ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Dasara 2023 | ನೆಟ್‌ವರ್ಕ್‌ ಇಲ್ಲದೆಡೆ ಹುಟ್ಟುವುದೇ ಕಾವ್ಯ: ಜಯಂತ ಕಾಯ್ಕಿಣಿ

Published 17 ಅಕ್ಟೋಬರ್ 2023, 14:00 IST
Last Updated 17 ಅಕ್ಟೋಬರ್ 2023, 14:00 IST
ಅಕ್ಷರ ಗಾತ್ರ

ಮೈಸೂರು: ‘ನೆಟ್‌ವರ್ಕ್‌ ಇಲ್ಲದ ಕಡೆ ಒಳ್ಳೆಯ ಕವಿತೆ, ಪ್ರೀತಿ ಸಿಗಲು ಸಾಧ್ಯ’ ಎಂದು ಕವಿ ಜಯಂತ ಕಾಯ್ಕಿಣಿ ಹೇಳಿದರು.

ಕಲಾಮಂದಿರದಲ್ಲಿ ಮಂಗಳವಾರ ‘ದಸರಾ ಕವಿಗೋಷ್ಠಿ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಗುಡ್‌ ಮಾರ್ನಿಂಗ್, ಗುಡ್‌ ನೈಟ್‌ ಬಗ್ಗೆಯೇ ನೂರಾರು ಕವಿತೆಗಳು ಹುಟ್ಟುತ್ತಿವೆ. ಆದರೆ, ವ್ಯಕ್ತಿ ಎದುರಾದಾಗ ಗುರುತು ಹಿಡಿಯುವುದಿರಲೀ ನಗುವುದೇ ಇಲ್ಲ. ಕೃತಕ ಜೀವನವನ್ನು ಕವಿಗಳೂ ಅನುಭವಿಸುತ್ತಿದ್ದಾರೆ’ ಎಂದರು.

‘ಕವಿ ಅವ್ಯಕ್ತವನ್ನು ಉದ್ಘಾಟಿಸುತ್ತಾನೆಂದು ಗೌರೀಶ ಕಾಯ್ಕಿಣಿ ಹೇಳಿದ್ದರು. ಆದರಿಂದು ಮೊಬೈಲ್‌, ವ್ಯಕ್ತಿಗಳ ನೆಟ್‌ವರ್ಕ್‌ ಗುಂಗಿನಲ್ಲಿ ಕವಿ– ಲೇಖಕ ಕಳೆದು ಹೋಗಿದ್ದಾನೆ. ಸಾಹಿತ್ಯವನ್ನು ಓದುವುದನ್ನೇ ಮರೆತಿದ್ದಾನೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕವಿಗಳಾದ ಗಂಗಾಧರ ಚಿತ್ತಾಲ, ವಿ.ಜಿ.ಭಟ್ಟ, ಸು.ರಂ.ಎಕ್ಕುಂಡಿ ಜನ್ಮಶತಮಾನೋತ್ಸವದಲ್ಲಿ ನಾವಿದ್ದೇವೆ. ಹೊಸ ಕವಿಗಳಲ್ಲಿ ವಿನಂತಿಸುವುದೇನೆಂದರೆ ರನ್ನ, ಪಂಪ, ಕುಮಾರವ್ಯಾಸ ಬೇಡ, ನಿಮ್ಮ ಹಿಂದಿನ ತಲೆಮಾರಿನ ಕವಿಗಳ ಕಾವ್ಯವನ್ನಾದರೂ ಓದಬೇಕು. ಏನನ್ನೂ ಓದದೇ ಬರೆಯಲು ಆಗುವುದಿಲ್ಲ’ ಎಂದು ಪ್ರತಿಪಾದಿಸಿದರು.

‘ಕನ್ನಡದ ಕಾವ್ಯದ ಚೌಕಟ್ಟು ವಿಸ್ತಾರವಾಗಿದೆ. ಪ್ರಜ್ಞಾ ಪ್ರವಾಹದಲ್ಲಿ ತೇಲಿಬಿಟ್ಟ ದೀಪಗಳಂತೆ ಕಾವ್ಯ, ನಾಟಕ, ಕಥೆ, ಕಾದಂಬರಿಗಳಿದ್ದು, ಅವುಗಳ ಸಂಪರ್ಕ ಬೆಳೆಸಬೇಕೆಂದು ದ.ರಾ.ಬೇಂದ್ರೆ ಹೇಳಿದ್ದರು. ಪಂಪ– ರನ್ನ ನೀಡಿದ ರಿಲೇ ದಂಡವನ್ನು ಕುಮಾರವ್ಯಾಸ, ಕುವೆಂಪು– ಬೇಂದ್ರೆ ನಮಗೆ ನೀಡಿದ್ದಾರೆ. ಹೊಸ ತಲೆಮಾರಿನ ಕವಿಗಳು ದಂಡವನ್ನು ಮುಂದಿನವರಿಗೆ ತಲುಪಿಸಬೇಕು’ ಎಂದರು.

‘ಒಳ್ಳೆಯ ಮನುಷ್ಯನೆಂದು ಚಾಲಕ ಸ್ಥಾನದಲ್ಲಿ ಕೂರಿಸಲಾಗುವುದಿಲ್ಲ. ಅವನೂ ಚಾಲಕನಿಗಿರಬೇಕಾದ ಅರ್ಹತೆ ಗಳಿಸಬೇಕು. ಅಂತೆಯೇ ಕವಿ ಕೂಡ. ಕವಿತೆಯಿಂದ ಪ್ರಯೋಜನವೇನು? ಅದರಿಂದ ಏನು ಸಿಗುತ್ತದೆ ಎಂದು ಪ್ರಶ್ನಿಸುವ ಕಾಲವಿದು. ಕವಿತೆಯಿಂದ ಏನೂ ಸಿಗುವುದಿಲ್ಲ. ಅದು ಬರೆಯುವಾಗ ಸಿಗುತ್ತದೆ. ಆದರೆ, ಕವಿಗಳಿಗೆ ಏನನ್ನು ಬರೆಯಬೇಕೆಂಬ ವಿವೇಕ ಬೇಕು’ ಎಂದರು.

‘ಎಲ್ಲವನ್ನು ಗೊತ್ತು ಮಾಡಿಕೊಳ್ಳುವುದಕ್ಕೆ ಕಥೆ ಬರೆಯುತ್ತಿದ್ದೇನೆಂದು ಕಥೆಗಾರ ಯಶವಂತ ಚಿತ್ತಾಲ ಹೇಳುತ್ತಿದ್ದರು. ಭೀಮಸೇನ ಜೋಶಿ, ರಾಜೀವ ತಾರನಾಥರಿಗೆ ರಾಗ ಗೊತ್ತಿದ್ದರೂ, ಅವುಗಳ ಹೊಸ ವಿನ್ಯಾಸಕ್ಕಾಗಿ ನಿತ್ಯ ರಿಯಾಜ್ (ಅಭ್ಯಾಸ) ಮಾಡುತ್ತಿದ್ದರು. ಅಂತೆಯೇ ಕವಿಗಳು ಮಾಡಬೇಕು’ ಎಂದು ಸಲಹೆ ನೀಡಿದರು.

‘ಅಧ್ಯಾತ್ಮ ಹಿಮಾಲಯದಲ್ಲಿಲ್ಲ. ಜನರ ನಡುವೆಯೇ ಇದೆ. ಬಸ್ಸಿನಲ್ಲಿ ಕಂಡ ಮುಖ, ಅಲ್ಲಿಯೇ ಕೆಳಗೆ ಬಿದ್ದ ಒಂಟಿ ಚಪ್ಪಲಿ ತನ್ನದೇ ಕಥೆಯನ್ನು ಹೇಳುತ್ತದೆ. ಹೀಗಾಗಿ, ಜನರ ನಡುವಿನಿಂದ ಕಥೆಗಳು ಬರಬೇಕು. ಜನಸಂಪರ್ಕ ಸಾಧಿಸಬೇಕು. ಅಂಥ ಪರಿಸರದಲ್ಲಿ ಹುಟ್ಟಿದ ಕವಿತೆ– ಕಥೆಯು ಉಳಿಯುತ್ತದೆ’ ಎಂದರು.

ಕವಯತ್ರಿ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಕಾವ್ಯದಲ್ಲಿ ತಾಯಿ ಗುಣವಿದೆ. ಸಂಕಟ, ನಿರಾಶೆಯಲ್ಲಿ ಕಾವ್ಯ ಓದಿದರೆ, ತಾಯಿಯಂತೆ ಅದು ಸಂತೈಸುತ್ತದೆ. ಕತ್ತಲೆಯಿಂದ ಬೆಳೆಕಿನೆಡೆಗೆ ಕೊಂಡೊಯ್ಯುತ್ತದೆ’ ಎಂದು ಹೇಳಿದರು.

‘10ನೇ ಶತಮಾನದ ಪಂಪ– ರನ್ನ, 12ನೇ ಶತಮಾನದ ಬಸವ–ಅಲ್ಲಮನ ವಚನಗಳು, 16ನೇ ಶತಮಾನದ ಕುಮಾರವ್ಯಾಸ, ಕನಕ–ಪುರಂದರರ ಕಾವ್ಯ, 20-21ನೇ ಶತಮಾನದ ಆಧುನಿಕ ಕಾವ್ಯ... ಈ ನಾಲ್ಕು ಕಂಬಗಳಲ್ಲಿ ಕನ್ನಡ ಕಾವ್ಯ ಮಂಟಪ ನಿಂತಿದೆ’ ಎಂದರು. ‌

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ‘ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳು ಮಾನವ ಕುಲ ತಲೆತಗ್ಗಿಸುವಂತದ್ದು. ಸಮಾಜದ ಅನಿಷ್ಟ ಪದ್ಧತಿಗಳನ್ನು ಖಂಡಿಸುವ ಮೂಲಕ ನಿರ್ಮೂಲನೆ ಮಾಡುವುದು ಸಾಹಿತಿಗಳ ಜವಾಬ್ದಾರಿ’ ಎಂದು ಸಲಹೆ ನೀಡಿದರು. 

ಶಾಸಕರಾದ ತನ್ವೀರ್‌ ಸೇಠ್‌, ಕೆ.ಹರೀಶ್‌ಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ರೂಪಾ, ವಿಧಾನಪರಿಷತ್ ಸದಸ್ಯ ಎಚ್‌.ವಿಶ್ವನಾಥ್, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕವಿಗೋಷ್ಠಿ ಉಪಸಮಿತಿ ಉಪವಿಶೇಷಾಧಿಕಾರಿ ದಾಸೇಗೌಡ, ಕಾರ್ಯಾಧ್ಯಕ್ಷೆ ಪ್ರೊ.ವಿಜಯಕುಮಾರಿ ಎಸ್‌.ಕರಿಕಲ್ ಇದ್ದರು.

‘ಸಂವಿಧಾನ ಸಮರ್ಥಿಸಿ’
‘ಕವಿ ಲೇಖಕರು ಸಂವಿಧಾನವನ್ನು ಸಮರ್ಥಿಸುವ ಕೆಲಸ ಮಾಡಬೇಕು. ಏಕೆಂದರೆ ಅಭಿವ್ಯಕ್ತಿಸುವ ಹಕ್ಕನ್ನು ಸ್ವಾತಂತ್ರ್ಯವನ್ನು ನೀಡಿದೆ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. ‘ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಕೊರಳ ಪಟ್ಟಿ ಹಿಡಿದ ಪಂಜಾಬಿನ ರೈತ ಮಹಿಳೆಯೊಬ್ಬರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ನಮಗೇನು ಮಾಡಿದ್ದೀಯೆಂದು ಕೇಳಿದ್ದರು. ಆಗ ನೆಹರೂ ‘ಪ್ರಧಾನಿಯ ಕೊರಳಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯವನ್ನು ದೇಶದ ಸಂವಿಧಾನ ನೀಡಿದೆ ಎಂದು ಉತ್ತರಿಸಿದ್ದರು’ ಎಂದು ಸ್ಮರಿಸಿದರು. ‘ಸಂವಿಧಾನವು ಟೀ ಮಾರುವ ಹುಡುಗನನ್ನು ಪ್ರಧಾನಿ ಮಾಡಿತು. ಕುರಿಕಾಯುವ ಹುಡುಗನನ್ನು ಮುಖ್ಯಮಂತ್ರಿ ಮಾಡಿತು. ಟೀ ಮಾರಿದ ಹುಡುಗನ ಗಡ್ಡ ಬೆಳ್ಳಗಾದಾಗ ದೇಶದ ಕೆಲವೇ ಕೆಲವು ಶ್ರೀಮಂತರನ್ನು ಪ್ರಪಂಚದ ಅತಿದೊಡ್ಡ ಶ್ರೀಮಂತರನ್ನಾಗಿಸಿದರು. ನೊಂದವರಿಗೆ ಮಾತ್ರ ನೋವು ಗೊತ್ತಿರುತ್ತದೆ. ಹೀಗಾಗಿಯೇ ಮುಖ್ಯಮಂತ್ರಿ ಅನ್ನಭಾಗ್ಯ ಶಕ್ತಿ ಯೋಜನೆ ತಂದಿದ್ದಾರೆ. ದಸರೆಗೆ ಸಾವಿರಾರು ಮಹಿಳೆಯರು ಬಂದಿದ್ದಾರೆ’ ಎಂದರು.
ಮುದ ನೀಡಿದ ಹಾಸ್ಯ ಕವಿಗೋಷ್ಠಿ
ಹಾಸ್ಯಗೋಷ್ಠಿಯು ವರ್ತಮಾನದ ತಲ್ಲಣಗಳಿಗೆ ನಗೆಯ ಔಷಧವನ್ನು ನೀಡಿತು. ಕಾವ್ಯಾಸಕ್ತರಿಂದ ಚಪ್ಪಾಳೆ ದೊರೆಯಿತು. ಅಸಾದುಲ್ಲಾ ಬೇಗ್‌ ಎಲ್‌.ಎಸ್‌‍.ಶಾಸ್ತ್ರಿ ಇಂದಿರಾ ಎಚ್‌.ಪಾಟೀಲ ಹೊ.ಮ.ಪಂಡಿತಾರಾಧ್ಯ ಜೆ.ನರಸಿಂಹಮೂರ್ತಿ ಮ.ಗು.ಬಸವಣ್ಣ ನಾ.ನಾಗಚಂದ್ರ ಮಹಿಪಾಲರೆಡ್ಡಿ ಮುನ್ನೂರ್‌ ಪ್ರೇಮಾ ಮಂಜುನಾಥ್‌ ಗೀತಾ ಮಂಜು ಪ್ರವೀಣ್‌ಕುಮಾರ್‌ ಎಸ್‌. ಪ್ರಕಾಶ್‌ ನಾಡಿಗ ಖುಷ್ವಂತ್‌ ಕೋಳಿಬೈಲು ಚುಟುಕು ವಾಚಿಸಿದರು. ಕವಿ ಕೆ.ಸಿ.ಶಿವಪ್ಪ ಮಾತನಾಡಿ ‘90 ನಿಮಿಷ ತಡವಾಗಿ ಕವಿಗೋಷ್ಠಿ ಆರಂಭವಾಗಿದೆ. ಕವಿತಾ ವಾಚನಕ್ಕೆ ಸಮಯವನ್ನೂ ಕೊಡಲಾಗುತ್ತಿಲ್ಲ. ಇದು ದೌರ್ಭಾಗ್ಯ’ ಎಂದು ಬೇಸರ ವ್ಯಕ್ತಪಡಿಸಿದರು. ಲೇಖಕ ಬಸವರಾಜ ಸಾದರ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT