ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಒಂದೇ ಸೂರಿನಡಿ ಸೇವೆ; ತಪ್ಪಲಿದೆ ಅಲೆದಾಟ

ಕೆ.ಆರ್‌. ಆಸ್ಪತ್ರೆ: ಹೊರರೋಗಿಗಳ ಕಟ್ಟಡ ನಿರ್ಮಾಣಕ್ಕೆ ₹75 ಕೋಟಿ ಅನುದಾನ
Published 22 ಫೆಬ್ರುವರಿ 2024, 4:52 IST
Last Updated 22 ಫೆಬ್ರುವರಿ 2024, 4:52 IST
ಅಕ್ಷರ ಗಾತ್ರ

ಮೈಸೂರು: ಶತಮಾನದ ಇತಿಹಾಸ ಹೊಂದಿರುವ ಕೆ.ಆರ್. ಆಸ್ಪತ್ರೆಯಲ್ಲಿ ಸದ್ಯದಲ್ಲೇ ಹೊರರೋಗಿಗಳಿಗೆ ಒಂದೇ ಸೂರಿನಲ್ಲಿ ಸಕಲ ಸೇವೆ ಲಭ್ಯವಾಗಲಿದ್ದು, ಚಿಕಿತ್ಸೆಗಾಗಿ ಅಲೆಯುವುದು ತಪ್ಪಲಿದೆ.

ಮೈಸೂರು ಮೆಡಿಕಲ್‌ ಕಾಲೇಜು ಸದ್ಯ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಆಸ್ಪತ್ರೆಯ ನವೀಕರಣ ಕಾಮಗಾರಿಯು ₹89 ಕೋಟಿ ವೆಚ್ಚದಲ್ಲಿ ನಡೆದಿದೆ. ಜೊತೆಗೆ, ಹೊರರೋಗಿಗಳ ಆರೈಕೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ₹75 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಇದರಿಂದಾಗಿ ಜಿಲ್ಲೆ–ಹೊರ ಜಿಲ್ಲೆಗಳ ಸಾವಿರಾರು ರೋಗಿಗಳಿಗೆ ಅನುಕೂಲವಾಗಿದೆ.

ಸಾಕಷ್ಟು ಸರ್ಕಾರಿ–ಖಾಸಗಿ ಆಸ್ಪತ್ರೆಗಳು ತಲೆ ಎತ್ತಿದ್ದರೂ ಮೈಸೂರಿನ ಕೆ.ಆರ್. ಆಸ್ಪತ್ರೆ ಬಡ ರೋಗಿಗಳ ಪಾಲಿನ ಕಾಮಧೇನುವಾಗಿದೆ. ದಿನವೊಂದಕ್ಕೆ ಸರಾಸರಿ 2200 ಹೊರ ರೋಗಿಗಳು ಹಾಗೂ 500ಕ್ಕೂ ಹೆಚ್ಚು ಒಳರೋಗಿಗಳು ಸೇವೆ ಪಡೆಯುತ್ತಿದ್ದಾರೆ.

ಸ್ಥಳಾವಕಾಶದ ಕೊರತೆಯಿಂದ ಹೊರ ರೋಗಿಗಳಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ ಎಂಬ ಕೊರಗು ಇದೆ. ವೈದ್ಯರ ಭೇಟಿ, ಎಕ್ಸ್‌ರೇ, ಪ್ರಯೋಗಾಲಯ, ಔಷಧ, ರಕ್ತನಿಧಿ ಕೇಂದ್ರ... ಹೀಗೆ ಎಲ್ಲವೂ ಬೇರೆ ಕಟ್ಟಡದಲ್ಲಿವೆ. ಬರುವ ಬಡರೋಗಿಗಳು ಇಡೀ ದಿನ ಅಲೆಯಬೇಕು. ಇದನ್ನು ತಪ್ಪಿಸಿ ಒಂದೇ ಸೂರಿನಲ್ಲಿ ಎಲ್ಲ ಸೇವೆ ಒದಗಿಸಲು ಒಪಿಡಿ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಅನುದಾನ ಕೋರಿ ಮೈಸೂರು ಮೆಡಿಕಲ್‌ ಕಾಲೇಜು ಹಾಗೂ ಕೆ.ಆರ್. ಆಸ್ಪತ್ರೆ ಆಡಳಿತ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಯೋಜನೆ ಸಿದ್ಧ: ಈಗ ಇರುವ ಸೆಮಿಸ್ಪೆಷಲ್‌ ವಾರ್ಡ್‌ಗಳ ಕಟ್ಟಡ ಪೂರ್ಣ ಹಾಳಾಗಿದ್ದು, ಅದನ್ನು ಕೆಡವಿ ಪಕ್ಕದಲ್ಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದೆ. ಜಿ ಪ್ಲಸ್‌ 3 ಮಾದರಿಯ ಕಟ್ಟಡ ಇದು. ರೋಗಿಗಳು ನೋಂದಣಿ ಮಾಡಿಕೊಂಡು ವೈದ್ಯರ ಭೇಟಿ ಮಾಡಿ, ಅವರು ಸೂಚಿಸಿದ ಪರೀಕ್ಷೆಗಳನ್ನು ಮಾಡಿಸಿಕೊಂಡು ಔಷಧ ಪಡೆಯಲು ಅನುಕೂಲವಾಗುವಂತೆ ಎಲ್ಲ ಸೌಲಭ್ಯವೂ ಒಂದೇ ಕಟ್ಟಡದಲ್ಲಿ ಇರಲಿದೆ.

‘ರಕ್ತನಿಧಿ ಕೇಂದ್ರ, ಪ್ರಯೋಗಾಲಯ, ಔಷಧಾಲಯವೂ ಇಲ್ಲಿಯೇ ಕಾರ್ಯ ನಿರ್ವಹಿಸಲಿದೆ’ ಎಂದು ಮೈಸೂರು ಮೆಡಿಕಲ್ ಕಾಲೇಜು ಹಾಗೂ ಕೆ.ಆರ್. ಆಸ್ಪತ್ರೆಯ ಡೀನ್ ಡಾ. ಕೆ.ಆರ್. ದಾಕ್ಷಾಯಿಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆ.ಆರ್‌. ಆಸ್ಪತ್ರೆಯಲ್ಲಿ ಒಪಿಡಿ ಕಾಂಪ್ಲೆಕ್ಸ್‌ ನಿರ್ಮಾಣದಿಂದ ಒಂದೇ ಕಡೆ ಅಗತ್ಯ ಸೇವೆಗಳೆಲ್ಲವೂ ಸಿಗಲಿವೆ -ಡಾ. ಕೆ.ಆರ್. ದಾಕ್ಷಾಯಿಣಿ ಡೀನ್‌ ಮೈಸೂರು ಮೆಡಿಕಲ್‌ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT