಲೋ ಮಾಡಿ
Comments

ಮೈಸೂರು: ‘ಮುಡಾ 50:50 ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಅನುಮತಿಸಿ ಹೈಕೋರ್ಟ್ ತೀರ್ಪು ನೀಡಿದ್ದು, ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘136 ಶಾಸಕರು, 9 ಸಂಸದರು, ಕಾರ್ಯಕರ್ತರು, ಹೈಕಮಾಂಡ್‌ ಹಾಗೂ ಜನರ ಬೆಂಬಲವಿದೆ. ಸತ್ಯವೇ ಗೆಲ್ಲಲಿದೆ’ ಎಂದರು.

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದಶಕದಿಂದ 463 ಶಾಸಕರನ್ನು ಖರೀದಿಸಿ, 10 ರಾಜ್ಯಗಳ ವಿವಿಧ ಪಕ್ಷಗಳ ಸರ್ಕಾರಗಳನ್ನು ಬೀಳಿಸಿದೆ. ಅಧಿಕಾರದ ಹುಚ್ಚಿಗಾಗಿ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯವನ್ನು ಬಳಸಿಕೊಳ್ಳುತ್ತಿದೆ. ಇದೀಗ ನ್ಯಾಯಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ’ ಎಂದು ಟೀಕಿಸಿದರು.

‘ಸಂವಿಧಾನ ವಿರೋಧಿ ಕೆಲಸ ಮಾಡುವುದಕ್ಕೆ ರಾಜ್ಯಪಾಲರನ್ನು ಕೇಂದ್ರವು ರಾಜ್ಯಕ್ಕೆ ನಿಯೋಜಿಸಿದೆ. ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸುವುದೇ ಗುರಿಯಾಗಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲೇ ಇದು ಕರಾಳ ದಿನ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಬಿಜೆಪಿ, ಜೆಡಿಎಸ್‌ಗೆ ಸಹಿಸಲಾಗುತ್ತಿಲ್ಲ. ಎಲ್ಲರಿಗೂ ಗ್ಯಾರಂಟಿ ಯೋಜನೆ ನೀಡಿರುವುದರಿಂದಲೇ ಅವರನ್ನು ಪದಚ್ಯುತಿಗೊಳಿಸುವ ಹುನ್ನಾರ ನಡೆದಿದೆ’ ಎಂದರು.

‘ರಾಜ್ಯದ ಅಭಿವೃದ್ಧಿಗೆ ರಾಜ್ಯಪಾಲರು ತೊಡಕಾಗಿದ್ದು, ಎಲ್ಲದ್ದಕ್ಕೂ ವರದಿ ಕೇಳುತ್ತಿದ್ದಾರೆ. ಅವರು ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಹೋಗುವುದು ಒಳಿತು. ಅವರನ್ನು ರಾಷ್ಟ್ರಪತಿ ವಾಪಸ್‌ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಅನಾಹುತಗಳಾಗಲಿವೆ’ ಎಂದು ಎಚ್ಚರಿಸಿದರು.

‘ಮಹಿಷ ದಸರೆ: ವಿರೋಧ ಸಲ್ಲ’

‘ಮಹಿಷ ದಸರೆ ಆಚರಣೆ ವಿರುದ್ಧ ಬಿಜೆಪಿ ಮುಖಂಡ ಪ್ರತಾಪಸಿಂಹ ದ್ವೇಷದ ಹೇಳಿಕೆ ನೀಡುತ್ತಿದ್ದಾರೆ. ಆಚರಣೆಯು ವೈಯಕ್ತಿಕವಾಗಿದ್ದು ವಿರೋಧ ಸಲ್ಲದು’ ಎಂದು ಎಂ.ಲಕ್ಷ್ಮಣ ಹೇಳಿದರು. ‘ಚಾಮುಂಡೇಶ್ವರಿ ದೇವಿ ನಂಬಿಕೆಗೆ ದಕ್ಕೆ ಆಗುವುದಿಲ್ಲ. ಮಹಿಷ ಪ್ರತಿಮೆಯೇ ಚಾಮುಂಡಿಬೆಟ್ಟದಲ್ಲಿದೆ. ಅಲ್ಲಿ ಪೂಜೆ ಮಾಡಿದರೆ ತಪ್ಪೇನು’ ಎಂದು ಪ್ರಶ್ನಿಸಿದರು. 

‘ಸಂಸದ ಯದುವೀರ್‌ ಅವರಿಗೆ ತಮ್ಮ ಆಸ್ತಿಗಳ ರಕ್ಷಣೆಯೇ ಮುಖ್ಯವಾಗಿದೆ. ಅವರಿಗೆ ಜನರ ಕಷ್ಟ ಗೊತ್ತಿಲ್ಲ. ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಯನ್ನೂ ವಿರೋಧಿಸಿದ್ದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಾರಿವಾಳಗಳ ಹಿಕ್ಕೆ ಅರಮನೆಗೇನೂ ತೊಂದರೆ ನೀಡದು. ನೂರಾರು ವರ್ಷಗಳಿಂದಲೂ ಪಾರಿವಾಳಗಳಿವೆ. ಅವುಗಳನ್ನು ಓಡಿಸಬೇಕೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT