ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಚಾಮರಾಜೇಂದ್ರ ಅರಸು ಬೋರ್ಡಿಂಗ್‌ ಶಾಲೆ ಮರುನಾಮಕರಣದೊಂದಿಗೆ ಫೆ.22ಕ್ಕೆ ಪುನರಾರಂಭ

‘ಚಾಮರಾಜೇಂದ್ರ ಸ್ಕೂಲ್‌ ಫಾರ್‌ ಎಕ್ಸಲೆನ್ಸ್‌’ ಶಾಲೆ ಸಿದ್ಧ
Last Updated 11 ಜನವರಿ 2023, 8:58 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಾಮರಾಜಪುರಂನ ಕೃಷ್ಣರಾಜ ಬುಲೇವಾರ್ಡ್‌ ರಸ್ತೆಯಲ್ಲಿರುವ ಜಯಚಾಮರಾಜೇಂದ್ರ ಅರಸು ಬೋರ್ಡಿಂಗ್‌ ಶಾಲೆಗೆ ‘ಚಾಮರಾಜೇಂದ್ರ ಸ್ಕೂಲ್‌ ಫಾರ್ ಎಕ್ಸಲೆನ್ಸ್‌’ ಎಂದು ಮರುನಾಮಕರಣ ಮಾಡಲಾಗಿದ್ದು, ಪ್ರಸಕ್ತ 2023–24ನೇ ಸಾಲಿನಿಂದ ಪುನರಾರಂಭಿಸಲಾಗುತ್ತಿದೆ.

‘ಜಯಚಾಮರಾಜ ಅರಸು ಶಿಕ್ಷಣ ಟ್ರಸ್ಟ್‌ ಅಡಿಯಲ್ಲಿ ನಡೆಸಲಾಗುವ ಈ ಶಾಲೆಯು ಫೆ.22ರಂದು ಉದ್ಘಾಟನೆಗೊಳ್ಳಲಿದೆ. ಸದ್ಯಕ್ಕೆ ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಇರಲಿದೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ ಹಾಗೂ ಪಿಯು ಶಿಕ್ಷಣಕ್ಕೆ ವಿಸ್ತರಿಸಲು ಯೋಜಿಸಲಾಗಿದೆ’ ಎಂದು ಟ್ರಸ್ಟ್‌ ಅಧ್ಯಕ್ಷರೂ ಆಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಗರದ ಹೃದಯ ಭಾಗದಲ್ಲಿ 9 ಎಕರೆ ಪ್ರದೇಶದಲ್ಲಿ ಹರಡಿದ್ದು, ಪರಿಸರ ಸ್ನೇಹಿ ವಾತಾವರಣ ಹೊಂದಿದೆ. ಎಲ್ಲ ಬಡಾವಣೆಗಳಿಂದಲೂ ಉತ್ತಮ ಸಂಪರ್ಕವಿದೆ. ಪ್ರತಿ ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ಹಾಗೂ ಇಂದಿನ ಆಧುನಿಕತೆ ಅನುಗುಣವಾಗಿ ನವೀನ ತಾಂತ್ರಿಕ ಶೈಕ್ಷಣಿಕ ಸೌಲಭ್ಯಗಳನ್ನು ಒಳಗೊಂಡಿದೆ. ಉತ್ತಮ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ಒದಗಿಸುವ ಟ್ರಸ್ಟ್‌ನ ಉದ್ದೇಶವನ್ನು ಇಲ್ಲೂ ಮುಂದುವರಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ–2020) ಅನ್ವಯ ಕಲಿಕಾ ಚಟುವಟಿಕೆಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ಮುಚ್ಚಲಾಗಿತ್ತು:

‘1957ರಲ್ಲಿ ಜಯಚಾಮರಾಜ ಒಡೆಯರ್‌ ಅವರು ಟ್ರಸ್ಟ್‌ ಆರಂಭಿಸಿದ್ದರು. ಅದರಡಿ ಶಾಲೆ ನಡೆಸಲಾಗುತ್ತಿತ್ತು. ಕಾರಣಾಂತರಗಳಿಂದ, ವಿದ್ಯಾರ್ಥಿಗಳ ಪ್ರವೇಶಾತಿ ಕುಸಿದಿದ್ದರಿಂದ ಶಾಲೆಯನ್ನು ಮೂರು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಬಳಿಕ ಜೀರ್ಣೋದ್ಧಾರ ಮಾಡಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದವರಿಗೂ ಕೈಗೆಟಕುವಂತೆ ಶುಲ್ಕ ನಿಗದಿಪಡಿಸಲಾಗಿದೆ. ಚಟುವಟಿಕೆ ಆಧಾರಿತವಾದ ಕಲಿಕೆಗೆ ಒತ್ತು ನೀಡಲಾಗುವುದು. ಅನುಭವಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ವಿಶಾಲವಾದ ಆಟದ ಮೈದಾನವಿದೆ’ ಎಂದು ವಿವರಿಸಿದರು.

‘ಶಾಲೆಯ ಆವರಣದಲ್ಲಿ ಜ.29ರಂದು 3ರಿಂದ 12 ವರ್ಷಗಳ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಬಹುಮಾನ, ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ಮಾಹಿತಿಗೆ ಮೊ.ಸಂಖ್ಯೆ: 99028 96323 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಜಯಚಾಮರಾಜ ಅರಸು ಶಿಕ್ಷಣ ಟ್ರಸ್ಟ್‌ ಉಪಾಧ್ಯಕ್ಷೆ ಭಾರತಿ, ಗೌರವ ಕಾರ್ಯದರ್ಶಿ ಮಹೇಶ್ ಅರಸ್, ಟ್ರಸ್ಟ್‌ ಕಮಿಟಿ ಸದಸ್ಯ ಬಾಲಚಂದ್ರ ಹಾಗೂ ಸರ್ದಾರ್‌ ಶ್ರೀಕಂಠರಾಜೇ ಅರಸ್ ಇದ್ದರು.

‘ಯಾವ ಹೆಸರನ್ನಾದರೂ ಇಡಲಿ’

ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ವೇಗೆ ಹೆಸರು ನಾಮಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯದುವೀರ, ‘ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸರ್ಕಾರದ ಅಧಿಕಾರವದು’ ಎಂದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಕಾವೇರಿ ನದಿಯ ಹೆಸರಿಡಬೇಕು ಎಂದು ಚರ್ಚೆಯಾಗುತ್ತಿದೆ. ಎರಡು ಸಲಹೆಗಳೂ ಚೆನ್ನಾಗಿವೆ’ ಎಂದು ಹೇಳಿದರು.

‘ದೇವಿಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನೇ ವಿಷಯವಿದ್ದರೂ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಪ್ರತಿಕ್ರಿಯೆ ನೀಡುತ್ತಾರೆ. ಅದು ಅವರಿಗೆ ಸಂಬಂಧಿಸಿದ ವಿಷಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT