ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿ ವ್ಯತ್ಯಾಸ: ದಸರಾ ಕಲಾವಿದರಿಗೆ ನೀಡಿದ್ದ ಚೆಕ್‌ ವಾಪಸ್‌

Published 2 ನವೆಂಬರ್ 2023, 15:56 IST
Last Updated 2 ನವೆಂಬರ್ 2023, 15:56 IST
ಅಕ್ಷರ ಗಾತ್ರ

ಮೈಸೂರು: ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯು ಕಲಾವಿದರಿಗೆ ನೀಡಿದ್ದ ಚೆಕ್‌ ನಗದಾಗಿ ಪರಿವರ್ತನೆಗೊಳ್ಳದೇ ವಾಪಸ್ ಆಗುತ್ತಿದ್ದು, ಉಪಸಮಿತಿಯ ಅಧಿಕಾರಿಗಳ ಸಹಿಯಲ್ಲಿನ ವ್ಯತ್ಯಾಸ ಇದಕ್ಕೆ ಕಾರಣವಾಗಿದೆ.

ದಸರಾ ಖರ್ಚು–ವೆಚ್ಚದ ಲೆಕ್ಕಕ್ಕಾಗಿ ಆಯಾ ಉಪಸಮಿತಿಗಳ ಹೆಸರಿನಲ್ಲಿಯೇ ಬ್ಯಾಂಕ್ ಖಾತೆ ತೆರೆದು, ಆ ಮೂಲಕವೇ ಕಲಾವಿದರಿಗೆ ಗೌರವ ಸಂಭಾವನೆಯ ಚೆಕ್ ನೀಡಲಾಗುತ್ತಿದೆ. ಉಪಸಮಿತಿಗಳ ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳು ಈ ಖಾತೆಗಳನ್ನು ನಿರ್ವಹಿಸುತ್ತಾರೆ.

ದಸರಾ ಅಂಗವಾಗಿ ಈ ವರ್ಷ 18 ಉಪಸಮಿತಿಗಳನ್ನು ರಚಿಸಲಾಗಿತ್ತು. ಆಯಾ ಉಪಸಮಿತಿಗಳ ಅಡಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕಲಾವಿದರಿಗೆ ಗೌರವ ಸಂಭಾವನೆಯ ಚೆಕ್‌ಗಳನ್ನು ಉಪಸಮಿತಿಯವರು ನೀಡಿದ್ದರು. ಅಂತೆಯೇ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯಿಂದಲೂ ಕಲಾವಿದರಿಗೆ ಚೆಕ್ ನೀಡಲಾಗಿತ್ತು.

ಈ ಉಪಸಮಿತಿಗೆ ಈ ವರ್ಷ ಕಾರ್ಯಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಬದಲಾಗಿದ್ದು, ಅವರ ಸಹಿಗಳನ್ನು ಬ್ಯಾಂಕ್ ಖಾತೆಗೆ ಅಪ್‌ಡೇಟ್ ಮಾಡಲು ಕೊಡಲಾಗಿತ್ತು. ಆದರೆ ಅದು ಅಪ್‌ಡೇಟ್ ಆಗದೇ ಹಿಂದಿನ ವರ್ಷದ ಕಾರ್ಯಾಧ್ಯಕ್ಷ, ಕಾರ್ಯದರ್ಶಿಗಳ ಹೆಸರು ಮತ್ತು ಸಹಿಗಳೇ ಬ್ಯಾಂಕ್ ಖಾತೆಯಲ್ಲಿ ಉಳಿದುಕೊಂಡಿದ್ದರಿಂದ ಸಹಿ ಹೊಂದಾಣಿಕೆಯಾಗದೇ ಚೆಕ್ ವಾಪಸ್‌ ಆಗಿದ್ದು, ಕಲಾವಿದರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

‘ಚೆಕ್ ವಾಪಸ್ ಆಗಿರುವುದು ತಿಳಿಯುತ್ತಿದ್ದಂತೆಯೇ ಬ್ಯಾಂಕಿಗೆ ಮಾಹಿತಿ ನೀಡಿ ಮತ್ತೊಮ್ಮೆ ಸಹಿಗಳನ್ನು ಅಪ್‌ಡೇಟ್ ಮಾಡುವಂತೆ ಕೋರಿದ್ದೇವೆ. ಒಂದೆರಡು ದಿನದಲ್ಲಿ ಸಮಸ್ಯೆ ಸರಿಯಾಗಲಿದೆ’ ಎಂದು ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಕಾರ್ಯಾಧ್ಯಕ್ಷೆ ನಾಜಿಯಾ ಸುಲ್ತಾನ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT