ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಿನಲ್ಲಿ ಕಲಿತ ವೈದ್ಯರಿಂದ ಸೇನೆಯಲ್ಲಿ ಸೇವೆ

ಎಂಎಂಸಿಆರ್‌ಐನ 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
Published 1 ಜುಲೈ 2024, 7:34 IST
Last Updated 1 ಜುಲೈ 2024, 7:34 IST
ಅಕ್ಷರ ಗಾತ್ರ

ಮೈಸೂರು: ವೈದ್ಯಕೀಯ ಶಿಕ್ಷಣ ಪಡೆದವರಲ್ಲಿ ಬಹುತೇಕರು ತಮ್ಮದೇ ಕ್ಲಿನಿಕ್ ಅಥವಾ ಆಸ್ಪತ್ರೆ ನಡೆಸಲು ಆದ್ಯತೆ ನೀಡುವುದು ಕಂಡುಬರುತ್ತದೆ. ಆದರೆ, ಇವರು ಸೇನೆಯಲ್ಲಿ ಸೇವೆ ಸಲ್ಲಿಸಿ ಗಮನಸೆಳೆದಿದ್ದಾರೆ. ಸೈನಿಕರಿಗೆ ಆರೋಗ್ಯ ಸೇವೆ ನೀಡಿದವರಲ್ಲಿ ಅಧಿಕ ಮಂದಿ ಮೈಸೂರಿನ ವೈದ್ಯಕೀಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೂ ಇದ್ದಾರೆ.

ಶತಮಾನೋತ್ಸವದ ಸಂಭ್ರಮದಲ್ಲಿರುವ ಈ ಕಾಲೇಜಿನ (ಎಂಎಂಸಿಆರ್‌ಐ) 150ಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ; ಈಗಲೂ ಸಲ್ಲಿಸುತ್ತಿದ್ದಾರೆ. ಈಚೆಗೆ ಇವರೆಲ್ಲಾ ಕಾಲೇಜಿನಲ್ಲಿ ಸೇರಿಕೊಂಡು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದು, ಸುಮಾರು 60 ನಿವೃತ್ತ ಯೋಧರು ಜೊತೆಗೆ ಸೇರಿದ್ದರು. ಯುದ್ಧದ ಸಮಯದ ತಮ್ಮ ಅನುಭವಗಳನ್ನು ಅಲ್ಲಿ ಹಂಚಿಕೊಂಡರು.

ಎಂಬಿಬಿಎಸ್‌ ಶಿಕ್ಷಣ ಮುಗಿದ ಕೂಡಲೇ ‘ಶಾರ್ಟ್‌ ಸರ್ವೀಸ್‌ ಕಮಿಷನ್‌’ ಮೂಲಕ ಸೇನೆಗೆ ಸೇರ್ಪಡೆಯಾಗುವ ಅವಕಾಶವಿದೆ. ಅಲ್ಲಿ ತೇರ್ಗಡೆಯಾದ ಬಳಿಕ ಭೂ ಸೇನೆ, ವಾಯು ಸೇನೆ, ನೌಕಾ ಸೇನೆ ಆಯ್ದುಕೊಂಡು 6 ವರ್ಷ ಕರ್ತವ್ಯ ನಿರ್ವಹಿಸಬೇಕು. ನಂತರ ಜೀವನ ಪೂರ್ತಿ ಅಲ್ಲೇ ಕರ್ತವ್ಯ ನಿರ್ವಹಿಸುವ ಅವಕಾಶವೂ ಇದೆ. ಈ ನಡುವೆ ಎಂಬಿಬಿಎಸ್‌ ಮುಗಿಸಿ ತೆರಳಿದವರಿಗೆ ಆರ್ಮ್‌ ಫೋರ್ಸ್ ಮೆಡಿಕಲ್‌ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಅವಕಾಶವೂ ಇದೆ.

ಅತ್ಯುನ್ನತ ಹುದ್ದೆ: 1924ರಲ್ಲಿ ಆರಂಭಗೊಂಡ ಈ ಕಾಲೇಜಿನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇದೇ ರೀತಿ ಸೇನೆಯನ್ನು ಆಯ್ದುಕೊಂಡು 6 ವರ್ಷ ಹಾಗೂ ಜೀವನದುದ್ದಕ್ಕೂ ಸೇವೆ ಸಲ್ಲಿಸಿದ್ದಾರೆ. ಬಾಂಗ್ಲಾ, ಪಾಕಿಸ್ತಾನದ ವಿರುದ್ಧದ ಯುದ್ಧದ ಸಂದರ್ಭದಲ್ಲೂ ಸೇವೆ ಸಲ್ಲಿಸಿದ್ದಾರೆ. ಸೂರ್ಯನಾರಾಯಣ ಅವರು ಸೇನೆಯ ಅತ್ಯುನ್ನತ ಹುದ್ದೆಯಾದ ರಿಯಲ್‌ ಅಡ್ಮಿರಲ್‌ನ್ನೂ ಅಲಂಕರಿಸಿದ್ದಾರೆ. ಸಶಸ್ತ್ರ ಸೇನಾ ಪಡೆಯ ಮೊದಲ ಮಹಿಳಾ ಶಸ್ತ್ರಚಿಕಿತ್ಸಕಿ ಫರಿದಾ ರೆಹಾನಾ ಅವರೂ ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ.

‘ಸಶಸ್ತ್ರ ಪಡೆಯಲ್ಲಿ ಮೂರು ರೀತಿಯ ವಿಭಾಗವಿದೆ. ಗಡಿಭಾಗದಲ್ಲಿ ಯುದ್ಧ ಭೂಮಿ, ಪೀಕ್‌ ಸ್ಟೇಷನ್‌ಗಳಲ್ಲಿ, ಸೂಕ್ಷ್ಮ ಪ್ರದೇಶದಲ್ಲಿ ಕೆಲಸ ಮಾಡಬೇಕಾಗುತ್ತದೆ. ಆರಂಭದಲ್ಲಿ ಕೆಲಸಕ್ಕೆ ಸೇರಿದಾಗ ಯುದ್ಧ ಭೂಮಿಯಲ್ಲಿ ಸೈನಿಕರಿಗೆ ಚಿಕಿತ್ಸೆ ನೀಡುವ ಕೆಲಸ ಇರುತ್ತದೆ. ಅಲ್ಲಿ ವಾಸಿಯಾಗದ ಗಾಯವಿದ್ದರೆ ಹಿಲ್‌ ಸ್ಟೇಷನ್‌ನ ಮಿಲಿಟರಿ ಆಸ್ಪತ್ರೆಗೆ ಕರೆತರಲಾಗುತ್ತದೆ. ವಿಶೇಷ ಚಿಕಿತ್ಸೆಗಳು ಲಭ್ಯವಿರುತ್ತದೆ. ಅಲ್ಲಿಗಿಂತಲೂ ಹೆಚ್ಚಿನ ಚಿಕಿತ್ಸೆ ಬೇಕಿದ್ದೆ ಕಮಾಂಡ್‌ ಆಸ್ಪತ್ರೆಗೆ ರೋಗಿಯನ್ನು ಸ್ಥಳಾಂತರಿಸುತ್ತಾರೆ. ಇಲ್ಲಿ ವಿಶೇಷ ತಜ್ಞರಿರುತ್ತಾರೆ’ ಎಂದು ಕ್ಯಾ.ರಾಮಚಂದ್ರ ‘ಪ್ರಜಾವಾಣಿ’ ಗೆ ತಿಳಿಸಿದರು.

‘ಶಾರ್ಟ್‌ ಸರ್ವೀಸ್‌ ಕಮಿಷನ್‌ ಅವಧಿಯ ಬಳಿಕವೂ ಸೇನೆಯಲ್ಲಿ ಮುಂದುವರಿಯುವವರು ಪ್ರವೇಶ ಪರೀಕ್ಷೆ ಬರೆದು ವಿಶೇಷ ಕೋರ್ಸ್‌ಗಳನ್ನು ಮಾಡಬಹುದು. ನಂತರ ಅಲ್ಲೇ ತಜ್ಞರಾಗಿ ಕೆಲಸ ಮಾಡಬಹುದಾಗಿದೆ. ಅವರು ಕಮಾಂಡ್‌ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ’ ಎಂದು ಹೇಳಿದರು

ಯೋಧರನ್ನು ಉಪಚರಿಸುವುದು: ‘ಸೇನೆಗೆ ಆಯ್ಕೆಯಾದ ವೈದ್ಯರು ಯುದ್ಧದ ಸಮಯದಲ್ಲಿ ಸೈನಿಕರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಾರೆ. ಇತರ ದಿನಗಳಲ್ಲಿ ಕಠಿಣ ತರಬೇತಿ ಪಡೆಯುವ ಯೋಧರನ್ನು ಉಪಚರಿಸುವ ಕೆಲಸ ಇರುತ್ತದೆ. ಸುದೀರ್ಘ ಸಮಯದ ಕರ್ತವ್ಯವನ್ನು ಆಯ್ಕೆ ಮಾಡಿಕೊಂಡರೆ ವಿಶೇಷ ತಜ್ಞರಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ಇರುತ್ತದೆ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಶೇ 10ರಷ್ಟು ಮೀಸಲಾತಿ ಇರುತ್ತದೆ. ಅಲ್ಲಿ ಸೇನೆಯಲ್ಲಿನ ಸೇವಾವಧಿ ಪರಿಗಣಿಸಿ ವೇತನ ಹೆಚ್ಚಳ ಮಾಡುತ್ತಾರೆ. ಪಾಲಿಕೆಯಲ್ಲಿ ನಿವೃತ್ತ ಯೋಧರಿಗೆ ಮನೆ ತೆರಿಗೆಯಲ್ಲಿ ಶೇ 50ರಷ್ಟು ರಿಯಾಯಿತಿ ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆಯಲ್ಲಿ ಕೆಲಸ ಮಾಡಲು ಮುಂದೆ ಬರಬೇಕು’ ಎಂದು ತಿಳಿಸಿದರು.

ಶಾರ್ಟ್‌ ಸರ್ವೀಸ್‌ ಕಮಿಷನ್‌ ಮೂಲಕ ಕರ್ತವ್ಯ ನಿರ್ವಹಿಸಿದ ವೈದ್ಯರು ನಂತರ ಅವರವರ ಊರಿಗೆ ವಾಪಸಾಗಿ ಬಂದು ಉಪನ್ಯಾಸಕರಾಗಿ, ಸರ್ಕಾರಿ ವೈದ್ಯರಾಗಿ, ಖಾಸಗಿ ಕ್ಲಿನಿಕ್‌ಗಳಲ್ಲಿ ಸೇವೆ ಮುಂದುವರಿಸಿದ್ದಾರೆ.

ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಕಾಲೇಜು
ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಕಾಲೇಜು
ಶತಮಾನೋತ್ಸವದ ಕಾರ್ಯಕ್ರಮದಲ್ಲಿ 60 ನಿವೃತ್ತ ಯೋಧರು ಭಾಗಿ ಬಾಂಗ್ಲಾದೇಶ, ಪಾಕ್‌ ವಿರುದ್ಧದ ಯುದ್ಧಗಳಲ್ಲಿ ಭಾಗಿ 1924ರಲ್ಲಿ ಆರಂಭವಾದ ಕಾಲೇಜು
ಎಂಬಿಬಿಎಸ್‌ ಮಾಡಿ ದೇಶ ಸೇವೆಗೆ ತೆರಳಿರುವುದು ಕಾಲೇಜಿಗೆ ಹೆಮ್ಮೆ ತರುವ ವಿಚಾರ. ಶತಮಾನೋತ್ಸವ ಸಮಯದಲ್ಲಿ ಅವರನ್ನು ಕರೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದೆ
ಡಾ.ಕೆ.ಆರ್‌.ದಾಕ್ಷಾಯಿಣಿ ನಿರ್ದೇಶಕಿ ಎಂಎಂಸಿಆರ್‌ಐ
ಮೊದಲ ಮಹಿಳಾ ಪ್ಯಾರಾಟ್ರೂಪರ್ ಫರಿದಾ ರೆಹಾನಾ
ಮೈಸೂರು ವೈದ್ಯಕೀಯ ಕಾಲೇಜಿನ 1965ನೇ ಬ್ಯಾಚ್‌ನಲ್ಲಿ ವ್ಯಾಸಂಗ ಮಾಡಿದ ಫರಿದಾ ರೆಹನಾ ಸೇನೆಯ ಮೊದಲ ಮಹಿಳಾ ಪ್ಯಾರಾಟ್ರೂಪರ್‌ ಆಗಿದ್ದರು. ಅವರು 1971ರಲ್ಲಿ ಸೇನೆಗೆ ಪ್ರಥಮ ಮಹಿಳಾ ಶಸ್ತ್ರ ಚಿಕಿತ್ಸಕಿಯಾಗಿ ಸೇರ್ಪಡೆಗೊಂಡಿದ್ದರು. ಮುಖ್ಯವಾಗಿ ಬಾಂಗ್ಲಾದೇಶದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದಾರೆ. ಸೇನೆಯಲ್ಲಿ ಮಹಿಳಾ ಪ್ಯಾರಾಟ್ರೂಪರ್‌ಳು ಹೋಗದೇ ಇದ್ದ ಕಾಲದಲ್ಲಿ ತರಬೇತಿಯಲ್ಲಿ ಅಸಾಧಾರಣ ಸಾಹಸ ತೋರಿ ಆಯ್ಕೆಯಾಗಿದ್ದರು. ಸಾವಿರಕ್ಕಿಂತಲೂ ಅಧಿಕ ಬಾರಿ ಪ್ಯಾರಾಟ್ರೂಪ್‌ ಮೂಲಕ ಶತ್ರುಗಳ ನೆಲಕ್ಕೆ ತೆರಳಿ ಅಲ್ಲಿನ ಮಾಹಿತಿ ಪಡೆದಿದ್ದರು. ನಂತರ ಶಾಂತಾ ಎಂಬುವವರೂ ಇದೇ ಕಾರ್ಯಕ್ಕೆ ತೆರಳಿದ್ದರು.
ಕೊಡಗಿನ ವೀರನ ಕಾರ್ಗಿಲ್‌ ನೆನಪು ಲೆ.ಜನರಲ್‌ ಮಹಾವೀರ ಪ್ರಸಾದ್‌
1978–79ರಲ್ಲಿ ಕಾರ್ಗಿಲ್‌ನಲ್ಲಿ ಫೀಲ್ಡ್‌ ಆಂಬುಲೆನ್ಸ್ ಹಾಗೂ ಎಂಐ ಕೊಠಡಿಯಲ್ಲಿ ಕೆಲಸ ಮಾಡಿದ್ದರು. ಅವರು ಕಾರ್ಗಿಲ್‌ನ ತೆರಾಜ್‌ನ ಶೀತಲ ಪ್ರದೇಶದಲ್ಲಿದ್ದಾಗ ಹಿಮಪಾತವಾಗಿತ್ತು. ಅದರಲ್ಲಿ ಇವರು ಮುನ್ನುಗ್ಗಿ 10 ಜನ ಸಿಕ್ಕಿಹಾಕಿಕೊಂಡಿದ್ದರು. ಹವಾಮಾನ ವೈಪರೀತ್ಯದಿಂದಾಗಿ ಗಾಯಾಳುಗಳನ್ನು ಕರೆದೊಯ್ಯಲು ಚಾಪರ್‌ (ಸೇನಾ ಹೆಲಿಕಾಪ್ಟರ್‌) ಬರಲೂ ಸಾಧ್ಯವಾಗಿರಲಿಲ್ಲ. ಈ ಸಂಕಷ್ಟದ ಸಮಯದಲ್ಲೂ ಎರಡು ದಿನ ಅಲ್ಲಿಯೇ ಚಿಕಿತ್ಸೆ ನೀಡಿ ವಾತಾವರಣ ಸರಿಯಾದ ಬಳಿಕ ಬೇರೆಡೆ ಸ್ಥಳಾಂತರ ಮಾಡಿ 7 ಜನರನ್ನು ಬದುಕಿಸಿದ್ದರು. ಇದಕ್ಕಾಗಿ ಅವರಿಗೆ ಸೇನೆಯು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸೇನೆಯಲ್ಲಿ ಸೇವೆ ಸಲ್ಲಿಸಿದ ದಂಪತಿ
ಬಿ.ಎನ್‌.ರಾಜೀವ್‌ ಹಾಗೂ ಕಲಾ ಆರ್‌. ಸ್ವಾಮಿ ದಂಪತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರೂ ಕ್ರಮವಾಗಿ ಮೈಸೂರು ವೈದ್ಯಕೀಯ ಕಾಲೇಜಿನ 1980 ಹಾಗೂ 1982 ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದರು. ರಾಜೀವ್ ನೌಕಾಪಡೆಯಲ್ಲಿ 1986ರಿಂದ 2008ರವರೆಗೆ ವಿಂಗ್‌ ಕಮಾಂಡರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕಲಾ ಅವರು ಶಾರ್ಟ್‌ ಸರ್ವೀಸ್‌ ಕಮಿಷನ್‌ ಮೂಲಕ 6 ವರ್ಷ ಸೇವೆ ಸಲ್ಲಿಸಿದ್ದರು. ‘ಯುದ್ಧ ಭೂಮಿಯಲ್ಲಿ ಸೈನಿಕರಿಗೆ ಚಿಕಿತ್ಸೆ ನೀಡಿದಾಗ ಅವರಿಗಾಗುವ ಆನಂದ ವಿಶಿಷ್ಟವಾದುದು. ಲಡಾಕ್‌ನಂಥ ಕಡೆ ಕೆಲಸ ಮಾಡುವಾಗ ಸಂಪರ್ಕವೇ ಸಾಧ್ಯವಿರಲಿಲ್ಲ. ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಸೈನಿಕರಲ್ಲಿದ್ದ ಜೋಶ್‌ ವಿಶೇಷ ಅನುಭವ ಮಾಡಿದೆ. ಈ ಅನುಭವವನ್ನು ಎಲ್ಲರೂ ಪಡೆಯಬೇಕು’ ಎಂದು ರಾಜೀವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT