ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಪಾಲಿಕೆ: 173 ಪೌರಕಾರ್ಮಿಕರ ನೇಮಕಾತಿ

ಆದೇಶ ಪತ್ರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ
Published 9 ಫೆಬ್ರುವರಿ 2024, 13:22 IST
Last Updated 9 ಫೆಬ್ರುವರಿ 2024, 13:22 IST
ಅಕ್ಷರ ಗಾತ್ರ

ಮೈಸೂರು: ದಶಕಗಳಿಂದಲೂ ಸ್ವಚ್ಛ ನಗರಿಗಾಗಿ ಬೆವರು ಹರಿಸಿದ್ದವರಲ್ಲಿ ಸಂತಸ ಮೂಡಿತ್ತು. ನೌಕರಿ ಕಾಯಂ ಕನಸು ಕಾಣುತ್ತಿದ್ದ, 50 ವರ್ಷ ಮೀರಿ ನಿವೃತ್ತಿ ಅಂಚಿನಲ್ಲಿದ್ದ ಪೌರಕಾರ್ಮಿಕರ ಕಣ್ಗಳು ತುಂಬಿ ಬಂದವು.

ಕಲಾಮಂದಿರದಲ್ಲಿ ಪಾಲಿಕೆಯು ಶುಕ್ರವಾರ ಆಯೋಜಿಸಿದ್ದ ‘ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿ’ಯಡಿ 173 ಮಂದಿಗೆ ಆದೇಶ ಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ವಿತರಿಸಿದರು. ಫಲಾನುಭವಿಗಳು ಭಾವುಕರಾದರು.

‘ನನಗೀಗ 53 ವರ್ಷ, 2007ರಿಂದ ಕೆಲಸ ಮಾಡುತ್ತಿರುವೆ. ಈಗಲಾದರೂ ಒಳ್ಳೆಯದಾಗಿದೆ’ ಎಂದು ಪೌರಕಾರ್ಮಿಕ ಮಹಿಳೆ ರತ್ನಮ್ಮ ಹೇಳಿದರೆ, ‘22 ವರ್ಷದಿಂದಲೂ ದುಡಿಯುತ್ತಿರುವೆ. ಇದೀಗ ಕೆಲಸ ನೀಡಿರುವುದು ಅನ್ನ ಸಿಕ್ಕಂಥ ಸಂತೋಷವಾಗಿದೆ’ ಎಂದು ಮಹದೇವಪುರ ನಿವಾಸಿ ವೆಂಕಟಮ್ಮ ಹರ್ಷ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಎಚ್‌.ಸಿ.ಮಹದೇವಪ್ಪ, ‘ತುಳಿತಕ್ಕೊಳಗಾದ ವರ್ಗವನ್ನು ಮೇಲೆತ್ತುವುದೇ ಕಾಂಗ್ರೆಸ್‌ ಸರ್ಕಾರದ ಆದ್ಯತೆಯಾಗಿದೆ. ಸಾಮಾಜಿಕ ಅಸಮಾನತೆಯನ್ನು ತೊಲಗಿಸಲು ಹಾಗೂ ಸಂವಿಧಾನ ಬದ್ಧ ಹಕ್ಕುಗಳ ರಕ್ಷಣೆಗೆ ಕಟಿಬದ್ಧವಾಗಿದೆ’ ಎಂದರು.

‘ಪೌರಕಾರ್ಮಿಕರ ಮಕ್ಕಳು ಉನ್ನತ ಸ್ಥಾನಕ್ಕೇರಬೇಕು. ಕಟ್ಟಕಡೆಯ ಮನುಷ್ಯರಿಗೆ ಮೊದಲ ಆದ್ಯತೆ ನೀಡಬೇಕೆಂಬುದು ಕೆಲವರಿಗೆ ಗೊತ್ತಿಲ್ಲ. ಮೂಲನಿವಾಸಿಗಳಿಗೆ ಶತಮಾನದಿಂದಲೂ ಅನ್ಯಾಯವಾಗಿದೆ. ಸಿಂಧೂ ನದಿ ನಾಗರಿಕತೆಯ ಇತಿಹಾಸ ನಮಗಿದೆ. ಚರಿತ್ರೆಯಿಲ್ಲದವರು ದೇವರು– ಧರ್ಮದ ಹೆಸರಿನಲ್ಲಿ ಮೂಲನಿವಾಸಿಗಳನ್ನು ಒಡೆದು ಆಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೂಢನಂಬಿಕೆಯನ್ನು ಬಿಟ್ಟು ವೈಚಾರಿಕತೆ ಅಳವಡಿಸಿಕೊಳ್ಳದಿದ್ದರೆ ಶತಮಾನವಾದರೂ ನಮ್ಮನ್ನು ಮೇಲೇಳಲು ಶೇ 3ರಷ್ಟು ಮಂದಿ ಬಿಡುವುದಿಲ್ಲ. ಬಸವಣ್ಣ, ಅಂಬೇಡ್ಕರ್‌ ಜಾತಿ–ಲಿಂಗ ತಾರತಮ್ಯದ ವಿರುದ್ಧ ಹೋರಾಡಿದ್ದಾರೆ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ರಕ್ಷಣೆಯೇ ನಮ್ಮ ಜವಾಬ್ದಾರಿಯಾಗಿದೆ’ ಎಂದರು. 

‘ಪೌರಕಾರ್ಮಿಕರು ಊರಿನ ಕಸ ಸ್ವಚ್ಛಗೊಳಿಸಿ ಆರೋಗ್ಯ ಕಾಪಾಡುತ್ತಾರೆ. ಅತ್ಯಂತ ಕಷ್ಟದ, ತ್ಯಾಗದ ಬದುಕು ನಿಮ್ಮದಾಗಿದೆ. ಧರ್ಮ, ದೇವರು ಜನರಿಗೆ ಬಿಟ್ಟ ವಿಷಯ. ಆದರೆ, ಕೆಲವರು ಭಾವನಾತ್ಮಕವಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದ ಉದ್ದಗಲಕ್ಕೂ ‘ಸಂವಿಧಾನ ಜಾಗೃತಿ ಜಾಥಾ’ ನಡೆಸಲಾಗಿದೆ’ ಎಂದು ಹೇಳಿದರು.

ಶಾಸಕರಾದ ತನ್ವೀರ್‌ ಸೇಠ್, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪಾಲಿಕೆ ಆಯುಕ್ತ ಅಸಾದ್‌ ಉರ್ ರೆಹಮಾನ್ ಷರೀಫ್ ಹಾಜರಿದ್ದರು.

ಮೂಢನಂಬಿಕೆ ಬಿಟ್ಟು ವೈಚಾರಿಕತೆ ಬೆಳೆಸಿಕೊಳ್ಳಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಲಹೆ ಸಂವಿಧಾನ ರಕ್ಷಣೆ ಎಲ್ಲರ ಜವಾಬ್ದಾರಿ

ಹೊರವಲಯದ ಬಡಾವಣೆಗಳ ಸ್ವಚ್ಛತೆಯನ್ನೂ ಪಾಲಿಕೆ ಪೌರಕಾರ್ಮಿಕರೇ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಕಾರ್ಮಿಕರ ನೇಮಕವಾಗಬೇಕು. ಸಮಾನ ವೇತನ ನೀಡಬೇಕು

-ತನ್ವೀರ್‌ ಸೇಠ್‌ ಶಾಸಕ

ಪಾಲಿಕೆಯ 12ನೇ ವಾರ್ಡಿನಲ್ಲಿ 18 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೀಗ 52 ವರ್ಷ. ಇದೀಗ ಕೆಲಸ ಕಾಯಂಗೊಂಡಿರುವುದು ಸಂತಸ ತಂದಿದೆ

-ಎಚ್‌.ಕೆ.ಪ್ರಸನ್ನ ಪೌರಕಾರ್ಮಿಕ

‘ಹೆಚ್ಚಿನ ಸಾಲ ಸೌಲಭ್ಯ ನೀಡಲಿ’

‘ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಈ ಸಾಲಿನಲ್ಲಿ 24 ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಹೆಚ್ಚಿನ ಪೌರಕಾರ್ಮಿಕರಿಗೆ ಸೌಲಭ್ಯ ನೀಡಬೇಕು’ ಎಂದು ಪೌರಕಾರ್ಮಿಕರೊಬ್ಬರು ಸಭೆಯಲ್ಲಿ ಒತ್ತಾಯಿಸಿದರು. ‘ಹಣಕಾಸಿನ ಲಭ್ಯತೆ ನೋಡಿ ಮುಂದಿನ ವರ್ಷ ಹೆಚ್ಚು ಜನರಿಗೆ ಸಾಲಸೌಲಭ್ಯ ನೀಡಲು ಅನುದಾನ ನೀಡಲಾಗುವುದು. ಹೊರಗುತ್ತಿಗೆ ನೌಕರರ ಕಾಯಂಗೆ ಕಾನೂನು ಚೌಕಟ್ಟಿನಲ್ಲಿ ಕ್ರಮ ವಹಿಸಲು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗುವುದು’ ಎಂದು ಮಹದೇವಪ್ಪ ಪ್ರತಿಕ್ರಿಯಿಸಿದರು. ಹೊರಗುತ್ತಿಗೆಯಲ್ಲೂ ಮೀಸಲಾತಿ: ‘ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕಲ್ಪಿಸಲು ಹೊರಗುತ್ತಿಗೆ ನೇಮಕಾತಿಯಲ್ಲಿ 100 ಜನರಲ್ಲಿ 24 ಮಂದಿ ಪರಿಶಿಷ್ಟ ಸಮುದಾಯದವರು ಕಡ್ಡಾಯವಾಗಿ ಇರಬೇಕೆಂಬ ಕಾನೂನು ರೂಪಿಸುವ ಚಿಂತನೆ ನಡೆದಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚಿಸಲಾಗುವುದು’ ಎಂದು ಮಹದೇವಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT