ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಕಾಂಗ್ರೆಸ್ ಜನಾಂದೋಲನ ಸಮಾವೇಶದ ಹೈಲೈಟ್ಸ್

ಮಹಾರಾಜ ಕಾಲೇಜು ಮೈದಾನದಲ್ಲಿ ಕೆಪಿಸಿಸಿಯಿಂದ ಶುಕ್ರವಾರ ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶ
Published : 9 ಆಗಸ್ಟ್ 2024, 7:35 IST
Last Updated : 9 ಆಗಸ್ಟ್ 2024, 7:35 IST
ಫಾಲೋ ಮಾಡಿ
Comments

ಕಾಂಗ್ರೆಸ್ ಜನಾಂದೋಲನ ಸಮಾವೇಶದ ಹೈಲೈಟ್ಸ್

–ಮೈಸೂರಿಂದ ವರದಿ

––

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೋಮುವಾದಿಗಳು, ಜಾತಿವಾದಿಗಳು, ಪಾಳೇಗಾರಿಕೆ ಪ್ರವೃತ್ತಿ ಇರುವವರನ್ನು ಭಾರತದಿಂದ ಓಡಿಸಬೇಕಾದ ಅನಿವಾರ್ಯತೆ ಇದು. ಮನುವಾದಿಗಳು ಶೋಷಿತರನ್ನು ಸಹಿಸುವುದಿಲ್ಲ. ಅಂಥವರನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗುತ್ತದೆ. ಅದಕ್ಕಾಗಿ ಈ ಸಮಾವೇಶ ನಡೆಸಲಾಗುತ್ತಿದೆ.

ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯಿಲಿ ಅವರನ್ನು ಕೂಡ ಸಹಿಸಿಕೊಳ್ಳಲಿಲ್ಲ. ದೇವೇಗೌಡ , ಕುಮಾರಸ್ವಾಮಿ ಎಂದಿಗೂ ಕೂಡ ಕೊಟ್ಟ ಮಾತಿನಂತೆ ನಡೆದುಕೊಳ್ಳುವವರಲ್ಲ. ದೇವೇಗೌಡರ ಕುಟುಂಬದವರು

ದ್ವೇಷದ ರಾಜಕಾರಣ ಮಾಡುವ ಮನಸ್ಥಿತಿ ಹಾಗೂ ಬೇರೆಯವರು ಬೆಳೆಯಬಾರದೆಂಬ ಮನೋಭಾವ ಇರುವವರು ಎಂದು ವಾಗ್ದಾಳಿ ನಡೆಸಿದರು.

ಕೋಮುವಾದಿಗಳ ಜೊತೆ ಸೇರಿ, ಕೇಂದ್ರದೊಂದಿಗೆ ಶಾಮೀಲಾಗಿ ಕರ್ನಾಟಕ ಸರ್ಕಾರವನ್ನು ದುರ್ಬಲಗೊಳಿಸಲು ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾವು ಚುನಾವಣೆಗೆ ಸ್ಪರ್ಧಿಸಿದ್ದು ಹಾಗೂ ಆರ್ಥಿಕವಾಗಿ ನೆರವಾದವರನ್ನು ನೆನೆದ ಸಿದ್ದರಾಮಯ್ಯ, ನನ್ನ ಇಷ್ಟು ಚುನಾವಣೆಗಳಲ್ಲೂ ಜನರೇ ಹಣ ಕೊಟ್ಟು ಗೆಲ್ಲಿಸಿದ್ದಾರೆಯೇ ಹೊರತು. ನಾನು ಯಾರಿಗೂ ಹಣ ಕೊಟ್ಟಿಲ್ಲ ಎಂದರು.

ಬಿಜೆಪಿ- ಜೆಡಿಎಸ್‌ನವರು ಎಷ್ಟೇ ಪಾದಯಾತ್ರೆ ಮಾಡಿದರೂ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ನಾನು ಬಗ್ಗುವುದೂ ಇಲ್ಲ, ಜಗ್ಗುವುದಿಲ್ಲ. ಜನರ ಆಶೀರ್ವಾದ ಇರುವವರೆಗೂ ನನ್ನನಾಗಲಿ ನಮ್ಮ ಸರ್ಕಾರವನ್ನಾಗಲಿ ಅಲುಗಾಡಿಸಲು ಆಗುವುದಿಲ್ಲ ಎಂದು ಗುಡುಗಿದರು.

ನಾವು ಅಂಬೇಡ್ಕರ್ ಹೇಳಿದಂತೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ. ಆದರೆ, ಅದಕ್ಕೂ ನನಗೂ ಸಂಬಂಧವಿಲ್ಲ. ಆದರೂ ನನ್ನನ್ನು ಸಿಲುಕಿಸಲು ಕುಟಿಲ ಪ್ರಯತ್ನ ಮಾಡುತ್ತಿದ್ದಾರೆ. ವಿಧಾನಮಂಡಲ ಅಧಿವೇಶನದಲ್ಲೂ ಅದನ್ನೇ ಪ್ರಸ್ತಾಪಿಸಿದ ವಿರೋಧ ಪಕ್ಷದವರು ಸಮಯ ಹಾಳು ಮಾಡಿದರು ಎಂದು ಆರೋಪಿಸಿದರು.

ನಾವು ಎಸ್‌ಐಟಿ ರಚಿಸಿ ತನಿಖೆ ಮಾಡಿಸುತ್ತಿದ್ದೇನೆ. ಕಾರಣವಾದವರನ್ನು ಬಂಧಿಸುವ ಕೆಲಸವನ್ನೂ ಮಾಡಿದ್ದೇವೆ ಎಂದು ತಿಳಿಸಿದರು.

ಹಗರಣ, ಹಗರಣ, ಹಗರಣ ಎಂದು ವಿರೋಧ ಪಕ್ಷದವರು ಬೊಬ್ಬೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಕೇಳುತ್ತಿದ್ದಾರೆ. ನನ್ನ ರಾಜೀನಾಮೆ ಕೇಳಲು ಆರ್. ಅಶೋಕ, ಬಿ.ಎಸ್. ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ವಿಜಯೇಂದ್ರಗೆ ಯಾವ ನೈತಿಕತೆ ಇದೆ? ಎಂದು ಕೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರಿಸಿದರು.

ವಿಜಯೇಂದ್ರ ಅನೇಕ ಹಗರಣಗಳಲ್ಲಿ ಸಿಲುಕಿದ್ದಾರೆ. ಆ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ ಅವರೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮಾಡಿರುವ ಹಗರಣಗಳ ಬಗ್ಗೆ ಹೇಳಿದ್ದಾರೆ ಎಂದರು.

ಕುಮಾರಸ್ವಾಮಿ ನಿಮಗೆ ಯಾವ ನೈತಿಕತೆ ಇದೆ? ಜಂತಕಲ್ ಪ್ರಕರಣ ಮರೆತುಬಿಟ್ರಾ? ನನ್ನ ರಾಜೀನಾಮೆ ಕೇಳಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಯಾವ ಅಧಿಕಾರ ಇದೆ ನಿಮಗೆ?

ಆರ್. ಅಶೋಕ ವಿರುದ್ಧದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ನಾಚಿಕೆ ಆಗುವುದಿಲ್ಲವೇ ಎಂದು ಗುಡುಗಿದರು.

ನಾನೇನಾದರೂ ತಪ್ಪು ಮಾಡಿದ್ದೀನಾ? ಎಂದಿಗೂ ದ್ವೇಷದ ಅಥವಾ ಸೇಡಿನ ರಾಜಕಾರಣ ಮಾಡಿಲ್ಲ.‌ ಹಾಗೇನಾದರೂ ಮಾಡಿದ್ದರೆ ಇಂತಹ ಪರಿಸ್ಥಿತಿ ನನಗೆ ಬರುತ್ತಿರಲಿಲ್ಲ. ವಿರೋಧ ಪಕ್ಷದವರೆಲ್ಲರೂ ಜೈಲಿಗೆ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ವಿರೋಧ ಪಕ್ಷದವರು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇಂಥಾದ್ದೇ ಜಾಗದಲ್ಲಿ ನಿವೇಶನ ಕೊಡುವಂತೆ ನಾವು ಮುಡಾದವರನ್ನು ಕೇಳಿರಲಿಲ್ಲ. ಕೊಟ್ಟಾಗ ಇದ್ದದ್ದು ಬಿಜೆಪಿ ಸರ್ಕಾರವೇ ಹೊರತು‌ ನಮ್ಮದು ಇರಲಿಲ್ಲ. ಮುಡಾದಿಂದ ಭೂಪರಿಹಾರವಾಗಿ ನಿವೇಶನ ಪಡೆದಿದ್ದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಸಮರ್ಥನೆ ನೀಡಿದರು.

ಬಿಜೆಪಿಯವರು, ಮನುವಾದಿಗಳಿಗೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ‌ಗುಡುಗಿದರು.

--

ಮಾತನಾಡಲೂ ಬಿಡದೆ ಶಿಳ್ಳೆ ಹಾಕುತ್ತಿದ್ದವರು ಹಾಗೂ ಜಿಂದಾಬಾದ್ ಜಿಂದಾಬಾದ್ ಸಿದ್ದರಾಮಯ್ಯ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದರನ್ನು ಸುಮ್ಮನಿರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲರ ಕೈಮಗಿಯಬೇಕಾಯಿತು.

ನಿಮ್ಮ ಪ್ರೀತಿಗೆ, ಅಭಿಮಾನಕ್ಕೆ ಸಹಸ್ರ, ಸಹಸ್ರ ಧನ್ಯವಾದಗಳು ಎಂದು ಹೇಳಿ ಮಾತನಾಡಲು ಮುಂದಾದಾಗಲೂ ಅಭಿಮಾನಿಗಳ ಹರ್ಷೋದ್ಗಾರ ಮುಂದುವರಿಯಿತು. ನಾನು ನಿಮ್ಮ ಕೂಗು ಕೇಳಬೇಕೋ ನೀವು ನನ್ನ ಭಾಷಣ ಕೇಳುತ್ತೀರೋ ಎಂದು ಕೇಳಿದ ಬಳಿಕ ಅಭಿಮಾನಿಗಳು ಸುಮ್ಮನಾದರು. ನಂತರ ಸಿದ್ದರಾಮಯ್ಯ ಭಾಷಣ ಮಾಡಿದರು.

ಮುಡಾ ಕುರಿತು ಶಾಸಕ ಎ.ಎಸ್‌. ಪೊನ್ನಣ್ಣ ಅವರು ಹೊರತಂದಿರುವ ಪುಸ್ತಕವನ್ನು ಕಾಂಗ್ರೆಸ್ ಜನಾಂದೋಲನದಲ್ಲಿ ಬಿಡುಗಡೆ ಮಾಡಲಾಯಿತು.

ಮುಡಾ ಕುರಿತು ಶಾಸಕ ಎ.ಎಸ್‌. ಪೊನ್ನಣ್ಣ ಅವರು ಹೊರತಂದಿರುವ ಪುಸ್ತಕವನ್ನು ಕಾಂಗ್ರೆಸ್ ಜನಾಂದೋಲನದಲ್ಲಿ ಬಿಡುಗಡೆ ಮಾಡಲಾಯಿತು.

ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಕೇಳಿ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದಾರೆ. ಸಚಿವರ ರಾಜೀನಾಮೆಯನ್ನೂ ಪಡೆದುಕೊಂಡಿದ್ದಾರೆ. ಅದಕ್ಕಿಂತ ಇನ್ನೇನು ಬೇಕು? ಎಂದು ಗೃಹ ಸಚಿವ ಜಿ.ಪರಮೇಶ್ವರ ಕೇಳಿದರು.

ಪಾದಯಾತ್ರೆ ಮಾಡುತ್ತಿದ್ದೀರೇಕೆ ಎಂಬಿತ್ಯಾದಿ ನಮ್ಮ ಪ್ರಶ್ನೆಗಳಿಗೆ ವಿರೋಧ ಪಕ್ಷದವರು ಮೈಸೂರು ಚಲೋ ಸಮಾವೇಶದಲ್ಲಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಕರ್ನಾಟಕದ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಮಾತನಾಡಿ, ಕೇಂದ್ರದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡಲಿಲ್ಲವೇಕೆ? ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನ್ಯಾಯ ಮಾಡಿದೆ. ರೈತರಿಗೆ ನೆರವಾಗುವ ಮಹದಾಯಿ ಹಾಗೂ ಮೇಕೆದಾಟು ಯೋಜನೆಗೆ ಮಂಜೂರಾತಿ ಕೊಡದೇ ದ್ರೋಹ ಬಗೆದಿದೆ ಎಂದು ವಾಗ್ದಾಳಿ ನಡೆಸಿದರು.

ಈ ಜನಾಂದೋಲನ ಸಮಾವೇಶದೊಂದಿಗೆ ಬಿಜೆಪಿ ಹಾಗೂ ಜೆಡಿಎಸ್ ಕಥೆ ಮುಗಿಯಲಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಸಿದ್ದರಾಮಯ್ಯ ಫೋಟೊವುಳ್ಳ ಬಾವುಟಗಳನ್ನು ಅಭಿಮಾನಿಗಳು ಹಾರಾಡಿಸಿದರು.

ಸಮಾವೇಶದಲ್ಲಿ ಸಿದ್ದರಾಮಯ್ಯ ಫೋಟೊವುಳ್ಳ ಬಾವುಟಗಳನ್ನು ಅಭಿಮಾನಿಗಳು ಹಾರಾಡಿಸಿದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ ಮಾತನಾಡಿ, ಕಳಂಕರಹಿತ, ಬಡವರ ದನಿಯಾಗಿ ಹಾಗೂ ಪ್ರಾಮಾಣಿಕ ಆಡಳಿತವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮುಖ್ಯಮಂತ್ರಿ ಮೇಲೆ ಆಪಾದನೆ ಮಾಡಿದವರು, ಸರ್ಕಾರವನ್ನು ಉರುಳಿಸುತ್ತೇವೆ ಎಂದು ಮಾತನಾಡಿದವರಿಗೆ ಪ್ರಶ್ನೆ ಕೇಳುವ ಸಮಾವೇಶ ಇದಾಗಿದೆ. ಬಹುಶಃ ಕರ್ನಾಟಕದ ಇತಿಹಾಸದಲ್ಲಿಯೇ ಹೀಗೆ ವಿರೋಧ ಪಕ್ಷದವರಿಗೆ ಪ್ರಶ್ನೆ ಕೇಳುವ ಸಮಾವೇಶ ನಡೆದಿರಲಿಲ್ಲ ಎಂದರು.

ನಮ್ಕ ಪಾದಯಾತ್ರೆಗಳು ಜನರ ಪರವಾಗಿ ನಡೆಸಿದವಾಗಿದ್ದವು. ಆದರೆ ವಿರೋಧ ಪಕ್ಷದವರು ಕ್ಷುಲ್ಲಕ ಕಾರಣದಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಪ್ರಭಾವ ಬೀರಿದ್ದಕ್ಕೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆಗಳಿದ್ದರೆ ತೋರಿಸಿ ಎಂದು ಸವಾಲು ಹಾಕಿದರು.

ನಿಮ್ಮ ವಿರುದ್ಧ ಆಪಾದನೆಗಳಿಲ್ಲವೇ? ಬಿಜೆಪಿಯ ನಾಯಕರೇ, ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿನೋಟ ಎಂಬ ಪ್ರಕಟಣೆ ಕೊಟ್ಟಿದ್ದನ್ನು ಮರೆತಿದ್ದೀರಾ? ಎಂದು ಪ್ರಶ್ನಿಸಿದರು.

ಆಗ ಪ್ರಶ್ನೆ ಕೇಳಿದ್ದ ಜೆಡಿಎಸ್‌ನವರಿಗೆ ಬಿಜೆಪಿಯವರು ಮೊದಲು ಉತ್ತರ ಕೊಡಲಿ ಎಂದರು.

--

ಬಿಜೆಪಿಯ ಸಿ‌.ಪಿ. ಯೋಗೇಶ್ವರ್ ಹಾಗೂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಕುಮಾರಸ್ವಾಮಿ ವಿರುದ್ಧ ಮಾಡಿದ್ದ ಆರೋಪಗಳ ವಿಡಿಯೊ ಕೂಡ ಪ್ರದರ್ಶಿಸಲಾಯಿತು.

ಇವರೆಲ್ಲರೂ ಯೂಟರ್ನ್ ನಾಯಕರು ಎಂದು ಡಿ.ಕೆ.‌ ಶಿವಕುಮಾರ್ ಆರೋಪಿಸಿದರು.

ಕುಟುಂಬದವರ ಅನುಕೂಲಕ್ಕಾಗಿ ಬೇರೆ ನಾಯಕರನ್ನು ಓಡಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಯಾರನ್ನೂ ಬೆಳೆಯಲು ಬಿಡುವ ಜಾಯಮಾನ ಅವರದಲ್ಲ ಎಂದರು.

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಾಗುವುದಿಲ್ಲ . ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದು ಹೇಳಿದರು.

ನಮ್ಮ ಐದೂ ಗ್ಯಾರಂಟಿಗಳನ್ನು ತೆಗೆದು ಹಾಕಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿ ಪತ್ನಿ ಹಾಗೂ ಯಾವುದೇ ಪ್ರಭಾವವನ್ನು ಬಳಸದ ಪಾರ್ವತಮ್ಮ ಅವರ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ತಾಯಿ ಚಾಮುಂಡೇಶ್ವರಿ ಒಪ್ಪುವುದಿಲ್ಲ ಎಂದರು.

**

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ

'ಬಿಜೆಪಿ-ಜೆಡಿಎಸ್‌ನವರು ಸಿದ್ದರಾಮಯ್ಯ ಅವರನ್ನು ಏನೂ ಮಾಡಲಾಗುವುದಿಲ್ಲ. ನಾವೆಲ್ಲರೂ

ಅವರ ಕೈವಬಲಪಡಿಸುತ್ತೇವೆ. ಅವರು ರಾಜೀನಾಮೆ ಕೊಡಲು ಬಿಡುವುದಿಲ್ಲ. ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ' ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕೆಪಿಸಿಸಿಯಿಂದ ಶುಕ್ರವಾರ ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ನಮಗೆ‌ ಜನಾದೇಶ ನೀಡಿದ್ದಾರೆ. ಚುನಾವಣೆ ಪೂರ್ವ ನಾವು ನೀಡಿದ್ದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ಇದನ್ನು ವಿರೋಧ ಪಕ್ಷದವರಿಗೆ ಸಹಿಸಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನ ರಕ್ಷಣೆ ಮಾಡದಿದ್ದರೆ ಶೋಷಿತರಿಗೆ ಉಳಿಗಾಲವಿಲ್ಲ ಎಂದರು.

ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಸಹಿಸಲಾಗದೆ ಕ್ಷುಲ್ಲಕ ಕಾರಣದಿಂದ ಬಿಜೆಪಿ- ಜೆಡಿಎಸ್‌‌ನವರು ಪಾದಯಾತ್ರೆ ಮಾಡುತ್ತಿದ್ದಾರೆ. ಗುಡ್ಡ ಅಗೆದು ಇಲಿ ಹಿಡಿಯಲು ಹೊರಟಿದ್ದಾರೆ ಎಂದು ಟೀಕಿಸಿದರು.

---

ಡೂಪ್ಲಿಕೇಟ್ ಸಹಿ ಮಾಡುತ್ತಿದ್ದ ವಿಜಯೇಂದ್ರ: ಹರಿಪ್ರಸಾದ್ ಆರೋಪ

ವಿಧಾನಪರಿಷತ್ ಸದಸ್ಯ ಬಿ‌.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ಮೂಲಕ ಕಾಂಗ್ರೆಸ್‌ಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವರ್ಚಸ್ಸು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆಪರೇಷನ್ ಕಮಲದ ಮೂಲಕ ಕುಖ್ಯಾತಿ ಗಳಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ನಾಚಿಕೆ, ಮಾನ- ಮರ್ಯಾದೆ ಇಲ್ಲದೇ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಜಯೇಂದ್ರ ಪರೋಕ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಆಗ ಎಷ್ಟು ಕಡತಗಳಿಗೆ ಅಪ್ಪನ ಡೂಪ್ಲಿಕೇಟ್ ಸಹಿ ಮಾಡಿದ್ದರು ಎಂಬುದನ್ನು ಸರ್ಕಾರವು ತನಿಖೆಗೆ ‌ಒಳಪಡಿಸಬೇಕು ಎಂದು ಆಗ್ರಹಿಸಿದರು. ಆಗ, ಯಡಿಯೂರಪ್ಪ ಅವರ ಕಾಲದಲ್ಲಾಗಿದ್ದ ಮತ್ತಷ್ಟು ಹಗರಣಗಳು ಹೊರಬರುತ್ತವೆ ಎಂದು ಹೇಳಿದರು.

--

ವಸತಿ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಒಳ್ಳೆಯ ಸರ್ಕಾರವನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕಾಗಿ ಮುಡಾ ವಿಷಯ ಮುಂದಿಟ್ಟುಕೊಂಡು ಅನಗತ್ಯವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ದರು. ಆದರೆ ನಾವು ಕಡಿಮೆ ಅವಧಿಯಲ್ಲೇ ಜಾರಿಗೊಳಿಸಿದ್ದೇವೆ. ಇದನ್ನು ಸಹಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ ಎಂದರು.

ನಾವು ಬಡವರಿಗೆ ಮನೆಗಳನ್ನು ಕೊಟ್ಟಿದ್ದೇವೆ. ಬಿಜೆಪಿ, ಜೆಡಿಎಸ್‌ನವರಿಗೇಕೆ ಕೊಡಲು ಸಾಧ್ಯವಾಗಿರಲಿಲ್ಲ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲವೇ? ಎಂದು ಕೇಳಿದರು.

----

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡುತ್ತಿದೆ. ಮಲತಾಯಿ ಧೋರಣೆ ಅನುಸರಿಸುತ್ತಿದೆ. ತೆರಿಗೆ ಪಾಲು ಕೊಡದೆ ವಂಚನೆ ಮಾಡುತ್ತಿದ್ದಾರೆ. ಅನೇಕ ನೀರಾವರಿ ಯೋಜನೆಗಳಿಗೆ ಅನುದಾನ ಕೊಡದೇ ದ್ರೋಹ ಮಾಡಿದ್ದು, ಅವುಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ ಎಂದರು.

ಬ್ರಹ್ಮಾಂಡ ಭ್ರಷ್ಟಾಚಾರಿಗಳಾದ ಬಿಜೆಪಿ ಹಾಗೂ ಜೆಡಿಎಸ್‌ನವರು ನಡೆಸುತ್ತಿರುವ ಪಾದಯಾತ್ರೆಯನ್ನು ಜನರು ತಿರಸ್ಕರಿಸಿದ್ದಾರೆ. ಭ್ರಷ್ಟಾಚಾರಿಗಳು ಭ್ರಷ್ಟಾಚಾರಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಗರಣಗಳ ಪಿತಾಮಹರಿದ್ದರೆ ಅವರು ಬಿಜೆಪಿ, ಜೆಡಿಎಸ್‌ನವರು ಎಂದು ಆರೋಪಿಸಿದರು.

ಜಾತಿ-ಜಾತಿ, ಧರ್ಮ- ಧರ್ಮಗಳ ನುಡುವೆ‌ ವಿಷಬೀಜ ಬಿತ್ತುವ ಕೆಲಸವನ್ನು ಬಿಜೆಪಿ-ಜೆಡಿಎಸ್‌ನವರು ಮಾಡುತ್ತಿದ್ದಾರೆ ಎಂದು ದೂರಿದರು.

---

ಹೆಣಗಳ ಮೇಲೆ ರಾಜಕಾರಣ ಮಾಡಿದ ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಖಂಡ್ರೆ ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಾಗಿ ರಾಜ್ಯಪಾಲರು ಮುಖ್ಯಮಂತ್ರಿಗೆ ನೋಟಿಸ್ ನೀಡಿದ್ದಾರೆ. ಅದು ತೀವ್ರ ಖಂಡನೀಯ. ರಾಜ್ಯಪಾಲರು ಆ ನೋಟಿಸ್ ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಜನರು ನಮ್ಮ ಜತೆ ಇರುವುದರಿಂದ ನಮ್ಮ ಸರ್ಕಾರವನ್ನು ಯಾರೂ ಏನೂ ಮಾಡಲಾಗುವುದಿಲ್ಲ. ಬಿಜೆಪಿ, ಜೆಡಿಎಸ್ ಕಾಲದಲ್ಲಾದ ಹಗರಣಗಳ ತನಿಖೆಯನ್ನು ನಾವು ನಡೆಸುತ್ತಿದ್ದೇವೆ ಎಂದು ತಿಳಿಸಿದರು.

---

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಅವರು ಸುದೀರ್ಘವಾದ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಹಿಂದುಳಿದ ವರ್ಗದಿಂದ ಬಂದು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ನಡೆಸುವ ಮೂಲಕ ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರವಿದ್ದಾಗಲೇ ಮುಡಾ ತಪ್ಪಾಗಿದೆ ಎಂದು ಹೇಳಿ, ಮುಖ್ಯಮಂತ್ರಿ ಕುಟುಂಬಕ್ಕೆ ಭೂಪರಿಹಾರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪು ಏನಿದೆ ಎಂದು ಪ್ರಶ್ನಿಸಿದರು.

--

ದೇವೇಗೌಡರ ಕುಟುಂಬದವರು ಮೈಸೂರು, ಹಾಸನದಲ್ಲಿ ನೂರಾರು ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ಎಂ‌‌.ಬಿ. ಪಾಟೀಲ ಆರೋಪಿಸಿದರು.

ಜಾತ್ಯತೀತ ಪದವನ್ನು ತೆಗೆದು ಬಿಜೆಪಿಯವರ ಜೊತೆ ಸೇರಿಕೊಂಡಿರುವ ಜೆಡಿಎಸ್‌ನವರಿಗೆ ತಕ್ಕಪಾಠ ಕಲಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.

---

ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಭ್ರಷ್ಟಾಚಾರದಲ್ಲೇ ಮುಳುಗಿರುವ ಮಿತ್ರ ಪಕ್ಷದವರು ಪಾದಯಾತ್ರೆ ಮಾಡಿದರೆ ಪಾಪ ತೊಳೆದುಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ, ಜನರು ಅದನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ನಾವು ಜನಪರ ಕಾರ್ಯಕ್ರಮಗಳನ್ನು ನೀಡುತ್ತಿರುವುದನ್ನು ಸಹಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

---

ಸಿದ್ದರಾಮಯ್ಯ ವೇದಿಕೆಗೆ ಬರುತ್ತಿದ್ದಂತೆಯೇ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳಿಂದ ಸಿಳ್ಳೆಗಳು ನಿರಂತರವಾಗಿ ಮುಗಿಲು ಮುಟ್ಟಿದವು. ಸಿದ್ದರಾಮಯ್ಯ ಅವರ ಚಿತ್ರ ಮುದ್ರಿಸಿದ್ದ ಬಾವುಟಗಳು ರಾರಾಜಿಸಿದವು. ಕೆಲವರು ಮೈಸೂರು ಹುಲಿಗೆ ಜೈ ಎಂಬ ಘೋಷಣೆ ಕೂಗಿದರು.

ವಿರೋಧ ಮಾಡಲು ವಿರೋಧ ಪಕ್ಷದವರಿಗೆ ಹಕ್ಕಿದೆ. ಆದರೆ,‌ ಒಳ್ಳೆಯ ಸರ್ಕಾರವನ್ನು ಬೆಂಬಲಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ನೀವು ಹೋರಾಟ ನಡೆಸುವ ಮೂಲಕ ಸಿದ್ದರಾಮಯ್ಯ ಹಾಗೂ ಸರ್ಕಾರದ ಶಕ್ತಿ ಹೆಚ್ಚಿಸಿದೆ ಎಂದರು.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಸರ್ಕಾರವನ್ನು ಕಿತ್ತು ಹಾಕಲು ಷಡ್ಯಂತ್ರ ‌ಮಾಡುತ್ತಿರುವವರ ವಿರುದ್ಧದ ಹೋರಾಟ ನಮ್ಮದಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಜನರು ಸೇರಿದ್ದರಿಂದ ಜನಾಂದೋಲನ ಯಶಸ್ವಿಯಾಗಿದೆ ಎಂದರು.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ‌ ಮಾತನಾಡಿ, ಬಿಜೆಪಿಯವರು ಸ್ವಾತಂತ್ರ್ಯದ ‌ಉದ್ದೇಶವನ್ನು ಗಾಳಿಗೆ ತೂರಲು ಮುಂದಾಗಿದ್ದಾರೆ. ಯಾವುದೇ ಉದ್ದೇಶ, ಗುರಿ ಇಲ್ಲದೇ ಬಿಡಿದಿಯಿಂದ ಮೈಸೂರಿಗೆ ಕುಣಿದು ಕುಪ್ಪಳಿಸಿಕೊಂಡು ಬರುತ್ತಿದ್ದಾರೆ ಎಂದು ಟೀಕಿಸಿದರು.

--

ಶಾಸಕ ಎ.ಎಸ್. ಪೊನ್ನಣ್ಣ ಅವರು ಮುಡಾದ ಬಗ್ಗೆ ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

--

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿಜೆಪಿ-ಜೆಡಿಎಸ್‌ನವರದ್ದು ಪಾಪವಿಮೋಚನೆಯ ಯಾತ್ರೆಯಾಗಿದೆ. ನಮ್ಮದು ಅಧರ್ಮಿಗಳ ವಿರುದ್ಧದ ಧರ್ಮಯುದ್ಧವಾಗಿದೆ. ಅಸತ್ಯದ ವಿರುದ್ಧದ ಸತ್ಯದ ಹೋರಾಟವಾಗಿದೆ ಎಂದರು.

ರಾಜ್ಯದ ಜನರು, ಸಂವಿಧಾನದ ರಕ್ಷಣೆಗಾಗಿ ಈ ಜನಾಂದೋಲನವನ್ನು ನಡೆಸುತ್ತಿದ್ದೇವೆ. ಈ ಸರ್ಕಾರವನ್ನು 10 ತಿಂಗಳಲ್ಲಿ ತೆಗೆದು ಹಾಕುತ್ತೇವೆ ಎಂದು ಹೊರಟಿರುವವರ ವಿರುದ್ಧ ಬಡವರಿಗಾಗಿ ನಾವು ಹೋರಾಡುತ್ತಿದ್ದೇವೆ. ಮಿಸ್ಟರ್ ಕುಮಾರಸ್ವಾಮಿ, ಅಶೋಕ ಹಾಗೂ ವಿಜಯೇಂದ್ರ ಅವರೇ ಈ ಡಿಕೆಶಿ ನೇತೃತ್ವದಲ್ಲಿ 136 ಸೀಟುಗಳನ್ನು ಪಡೆದಿದ್ದೇವೆ. ಈ ಸರ್ಕಾರ ತೆಗೆಯಲು ಏನೇ ಕುತಂತ್ರ ಮಾಡಿದರೂ ಆಗುವುದಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆ ಬೇಕಾ ನಿಮಗೆ? ಈ ಬಂಡೆ ಸಿದ್ದರಾಮಯ್ಯ ಅವರ ಜೊತೆ ಇದೆ. ನನ್ನೊಂದಿಗೆ 136 ಜನ ಶಾಸಕರು ಇದ್ದಾರೆ. ನಾವೆಲ್ಲವೂ ಸಿದ್ದರಾಮಯ್ಯ ಅವರ ಜೊತೆಗಿದ್ದೇವೆ. ನಿಮ್ಮ ಕೈಯಲ್ಲಿ ಏನೂ ಮಾಡಲಾಗುವುದಿಲ್ಲ ಎಂದು ಗುಡುಗಿದರು.

ಯಾರು ರಾಜೀನಾಮೆ ಕೊಡುತ್ತಾರೆ ಎಂಬುದನ್ನು ಕಾಲ ತೀರ್ಮಾನಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಮೈಸೂರು ಚಲೋ ಪಾದಯಾತ್ರೆಗೆ ಅಪಸ್ವರ ವ್ಯಕ್ತಪಡಿಸಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಪ್ರಮುಖರ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ ವಿಡಿಯೊಗಳನ್ನು ಪ್ರದರ್ಶಿಸುತ್ತಾ ಡಿಕೆಶಿ ಮಾತನಾಡಿದರು.

ದೇವೇಗೌಡರು ಬಿಜೆಪಿಯ ವಿರುದ್ಧ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಜೆಡಿಎಸ್ ಹಾಗೂ ಆ ಪಕ್ಷದ ನಾಯಕರನ್ನು ಟೀಕಿಸಿದ್ದ ವಿಡಿಯೊಗಳನ್ನು ಪ್ರದರ್ಶಿಸಿದರು.

ಯಡಿಯೂರಪ್ಪ ಹಾಗೂ ವಿಜಯೇಂದ್ರ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿದ್ದ ಆರೋಪಗಳ ವಿಡಿಯೊ ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT