ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರೀಯ ವಿಶ್ವವಿದ್ಯಾಲಯವಾಗಿಸಲು ಪ್ರಕ್ರಿಯೆ ಶೀಘ್ರ: ಕುಲಪತಿ ಲೋಕನಾಥ್‌

ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಭರವಸೆ l ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಚಿಂತನೆ
Last Updated 24 ಮಾರ್ಚ್ 2023, 11:06 IST
ಅಕ್ಷರ ಗಾತ್ರ

ಮೈಸೂರು: ‘ಹಣಕಾಸಿನ ಕೊರತೆ ಎದುರಿಸುತ್ತಿರುವ ಮೈಸೂರು ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವಾಗಿಸಲು ಎಲ್ಲ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಹೇಳಿದರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಕುಲಪತಿ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿಯ ನಾಲ್ಕನೇ ಸಾಮಾನ್ಯ ಸಭೆಯಲ್ಲಿ ಕೊರತೆಯ ಬಜೆಟ್‌ ಹಾಗೂ ಆರ್ಥಿಕ ಬಿಕ್ಕಟ್ಟು ಪ್ರತಿಧ್ವನಿಸಿತು. ಕಲಾ ನಿಕಾಯದ ಡೀನ್‌ ಪ್ರೊ.ಮುಜಾಫರ್ ಅಸ್ಸಾದಿ ಈ ವಿಚಾರ ಪ್ರಸ್ತಾಪಿಸಿದರು.

‘ಪಿಂಚಣಿಗೆ ಸರ್ಕಾರದಿಂದ ಬರುವ ಹಣವು ಕಡಿಮೆಯಾಗಿದೆ. ₹ 50 ಕೋಟಿ ಕೊರತೆಯಿದೆ. ವರ್ಷದಿಂದ ವರ್ಷಕ್ಕೆ ಪಿಂಚಣಿದಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಿಲ್ಲೆಗೊಂದು ವಿಶ್ವವಿದ್ಯಾಲಯವಾದ್ದರಿಂದ ಮೈಸೂರಿಗಷ್ಟೇ ವಿಶ್ವವಿದ್ಯಾಲಯ ಸೀಮಿತಗೊಂಡಿದೆ. ಸಂಪನ್ಮೂಲವೂ ಕಡಿಮೆಯಾಗಿದೆ. ಸುಸಜ್ಜಿತ ಕಟ್ಟಡ ಹಾಗೂ ಮೂಲಸೌಕರ್ಯ ಹೊಂದಿರುವುದರಿಂದ ಕೇಂದ್ರೀಯ ವಿಶ್ವವಿದ್ಯಾಲಯವಾಗಿಸಲು ಶ್ರಮಿಸಬೇಕು’ ಎಂದು ಅಸ್ಸಾದಿ ಸಲಹೆ ನೀಡಿದರು.

‘ಗಂಭೀರವಾಗಿ ಯೋಚಿಸಬೇಕಾದ ತುರ್ತಿನ ಸಂದರ್ಭವಿದು. ನವನೀತ್ ರಾಯ್ ಸಮಿತಿಯೂ ಮೈಸೂರು ವಿಶ್ವವಿದ್ಯಾಲಯವನ್ನು ಇನ್‌ಸ್ಟಿಟ್ಯೂಟ್‌ ಆಫ್‌ ಎಕ್ಸಲೆನ್ಸ್‌ ಮಾಡಲು ಸಲಹೆ ನೀಡಿತ್ತು. ಆರ್ಥಿಕ ಬಿಕ್ಕಟ್ಟಿನಿಂದ ಸಮಸ್ಯೆಗಳು ಉಲ್ಬಣಗೊಳ್ಳುವ ಮೊದಲು ಪರಿಹಾರದ ದಾರಿ ಹುಡುಕಬೇಕು. ಕೇಂದ್ರೀಯ ವಿಶ್ವವಿದ್ಯಾಲಯ ಮಾಡುವುದೇ ನಮ್ಮ ಮುಂದಿರುವ ಆಯ್ಕೆ’ ಎಂದರು.

‘ಬರುವ ದಿನಗಳಲ್ಲಿ ಬೋಧಕೇತರ ಸಿಬ್ಬಂದಿ ಹಾಗೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲಾಗದ ಸ್ಥಿತಿ ಬರಬಹುದು. ಆರ್ಥಿಕ ಬಿಕ್ಕಟ್ಟನ್ನು ಮೀರಲು, ಖರ್ಚುಗಳನ್ನು ಕಡಿತಗೊಳಿಸಬೇಕು’ ಎಂದು ಹೇಳಿದರು.

ಇದಕ್ಕೆ ದನಿಗೂಡಿಸಿದ ಮಂಡಳಿಯ ನಾಮನಿರ್ದೇಶಿತ ಸದಸ್ಯ ಪ್ರೊ.ಅಯ್ಯಣ್ಣ, ‘ಬಹುತೇಕ ಎಲ್ಲ ರಾಜ್ಯಗಳಲ್ಲೂ ಎರಡು ಕೇಂದ್ರೀಯ ವಿಶ್ವವಿದ್ಯಾಲಯಗಳಿವೆ. ಮೈಸೂರು ವಿಶ್ವವಿದ್ಯಾಲಯಕ್ಕೆ ಉತ್ತಮ ಮೂಲಸೌಕರ್ಯ ಹಾಗೂ ಇತಿಹಾಸ ಹೊಂದಿದೆ. ಕೇಂದ್ರೀಯ ವಿಶ್ವವಿದ್ಯಾಲಯವಾದರೆ ದೇಶದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಬರಲಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ‌ದ ಕುಲಪತಿ ಲೋಕನಾಥ್, ‘ಈ ಹಿಂದಿನ ಸಮಿತಿ ಇದೇ ಸಲಹೆ ನೀಡಿತ್ತು. ಲೋಕಸಭಾ ಚುನಾವಣೆ ಬರುವುದರೊಳಗೆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ಎಲ್ಲರ ಸಲಹೆಯನ್ನೂ ಪಡೆಯಲಾಗುವುದು’ ಎಂದು ಭರವಸೆ ನೀಡಿದರು.

ವಿಧಾನಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ ಮಾತನಾಡಿ, ‘ವಿಶ್ವವಿದ್ಯಾಲಯದಲ್ಲಿ ಉತ್ತಮ ಕಟ್ಟಡಗಳು ಇವೆ. ಸೋಲಾರ್‌ ಬಳಕೆ ಹೆಚ್ಚಿಸಿ ವಿದ್ಯುತ್‌ ಬಿಲ್‌ ಹೊರೆ ಕಡಿಮೆಗೊಳಿಸಲು ಕ್ರಮವಹಿಸಬೇಕು’ ಎಂದು ಸಲಹೆ ನೀಡಿದರು.

‘ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ₹ 10 ಕೋಟಿ ಅನುದಾನ ನೀಡಲಿದ್ದು, ಮನವಿ ಪತ್ರ ಸಲ್ಲಿಸಬೇಕು. ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ಕಿರು ಅರಣ್ಯ ಹೆಚ್ಚಿಸಲು ಇನ್ನಷ್ಟು ಮುಂದಾಗಬೇಕು. ಯುಜಿಸಿ ನಿಯಮದ ಪ್ರಕಾರ ಶೇ 75ರಷ್ಟು ಕಾಯಂ ಅಧ್ಯಾಪಕರು ಹಾಗೂ ಸಿಬ್ಬಂದಿ ಇರಬೇಕು. ಆದರೆ, ಅರ್ಧಕ್ಕಿಂತಲೂ ಸಿಬ್ಬಂದಿ ಕಡಿಮೆ ಇದ್ದಾರೆ’ ಎಂದು ಹೇಳಿದರು.

ಕಾನೂನು ನಿಕಾಯದ ಪ್ರೊ.ಟಿ.ಆರ್‌.ಮಾರುತಿ ಮಾತನಾಡಿ, ‘ಕಾನೂನು ನಿಕಾಯಕ್ಕಾಗಿ ವಿವಿಧ ಖರ್ಚುಗಳಿಗಾಗಿ ₹ 2 ಕೋಟಿ ಅನುದಾನ ಬೇಕಿದೆ’ ಎಂದರು ಅದಕ್ಕೆ ಪ್ರತಿಯಿಸಿದ ಕುಲಪತಿ ಲೋಕನಾಥ್, ‘ವೆಚ್ಚಗಳನ್ನು ನೀವೇ ಭರಿಸಿಕೊಳ್ಳಬೇಕು’ ಎಂದರು.

ಕುಲಸಚಿವರಾದ ವಿ.ಆರ್‌.ಶೈಲಜಾ, ಪ್ರೊ.ಎ.ಪಿ.ಜ್ಞಾನಪ್ರಕಾಶ್, ಹಣಕಾಸು ಅಧಿಕಾರಿ ಸಂಗೀತಾ ಗಜಾನನ ಭಟ್, ವಿವಿಧ ನಿಕಾಯಗಳ ಡೀನ್‌ಗಳು ಪಾಲ್ಗೊಂಡಿದ್ದರು.

₹ 85.4 ಕೋಟಿ ಕೊರತೆ ಬಜೆಟ್‌: ಮೈಸೂರು ವಿಶ್ವವಿದ್ಯಾಲಯವು 2023–23ನೇ ಸಾಲಿಗೆ ₹ 85.4 ಕೋಟಿ ಕೊರತೆ ಬಜೆಟ್‌ ಅನ್ನು ಅನುಮೋದಿಸಿತು.

ವಿವಿ ಹಣಕಾಸು ಅಧಿಕಾರಿ ಸಂಗೀತಾ ಗಜಾನನ ಭಟ್ ಮಾತನಾಡಿ, ‘2023–24ನೇ ಸಾಲಿನ ವಿ.ವಿ ಬಜೆಟ್‌ ಅಂದಾಜಿನಲ್ಲಿ ಒಟ್ಟು ನಿರೀಕ್ಷಿತ ಆದಾಯ ₹ 347.16ಕೋಟಿ ಮತ್ತು ನಿರೀಕ್ಷಿತ ವೆಚ್ಚ ₹ 432.56 ಕೋಟಿಗಳಾಗಿದೆ. ₹ 85.4 ಕೋಟಿ ಕೊರತೆ ಬಜೆಟ್‌ ಮಂಡಿಸಲಾಗಿದೆ’ ಎಂದರು.

‘₹ 82 ಕೋಟಿ ಆಂತರಿಕ ಆದಾಯ ನಿರೀಕ್ಷಿಸಿದೆ. ಪ್ರವೇಶ, ನೋಂದಣಿ, ಸಂಯೋಜನೆ ಹಾಗೂ ಇನ್ನಿತರ ಶುಲ್ಕಗಳಿಂದ ₹ 32 ಕೋಟಿ, ಸ್ಕೀಂ ‘ಬಿ’ ಕೋರ್ಸ್‌ಗಳಿಂದ ₹ 3 ಕೋಟಿ, ಪರೀಕ್ಷಾ ಚಟುವಟಿಕೆಗಳಿಂದ ₹ 40 ಕೋಟಿ, ವಿ.ವಿಯ ವಿವಿಧ ಆಸ್ತಿಗಳಿಂದ ₹ 3 ಕೋಟಿ ಆದಾಯ ನಿರೀಕ್ಷಿಸಲಾಗಿದೆ’ ಎಂದು ಹೇಳಿದರು.

ಪಿಂಚಣಿ ಸೌಲಭ್ಯ: ‘2022–23ರ ಸಾಲಿನಲ್ಲಿ 1,761 ಪಿಂಚಣಿದಾರರಿಗೆ ಸರ್ಕಾರವು ₹ 50 ಕೋಟಿ ಬಿಡುಗಡೆ ಮಾಡಿದೆ. ವಿ.ವಿಯಲ್ಲಿ ಪ್ರಸ್ತುತ 61 ಉದ್ಯೋಗಿಗಳು ನಿವೃತ್ತರಾಗಲಿದ್ದು, ಪಿಂಚಣಿದಾರರ ಸಂಖ್ಯೆ 1,841 ಆಗಲಿದೆ. ಈ ಶೈಕ್ಷಣಿಕ ಸಾಲಿನ ಪಿಂಚಣಿಗೆ ₹ 127.62 ಕೋಟಿ ನಿಗದಿಪಡಿಸಲಾಗಿದೆ. ಈಗಲೂ ₹ 50 ಕೋಟಿ ಸರ್ಕಾರ ನೀಡಿದೆ. ಇನ್ನುಳಿದ ₹ 77.62 ಕೋಟಿ ಹಣವನ್ನು ಆಂತರಿಕ ಆದಾಯದಲ್ಲಿಯೇ ಭರಿಸಲಾಗಿದೆ’ ಎಂದು ಸಂಗೀತಾ ಗಜಾನನ ಭಟ್ ಮಾಹಿತಿ ನೀಡಿದರು.

‘ವಿ.ವಿಯ ಕಾಯಂ ಉದ್ಯೋಗಿಗಳ ವೇತನ ಭತ್ಯೆಗಳಿಗಾಗಿ ₹ 121.08 ಕೋಟಿ ನಿಗದಿಪಡಿಸಿದ್ದು, ಸರ್ಕಾರವೇ ಎಚ್ಆರ್‌ಎಂಎಸ್‌ ಪೋರ್ಟಲ್‌ ಮೂಲಕ ವೇತನ ಪಾವತಿಸುತ್ತಿದೆ’ ಎಂದರು.

ಸಭೆಯ ನಿರ್ಣಯಗಳು:

* ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಖಾದಿ ಹಾಗೂ ಕೈಮಗ್ಗ ಬಟ್ಟೆಗಳಿಂದ ತಯಾರಿಸಿದ ಉಡುಪು ನೀಡಲು ಒಪ್ಪಿಗೆ

* 2006 ಏ.1ರಿಂದ ಸೇರ್ಪಡೆಯಾಗಿರುವ ಉದ್ಯೋಗಿಗಳಿಗೆ ಹೊಸ ಪಿಂಚಣಿ ಯೋಜನೆ ಅನ್ವಯ

* ಎಂ.ಎ ತತ್ವಶಾಸ್ತ್ರದಲ್ಲಿ ಹೆಚ್ಚು ಅಂಕ ಪಡೆದವರಿಗೆ ‘ಸುಜಾತಮಣಿ ಸಿಂದಘಟ್ಟ ನಾಗರಾಜ ಚಿನ್ನದ ಪದಕ’ದ ₹ 1 ಲಕ್ಷ ದತ್ತಿ ಸ್ಥಾಪನೆಗೆ ಒಪ್ಪಿಗೆ‌

* ದೂರಶಿಕ್ಷಣದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 6 ತಿಂಗಳ ಬದಲು 3 ತಿಂಗಳಿಗೊಮ್ಮೆ ಪುನರಾವರ್ತಿತ ಪರೀಕ್ಷೆ ನಡೆಸಲು ಸಮ್ಮತಿ

* ದೂರಶಿಕ್ಷಣದ ಪ್ರವೇಶಾತಿ ಶುಲ್ಕ ಪರಿಷ್ಕರಣೆ. ಕನ್ನಡ ಭಾಷೆಯ ಉಚಿತ ಕಲಿಕೆಗೆ ಪ್ರಸ್ತಾವ. ವಿದೇಶಿ ವಿದ್ಯಾರ್ಥಿಗಳಿಗೆ $ 50/ ₹ 4 ಸಾವಿರ ನಿಗದಿಗೆ ಒಪ್ಪಿಗೆ

* ಎಂ.ಎಸ್ಸಿ ಆಹಾರ ವಿಜ್ಞಾನದಲ್ಲಿ 2ನೇ ಅತಿ ಹೆಚ್ಚು ಅಂಕ ಪಡೆದವರಿಗೆ ಪ್ರೊ.ಕೈರುನ್ನಿಸಾ ಬೇಗಂ ಹೆಸರಿನಲ್ಲಿ ₹ 50 ಸಾವಿರ ನಗದು ಬಹುಮಾನಕ್ಕೆ ಅನುಮೋದನೆ

* ಉಪಕುಲಸಚಿವ ಹುದ್ದೆಯ ವೇತನ ಶ್ರೇಣಿ ₹ 67,550– 1,04,600 ನಿಗದಿ

* ಸಿಒಬಿಎಸ್‌ಇ ಮಾನ್ಯತೆ ಪಡೆದ ನಂತರವೇ ಬೆಂಗಳೂರಿನ ಭಾರತ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಕೂಲಿಂಗ್‌ ಎಜುಕೇಶನ್‌ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ನೀಡಲು ಸಭೆಯು ತೀರ್ಮಾನಿಸಿತು.

* ಕಾನೂನು, ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌, ಶಿಕ್ಷಣ, ಕಲಾ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯಗಳ ನಡವಳಿಯ ತೀರ್ಮಾನಗಳನ್ನು ಅನುಮೋದಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT