ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು | ನರೇಗಾ ಬಳಸಿ ಮಾದರಿಯಾದ ತಟ್ಟೆಕೆರೆ ಶಾಲೆ

Published 31 ಡಿಸೆಂಬರ್ 2023, 6:43 IST
Last Updated 31 ಡಿಸೆಂಬರ್ 2023, 6:43 IST
ಅಕ್ಷರ ಗಾತ್ರ

ಹುಣಸೂರು: ಒಂದು ಗ್ರಾಮ ನರೇಗಾ ಯೋಜನೆಯನ್ನು ಸದ್ಬಳಕೆಯಾಗಿಸಿ ಸರ್ವತೋಮುಖ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿ ಸಾಧ್ಯ ಎನ್ನಲು ತಾಲ್ಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯಿತಿ ಉತ್ತಮ ಉದಾಹರಣೆಯಾಗಿದೆ.

ಈ ಸಾಲಿನ ‘ಗಾಂಧಿ ಗ್ರಾಮ’ ಪುರಸ್ಕಾರ ಪ್ರಶಸ್ತಿ ತನ್ನದಾಗಿಸಿಕೊಂಡ ತಟ್ಟೆಕೆರೆ ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ ಸಾಕು ಹಲವು ಅಭಿವೃದ್ಧಿ ಕಾಮಗಾರಿಗಳು ನೋಡಬಹುದಾಗಿದೆ.

ಗ್ರಾಮದ ಶಾಲೆಗೆ ಹೆಚ್ಚಿನ ಅನುದಾನ ಬಳಸಿಕೊಂಡ ಪಂಚಾಯಿತಿ ಶಿಕ್ಷಣ ಮುಖೇನ ಗ್ರಾಮ ಪ್ರಗತಿ ಎನ್ನುವ ಉದ್ದೇಶದೊಂದಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದು, ₹ 20 ಲಕ್ಷ ಅನುದಾನ ಬಳಸಿಕೊಂಡು 400 ಮೀಟರ್ ಓವಲ್ ಕ್ರೀಡಾ ಮೈದಾನ ನಿರ್ಮಿಸಿದೆ. ಈ ಮೈದಾನಕ್ಕೆ ಹೊಂದಿಕೊಂಡಂತೆ ಕೊಕ್ಕೊ, ಕಬಡ್ಡಿ, ಎತ್ತರ ಜಿಗಿತ, ಉದ್ದಜಿಗಿತ, ವಾಲಿಬಾಲ್ ಆಟಕ್ಕೆ ಪ್ರತ್ಯೇಕ ಕೋಟ್ ನಿರ್ಮಿಸಲಾಗಿದೆ.

‘₹ 13.5 ಲಕ್ಷ ಅನುದಾನವನ್ನು ಶಾಲೆಯ  ಆಟದ ಮೈದಾನ ಸಿದ್ಧಗೊಳಿಸುವ ಉದ್ದೇಶಕ್ಕೆ ಕಾದಿಟ್ಟ ಪಂಚಾಯಿತಿ, ಅಚ್ಚುಕಟ್ಟಾಗಿ ನಿರ್ಮಿಸಿ ಗ್ರಾಮ ಮಟ್ಟದ ಶಾಲೆಗೆ ಹುಣಸೂರು ತಾಲ್ಲೂಕಿನಲ್ಲೇ ಪ್ರಥಮ ಬಾರಿಗೆ ಉತ್ತಮ ಆಟದ ಮೈದಾನ ಹೊಂದುವ ಅವಕಾಶ ಕಲ್ಪಿಸಿದ್ದೇವೆ. ಶಾಲೆಯಲ್ಲಿ ಭೋಜನಾಲಯ ನಿರ್ಮಾಣಕ್ಕೆ ₹ 13 ಲಕ್ಷ ಕಾದಿಟ್ಟಿದ್ದು, 2024–25ನೇ ಸಾಲಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದೇವೆ. ಅಂಗವಿಕಲ ಮಕ್ಕಳಿಗೆ ಅನುಕೂಲವಾಗುವ ರೀತಿ ₹ 5 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಹೆಚ್ಚುವರಿ ಶೌಚಾಲಯ ನಿರ್ಮಾಣ ಕೈಗೆತ್ತಿಕೊಳ್ಳಲಿದ್ದೇವೆ. ಅಡುಗೆ ತ್ಯಾಜ್ಯ ನೀರು ನಿರ್ವಹಣೆ ಮತ್ತು ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಮಾಹಿತಿ ನೀಡಿದರು.

ಪೋಷಕರ ಸಹಕಾರ ನಿರೀಕ್ಷೆ: ‘ಪೋಷಕರು ಖಾಸಗಿ ಶಾಲೆ ನೋಡಿ ಆಕರ್ಷಿತರಾಗಿದ್ದರಿಂದ ಗ್ರಾಮದ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಸಂಕಲ್ಪ ತೊಟ್ಟು ನರೇಗಾ ಯೋಜನೆ ಬಳಸಿ ಸರ್ವತೋಮುಖ ಅಭಿವೃದ್ಧಿ ಕಾಮಗಾರಿ ಕೈಗೊಂಡು 6 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಈ ಕಾಮಗಾರಿಗೆ 6 ಸಾವಿರ ಮಾನವ ದಿನಗಳನ್ನು ಬಳಸಿ ಉದ್ಯೋಗ ಸೃಷ್ಟಿಸುವದೊಂದಿಗೆ ಸರ್ಕಾರಿ ಶಾಲೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು ದಾಖಲಾತಿ ಹೆಚ್ಚಾಗಲು ಪೋಷಕರ ಸಹಕಾರ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ.

ನರೇಗಾ ಯೋಜನೆ ಬಳಸಿ ಸರ್ಕಾರಿ ಶಾಲೆ ಹೀಗೂ ಅಭಿವೃದ್ಧಿಪಡಿಸಲು ಸಾಧ್ಯ ಎಂಬ ಸಂದೇಶವನ್ನು ತಟ್ಟೆಕೆರೆ ಗ್ರಾಮ ಪಂಚಾಯಿತಿ ಕಲಿಸಿದ್ದು ದಾಖಲಾತಿಗೆ ಪೋಷಕರು ಸಾಥ್ ನೀಡಿ ಮಾದರಿಯಾಗಿರಿ.
ರೇವಣ್ಣ, ಬಿಇಒ, ಹುಣಸೂರು
ಸರ್ಕಾರಿ ಶಾಲೆ ಉಳಿವಿಗೆ ತಟ್ಟೆಕೆರೆ ಪಂಚಾಯಿತಿ ಕೈಗೊಂಡ ಅಭಿವೃದ್ಧಿ ಕಾರ್ಯ ಶ್ಲಾಘನೀಯಶಾಲೆ ಬೆಳವಣಿಗೆಗೆ ಗ್ರಾಮಸ್ಥರ ಸ್ಪಂದನೆ ಬೇಕಾಗಿದೆ.
ಬಿ.ಕೆ.ಮನು, ತಾ.ಪಂ. ಇಒ
ಸರ್ಕಾರಿ ಶಾಲೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಂಡಿದ್ದು ಮುಂದಿನ ಸಾಲಿನಲ್ಲಿ ಉತ್ತಮ ದಾಖಲೆ ನಿರೀಕ್ಷೆಯಲ್ಲಿದ್ದೇವೆ. ದಾಖಲಾತಿ ಪರಿಗಣಿಸಿ ಇಲಾಖೆ ಶಿಕ್ಷಕರನ್ನು ನಿಯೋಜಿಸಬೇಕು.
ಜಯಶಂಕರ್, ಮುಖ್ಯಶಿಕ್ಷಕ
ಸುಸಜ್ಜಿತವಗಿ ನಿರ್ಮಾಣಗೊಂಡ ಕಬಡ್ಡಿ ಕೋಟ್‌ನಲ್ಲಿ ಆಟವಾಡುತ್ತಿರುವ ಮಕ್ಕಳು
ಸುಸಜ್ಜಿತವಗಿ ನಿರ್ಮಾಣಗೊಂಡ ಕಬಡ್ಡಿ ಕೋಟ್‌ನಲ್ಲಿ ಆಟವಾಡುತ್ತಿರುವ ಮಕ್ಕಳು
ಸರ್ವತೋಮುಖ ಅಭಿವೃದ್ಧಿ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಸರ್ವತೋಮುಖ ಅಭಿವೃದ್ಧಿ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT