ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಪರಿಷತ್‌ ಚುನಾವಣೆ: ಶಿಕ್ಷಕರ ಬೇಡಿಕೆ ಈಡೇರಿಸಿದ್ದು ಕಾಂಗ್ರೆಸ್; ಎಂ.ಲಕ್ಷ್ಮಣ

Published 31 ಮೇ 2024, 15:54 IST
Last Updated 31 ಮೇ 2024, 15:54 IST
ಅಕ್ಷರ ಗಾತ್ರ

ಮೈಸೂರು: ‘6ನೇ ವೇತನ ಆಯೋಗ ಜಾರಿ ಹಾಗೂ ಕುಮಾರ ನಾಯ್ಕ್‌ ವರದಿ ಅನುಷ್ಠಾನಗೊಳಿಸಿ ಶಿಕ್ಷಕರ ವೇತನ ಹೆಚ್ಚಿಸಿದ್ದು, ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಸರ್ಕಾರ. ನುಡಿದಂತೆ ನಡೆದವರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿಕ್ಷಕರು ಮತ ನೀಡಬೇಕು’ ಎಂದು ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಕೋರಿದರು. 

ನಗರದ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಮಾರ ನಾಯ್ಕ್‌ ವರದಿ ಅನುಷ್ಠಾನಗೊಳಿಸಿದ್ದರಿಂದ ಎರಡು ಬಾರಿ ₹ 6 ಸಾವಿರದವರೆಗೆ ವೇತನ ಹೆಚ್ಚಾಯಿತು. ವೇತನ ತಾರತಮ್ಯ ಹೋಗಲಾಡಿಸಿತು’ ಎಂದರು.

‘2018ರಲ್ಲಿ 6ನೇ ವೇತನ ಆಯೋಗದ ವರದಿ ಜಾರಿಯಿಂದ 7 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಾಯಿತು. ಇದೀಗ 7ನೇ ವೇತನ ಆಯೋಗ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅದರ ಅನುಷ್ಠಾನಕ್ಕೂ ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

‘ಮತವೊಂದಕ್ಕೆ ವಾಚ್‌, ₹ 9 ಸಾವಿರ ಕೊಡುತ್ತಿರುವುದಾಗಿ ತಿಳಿದುಬಂದಿದೆ. ಜೆಡಿಎಸ್‌– ಬಿಜೆಪಿಯ ಈ ಆಮಿಷಕ್ಕೆ ಒಳಗಾಗಬಾರದು. ಅವರು ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಶಿಕ್ಷಕರ ಎಲ್ಲ ಸಮಸ್ಯೆ ಬಗೆಹರಿಸಲು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕೋರಿದ್ದಾರೆ. ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಸಮಸ್ಯೆಗಳು ಕಾಣಲಿಲ್ಲ’ ಎಂದು ಟೀಕಿಸಿದರು.

‘ಎದುರಾಳಿ ಅಭ್ಯರ್ಥಿ ವಿವೇಕಾನಂದ ವಾಗ್ಮಿಯಲ್ಲ. ಮಾತನಾಡದೇ ಕೆಲಸ ಮಾಡುತ್ತಾರೆಂದೆಲ್ಲ ಆ ಪಕ್ಷಗಳ ಮುಖಂಡರು ಹೇಳಿದ್ದಾರೆ. ಮೇಲ್ಮನೆಗೆ ಬೇಕಿರುವುದು ವಾಗ್ಮಿಗಳು, ಶಿಕ್ಷಕರ ದನಿಯಾಗಿ ಕೆಲಸ ಮಾಡುವವರು. 24 ವರ್ಷದಿಂದ ಸತತವಾಗಿ ಕಳಂಕ ಇಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಕೆಲಸ ಮಾಡಿದ್ದಾರೆ. ಅವರನ್ನೇ ಗೆಲ್ಲಿಸಬೇಕು’ ಎಂದು ಕೋರಿದರು.

ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌, ಮುಖಂಡರಾದ ಬಿ.ಎಂ.ರಾಮು, ಭಾಸ್ಕರ್‌ ಎಲ್‌.ಗೌಡ, ಎಂ.ಶಿವಣ್ಣ, ಈಶ್ವರ್‌ ಚಕ್ಕಡಿ, ನಾಗೇಶ್‌, ಗಿರೀಶ್‌ ಹಾಜರಿದ್ದರು.

2018ರ ಪರಿಷತ್‌ ಚುನಾವಣೆಯಲ್ಲಿ 185 ಮತಗಳಿಂದ ಸೋತೆ. ಆದರೆ ನನ್ನ ಪಾಲಿನ ದೇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಟಿಕೆಟ್ ಕೊಡಿಸಿದರು. ಗೆಲ್ಲುವ ವಿಶ್ವಾಸವಿದೆ.
–‍ಎಂ.ಲಕ್ಷ್ಮಣ
‘ಶಿಕ್ಷಕರಿಗೆ ಹೆಚ್ಚು ಒತ್ತಡ’
‘ಲೋಕಸಭಾ ಚುನಾವಣೆಯಲ್ಲಿ ಶಿಕ್ಷಕರು ಕೆಲಸ ಮಾಡಿದ್ದಾರೆ. ಈಗಷ್ಟೇ ಶಾಲೆಗಳು ಆರಂಭವಾಗಿವೆ. ಜೊತೆಯಲ್ಲಿಯೇ 3ರಂದು ಪರಿಷತ್ ಚುನಾವಣೆ ನಡೆಸಲಾಗುತ್ತಿದೆ. ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶವಿದೆ. ಶಿಕ್ಷಕರಿಗೆ ಒತ್ತಡ ಉಂಟಾಗಿದೆ’ ಎಂದು ಲಕ್ಷ್ಮಣ ಕಳವಳ ವ್ಯಕ್ತಪಡಿಸಿದರು. ‘ಪರಿಷತ್ ಚುನಾವಣೆ ಮತದಾನ ಕಾರ್ಯ ಮುಗಿಸಿ ಲೋಕಸಭಾ ಫಲಿತಾಂಶದ ಕೆಲಸದಲ್ಲಿ ಪಾಲ್ಗೊಳ್ಳಬೇಕಿದೆ. ಪರಿಷತ್ ಸದಸ್ಯರ ಜೂನ್ 21ರವರೆಗೂ ಇತ್ತು. ಲೋಕಸಭಾ ಚುನಾವಣೆ ಫಲಿತಾಂಶ ಮುಗಿದ ನಂತರವೇ ಚುನಾವಣೆ ನಡೆಸಬಹುದಿತ್ತು. ಶಿಕ್ಷಕರಿಗೆ ಹೆಚ್ಚು ಒತ್ತಡ ಉಂಟಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT