ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆಡಳಿತದಲ್ಲೂ ‘ಉರ್ದು ಕವಿಗೋಷ್ಠಿ’: ಉಪ ವಿಶೇಷಾಧಿಕಾರಿ ಸ್ಪಷ್ಟನೆ

‘ಮುಶಾಯಿರಾ’ಗೆ ಅಪಸ್ವರ: ದಸರಾ ಕವಿಗೋಷ್ಠಿ ಉಪಸಮಿತಿ ಉಪ ವಿಶೇಷಾಧಿಕಾರಿ ಸ್ಪಷ್ಟನೆ
Published 10 ಅಕ್ಟೋಬರ್ 2023, 20:50 IST
Last Updated 10 ಅಕ್ಟೋಬರ್ 2023, 20:50 IST
ಅಕ್ಷರ ಗಾತ್ರ

ಮೈಸೂರು: ದಸರಾ ಉತ್ಸವದ ಉರ್ದು ಕವಿಗೋಷ್ಠಿಯ ವಿಷಯವಾಗಿ ಬಿಜೆಪಿ ನಾಯಕರು ಪ್ರಶ್ನೆ ಎತ್ತಿರುವುದು ಚರ್ಚೆಗೆ ಕಾರಣವಾಗಿದೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಉರ್ದು ಕವಿಗೋಷ್ಠಿ ನಡೆದಿತ್ತು. ಆ ಪರಂಪರೆಯನ್ನು ಈ ಬಾರಿಯೂ ಮುಂದುವರಿಸಲಾಗಿದೆ.

2022ರ ಕವಿ‌ಗೋಷ್ಠಿಯನ್ನು ಬೆಂಗಳೂರು ರಸ್ತೆಯ ಕ್ಲಾಸಿಕ್‌ ಕನ್ವೆನ್‌ಷನ್‌ ಹಾಲ್‌ನಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಉದ್ಘಾಟಿಸಿದ್ದರು. ಆಗ ಶಾಸಕರಾಗಿದ್ದ ಎಸ್‌.ಎ.ರಾಮದಾಸ್‌, ಯತೀಂದ್ರ ಸಿದ್ದರಾಮಯ್ಯ ಜೊತೆಗೆ ತನ್ವೀರ್‌ ಸೇಠ್‌ ಪಾಲ್ಗೊಂಡಿದ್ದರು.

ಲತಾ ಹಯಾ, ಶಫೀಖ್‌ ಆಬೀದಿ, ಡಾ.ರಾಹೀ ಫಿದಾಯಿ, ರಾಜು ರಿಯಾಜ್‌, ಡಾ.ಹಾಫೀಜ್‌ ಕರ್ನಾಟಕಿ, ಆಯಿಶಾ ಚಾಂದ್‌ ಸೇರಿದಂತೆ ದೇಶದ ವಿವಿಧ ಮೂಲೆಗಳ ಉರ್ದು ಕವಿಗಳು ಶಾಹಿರಿ, ಗಜಲ್ ವಾಚಿಸಿದ್ದರು.

‘ಈ ಸಲ ಎಂದಿನಂತೆಯೇ ಮುಶಾಯಿರಾ (ಉರ್ದು ಕವಿಗೋಷ್ಠಿ) ಆಯೋಜಿಸಲಾಗಿದೆ. ದೆಹಲಿ, ರಾಜಸ್ಥಾನ, ಗುಜರಾತ್ ಸೇರಿದಂತೆ ದೇಶದ ವಿವಿಧೆಡೆಯಿಂದ ಕವಿಗಳು ಭಾಗವಹಿಸುತ್ತಿದ್ದಾರೆ. 19ರಂದು ಸಂಜೆ 7ಕ್ಕೆ ಉರ್ದು ಕವಿಗೋಷ್ಠಿಯನ್ನು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ’ ಎಂದು ‌ಉಪಸಮಿತಿಯ ಉಪ ವಿಶೇಷಾಧಿಕಾರಿ ದಾಸೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

2017ರಲ್ಲಿ ಮೊದಲ ಮುಶಾಯಿರಾ: 2017ರ ದಸರೆಯಲ್ಲೂ ಮುಶಾಯಿರ ನಡೆದಿತ್ತು. ಉರ್ದು ಸಾಹಿತ್ಯವನ್ನು ಪ್ರೋತ್ಸಾಹಿಸಲು ದಸರಾದಲ್ಲಿ ಮೊದಲ ಬಾರಿಗೆ ಗೋಷ್ಠಿ ನಡೆಸಲಾಗಿತ್ತು. ದೇಶದ ವಿವಿಧೆಡೆಯ 22 ಉರ್ದು ಲೇಖಕರು ಪಾಲ್ಗೊಂಡಿದ್ದರು. 2019ರಲ್ಲಿ ಜಗನ್ಮೋಹನ ಅರಮನೆಯಲ್ಲಿ ‘ವಿಖ್ಯಾತ’ ಗೋಷ್ಠಿ ನಡೆದಿತ್ತು. ಉರ್ದು, ತುಳು, ಕೊಂಕಣಿ, ಕೊಡವ ಭಾಷೆಯಲ್ಲೂ ಕವಿತೆಗಳ ವಾಚನ ನಡೆದಿತ್ತು.

ಬಿಜೆಪಿ ಮುಖಂಡರ ವಿರೋಧ: ಉರ್ದು ಕವಿಗೋಷ್ಠಿ ಆಯೋಜಿಸಿದ್ದಕ್ಕೆ ಸರ್ಕಾರದ ಮೇಲೆ ಬಿಜೆಪಿ ಶಾಸಕರಾದ ವಿ.ಸುನಿಲ್‌ ಕುಮಾರ್, ಬಸನಗೌಡ ಪಾಟೀಲ ಯತ್ನಾಳ ಅವರು  ‘ಎಕ್ಸ್‌’ (ಟ್ವೀಟ್‌) ಮೂಲಕ  ಹರಿಹಾಯ್ದಿದ್ದಾರೆ.

‘ರಾಜ್ಯ ಸರ್ಕಾರ ನಾಡಹಬ್ಬ ದಸರಾದಲ್ಲಿ ಉರ್ದು ಕವಿಗೋಷ್ಠಿಯನ್ನು ಆಯೋಜಿಸಿದೆ. ಕನ್ನಡದ ಶ್ರೀಮಂತ ಸಂಸ್ಕೃತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕಿದ್ದ ದಸರಾದಲ್ಲಿ ಉರ್ದು ಹೇರಿಕೆ ಏಕೆ? ತನ್ನ ಮತಬ್ಯಾಂಕ್‌ ಓಲೈಕೆಗಾಗಿ ಕಾಂಗ್ರೆಸ್‌ ಪಕ್ಷ ಕನ್ನಡದ ಮೇಲೆ ಉರ್ದುವನ್ನು ಹೇರುತ್ತಿದೆ. ದಸರಾದಲ್ಲಿ ನಾಡದೇವಿ ಚಾಮುಂಡಿ ಹಾಗೂ ಮೈಸೂರು ಒಡೆಯರ್ ಅವರ ವೈಭವವಾಗಬೇಕೇ ವಿನಾ ಟಿಪ್ಪು ಸಂಸ್ಕೃತಿಯಲ್ಲ’  ಎಂದು ಸುನಿಲ್‌ ಕುಮಾರ್‌ ‘ಎಕ್ಸ್‌’ನಲ್ಲಿ ಟೀಕಿಸಿದ್ದರೆ, ಬಸನಗೌಡ ಪಾಟೀಲ ಯತ್ನಾಳ, ‘ಮೈಸೂರು ದಸರಾ ಆಚರಣೆಯಲ್ಲಿ ಉರ್ದು ಕವಿಗೋಷ್ಠಿ?’ ಎಂದು ಪೋಸ್ಟ್‌ ಹಾಕಿದ್ದಾರೆ.

‘ನಾಡಹಬ್ಬ ಎಂದರೆ ಎಲ್ಲರದ್ದು’

‘ನಾಡಹಬ್ಬ ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಲ್ಲ. ಯಾವುದೇ ಸಮುದಾಯವನ್ನು ಹೊರಗಿಟ್ಟು ಮಾಡುವುದು ನಾಡಹಬ್ಬ ಹೇಗಾಗುತ್ತದೆ? ಸಮಾಜಗಳನ್ನು ವಿಮುಖಗೊಳಿಸುವ ಕೆಲಸ ಯಾರೂ ಮಾಡಬಾರದು. ಎಲ್ಲರನ್ನೂ ಒಳಗೊಳ್ಳಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಚಾಮರಾಜೇಂದ್ರ ಒಡೆಯರ್ ಅವರು ತಾರತಮ್ಯ ಮಾಡಿರಲಿಲ್ಲ’ ಎಂದು ಚಿಂತಕ ಪ್ರೊ.ಮುಜಾಫರ್‌ ಅಸ್ಸಾದಿ ‘‍‍ಪ್ರಜಾವಾಣಿ’ಗೆ ತಿಳಿಸಿದರು. ‘ಕನ್ನಡ ಪದಕೋಶದಲ್ಲಿ ಸಾವಿರಾರು ಉರ್ದು ಪದಗಳಿವೆ. ಕಂದಾಯ ಇಲಾಖೆಯಲ್ಲಿ ಬಳಸುವ ಪಹಣಿ ಪಟ್ಟ ಜೋಡಿ ಅಮಲ್ದಾರ್ ತಹಶೀಲ್ದಾರ್‌ ಸೇರಿದಂತೆ ಎಲ್ಲ ಪದಗಳೂ ಉರ್ದು. ಅವನ್ನು ತೆಗೆಯಲು ಆಗದು. ದಸರಾ ಆಚರಣೆಯಲ್ಲೂ ನೂರಾರು ಉರ್ದು ಪದಗಳಿವೆ’ ಎಂದರು. ‘ಉರ್ದು ಶ್ರೀಮಂತರ ನಡುವೆ ಹುಟ್ಟಿಲ್ಲ. ಸೇನೆಯ ಡೇರೆಗಳಲ್ಲಿ ಬಡ ಯೋಧರ ಸಂವಹನ ಭಾಷೆಯಾಗಿ ಬೆಳೆದಿದೆ. ದೇಶ ವಿಭಜನೆ ನಂತರ ಮುಸ್ಲಿಮರ ಭಾಷೆಯಂತೆ ನೋಡಲಾಗುತ್ತಿದೆ. ಅದು ಎಲ್ಲ ಸಮುದಾಯದ ಜನ ಆಡುವ ಭಾಷೆ. ಈ ಉಪಖಂಡದ ಭಾಷೆಯನ್ನು ಧರ್ಮಕ್ಕೆ ಸೀಮಿತಗೊಳಿಸಿ ಅವಕಾಶ ನೀಡದೇ ರಾಜಕೀಯಕ್ಕೆ ಬಳಸಿಕೊಂಡರೆ ಅದು ನಮಗಾದ ನಷ್ಟ’ ಎಂದು ಬೇಸರ ವ್ಯಕ್ತಪಡಿಸಿದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT