ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಶೈಲಿಗೆ ಹೊರಳುವುದು ಇಂದಿನ ತುರ್ತು: ಡಾ.ಸೌಮ್ಯಾ ಸ್ವಾಮಿನಾಥನ್‌ ‍

Published 5 ಜುಲೈ 2023, 6:51 IST
Last Updated 5 ಜುಲೈ 2023, 6:51 IST
ಅಕ್ಷರ ಗಾತ್ರ

ಮೈಸೂರು: ‘ಆಧುನಿಕ ಜೀವನ ಶೈಲಿಯು ಆಹಾರ ಪದ್ಧತಿಯನ್ನೇ ಬದಲಿಸಿದ್ದು, ರೋಗ ನಿರೋಧಕತೆ, ಅಪೌಷ್ಟಿಕತೆ ಹಾಗೂ ಅನಾರೋಗ್ಯ ಭಾದಿಸುತ್ತಿದೆ. ಸಾಂಪ್ರದಾಯಿಕ ಆಹಾರ ಪದ್ಧತಿಗೆ ಮತ್ತೆ ಹೊರಳುವುದು ಇಂದಿನ ತುರ್ತಾಗಿದೆ’ ಎಂದು ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್‌ ‍ಪ್ರತಿಪಾದಿಸಿದರು.

ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಆಯೋಜಿಸಿರುವ ‘ಒಂದು ವಾರ, ಒಂದು ಪ್ರಯೋಗಾಲಯ’– ಆಹಾರ ಸಂಶೋಧನೆಯ ಸಂಭ್ರಮೋತ್ಸವದಲ್ಲಿ ಮಂಗಳವಾರ ‘ಮಹಿಳಾ ಸ್ವಸಹಾಯ ಸಂಸ್ಥೆಗಳು ಮತ್ತು ರೈತ ಉದ್ಯಮ’ ಕುರಿತ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿದರು.

‘ದೇಶದ ಬುಡಕಟ್ಟು ಸಮುದಾಯಗಳು ಆಹಾರ ಪರಂಪರೆಯನ್ನು ರಕ್ಷಿಸಿವೆ. ಧಾನ್ಯಗಳ ಕಣಜವನ್ನು ಶತಮಾನಗಳಿಂದಲೂ ಕಾಪಿಟ್ಟುಕೊಂಡಿವೆ. ಸರ್ಕಾರ ಅಥವಾ ಯಾವುದೇ ಶಕ್ತಿಗಳು ಅವುಗಳಿಗೆ ಬೆಂಬಲವಾಗಿ ನಿಲ್ಲಬೇಕೇ ಹೊರತು, ಅಭಿವೃದ್ಧಿ ಹೆಸರಿನಲ್ಲಿ ಸಮುದಾಯಗಳ ಅಸ್ಮಿತೆಗೆ ಧಕ್ಕೆ ತರಬಾರದು. ಸಮುದಾಯಗಳ ರಕ್ಷಣೆಯಲ್ಲಿಯೇ ದೇಶದ ಜೀವ ವೈವಿಧ್ಯದ ಉಳಿವು ಅಡಗಿದೆ’ ಎಂದು ಅಭಿಪ್ರಾಯ‍ಪಟ್ಟರು.

‘ಬುಟಕಟ್ಟು ಹಾಗೂ ಹಿಂದುಳಿದ ಸಮುದಾಯಗಳು ಹಸಿವಿನ ವಿರುದ್ಧವೂ ಹೋರಾಟ ನಡೆಸುತ್ತಿವೆ. ಆರೋಗ್ಯಪೂರ್ಣ ದೇಶವಾಗಲು ಪೌಷ್ಟಿಕ ಆಹಾರ ಅವರನ್ನು ತಲುಪಬೇಕು. ರೈತರು ಬೆಳೆದ ಆಹಾರ ಧಾನ್ಯಗಳು, ಉತ್ಪನ್ನಗಳು ತಲುಪಬೇಕು. ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಬಂಧ ಏರ್ಪಡಬೇಕು’ ಎಂದು ಅಭಿ‍ಪ್ರಾಯಪಟ್ಟರು.

ರೈತ ಶಿಕ್ಷಣ ನೀಡಿ:

‘ಶಾಲೆಗಳಲ್ಲಿ ಕೈತೋಟಗಳನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳಿಗೆ ರೈತರ ಬದುಕನ್ನು ಅರ್ಥೈಸುವ ಜೊತೆಗೆ ರೈತರ ಬದುಕು ಹಾಗೂ ಪರಿಸರದ ಮಹತ್ವವನ್ನು ತಿಳಿಸಬೇಕು. ಪರಿಸರ ಕೇಂದ್ರಿತ ಶಿಕ್ಷಣವನ್ನು ನೀಡಬೇಕು. ಆಗ ಮಾತ್ರ ದೇಶದ ಜನರು ಎದುರಿಸುತ್ತಿರುವ ಅಪೌಷ್ಟಿಕತೆ, ತೂಕ ಹೆಚ್ಚಳ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರವಿದೆ’ ಎಂದು ಸೌಮ್ಯಾ ಸ್ವಾಮಿನಾಥನ್‌ ಹೇಳಿದರು.

‘ಮಹಿಳೆಯ ಸ್ವಾವಲಂಬಿ ಜೀವನ ನಡೆಸಲು ಕಿರು ಉದ್ಯಮಗಳನ್ನು ಸ್ಥಾ‍ಪಿಸಲು ನೆರವಾಗಬೇಕು. ದೇಶವು ಸಿರಿಧಾನ್ಯ ಉತ್ಪಾದನೆಯಲ್ಲಿ ವಿಶ್ವಕ್ಕೆ ಮೊದಲ ಸ್ಥಾನವಿದ್ದು, ಸಿರಿಧಾನ್ಯ ಉತ್ಪನ್ನಗಳ ಉದ್ಯಮಗಳ ಸ್ಥಾಪಿಸಿದ್ದರೆ, ಅದಕ್ಕೆ ಮಾರುಕಟ್ಟೆಯನ್ನು ಒದಗಿಸುವ ಜವಾಬ್ದಾರಿಯನ್ನು ಸರ್ಕಾರ ತೋರಬೇಕು’ ಎಂದರು.

ಪಶ್ಚಿಮ ಬಂಗಾಳದ ವಿದ್ಯುತ್‌ ನಿಯಂತ್ರಣ ಆಯೋಗದ ಮುಖ್ಯಸ್ಥ ಡಾ.ಎಂ.ವಿ.ರಾವ್‌ ಮಾತನಾಡಿ, ‘ಕೃಷಿ ವಲಯಕ್ಕೂ ನ್ಯಾನೋ ತಂತ್ರಜ್ಞಾನ ಪ್ರವೇಶಿಸಿದೆ. ನ್ಯಾನೊ ಯೂರಿಯಾ ಬಂದಿರುವುದರಿಂದ ಕ್ವಿಂಟಲ್ ಗೊಬ್ಬರ ಚೀಲದ ಬದಲು ಅರ್ಧ ಲೀಟರ್‌ ನ್ಯಾನೋ ಯೂರಿಯಾ ಬಳಸಬಹುದು. ಅದರಿಂದ ಸಾಗಣೆ, ಉತ್ಪಾದನಾ ವೆಚ್ಚಗಳು ತಗ್ಗಲಿದೆ’ ಎಂದರು.

ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣಸಿಂಗ್‌ ಇದ್ದರು.

ಮಕ್ಕಳ ಆಹಾರ: ಇರಲಿ ಎಚ್ಚರ

‘ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಾಗಿದ್ದು ಸಾಂಪ್ರದಾಯಿಕ ತಿನಿಸಿನ ಬದಲು ಕುರುಕಲು ತಿಂಡಿಗಳು ಸೇರಿವೆ. ಅದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪೋಷಕರು ಎಚ್ಚರವಹಿಸಬೇಕು’ ಎಂದು ಸೌಮ್ಯಾ ಸ್ವಾಮಿನಾಥನ್‌ ಕಳವಳ ವ್ಯಕ್ತಪಡಿಸಿದರು. ‘ಪೌಷ್ಟಿಕ ಆಹಾರ ನೀತಿಗಳನ್ನು ಜಾರಿಗೊಳಿಸಬೇಕು. ಆರೋಗ್ಯ ‍ಜೀವನ ಶೈಲಿಗೆ ಹಣಕಾಸು ನೀತಿಗಳನ್ನು ನೀರೂಪಿಸಬೇಕು ಶಾಲೆಗಳಲ್ಲಿ ಆಹಾರ ಮತ್ತು ಪೌಷ್ಟಿಕ ನೀತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು’ ಎಂದರು.

ಸಿಎಫ್‌ಟಿಆರ್‌ಐನಲ್ಲಿ ಏರ್ಪಡಿಸಿದ್ದ ಅಡುಗೆ ಸ್ಪರ್ಧೆಯಲ್ಲಿ ತಿನಿಸು ಸಿದ್ಧಪಡಿಸಿದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ
ಸಿಎಫ್‌ಟಿಆರ್‌ಐನಲ್ಲಿ ಏರ್ಪಡಿಸಿದ್ದ ಅಡುಗೆ ಸ್ಪರ್ಧೆಯಲ್ಲಿ ತಿನಿಸು ಸಿದ್ಧಪಡಿಸಿದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ

ಮೂರು ಉತ್ಪನ್ನಗಳ ಬಿಡುಗಡೆ

  • ಗ್ಲುಟೇನ್‌ ಮುಕ್ತ ಕೇಕ್‌ ಮಿಶ್ರಣ: ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲು ‘ಗ್ಲುಟೇನ್‌ ಮುಕ್ತ ಕೇಕ್‌ ಮಿಶ್ರಣ’ವನ್ನು ಸಿಎಫ್‌ಟಿಆರ್‌ಐ ಬಿಡುಗಡೆ ಮಾಡಿದೆ. ಗೋಧಿ ಹಿಟ್ಟು ಸಕ್ಕರೆ ಅಂಶವಿದ್ದು ನೀರು ಅಥವಾ ಹಾಲು ಮೊಟ್ಟೆ ಹಾಗೂ ಅಡುಗೆ ಎಣ್ಣೆ ಮಿಶ್ರಣ ಮಾಡಿ ಕೇಕ್‌ಅನ್ನು ಸುಲಭವಾಗಿ ತಯಾರಿಸಬಹುದು.

  • ಫೈಬರ್‌ಯುಕ್ತ ರಸ್ಕ್‌: ಹೆಚ್ಚಿನ ಫೈಬರ್‌ ಅಂಶವುಳ್ಳ ರಸ್ಕ್‌ ಇದಾಗಿದೆ. ಪ್ರೋಟಿನ್‌ಯುಕ್ತವಾಗಿದ್ದು ಗರಿಗರಿಯಾಗಿರುವ ರಸ್ಕ್‌ ಅನ್ನು ಮಕ್ಕಳಿಗೆ ನೀಡಬಹುದು.

  • ಮಸಾಲೆ ಬ್ರೆಡ್‌: ಗೋಧಿಯಿಂದ ತಯಾರಿಸಿರುವ ಬ್ರೆಡ್‌ ಆಗಿದ್ದು ಮಸಾಲೆಯನ್ನು ಸೇರಿಸಲಾಗಿದೆ. ಜ್ವರದಿಂದ ಹಾಗೂ ಇತರೆ ರೋಗದಿಂದ ಬಳಲುತ್ತಿರುವವರಿಗೆ ಚೈತನ್ಯದಾಯಕ ತಿನಿಸಾಗಿದೆ.

ನಾಳೆಯಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ

ಸಿಎಫ್‌ಟಿಆರ್‌ಐನ ಸಂಶೋಧನೆ ಹಾಗೂ ಉತ್ಪನ್ನಗಳ ಮಾಹಿತಿಯನ್ನು ತಿಳಿಯಲು ಸಾರ್ವಜನಿಕರಿಗೆ ಜುಲೈ 6 ಹಾಗೂ 7ರಂದು ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ.  ಆಹಾರ ತಂತ್ರಜ್ಞಾನದ ಕುರಿತು ತಜ್ಞರು ಹಾಗೂ ವಿಜ್ಞಾನಿಗಳಿಂದ ಅಗತ್ಯ ಮಾಹಿತಿಯನ್ನು ನವೋದ್ಯಮಿಗಳು ಪಡೆಯಬಹುದು. ಆಹಾರ ತಯಾರಿಕಾ ಘಟಕಗಳು ಉತ್ಪನ್ನಗಳು ಆಹಾರ ಪ್ರದರ್ಶನವೂ ಇರಲಿದೆ. ಸಿಬ್ಬಂದಿ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.  ಎರಡೂ ದಿನ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಭೇಟಿ ನೀಡಬಹುದು. ಸಂಸ್ಥೆಯ ಉತ್ತರ ದ್ವಾರದಿಂದ (ಕೆ.ಆರ್‌.ಎಸ್‌ ರಸ್ತೆಯ ಆಕಾಶವಾಣಿ ವಿವೇಕಾನಂದ ಪ್ರತಿಮೆ) ಪ್ರವೇಶವಿದೆ.

ಮಾಹಿತಿಗೆ ದೂ. 8212514534.

ಮಸಾಲೆ ಬ್ರೆಡ್‌
ಮಸಾಲೆ ಬ್ರೆಡ್‌
ಗ್ಲುಟೇನ್‌ ಮುಕ್ತ ಕೇಕ್‌ ಮಿಶ್ರಣ
ಗ್ಲುಟೇನ್‌ ಮುಕ್ತ ಕೇಕ್‌ ಮಿಶ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT