ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಭವಿಷ್ಯದ ಅಂಬಾರಿ ಆನೆ ಇನ್ನಿಲ್ಲ

Last Updated 23 ನವೆಂಬರ್ 2022, 18:40 IST
ಅಕ್ಷರ ಗಾತ್ರ

ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ಕಾಡಾನೆ ದಾಳಿಗೆ ಈಡಾಗಿ ತೀವ್ರವಾಗಿ ಗಾಯಗೊಂಡಿದ್ದ, ‘ಭವಿಷ್ಯದ ಅಂಬಾರಿ ಆನೆ’ ಎಂದೇ ಬಿಂಬಿತವಾಗಿದ್ದ ‘ಗೋಪಾಲಸ್ವಾಮಿ’ (39) ಬುಧವಾರ ಮೃತಪಟ್ಟಿತು. ‘ಮತ್ತಿಗೋಡು ಆನೆ ಶಿಬಿರ’ದಲ್ಲಿದ್ದ ಆನೆಯು 2012ರಿಂದ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿತ್ತು.

‘ಮೇಯುವ ಸಲುವಾಗಿ ನೇರಳಕುಪ್ಪೆ ‘ಬಿ’ ಹಾಡಿಯ ಕ್ಯಾಂಪಿನಿಂದ ಬಿಟ್ಟಿದ್ದ ವೇಳೆಯಲ್ಲಿ, ಮಸ್ತಿಯಲ್ಲಿದ್ದ ಕಾಡಾನೆಯು ಗೋಪಾಲಸ್ವಾಮಿ ಮೇಲೆ ದಾಳಿ ಮಾಡಿ ಮುಂಗಾಲಿನ ಮೂಳೆ ಮುರಿದಿತ್ತು. ಹಿಂಭಾಗಕ್ಕೂ ತೀವ್ರವಾಗಿ ಗಾಯಗೊಳಿಸಿತ್ತು’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾದಾಟದಲ್ಲಿ ಇದ್ದಾಗಲೇ ಗೋಪಾಲಸ್ವಾಮಿ ಮಾವುತ ಮತ್ತು ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ’ ಎಂದರು.

‘ಮೈಸೂರು ಮೃಗಾಲಯದ ವೈದ್ಯ ಡಾ.ಮದನ್‌, ಇಲಾಖೆಯ ಪಶುವೈದ್ಯರಾದ ಡಾ.ರಮೇಶ್ ಮತ್ತು ಡಾ.ಚಿಟ್ಟಿಯಪ್ಪ ಮಂಗಳವಾರ ಮಧ್ಯಾಹ್ನದಿಂದಲೂ ಚಿಕಿತ್ಸೆ ನೀಡಿದ್ದರು. ಸ್ಪಂದಿಸದೇ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಮೃತಪಟ್ಟಿತು’ ಎಂದು ಮಾಹಿತಿ ನೀಡಿದರು.

ತುಂಬಲಾರದ ನಷ್ಟ: ‘ಮೂರು ವರ್ಷದ ನಂತರ ‘ಅಭಿಮನ್ಯು’ (67) ಆನೆಗೆ ಅಂಬಾರಿ ಹೊರಿಸುವಂತಿಲ್ಲ. ಗೋಪಾಲಸ್ವಾಮಿ ಅಭಿಮನ್ಯುವಿನ ಸ್ಥಾನ ತುಂಬಲಿದ್ದ. ಸೌಮ್ಯ ಸ್ವಭಾವದ ಬಲಾಢ್ಯ ಆನೆಯನ್ನು ಕಳೆದುಕೊಂಡಂತಾಗಿದೆ’ ಎಂದು ಡಿಸಿಎಫ್‌ ಡಾ.ವಿ.ಕರಿಕಾಳನ್‌ ವಿಷಾದಿಸಿದರು.

ಸಕಲ ಗೌರವದೊಂದಿಗೆ ಧಾರ್ಮಿಕ ವಿಧಿವಿಧಾನದಂತೆ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT