ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ತಾಲ್ಲೂಕುಗಳಲ್ಲಿ ‘ಸಂರಕ್ಷಣ್’ - ಪಾರಂಪರಿಕ ಮಹತ್ವದ ಸ್ಮಾರಕಗಳ ಸಂರಕ್ಷಣೆ

ಪಾರಂಪರಿಕ ಮಹತ್ವದ ಸ್ಮಾರಕಗಳನ್ನು ಗುರುತಿಸಿ, ಸಂರಕ್ಷಣೆ ಉದ್ದೇಶ ಯೋಜನೆ
Last Updated 9 ಡಿಸೆಂಬರ್ 2022, 21:08 IST
ಅಕ್ಷರ ಗಾತ್ರ

ಮೈಸೂರು: ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ‘ಸಂರಕ್ಷಣ್’ ಯೋಜನೆಯಡಿ ತಾಲ್ಲೂಕುವಾರು ಸಮಗ್ರ ಸಮೀಕ್ಷೆಯನ್ನು ಆರಂಭಿಸಿದೆ.

ಅದಕ್ಕಾಗಿ, 2022–23ನೇ ಸಾಲಿನಲ್ಲಿ ರಾಜ್ಯದ 21 ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ 844 ರಾಜ್ಯ ಸಂರಕ್ಷಿತ ಹಾಗೂ 605 ಕೇಂದ್ರ ಸಂರಕ್ಷಿತ ಸ್ಮಾರಕಗಳನ್ನು ಗುರುತಿಸಲಾಗಿದೆ.

ಅಂದಾಜಿನ ಪ್ರಕಾರ, 25 ಸಾವಿರಕ್ಕೂ ಹೆಚ್ಚು ಅಸಂರಕ್ಷಿತ ಸ್ಮಾರಕಗಳಿವೆ. ಅವುಗಳ ವ್ಯವಸ್ಥಿತ ಸಂರಕ್ಷಣೆ ಹಾಗೂ ನಿಖರವಾದ ಮಾಹಿತಿ ಸಂಗ್ರಹವೇ ಈ ಸಮೀಕ್ಷೆಯ ಗುರಿ. ಮೂರೂವರೆ ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಉದ್ದೇಶವಿದೆ. ಎರಡು ತಿಂಗಳವರೆಗೆ ಸಮೀಕ್ಷೆ, ಒಂದೂವರೆ ತಿಂಗಳು ದಾಖಲೆಗಳ ಕ್ರೋಢೀಕರಣ ನಡೆಯಲಿದೆ.

ಎಚ್‌.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮಾಗಡಿ, ದೇವನ ಹಳ್ಳಿ, ಖಾನಾಪುರ, ಭದ್ರಾವತಿ, ರಾಣೆಬೆನ್ನೂರು, ಶಹಬಾದ್, ಕಂಪ್ಲಿ, ಸಂಡೂರು, ಕಾಳಗಿ, ಆಳಂದ, ಚಳ್ಳಕೆರೆ, ಸುಳ್ಯ, ಪುತ್ತೂರು, ಚಿಕ್ಕಮಗಳೂರು, ಸೋಮವಾರ‍ಪೇಟೆ, ಕುಶಾಲನಗರ,ಪಾಂಡವಪುರ ಹಾಗೂ ಹಿರಿಯೂರು ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಯಲಿದೆ.

ಸಮೀಕ್ಷೆ ಉದ್ದೇಶಕ್ಕಾಗಿ ಸರ್ಕಾರ ₹ 35 ಲಕ್ಷ ಅನುದಾನ ಒದಗಿಸಿದೆ. ಅಧಿಕಾರಿಗಳು, ಕ್ಯುರೇಟರ್‌ಗಳು, ಸಿಬ್ಬಂದಿ, ತಜ್ಞರು, ಪರಂಪರೆ ವಿಷಯ ದಲ್ಲಿ ಸ್ನಾತಕೋತ್ತರ ಪದವೀಧರರು, ಪಿಎಚ್‌.ಡಿ ಪದವೀಧರರು ಭಾಗಿಯಾಗುವರು.

‘ನಿಯೋಜಿತ ತಂಡಗಳು ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲಿವೆ. ಅಲ್ಲಿರಬಹುದಾದ ವೀರಗಲ್ಲು, ಮಾಸ್ತಿಗಲ್ಲು, ಮಂಟಪ, ದೇವಸ್ಥಾನಗಳು ಮೊದಲಾದ ರಚನೆಗಳ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಅವು ಯಾವ ಸ್ಥಿತಿಯಲ್ಲಿವೆ ಎನ್ನುವುದನ್ನು ನಮೂದಿಸಲಾಗು
ತ್ತದೆ. ಇತಿಹಾಸ ಪ್ರಸಿದ್ಧ ದೇಗುಲವಿದ್ದರೆ ವಿಶೇಷವಾಗಿ ದಾಖಲಿಸಲಾಗುತ್ತದೆ. ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಇಲಾಖೆಯ ಆಯುಕ್ತ ಎ.ದೇವರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ದೇಶದ ಬದಲಾಯಿಸಲಾಗದ ಮತ್ತು ನವೀಕರಿಸಲಾಗದ ಸಾಂಸ್ಕೃತಿಕ ಸಂಪನ್ಮೂಲಗಳಾದ ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲು ಮತ್ತು ರಕ್ಷಿಸಲು ಕಾಳಜಿ ವಹಿಸಲಾಗುತ್ತಿದೆ. ನಿಖರ ಮಾಹಿತಿ ಸಂಗ್ರಹಿಸಿದ ನಂತರ, ಮಹತ್ವದ ಆಧಾರದಲ್ಲಿ ಸಂರಕ್ಷಿಸಲಾಗುವುದು. ಸ್ಮಾರಕದ ವಸ್ತು, ಪುರಾತತ್ವ, ವಿನ್ಯಾಸ ಮತ್ತು ಸಮಗ್ರತೆಯೇ ಅದಕ್ಕೆ ಆಧಾರ. ಅವು ಇರುವ ರೀತಿಯಲ್ಲಿಯೇ ಸಾಧ್ಯವಾದಷ್ಟು ಕಡಿಮೆ ಬದಲಾವಣೆಯೊಂದಿಗೆ ನಿರ್ವಹಿಸಲಾಗುತ್ತದೆ. ಇದುವರೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ತಾಲ್ಲೂಕುವಾರು ಸಮೀಕ್ಷೆ ಈವರೆಗೆ ನಡೆದಿರಲಿಲ್ಲ. ಮುಂದಿನ ಹಂತದಲ್ಲಿ ಮತ್ತಷ್ಟು ತಾಲ್ಲೂಕುಗಳನ್ನು ಕೈಗೆತ್ತಿಕೊಳ್ಳುವ ಯೋಜನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT