ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಾಯಣ ದೇಶದ ಕಣ್ಣು: ದತ್ತ‌ ವಿಜಯಾನಂದ ತೀರ್ಥ

’ವಾಲ್ಮೀಕಿ ರಾಮಾಯಣ ಮಹಾಯಾಗ’ದ ಮಹಾಪೂರ್ಣಾಹುತಿ
Published 18 ಆಗಸ್ಟ್ 2024, 14:10 IST
Last Updated 18 ಆಗಸ್ಟ್ 2024, 14:10 IST
ಅಕ್ಷರ ಗಾತ್ರ

ಮೈಸೂರು: ‘ರಾಮಾಯಣ ನಮ್ಮ ಭಾರತದ ಕಣ್ಣು ಹಾಗೂ ಶ್ರೀರಾಮನ ಆದರ್ಶ ಎಲ್ಲರಿಗೂ ಮಾದರಿಯಾದುದು’ ಎಂದು ಅವಧೂತ ದತ್ತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ಊಟಿ ರಸ್ತೆಯಲ್ಲಿರುವ ದತ್ತ ಪೀಠದ ಆವರಣದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಆ.8ರಿಂದ ಪ್ರಾರಂಭವಾಗಿದ್ದ ‘ಸಂಪೂರ್ಣ ಶ್ರೀಮದ್ ವಾಲ್ಮೀಕಿ ರಾಮಾಯಣ ಮಹಾಯಾಗ’ದ ಅಂಗವಾಗಿ ಭಾನುವಾರ ನಡೆದ ಮಹಾಪೂರ್ಣಾಹುತಿ ಕಾರ್ಯದಲ್ಲಿ ಪಾಲ್ಗೊಂಡ ನಂತರ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಒಮ್ಮೆಯಾದರೂ ಸಂಪೂರ್ಣ ರಾಮಾಯಣ ಪಾರಾಯಣ ಮಾಡಬೇಕು’ ಎಂದು ಸಲಹೆ ನೀಡಿದರು.

‘ಭಾರತ ಸೇರಿದಂತೆ ಪ್ರಪಂಚದಾದ್ಯಂತ ಶ್ರೀರಾಮ ಎಂಬ ಹೆಸರು ಕೇಳಿದರೆ ಮೈನವಿರೇಳುತ್ತದೆ’ ಎಂದರು.

‘ಲೋಕ ಕಲ್ಯಾಣಾರ್ಥ ಮತ್ತು ವಿಶ್ವ ಶಾಂತಿಗಾಗಿ ಪ್ರಾರ್ಥಿಸಿ 11 ದಿನಗಳಿಂದ ಸಂಪೂರ್ಣ ರಾಮಾಯಣ ಪಾರಾಯಣ ಮಾಡಲಾಗಿದೆ. ಕರ್ನಾಟಕ, ದೇಶ ಹಾಗೂ ವಿಶ್ವದೆಲ್ಲೆಡೆ ಸದಾ ಶಾಂತಿ ಇರಬೇಕೆಂದು ಪ್ರಾರ್ಥಿಸಿದ್ದೇವೆ. ಎಲ್ಲೆಡೆ‌ ಕಷ್ಟದ ಹಾಗೂ ಯುದ್ಧದ ವಾತಾವರಣ ಇದ್ದು, ಇದೆಲ್ಲ ಹೋಗಬೇಕೆಂದು ಸಂಕಲ್ಪ ಮಾಡಲಾಗಿದೆ. ಶ್ರೀರಾಮ, ಸೀತಾ ಮಾತೆ ಹಾಗೂ ಆಂಜನೇಯ‌ಸ್ವಾಮಿ ಎಲ್ಲರಿಗೂ ಅನುಗ್ರಹ ನೀಡಲಿ’ ಎಂದು ಹಾರೈಸಿದರು. ‘ಇದೇ ವೇಳೆ ದತ್ತ ಯಾಗ ಮಹಾ ಪೂರ್ಣಾಹುತಿ ಕೂಡ ಆಗಿದೆ. ರಾಮಾಯಣ ಪಾರಾಯಣ ಮಾಡಿಸಬೇಕು ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಕೊರೊನಾ ಸಂದರ್ಭದಲ್ಲಿ ನಿರ್ಧರಿಸಿದ್ದರು’ ಎಂದರು.

‘ರಾಮಾಯಣ ಪಾರಾಯಣ ಹಾಗೂ ಶ್ರೀಮದ್ರಾಮಾಯಣ ಯಾಗ ಎರಡೂ ಯಶಸ್ವಿಯಾಗಿವೆ. 24ಸಾವಿರ ಆಹುತಿಗಳನ್ನು ಸಮರ್ಪಣೆ ಮಾಡಲಾಗಿದೆ. ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರವನ್ನು 52 ಲಕ್ಷ ಬಾರಿ ಜಪಿಸಲಾಗಿದೆ. ನಮ್ಮ ಆಶ್ರಮದ ವೇದ ಶಾಲೆಯ ಉಪಾಧ್ಯಾಯರು ಹಾಗೂ ವಿದ್ಯಾರ್ಥಿಗಳು ರಾಮಾಯಣವನ್ನು ಅಚ್ಚುಕಟ್ಟಾಗಿ ಓದಿದ್ದಾರೆ. ವಂಶಿಕೃಷ್ಣ ಘನಪಾಠಿ ಆಧಾರಸ್ತಂಭವಾಗಿ ನಿಂತರು’ ಎಂದು ಶ್ಲಾಘಿಸಿದರು.

ಬೆಳಿಗ್ಗೆ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಿಂದ ಸೀತಾರಾಮ ಆಂಜನೇಯ ಸಮೇತ ಉತ್ಸವ ಮೂರ್ತಿಯನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಾಲಯದವರೆಗೆ ತರಲಾಯಿತು. ಶ್ರೀಗಳು ಈ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT