ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯತೆ ಉದಾತ್ತವಾದ ಮೌಲ್ಯ: ಸು.ರಾಮಣ್ಣ

ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಸು.ರಾಮಣ್ಣ ಹೇಳಿಕೆ
Last Updated 11 ಮಾರ್ಚ್ 2023, 14:51 IST
ಅಕ್ಷರ ಗಾತ್ರ

ಮೈಸೂರು: ‘ರಾಷ್ಟ್ರೀಯತೆ ಎನ್ನುವುದು ಉದಾತ್ತವಾದ ಮೌಲ್ಯವಾಗಿದ್ದು, ದೇಶದ ಬಗ್ಗೆ ಭಕ್ತಿ-ಭಾವವನ್ನು ಮೂಡಿಸುತ್ತದೆ. ಜನರನ್ನು ಒಗ್ಗೂಡಿಸುತ್ತದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್‌)ದ ಹಿರಿಯ ಪ್ರಚಾರಕ ಸು.ರಾಮಣ್ಣ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ‌ಪರಿಷತ್ತು ನಗರ ಘಟಕದಿಂದ ಇಲ್ಲಿನ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ‌ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ‌ವಿಚಾರಸಂಕಿರಣವನ್ನು ಉದ್ಘಾಟಿಸಿ ‘ರಾಷ್ಟ್ರೀಯತೆ–ಪ್ರಸ್ತುತತೆ’ ವಿಷಯದ ಕುರಿತು ಅವರು ಮಾತನಾಡಿದರು.

ಭರವಸೆ ಹೆಚ್ಚಿಸುತ್ತಿರುವ ದೇಶ: ‘ನಮ್ಮದೀಗ ಬದಲಾಗುತ್ತಿರುವ ಹಾಗೂ ಭರವಸೆ ಹೆಚ್ಚಿಸುತ್ತಿರುವ ದೇಶ. ಹಿಂದೆ ಯಾರದೋ ಕನಿಕರಕ್ಕೆ ಗುರಿಯಾಗುತ್ತಿದ್ದೆವು; ಅಪಮಾನಕ್ಕೆ ಒಳಗಾಗುತ್ತಿದ್ದೆವು. ಆ ಪರಿಸ್ಥಿತಿ ಈಗ ಇಲ್ಲ. ಜಗತ್ತಿನ ಗೌರವಕ್ಕೆ ಪಾತ್ರವಾಗುತ್ತಿದ್ದೇವೆ. ನೆರೆಯವರ ಸಂಕಷ್ಟಗಳಿಗೆ ಸಕಾರಾತ್ಮಕ ಹಾಗೂ ಭಾವಪೂರ್ಣವಾಗಿ ಸ್ಪಂದಿಸುತ್ತಿದ್ದೇವೆ. ಈ ಮಣ್ಣಿನ ಮಕ್ಕಳಲ್ಲಿ ಭಯವನ್ನು ಹೋಗಲಾಡಿಸಿ ಭರವಸೆಯನ್ನು ತುಂಬುವ ಕೆಲಸವನ್ನು ರಾಷ್ಟ್ರೀಯತೆ ಎಂಬ ವಿಷಯ ಮಾಡುತ್ತಿದೆ’ ಎಂದು ತಿಳಿಸಿದರು.

‘ಭಾರತವನ್ನು ಒಂದು ಉಪ ಖಂಡವೆಂದಷ್ಟೇ ಪರಿಚಯ ಮಾಡಿಕೊಡುತ್ತಿದ್ದೆವು. ಪಠ್ಯದಲ್ಲೂ ಹಾಗೆಯೇ ಇತ್ತು.‌ ಇದರ‌ ಹಿಂದೆ ಭಾರಿ ದೊಡ್ಡ ಕುತಂತ್ರ ಇತ್ತು. ಬ್ರಿಟಿಷರು ರಾಜಕೀಯ ಹಾಗೂ ಮಾನಸಿಕವಾಗಿ ಕುತಂತ್ರ ಮಾಡಿದ್ದರ ಫಲವಿದು. ಆದರೀಗ, ಇಂಡಿಯಾ ಹೋಗುತ್ತಿದೆ, ಭಾರತ ಬೆಳಗುತ್ತಿದೆ. ಭಾರತ ಮಾತೆಗೆ ಜೈ, ವಂದೇಮಾತರಂ ಎಂಬ ಘೋಷಣೆಗಳು ರಾಷ್ಟ್ರೀಯತೆ ‌ಉದ್ದೀಪಿಸುವ ಕೆಲಸವನ್ನು ಮಾಡಿದವು’ ಎಂದರು.

‘ನಾವು ನಿಮ್ಮನ್ನು ‌ಒಂದುಗೂಡಿಸಿದ್ದೇವೆ. ನೀವು ರಾಷ್ಟ್ರ ಅಲ್ಲ ಎಂದು ಬ್ರಿಟಿಷರು ಹೇಳುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದವರು, ‘ನಾವು ರೂಪುಗೊಳ್ಳುತ್ತಿರುವ ದೇಶ’ ಎಂದು ‌ಹೇಳಿಕೊಂಡಿದ್ದು ದುರ್ದೈವ’ ಎಂದು ಹೇಳಿದರು.

ಹಕ್ಕೊತ್ತಾಯ ಬಂದಾಗ ಸಂಘರ್ಷ: ‘ಹಕ್ಕೊತ್ತಾಯ ಎಂಬುದು ಬಂದಾಗ ಸಂಘರ್ಷ ಬರುತ್ತದೆ. ಆದರೆ, ರಾಷ್ಟ್ರ ಎಂದಾಗ ಇದ್ಯಾವುದೂ ಬರುವುದಿಲ್ಲ. ರಾಷ್ಟ್ರಕ್ಕೆ ನಾವೇನು ಕೊಡಬೇಕು ಎನ್ನುವ ಭಾವನೆಯನ್ನು ಬೆಳೆಸುತ್ತದೆ. ದೇಶದ ಕರ್ತವ್ಯವನ್ನು ರಾಷ್ಟ್ರೀಯತೆ ಕಲಿಸಿಕೊಡುತ್ತದೆ. ಇದರಲ್ಲಿ ಹಕ್ಕೊತ್ತಾಯ ಇರುವುದಿಲ್ಲ; ಕರ್ತವ್ಯ ಪ್ರಧಾನವಾದುದು. ಭಾರತ ನಮಗೆ‌ ಭೋಗಭೂಮಿಯಲ್ಲ; ಜನ್ಮ ಭೂಮಿ ಎಂದುಕೊಳ್ಳಬೇಕು. ಆಗ ಈ ದೇಶದ ಪ್ರಜೆ, ನಾಗರಿಕರಷ್ಟೇ ಆಗುವುದಿಲ್ಲ. ಬದಲಿಗೆ ಈ ಮಣ್ಣಿನ ಮಕ್ಕಳಾಗುತ್ತೇವೆ. ಆಗ ದೇಶವನ್ನು ‌ಒಡೆಯುವ ಭಿನ್ನ ಸಂಗತಿಗಳಾಗುವುದಿಲ್ಲ; ವಿವಿಧತೆ ಆಗುತ್ತದೆ’ ಎಂದರು.

‘ದೇಶಕ್ಕಾಗಿ ನಾವು ಬದುಕಬೇಕು. ಆದರೆ, ಭಾರತಕ್ಕೆ ನಾನೇ ಅನಿವಾರ್ಯ ಎಂಬ ದುರಂಹಕಾರ ಯಾರಲ್ಲೂ ಬರಬಾರದು. ಅಂತಹ ವ್ಯಕ್ತಿಗಳನ್ನು ಈ ದೇಶ ತಿರಸ್ಕರಿಸಿದೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ರಾಷ್ಟ್ರೀಯತೆ ಎನ್ನುವುದು ‌ಇತರ ಅಂಶಗಳಿಗಿಂತ ಪ್ರಮುಖವಾದುದು.‌ ಕೀಳರಿಮೆ ಹಾಗೂ ಸಂಕುಚಿತ ಮನೋಭಾವ ಬಿಟ್ಟು ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ರಂಗ ನಿರ್ದೇಶಕ ಪ್ರೊ.ಎಚ್‌.ಎಸ್.ಉಮೇಶ್, ‘12ನೇ ಶತಮಾನದ ದೇಶೀಜ್ಞಾನ–ಕಾಯಕ, 21ನೇ ಶತಮಾನದ ರಾಷ್ಟ್ರೀಯ ಶಿಕ್ಷಣ ನೀತಿ’ ಹಾಗೂ ‘ಶರಣರ ಚಳವಳಿ ಒಂದು ರಾಷ್ಟ್ರೀಯ ಚಳವಳಿ’ ವಿಷಯದ ಕುರಿತು ಮಹಾರಾಣಿ ಮಹಳಾ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ವಿ.ವಸಂತ್‌ಕುಮಾರ್‌ ಮಾತನಾಡಿದರು. ಕೇಂದ್ರದ ಮಾನವ ಸಂಪನ್ಮೂಲಗಳು, ಕೆಪಾಸಿಟಿ ಬಿಲ್ಡಿಂಗ್‌ ಮಿಷನ್‌ ಸದಸ್ಯ ಡಾ.ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಿದ್ದರು.

ದತ್ತಿ ದಾನಿ ತೋಂಟದಾರ್ಯ ಹಾಗೂ ಶರಣ ಸಾಹಿತ್ಯ ‌ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಇದ್ದರು.

ಇದಕ್ಕೂ ಮುನ್ನ, ಸಾಹಿತಿ ಮಲೆಯೂರು ಗುರುಸ್ವಾಮಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT