ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ: ವಾಚ್, ಹಣ ನೀಡಿಕೆಯದ್ದೇ ಚರ್ಚೆ!

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ಸಂವಾದ
Published 31 ಮೇ 2024, 15:44 IST
Last Updated 31 ಮೇ 2024, 15:44 IST
ಅಕ್ಷರ ಗಾತ್ರ

ಮೈಸೂರು: ‘ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆಯೇ, ಮತದಾರರಿಗೆ ವಾಚ್‌, ಉಡುಗೊರೆ ನೀಡುವುದು, ಪಾರ್ಟಿ ಆಯೋಜಿಸುವುದು ಮೊದಲಾದ ಆಸೆ–ಆಮಿಷಗಳನ್ನು ಒಡ್ಡಲಾಗುತ್ತಿದೆಯೇ, ಪ್ರತಿಯೊಬ್ಬರಿಗೂ ಸಾವಿರಾರು ರೂಪಾಯಿ ಕೊಡಲಾಗುತ್ತಿದೆಯೇ’ ಎಂಬ ಪ್ರಶ್ನೆಗಳು ಇಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾದವು.

ಜಿಲ್ಲಾ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅಭ್ಯರ್ಥಿಗಳು, ‘ಕ್ಷೇತ್ರವನ್ನು ಈ ಬಾರಿಯ ಚುನಾವಣೆಯಲ್ಲಿ ಕಲುಷಿತಗೊಳಿಸಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಮಾತನಾಡಿ, ‘ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿ 5ನೇ ಬಾರಿಗೆ ಅವಕಾಶ ಬಯಸಿರುವ ನಾನು ಮತಕ್ಕಾಗಿ ಯಾರೊಬ್ಬರಿಗೂ ಒಂದು ರೂಪಾಯಿಯನ್ನೂ ನೀಡಿಲ್ಲ. ನಾನೇನಾದರೂ ಕೊಟ್ಟಿರುವ ಬಗ್ಗೆ ಯಾರ ಬಳಿಯಲ್ಲಾದರೂ ದಾಖಲೆಗಳಿದ್ದಲ್ಲಿ ನೀಡಲಿ’ ಎಂದರು.

‘ಕ್ಷೇತ್ರವು ಈವರೆಗೂ ಕಲುಷಿತಗೊಂಡಿರಲಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನೋವು ತಂದಿವೆ. ಜೆಡಿಎಸ್‌–ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ವಾಚ್, ಹಣ ಹಂಚುತ್ತಿದ್ದಾರೆ‌’ ಎಂದು ಆರೋಪಿಸಿದರು. ‘ಇದು ಇಡೀ ಸಮಾಜಕ್ಕೆ ಗೊತ್ತಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಅಭ್ಯರ್ಥಿಯಾಗಿ ಈ ಬಾರಿ ಸ್ಪರ್ಧಿಸಿದ್ದೇನೆ. 24 ವರ್ಷಗಳಿಂದಲೂ ಶಿಕ್ಷಕರು, ವಿದ್ಯಾರ್ಥಿಗಳ ದನಿಯಾಗಿ ಕೆಲಸ ಮಾಡಿದ್ದೇನೆ. ಶಿಕ್ಷಣ ಕ್ಷೇತ್ರದ ಗುಣಮಟ್ಟ ಸುಧಾರಣೆಗೆ ಶ್ರಮಿಸಿದ್ದೇನೆ. ವಿರೋಧ ‌ಪಕ್ಷದಲ್ಲಿ ಇದ್ದಾಗಲೂ ದುಡಿದಿದ್ದೇನೆ. ಸ್ಥಾನದ ಪಾವಿತ್ರ್ಯ ಹಾಗೂ ಘನತೆ ಹೆಚ್ಚಿಸುವ ಕೆಲಸ‌ ಮಾಡಿದ್ದೇನೆ’ ಎಂದು ತಿಳಿಸಿದರು.

‘ಎಲ್ಲ ವೃಂದದ ಶಿಕ್ಷಕರು ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿಗಳಲ್ಲೂ ಸಮಸ್ಯೆ ಇದೆ. ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿಗೆ ಹೋರಾಡುವೆ. ಪಕ್ಷ ಬದಲಿಸಿರಬಹುದು. ಆದರೆ ನನ್ನ ಆದ್ಯತೆ, ಗುರಿ ಹಾಗೂ ಹೋರಾಟದಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಆಡಳಿತ ಪಕ್ಷದಲ್ಲಿ ಇರುವುದರಿಂದ ಶಿಕ್ಷಕರ ‌ಸಮಸ್ಯೆಗಳ ‍ಪರಿಹಾರಕ್ಕೆ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುತ್ತೇನೆ. ಅತಿಥಿ ಶಿಕ್ಷಕರ ಸೇವಾ ಭದ್ರತೆಗೆ ಹೋರಾಟ ಮುಂದುವರಿಸುತ್ತೇನೆ. ಹೀಗಾಗಿ, ಬೆಂಬಲಿಸುವ ವಿಶ್ವಾಸವಿದೆ’ ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜನೆ ವಿಚಾರಗಳನ್ನು ಹಂಚಿಕೊಂಡ ಅಭ್ಯರ್ಥಿಗಳು
‘ದಾಖಲೆ ಕೊಟ್ಟರೆ ಕಣದಿಂದ ಹಿಂದೆ ಸರಿಯುವರೇ?’
ಬಿಎಸ್ಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಆರ್.ಮಹೇಶ್ ಮಾತನಾಡಿ ‘ನಾನು ಸಾಮಾಜಿಕ ಪರಿವರ್ತನಾ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವುದರಿಂದ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳ ಬಗ್ಗೆ ಅರಿವಿದೆ’ ಎಂದರು. ‘ಪ್ರಮುಖ ಕೆಲಸ ಮಾಡುವಲ್ಲಿ ಈವರೆಗಿನ ಆಯ್ಕೆಯಾದ ಪ್ರತಿನಿಧಿಗಳು ಸೋತಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಸಂಖ್ಯೆ ಕಡಿಮೆ ಇದೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿದಿದೆ. ಗುರುತರ ಬದಲಾವಣೆಗಾಗಿ ಕ್ಷೇತ್ರದಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಹೀಗಾಗಿ ಮತದಾರರು ನನ್ನನ್ನು ಬೆಂಬಲಿಸಬೇಕು’ ಎಂದು ಕೋರಿದರು. ‘ಪ್ರಮುಖ ರಾಜಕೀಯ ಪಕ್ಷದವರು ಒಡ್ಡುತ್ತಿರುವ ಆಮಿಷ ಪಾರ್ಟಿ ಆಯೋಜನೆ ಬಗ್ಗೆ ಮಾಹಿತಿ ಇದೆ. ಇನ್ನೆರಡು ದಿನಗಳಲ್ಲಿ ಇದು ಜಾಸ್ತಿಯೇ ನಡೆಯಲಿದೆ. ದಾಖಲೆ ಕೊಟ್ಟರೆ ಅವರು ಕಣದಿಂದ ಹಿಂದೆ ಸರಿಯುತ್ತಾರೆಯೇ?’ ಎಂದು ಸವಾಲು ಹಾಕಿದರು.
‘ಭರವಸೆಗಳು ಈಡೇರಿಲ್ಲ’
ಪಕ್ಷೇತರ ಅಭ್ಯರ್ಥಿ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮಾತನಾಡಿ ‘2022ರಿಂದ ಈಚೆಗೆ ನೇಮಕಾತಿಯೇ ನಡೆದಿಲ್ಲದಿರುವುದು ಶೋಚನೀಯವಾಗಿದೆ. ಅತಿಥಿ ಶಿಕ್ಷಕರು ಉಪನ್ಯಾಸಕರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲಾಗಿದೆ. ಶಿಕ್ಷಣಕ್ಕೆ ಸಮರ್ಪಕವಾಗಿ ಅನುದಾನವನ್ನೇ ನೀಡಿಲ್ಲ. ಶಿಥಿಲ ಕಟ್ಟಡಗಳ ದುರಸ್ತಿ ಕೆಲಸವೂ ಮಾಡಲಾಗಿಲ್ಲ’ ಎಂದು ‌ದೂರಿದರು. ‘7ನೇ ವೇತನ ಆಯೋಗದ ವರದಿ ಈವರೆಗೆ ಜಾರಿಗೆ ತರಬೇಕಾಗಿತ್ತು. ಒಪಿಎಸ್ ಮಾಡಲಾಗಿಲ್ಲ. ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವಿಷಯದಲ್ಲಿ ನುಡಿದಂತೆ ನಡೆಯುತ್ತಿಲ್ಲ’ ಎಂದು ಆರೋಪಿಸಿದರು. ‘ರಿಯಲ್ ಎಸ್ಟೇಟ್ ಉದ್ಯಮಿ ಕಣಕ್ಕಿಳಿಸುವ ಮೂಲಕ ಜೆಡಿಎಸ್– ಬಿಜೆಪಿಯವರು ವ್ಯಾಪಾರಕ್ಕೆ ಇಳಿದಿದ್ದಾರೆ. ಹಣ ಪಕ್ಷ ಹಾಗೂ ಗಾಡ್‌ ಫಾದರ್‌ಗಳ ಬಲದಿಂದ ಆಯ್ಕೆ ಆಗುವುದರಿಂದ ಶಿಕ್ಷಣ ಕ್ಷೇತ್ರದ ಸುಧಾರಣೆ ಮಾಡುತ್ತಾರೆಯೇ?’ ಎಂದು ಕೇಳಿದರು.
‘ಉಪಾಧ್ಯಾಯರನ್ನು ದುಡ್ಡಿನಲ್ಲಿ ಅಳೆಯಬೇಡಿ’
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಮಾತನಾಡಿ ‘ಮೇಲ್ಮನೆ ಯಾವಾಗಲೂ ಮೇಲ್ಮನೆಯಾಗಿಯೇ‌ ಉಳಿಯಬೇಕು. ವಿಧಾನಸಭೆಯಿಂದ ಆಯ್ಕೆ ಮಾಡುವಾಗಲೂ ಬಂಧುಗಳು ಹಣವಂತರು ಹಾಗೂ ಜಾತಿ ಬಲ ಇರುವವರಿಗೆ ಆದ್ಯತೆ ಕೊಡಲಾಗುತ್ತಿದೆ. ಸೀಟಿಗಾಗಿ ಕೋಟಿ ಕೋಟಿ ರೂಪಾಯಿ ಕೊಡುವುದು ಕಂಡುಬರುತ್ತಿದೆ. ಚುನಾವಣಾ ವ್ಯವಸ್ಥೆ ಹಾಳಾಗಿದ್ದು ನಾಮನಿರ್ದೇಶನ ಮಾಡುವುದೂ ವ್ಯಾಪಾರ ಆಗಿ‌ ಹೋಗಿದೆ’ ಎಂದು ದೂರಿದರು. ‘ಉಪಾಧ್ಯಾಯರನ್ನು ದುಡ್ಡಿನಲ್ಲಿ ಅಳೆಯಲು ಹೋಗಬೇಡಿ. ಅವರು ರಾಷ್ಟ್ರಪತಿಗಿಂತಲೂ ಹೆಚ್ಚಿನ ಸ್ಥಾನದಲ್ಲಿ ಇರುವವರು. ಅವರು ಬೀದಿಗೆ ಬರುವಂತೆ ಹಾಗೂ ಕಣ್ಣೀರು ಹಾಕುವಂತೆ ಯಾವುದೇ ಸರ್ಕಾರವೂ ಮಾಡಬಾರದು’ ಎಂದರು. ‘ಮತದಾರರರಿಗೆ ಎಷ್ಟು ಸಾವಿರ ರೂಪಾಯಿ ನೀಡಿದರೆ ಒಟ್ಟು ಎಷ್ಟು ಕೋಟಿ ಹಣ ಬೇಕಾಗುತ್ತದೆ ಎಂಬ ಲೆಕ್ಕವನ್ನೂ’ ಅವರು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT