ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಏಡ್ಸಮ್ಮ ಜಾತ್ರೆ’ ಖ್ಯಾತಿಯ ಗಿರೀಶ್‌ಗೆ ರಾಷ್ಟ್ರ ಪ್ರಶಸ್ತಿ

ಬೋಧನೆಯಲ್ಲಿ ಹೊಸತನ, ದಾಖಲಾತಿ ಪ್ರಮಾಣ ಹೆಚ್ಚಿಸಿದ ಸಾಧನೆಗೆ ಮನ್ನಣೆ
Published : 28 ಆಗಸ್ಟ್ 2024, 5:50 IST
Last Updated : 28 ಆಗಸ್ಟ್ 2024, 5:50 IST
ಫಾಲೋ ಮಾಡಿ
Comments

ಮೈಸೂರು: ‘ನಾನು ಎಚ್‌ಐವಿ ಏಡ್ಸ್‌ ಪಾಸಿಟಿವ್ ಅಲ್ಲ; ಆದರೆ, ಆ ರೋಗಿಗಳ ಬಗ್ಗೆ ಪಾಸಿಟಿವ್ ಆಗಿದ್ದೇನೆ’ ಎಂದು ಹೇಳಿಕೊಳ್ಳುತ್ತಲೇ, ‘ಏಡ್ಸಮ್ಮನ ಜಾತ್ರೆ’ಯಂಥ ವಿನೂತನ ಜಾಗೃತಿ ಪರಿಕಲ್ಪನೆಗಳ ಮೂಲಕ ಗಮನಸೆಳೆದಿದ್ದ ಉಪನ್ಯಾಸಕ ಎಚ್‌.ಎನ್. ಗಿರೀಶ್‌ ಅವರು ಕೇಂದ್ರ ಶಿಕ್ಷಣ ಸಚಿವಾಲಯದಿಂದ ನೀಡುವ 2024ನೇ ಸಾಲಿನ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಲ್ಲಿನ ವಿಜಯನಗರದ ನಿವಾಸಿಯಾದ 54 ವರ್ಷ ವಯಸ್ಸಿನ ಅವರು, ಜಿಲ್ಲೆಯ ಹುಣಸೂರಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಜೀವವಿಜ್ಞಾನ ಉಪನ್ಯಾಸಕರಾಗಿದ್ದಾರೆ. ‘ರಾಜ್ಯದ ಪಿಯು ಉಪನ್ಯಾಸಕರೊಬ್ಬರಿಗೆ ರಾಷ್ಟ್ರ ಪ್ರಶಸ್ತಿ ಸಂದಿರುವುದು ಇದೇ ಮೊದಲು’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಹುಣಸೂರು ತಾಲ್ಲೂಕಿನ ಕಾಡಂಚಿನ ಹಿಂಡಗುಡ್ಲು ಗ್ರಾಮದ ಅವರು, ಬೋಧನೆಯಲ್ಲಿ ಮೂರು ದಶಕಗಳ ಅನುಭವವುಳ್ಳವರು. ತಂದೆ ಎಚ್‌.ಎನ್. ನಿಂಗೇಗೌಡ ಅವರಂತೆಯೇ ಶಿಕ್ಷಕರಾಗಬೇಕೆಂಬ ಬಯಕೆ ಚಿಕ್ಕಂದಿನಿಂದಲೂ ಇತ್ತು. ಆ ಕನಸಿನ ಬೆನ್ನೇರಿ, ಎಂ.ಎಸ್ಸಿ. ಬಿಇಡಿ. ಮುಗಿಸಿದ ಅವರು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಂಡಂಗೇರಿಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಆರಂಭಿಸಿದರು. 17 ವರ್ಷ ಪ್ರೌಢಶಾಲೆಯಲ್ಲಿ ಹಾಗೂ 13 ವರ್ಷ ಪಿಯು ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ವಿನೂತನ ಬೋಧನಾ ಕ್ರಮಗಳನ್ನು ಅಳವಡಿಸಿಕೊಂಡು ಗಮನಸೆಳೆದಿದ್ದಾರೆ.

ಜಾಗೃತಿಗೆ: 

ತಿ.ನರಸೀಪುರ ತಾಲ್ಲೂಕಿನ ಮೆಣಸಿಕ್ಯಾತನಹಳ್ಳಿ, ಮೈಸೂರಿನ ಮಹಾರಾಣಿ ಪಿಯು ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ, ಕೆ.ಆರ್. ನಗರ ತಾಲ್ಲೂಕು ಹೊಸೂರಿನ ನಂತರ, 2014ರಿಂದ ಹುಣಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಏಡ್ಸ್‌ ಜಾಗೃತಿಗಾಗಿ ಅವರು ನಡೆಸಿದ ಕಾರ್ಯಕ್ರಮ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ‘ಧರ್ಮ ಮತ್ತು ವಿಜ್ಞಾನದ ಸಮ್ಮಿಶ್ರಣದಲ್ಲಿ ಜಾಗೃತಿ’ಗಾಗಿ ಏಡ್ಸಮ್ಮನ ಜಾತ್ರೆ ನಡೆಸಿದ್ದರು. ಕೋಲ್ಕತ್ತಾದಲ್ಲಿ 2003ರಲ್ಲಿ ನಡೆದಿದ್ದ ಏಡ್ಸ್‌ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ‘ಇವರೂ ಏಡ್ಸ್‌ ರೋಗಿ ಇರಬಹುದೇನೋ; ಹೀಗಾಗಿಯೇ ಇಷ್ಟೆಲ್ಲ ಮಾಡುತ್ತಿದ್ದಾರೆ’ ಎಂಬ ನಿಂದನೆಯ ಮಾತುಗಳನ್ನೂ ಎದುರಿಸಿದ್ದರು.

ಹುಣಸೂರಿನ ಬಾಲಕಿಯರ ಪಿಯು ಕಾಲೇಜಿಗೆ ಅವರು ಬಂದಾಗ, ವಿಜ್ಞಾನ ವಿಭಾಗದಲ್ಲಿ 22 ವಿದ್ಯಾರ್ಥಿನಿಯರಿದ್ದರು. ಈಗ 200 ಮಂದಿ ಇದ್ದಾರೆ. ಖಾಸಗಿ ಕಾಲೇಜುಗಳ ಪೈಪೋಟಿಯ ನಡುವೆಯೂ ವಿಜ್ಞಾನ ಕಲಿಯಲು ವಿದ್ಯಾರ್ಥಿನಿಯರು ಬರುವಂತಾಗಲು ಸಾಕಷ್ಟು ಶ್ರಮಿಸಿದ್ದಾರೆ. ದಾನಿಗಳು ಹಾಗೂ ಸಿಎಸ್‌ಆರ್‌ ನಿಧಿಯಲ್ಲಿ ₹ 50 ಲಕ್ಷವನ್ನು ಕಾಲೇಜಿಗೆ ತಂದು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.

ಕನ್ನಡಕ್ಕೆ ಅನುವಾದ:

ಎನ್‌ಸಿಇಆರ್‌ಟಿಯ ಜೀವವಿಜ್ಞಾನ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾಲೇಜಿನಲ್ಲಿ ಅತ್ಯಾಧುನಿಕ ಪ್ರಯೋಗಶಾಲೆ ಹಾಗೂ ಗ್ರಂಥಾಲಯ ಸ್ಥಾಪಿಸಿದ್ದಾರೆ. ವಿಜ್ಞಾನವನ್ನು ಮೊದಲ ಮೂರು ತಿಂಗಳು ಕನ್ನಡದಲ್ಲೇ ಬೋಧಿಸುವುದು ವಿಶೇಷ. ಅದರಿಂದ ಫಲಿತಾಂಶವೂ ಸುಧಾರಿಸುತ್ತಿದೆ. ಕೆಲವು ಮಕ್ಕಳು ರಾಷ್ಟ್ರೀಯ ಕ್ವಿಜ್‌ನಲ್ಲಿ ಬಹುಮಾನವನ್ನೂ ಗಳಿಸಿದ್ದಾರೆ.

ಎಚ್‌1ಎನ್‌1 ಜ್ವರದ ಬಗ್ಗೆ ಸಾಮಾಜಿಕ ಅಸ್ಪೃಶ್ಯತೆಯಿಂದ ನೋಡುತ್ತಿದ್ದ ವೇಳೆ, ಜಾಗೃತಿಗಾಗಿ ಸಿಡಿಗಳನ್ನು ಸಿದ್ಧಪಡಿಸಿ ಜಿಲ್ಲೆಯ ಶಾಲೆಗಳಿಗೆ ಉಚಿತವಾಗಿ ಹಂಚಿದ್ದರು.

40ಸಾವಿರಕ್ಕೂ ಹೆಚ್ಚು ಯುವಕರು ಹಾಗೂ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಿದ್ದಾರೆ. ತಮ್ಮ ಜ್ಞಾನದೀಪ್ತಿ ಟ್ರಸ್ಟ್‌ ಮೂಲಕವೂ ಉಚಿತವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಸುವ ನಿಟ್ಟಿನಲ್ಲಿ 30 ವರ್ಷದ ಅನುಭವ ಪರಿಗಣಿಸಿ ಪ್ರಶಸ್ತಿ ನೀಡಿದ್ದು ತುಂಬಾ ಖುಷಿ ತಂದಿದೆ. ಮೊದಲ ಪೀಳಿಗೆಯ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಸಾರ್ಥಕ ಎನಿಸಿದೆ. ವಿನೂತನ ಪರಿಕಲ್ಪನೆಗಳ ಮೂಲಕ ಬೋಧಿಸುತ್ತಿರುವುದಕ್ಕೆ ಮನ್ನಣೆ ದೊರೆತಿದ್ದು ಸಮಾಧಾನ ತರಿಸಿದೆ’ ಎಂದು ಪ್ರತಿಕ್ರಿಯಿಸಿದರು.

ಎಚ್‌.ಎನ್. ಗಿರೀಶ್
ಎಚ್‌.ಎನ್. ಗಿರೀಶ್

ಪ್ರಯೋಗಶೀಲ ಶಿಕ್ಷಕನಿಗೆ ಪ್ರಶಸ್ತಿಯ ಗರಿ ಪರಿಣಾಮಕಾರಿ ವಿಜ್ಞಾನ ಬೋಧನೆಯೇ ಗುರಿ

ಈಗ ದೊರೆತಿರುವ ರಾಷ್ಟ್ರ ಪ್ರಶಸ್ತಿಯು ಮತ್ತಷ್ಟು ಸೃಜನಶೀಲ ಕೆಲಸಕ್ಕೆ ಪ್ರೇರಣೆ ತುಂಬಿದೆ
ಎಚ್.ಎನ್. ಗಿರೀಶ್ ಉ‍ಪನ್ಯಾಸಕ

ಹಲವು ಪುಸ್ತಕ ಪ್ರಶಸ್ತಿ

ಅವರಿಗೆ 2023ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. 2023ರಲ್ಲಿ ನವದೆಹಲಿ ನೋಯ್ಡಾದಲ್ಲಿ ನಡೆದ ಜಿ–20 ಸಮ್ಮಿಟ್–4ನೇ ವಿಶ್ವ ‍ಪರಿಸರ ಸಮ್ಮೇಳನದಲ್ಲಿ ಎಜುಕೇಷನ್ ಎಕ್ಸನೆಲ್ಸ್‌ ಅವಾರ್ಡ್‌ಗೆ ಭಾಜನವಾಗಿದ್ದರು. ಪುಸ್ತಕಗಳು: ಎನ್‌ಸಿಇಆರ್‌ಟಿ ಜೀವವಿಜ್ಞಾನ ಪುಸ್ತಕ ಕನ್ನಡಕ್ಕೆ ಅನುವಾದ ಜೀವವಿಜ್ಞಾನ–ನೀಟ್‌ ವಾಲ್ಯೂಮ್ 1 ಮತ್ತು 2 ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ಸರಳ ಜೀವವಿಜ್ಞಾನ– ಎನ್‌ಸಿಆರ್‌ಟಿ ಪುಸ್ತಕ ಜೀವ ವಿಜ್ಞಾನ ಕಲಿಕೆ ಸರಳಗೊಳಿಸುವ ಹ್ಯಾಂಡ್‌ಬುಕ್‌ ನಾಗರಿಕ ಸೇವಾ ಪರೀಕ್ಷೆಗೆ ‘ಮಾನಸ’ ಪುಸ್ತಕ ಹಾಗೂ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ‘ನೆಲೆ’ ಪುಸ್ತಕವನ್ನು ರಚಿಸಿದ್ದಾರೆ.

Cut-off box - ಬಾಲ್ಯವಿವಾಹ ತಪ್ಪಿಸಿದರು... ಗಿರೀಶ್ ಅವರು ಪಾಠ ಮಾಡಿದ್ದ ಯುವತಿಯೊಬ್ಬರು ಈಗ ಐಐಟಿ ಮದ್ರಾಸ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಆಕೆ ಬಾಲ್ಯ ವಿವಾಹವಾಗುವುದನ್ನು ತಪ್ಪಿಸಿ ಶೈಕ್ಷಣಿಕವಾಗಿ ಬೆಂಬಲವನ್ನು ನೀಡಿದ್ದರು. ಶಿಕ್ಷಣದ ಮಹತ್ವದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ‘ಆ ಅಲ್ಪಸಂಖ್ಯಾತ ಯುವತಿ ಬಿಎಸ್‌ಸಿ ಹಾಗೂ ಎಂಎಸ್‌ಸಿಯಲ್ಲಿ ಚಿನ್ನದ ಪದಕ ಗಳಿಸುವಂತೆ ಮಾಡಿದ್ದು ಹಾಗೂ ಬಾಲ್ಯವಿವಾಹ ಆಗುವುದನ್ನು ತಪ್ಪಿಸಿ ಕಲಿಕೆಯಲ್ಲಿ ಮುಂದುವರಿಯುವಂತೆ ಮಾಡಿದ್ದು ತೃಪ್ತಿ ಕೊಟ್ಟ ದೊಡ್ಡ ಸಾಧನೆ ಎಂದು ಭಾವಿಸುತ್ತೇನೆ’ ಎಂದು ಗಿರೀಶ್ ಹರ್ಷ ವ್ಯಕ್ತ‍ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT