ಮಂಗಳವಾರ, ಮಾರ್ಚ್ 28, 2023
26 °C
‘ಪ್ರಜಾವಾಣಿ’ ಅಮೃತ ಮಹೋತ್ಸವ ಅಂಗವಾಗಿ ಆಯೋಜನೆ

‘ಪ್ರಜಾವಾಣಿ’ ಅಮೃತ ಮಹೋತ್ಸವ: ಕ್ಯಾನ್ಸರ್ ಜಾಗೃತಿ ಮೂಡಿಸಿದ ರಸ್ತೆ ಓಟದ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಪ್ರಜಾವಾಣಿ’ ಅಮೃತ ಮಹೋತ್ಸವ ಅಂಗವಾಗಿ ನಗರದ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ರಸ್ತೆ ಓಟದ ಸ್ಪರ್ಧೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

ವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಆ ರೋಗದ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಲಿಯರ್‌ಮೆಡಿ ರೇಡಿಯಂಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಸ್ತೆ ಓಟದ ಮೂಲಕ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ಚುಮುಚುಮು ಚಳಿಯನ್ನೂ ಲೆಕ್ಕಿಸದೇ ಮಕ್ಕಳು, ಯುವಕರು, ಯುವತಿಯರು, ಮಹಿಳೆಯರು ಹಾಗೂ ವೃದ್ಧರು ಉತ್ಸಾಹದಿಂದ ಸ್ಪರ್ಧೆ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

4 ವಿಭಾಗಗಳಲ್ಲಿ ನಡೆದ ಸ್ಪರ್ಧೆಗೆ 400ಕ್ಕೂ ಹೆಚ್ಚು ಮಂದಿ ನೋಂದಾಯಿಸಿದ್ದರು. 1ರಿಂದ 5ನೇ ತರಗತಿ ಬಾಲಕರು ಹಾಗೂ ಬಾಲಕಿಯರಿಗೆ 1 ಕಿ.ಮೀ., 6ರಿಂದ 10ನೇ ತರಗತಿಯ ಬಾಲಕರು ಮತ್ತು ಬಾಲಕಿಯರಿಗೆ 3 ಕಿ.ಮೀ., ಪಿಯುಸಿ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ 5 ಕಿ.ಮೀ. ಓಟದ ಸ್ಪರ್ಧೆ ನಡೆಯಿತು. ಮುಕ್ತ ವಿಭಾಗದಲ್ಲಿ (5.ಕಿ.ಮೀ.) ಸಾರ್ವಜನಿಕರು ಭಾಗವಹಿಸಿದ್ದರು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ವಿಜೇತರಿಗೆ ಕ್ರಮವಾಗಿ ₹1ಸಾವಿರ, ₹ 750 ಹಾಗೂ ₹500 ಬಹುಮಾನ ನೀಡಲಾಯಿತು. ಪಾಲ್ಗೊಂಡು ಗುರಿ ಮುಟ್ಟಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.

ಮೇಯರ್‌ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಚಿತ್ರನಟ ನಾಗಭೂಷಣ ಎನ್.ಎಸ್. ಸ್ಪರ್ಧೆಗೆ ಚಾಲನೆ ನೀಡಿದರು. ಟಿಪಿಎಂಎಲ್‌ ಪ್ರಸರಣ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ್ ಜೋಯಿಸ್, ‘ಪ್ರಜಾವಾಣಿ’ ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ‘ಡೆಕ್ಕನ್ ಹೆರಾಲ್ಡ್‌’ ವಿಶೇಷ ವರದಿಗಾರ ಟಿ.ಆರ್.ಸತೀಶ್‌ಕುಮಾರ್‌, ಪ್ರಸರಣ ವಿಭಾಗದ ವ್ಯವಸ್ಥಾಪಕ ಎಸ್.ಪ್ರಕಾಶ್, ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಸ್ಕಂದನ್ ರಾವ್ ಕೆ.ಎನ್. ಬಹುಮಾನ ವಿತರಿಸಿದರು. ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್‌ ಪ್ರಮಾಣಪತ್ರಗಳನ್ನು ವಿತರಿಸಿದರು.

ಸೀನಿಯರ್ ಕನ್ಸಲ್ಟಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ಅವಿನಾಶ್ ಸಿ.ಬಿ. ಕ್ಯಾನ್ಸರ್‌ ಬಾರದಂತೆ ನೋಡಿಕೊಳ್ಳುವುದು ಹೇಗೆ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಸಂಘ–ಸಂಸ್ಥೆಗಳ ಸದಸ್ಯರು, ವೈದ್ಯರು, ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದ ಸಿಬ್ಬಂದಿ, ಏಜೆಂಟರು, ಪತ್ರಿಕಾ ವಿತರಕರು, ವೈದ್ಯಕೀಯ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು