ಮೈಸೂರು: ‘ರೇಷ್ಮೆ ಉತ್ಪಾದನೆ ಹಾಗೂ ಉದ್ಯಮಕ್ಕೆ ಮೈಸೂರಿನ ಸಿಎಸ್‌ಆರ್‌ಟಿಐ ಮಹತ್ವವಾದ ಕೊಡುಗೆ ನೀಡಿದೆ’ ಎಂದು ನಿವೃತ್ತ ವಿಜ್ಞಾನಿ ಜಿ. ಗೀತಾದೇವಿ ತಿಳಿಸಿದರು.
ಇಲ್ಲಿನ ಮಾನಂದವಾಡಿ ರಸ್ತೆಯಲ್ಲಿರುವ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಸಿಎಸ್‌ಆರ್‌ಟಿಐ)ಯಲ್ಲಿ ಬುಧವಾರ ಆಯೋಜಿಸಿದ್ದ ರೇಷ್ಮೆ ದಿನಾಚರಣೆ ಮತ್ತು ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ದಕ್ಷಿಣ ಭಾರತದಲ್ಲಿ ರೇಷ್ಮೆ ಉದ್ಯಮದ ಅಭಿವೃದ್ಧಿ ಮತ್ತು ಸಂಶೋಧನೆ’ ವಿಷಯದ ಕುರಿತು ಅವರು ಮಾತನಾಡಿದರು.
‘ಬೈವೋಲ್ಟೈನ್ (ದ್ವಿತಳಿ) ರೇಷ್ಮೆ ಕೃಷಿ ಮಾಡಲು ತಮಿಳುನಾಡು ಮತ್ತು ಆಂಧ್ರದಲ್ಲಿ ಜೈಕಾ ಯೋಜನೆಯಡಿ ಸಂಶೋಧನೆ ಹಾಗೂ ವಿಸ್ತರಣೆ ಕೇಂದ್ರಗಳ ಮೂಲಕ ಪ್ರೋತ್ಸಾಹಿಸಲಾಗಿತ್ತು’ ಎಂದರು.
‘ಸಿಎಸ್‍ಆರ್‌ಟಿಐ ತನ್ನ ವಿಜ್ಞಾನಿಗಳನ್ನು ಮಹಾರಾಷ್ಟ್ರ ಮತ್ತು ಉತ್ತರೆ ಪ್ರದೇಶಗಳಿಗೆ ಕಳುಹಿಸಿ ಚಾಕಿ ರೇಷ್ಮೆ ಕೃಷಿ ಮತ್ತು ಚಾಕಿಯ ತಂತ್ರಜ್ಞಾನಗಳನ್ನು ತಿಳಿಸಿಕೊಟ್ಟಿದೆ. ಈಗಲೂ ರೈತರು, ವಿದ್ಯಾರ್ಥಿಗಳು, ವಿದೇಶಿ ಶಿಬಿರಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಹೊಸ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡುತ್ತಿದೆ’ ಎಂದು ಹೇಳಿದರು.
ಸಹಕಾರಿಯಾಗಿದೆ: ‘ದಶಕಗಳ ಹಿಂದೆ ರೇಷ್ಮೆ ಗೂಡಿನ ದರ ₹ 50 ಇತ್ತು. ಪ್ರಸ್ತುತ ₹ 700ಕ್ಕೆ ಏರಿಕೆಯಾಗಿದೆ. ಈ ಹಾದಿಯಲ್ಲಿ ಸಿಎಸ್‌ಆರ್‌ಟಿಐ ನಡೆಸಿದ ಸಂಶೋಧನೆ ಹಾಗೂ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗಿವೆ’ ಎಂದರು.
ನೂಲು ಬಿಚ್ಚಣಿಕೆಗಾರರಾದ ವೆಂಕಟೇಶ್ ಮಾತನಾಡಿ, ‘ಎರಡು ಚರಕದಿಂದ ಪ್ರಾರಂಭಿಸಿದ್ದೆ. ಈಗ, ಆಟೊಮ್ಯಾಟಿಕ್ ರೀಲಿಂಗ್ ಮಷಿನ್ ಇದೆ. ಸಿಎಸ್‍ಆರ್‌ಟಿಐ ಮೈಸೂರಿನ ತಂತ್ರಜ್ಞಾನಗಳ ಪರಿಣಾಮವಾಗಿ ದಶಕಗಳು ಕಳೆದಂತೆ ಗೂಡಿನ ಗುಣಮಟ್ಟವು ಸುಧಾರಿಸುತ್ತಿದೆ. ಅಂದು ಒಂದು ಕೆ.ಜಿ. ರೇಷ್ಮೆ ನೂಲು ತೆಗೆಯಲು 13 ಕೆ.ಜಿ. ಗೂಡಿನ ಅಗತ್ಯವಿರುತ್ತಿತ್ತು. ಆದರೆ, ಇಂದು ಅಧಿಕ ಇಳುವರಿಯುಳ್ಳ ಹಿಪ್ಪುನೇರಳೆ ತಳಿ ಮತ್ತು ರೇಷ್ಮೆ ಹುಳ ತಳಿಯಿಂದ ಕೇವಲ 6 ಕೆ.ಜಿ. ಗೂಡಿನಿಂದ ಒಂದು ಕೆ.ಜಿ. ನೂಲನ್ನು ತೆಗೆಯಲಾಗುತ್ತಿದೆ’ ಎಂದು 45 ವರ್ಷಗಳ ತಮ್ಮ ಅನುಭವ ಹಂಚಿಕೊಂಡರು.
ರೇಷ್ಮೆ ಪ್ರತಿಜ್ಞೆ ಬೋಧಿಸಿದ ಸಿಎಸ್‌ಆರ್‌ಟಿಐ ನಿರ್ದೇಶಕ ಎಸ್. ಗಾಂಧಿ ದಾಸ್ ಮಾತನಾಡಿ, ‘ದೇಶದ ಆರ್ಥಿಕತೆಯಲ್ಲಿ ರೇಷ್ಮೆಯ ಕೊಡುಗೆ ಅಪಾರವಾಗಿದೆ. ದೇಶ 35 ಸಾವಿರ ಮೆ.ಟನ್ ಕಚ್ಚಾ ರೇಷ್ಮೆಯನ್ನು ಉತ್ಪಾದಿಸುತ್ತಿದ್ದು, ಅದು ಚೀನಾದಷ್ಟೇ ಆಗುತ್ತಿದೆ. ಸಿಎಸ್‍ಆರ್‌ಟಿಐ ಮೈಸೂರು ಪ್ರಾರಂಭದಲ್ಲಿ ‘ಕಣ್ವ -2’ (20 ಮೆ.ಟನ್) ಹಾಗೂ ‘ಪ್ಯೂರ್ ಮೈಸೂರು’ ತಳಿ ಅಭಿವೃದ್ಧಿಪಡಿಸಿತ್ತು. ಇಂದು ವಿ-1 (65 ಮೆ.ಟನ್) ಮತ್ತು ಡಬಲ್ ಹೈಬ್ರೀಡ್ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಇವೆರಡು ತಳಿಗಳು ರೇಷ್ಮೆ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿವೆ’ ಎಂದು ಹೇಳಿದರು.
‘ಹಿಪ್ಪುನೇರಳೆ ಮತ್ತು ರೇಷ್ಮೆ ಹುಳು ರೇಷ್ಮೆ ಕೃಷಿಗೆ ಹೊರತುಪಡಿಸಿ, ಕಾಗದ ತಯಾರಿಕೆಗೆ ಹಾಗೂ ಕಾರ್ಬನ್ ಡೈಆಕ್ಸೈಡ್ ಕಡಿಮೆಗೊಳಿಸುವಲ್ಲಿಯೂ ಸಹಕಾರಿಯಾಗಿದೆ. ಕೈಟಿನ್, ಕೈಟೊಸಾನ್ ಮತ್ತು ಸೇರಿಸಿನ್ ಅನ್ನು ವೈದ್ಯಕೀಯ ರಂಗದಲ್ಲಿ ಬಳಸಲಾಗುತ್ತಿದೆ. ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುವಿನ ಪ್ರತಿ ಭಾಗಗಳು ಉಪಯೋಗವಾಗುತ್ತಿದ್ದು, ಇವು ಕಲ್ಪವೃಕ್ಷ ಹಾಗೂ ಕಾಮಧೇನು’ ಎಂದು ಬಣ್ಣಿಸಿದರು.
‘ರೇಷ್ಮೆ ಕಿರಣ’ ಎಂಬ ಹಿಂದಿ ಸಂಚಿಕೆ ಬಿಡುಗಡೆ ಮಾಡಲಾಯಿತು.
ಸಂಸ್ಥೆಯ ರೇಷ್ಮೆ ವಿಭಾಗದ ಮುಖ್ಯಸ್ಥ ಕೆ.ಬಿ. ಚಂದ್ರಶೇಖರ್, ವಿಜ್ಞಾನಿಗಳಾದ ಎಂ. ಮುತ್ತುಲಕ್ಷ್ಮಿ, ಆರ್. ಭಾಗ್ಯಾ ಇದ್ದರು.
Highlights - ಸಿಎಸ್‌ಆರ್‌ಟಿಐನಲ್ಲಿ ಕಾರ್ಯಕ್ರಮ ರೇಷ್ಮೆ ಉದ್ಯಮದ ಅವಲೋಕನ ಸಂಶೋಧನೆ, ತರಬೇತಿಯಿಂದ ಅನುಕೂಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.