ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಮಾವು ಮೇಳ: ದರ, ರುಚಿ ಹೆಚ್ಚು!

ಕುಪ್ಪಣ್ಣ ಉದ್ಯಾನದಲ್ಲಿ ಆಯೋಜನೆ l ಜಿಲ್ಲಾಧಿಕಾರಿ ರಾಜೇಂದ್ರ ಚಾಲನೆ
Published 25 ಮೇ 2024, 4:25 IST
Last Updated 25 ಮೇ 2024, 4:25 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕುಪ್ಪಣ್ಣ ಉದ್ಯಾನದಲ್ಲಿ ತೋಟಗಾರಿಕೆ ಇಲಾಖೆಯು ಶುಕ್ರವಾರ ಆರಂಭಿಸಿದ ಮಾವು ಮೇಳ ಗ್ರಾಹಕರನ್ನು ಸೆಳೆಯಿತು. ಹತ್ತಾರು ತಳಿಗಳ ಸ್ವಾದಕ್ಕೆ ಮಾವುಪ್ರಿಯರು ಮಾರು ಹೋದರು.

ಮಾವಿನ ಇಳುವರಿಯಲ್ಲಿನ ಭಾರಿ ಕುಸಿತದಿಂದ ಬೆಲೆ ಹೆಚ್ಚಿತ್ತು. ಅದರಿಂದ ಗ್ರಾಹಕರು ಖರೀದಿ ಪ್ರಮಾಣವನ್ನೂ ತಗ್ಗಿಸಿದರು. ಆದರೆ, ಹಿಂದೆಂದಿಗಿಂತಲೂ ಈ ಬಾರಿ ಮಾವಿನ ರುಚಿ ಅದ್ಭುತವಾಗಿದೆಯೆಂಬ ರೈತರು ಹಾಗೂ ಮಳಿಗೆದಾರರು ಮಾತಿಗೆ ತಲೆದೂಗಿ ಸ್ಥಳದಲ್ಲೇ ಚಪ್ಪರಿಸಿ, ಒಂದೆರಡು ಕೆ.ಜಿ ಹೆಚ್ಚೇ ಖರೀದಿಸಿದ್ದು ಕಂಡು ಬಂತು.

ಮೂರು ದಿನಗಳ ಮೇಳಕ್ಕೆ ಜಿಲ್ಲೆಯೂ ಸೇರಿದಂತೆ ಮಂಡ್ಯ, ಹಾಸನ ಹಾಗೂ ರಾಮನಗರ ಜಿಲ್ಲೆಗಳ 35 ಮಂದಿ ರೈತರು ವಿವಿಧ ತಳಿಯ ಮಾವಿನೊಂದಿಗೆ ಆಗಮಿಸಿದ್ದರು.

ಅಲ್ಫಾನ್ಸೊ– ಬಾದಾಮಿ, ದಶೇರಿ, ರಸಪುರಿ, ಸ್ವರ್ಣರೇಖಾ, ಮಲ್ಲಿಕಾ, ತೋತಾಪುರಿ, ಸಿಂಧೂರ, ವಾಲಜ, ಭಾಗನಪಲ್ಲಿ, ಹಿಮಾಪಸಂದ್‌, ಸಕ್ಕರೆಗುತ್ತಿ, ಕೇಸರಿ, ಮಲಗೋವಾ ಹತ್ತಾರು ತಳಿಗಳ ಮಾವಿನ ಸ್ವಾದ ಸವಿದರು.

ಆಂಧ್ರಪ್ರದೇಶ ಹಾಗೂ ತಮಿಳುನಾಡು ಮೂಲಕದ ತಳಿ ‘ಹಿಮಾಮ್‌ಪಸಂದ್‌’ ಹೆಚ್ಚು ಸಿಹಿಯ ಸವಿಗೆ ಮನಸೋತರು. ಕೆ.ಜಿಗೆ ₹ 240 ಇದ್ದರಿಂದ ಒಂದೇ ಹಣ್ಣು ತೆಗೆದುಕೊಂಡು ಕುಟುಂಬದೊಂದಿಗೆ ಸವಿದರು. ಬಾದಾಮಿ ಹಣ್ಣು ಕೆ.ಜಿಗೆ ₹130 ಇದ್ದರೆ, ಮಲಗೋವಾಗೆ ₹ 170 ಇತ್ತು.

ಪುಟಾಣಿ ಮಾವಾದ ‘ಸಕ್ಕರೆ ಗುತ್ತಿ’ ಹಣ್ಣನ್ನು ಸವಿದ ಕೆ.ಆರ್‌.ಮೊಹಲ್ಲಾದ ಗ್ರಾಹಕ ಪ್ರಭು, ‘ಸಕ್ಕರೆ ಗುತ್ತಿಯನ್ನು ವಾಟೆ ಸಮೇತ ಬಾಯಿಗೆ ಹಾಕಿ ಮೆಲ್ಲುವ ಖುಷಿ, ಬಾದಾಮಿಯ ಸ್ವಾದದಲ್ಲೂ ಸಿಗದು’ ಎಂಬ ರುಚಿಯ ಅನುಭವ ಹೇಳಿಕೊಂಡರು.

ಹಲಸು ಮಾರಾಟವೂ ಭರ್ಜರಿಯಾಗಿ ನಡೆಯಿತು. ಪ್ರತಿ ಕೆ.ಜಿಗೆ ₹ 30 ಇತ್ತು. ಜೊತೆಗೆ ತೋಟಗಾರಿಕಾ ಇಲಾಖೆಯಿಂದ ಸಸ್ಯಗಳ ಮಾರಾಟವೂ ನಡೆಯಿತು.

ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಪ್ರತಿ ಮಳಿಗೆಗೂ ತೆರಳಿ ರೈತರನ್ನು ಮಾತನಾಡಿಸಿ, ಬಿಸಿಲು– ಮಳೆಯಿಂದ ಆದ ಹಾನಿ, ಫಸಲು ನಷ್ಟದ ಕುರಿತು ಮಾತನಾಡಿದರು. ವಿವಿಧ ತಳಿಯ ಮಾವುಗಳ ಹೆಸರನ್ನು ಕೇಳಿ ಹಣ್ಣು ಮಾಡುವ ವಿಧಾನಗಳ ಬಗ್ಗೆ ತಿಳಿದು, ಬೆಲೆ ವಿಚಾರಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ, ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಎಚ್‌.ಶಶಿಧರ್, ಅಶ್ವಿನಿ, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಚೇತನ್ ಹಾಜರಿದ್ದರು.

ಹತ್ತಾರು ತಳಿಯ ಆಸ್ವಾದ ಕಳೆದ ಬಾರಿಗಿಂತ ದರ ಹೆಚ್ಚಳ ಹಲಸು ಮಾರಾಟವೂ ಜೋರು

8 ಎಕರೆಯಲ್ಲಿ 50 ಟನ್‌ ಮಾವು ಆಗುತ್ತಿತ್ತು ಬಿರು ಬಿಸಿಲಿನಿಂದ ಹೂ ಒಣಗಿದವು. 10 ಟನ್‌ ಫಸಲು ಮಾತ್ರ ಬಂದಿದೆ.

-ವಾಸು ಬಿಳಗುಂಬ ರಾಮನಗರ

ಆರು ಎಕರೆಯಲ್ಲಿ ಮಾವು ಬೆಳೆಯುತ್ತಿದ್ದೇವೆ. ಈ ಬಾರಿ ಮಾವು ರುಚಿ ಚೆನ್ನಾಗಿದೆ. ದರ ಹೆಚ್ಚಿರುವುದರಿಂದ ಅನುಕೂಲವಾಗಿದೆ

-ಮಂಜುಕುಮಾರ್ ದೊಡ್ಡ ಮಾರಗೌಡನಹಳ್ಳಿ ಇಲವಾಲ

ಕಳೆದ ಬಾರಿ 8 ಟನ್‌ ಮಾವು ಆಗಿತ್ತು. ಈ ಬಾರಿ 4 ಟನ್ ಅಷ್ಟೇ ಸಿಕ್ಕಿದೆ. ಬೇರೆ ರಾಜ್ಯ ವಿದೇಶಗಳಿಗೂ ರಫ್ತು ಮಾಡುತ್ತೇವೆ

-ಅರ್ಚನಾ ಹಡಜನ ಗ್ರಾಮ ಮೈಸೂರು ತಾಲ್ಲೂಕು

ಮಾವಿನ ಹಣ್ಣುಗಳು ತಳಿ;ದರ (ಕೆ.ಜಿಗೆ)

ಬಾದಾಮಿ;125

ರಸಪುರಿ;100

ಮಲ್ಲಿಕಾ;130

ಸಿಂಧೂರ;70

ತೋತಾಪುರಿ;40

ಮಲಗೋವಾ;170

ಬಾಗನಪಲ್ಲಿ;70

ಹಿಮಾಪಸಂದ್‌;240

ವಾಲಜ;70

ಕೇಸರಿ;130

ದಶೇರಿ;130

ಸಕ್ಕರೆಗುತ್ತಿ;160

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT