ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ– ಜೆಡಿಎಸ್‌ ವಿರುದ್ಧ ಮತ ಚಲಾಯಿಸಿ: ಕಾರ್ಮಿಕರ ಫೆಡರೇಷನ್ ಮನವಿ

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಮನವಿ
Published 13 ಏಪ್ರಿಲ್ 2024, 14:22 IST
Last Updated 13 ಏಪ್ರಿಲ್ 2024, 14:22 IST
ಅಕ್ಷರ ಗಾತ್ರ

ಮೈಸೂರು: ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿಕೂಟದ ವಿರುದ್ಧ ಕಟ್ಟಡ ಕಾರ್ಮಿಕರು ಮತ ಚಲಾಯಿಸಬೇಕು’ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಮನವಿ ಮಾಡಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್‌ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರ್ಮಾಣ ಕಾರ್ಮಿಕರ ಜೀವನೋಪಾಯದ ಮೇಲೆ ಕಳೆದ ಹತ್ತು ವರ್ಷಗಳಿಂದ ವ್ಯವಸ್ಥಿತ ದಾಳಿ ಮಾಡಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕೋವಿಡ್‌ ಲಾಕ್‌ಡೌನ್‌ಗಳಿಂದ ಕಾರ್ಮಿಕರ ಉದ್ಯೋಗ ನಷ್ಟ, ಹಸಿವು, ಅಭದ್ರತೆ ಮತ್ತು ಪ್ರಾಣಹಾನಿಗೆ ಕಾರಣವಾಗಿದೆ’ ಎಂದು ಆರೋಪಿಸಿದರು.

‘ಕೇಂದ್ರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾಯ್ದೆ ಹಾಗೂ ಅಂತರರಾಜ್ಯ ವಲಸೆ ಕಾನೂನುಗಳನ್ನು ಬಲಹೀನಗೊಳಿಸಿ ಕಾರ್ಮಿಕರ ಸೌಲಭ್ಯಗಳನ್ನು ರದ್ದುಪಡಿಸಲು ಮುಂದಾಗಿದೆ. ಕಲ್ಯಾಣ ನಿಧಿಯ ಹಣವನ್ನು ದುರ್ಬಳಕೆ ಮಾಡಿದ್ದು, ಕಾರ್ಮಿಕರ ಜೀವದ ಜೊತೆ ಚೆಲ್ಲಾಟವಾಡುವ ನಿರ್ಮಾಣ ಕಂಪನಿಗಳಿಂದ ಚುನಾವಣಾ ಬಾಂಡ್‌ ಮೂಲಕ ಸಾವಿರಾರು ಕೋಟಿ ಹಣ ಪಡೆದಿದೆ. ಯಾವುದೇ ಭದ್ರತೆಯ ಹೊಣೆ ಹೊರದೆ ಇಸ್ರೇಲ್‌ನಂಥ ಯುದ್ಧಪೀಡಿತ ದೇಶದಲ್ಲಿ ಭಾರತೀಯರನ್ನು ಕೆಲಸಕ್ಕೆಂದು ಕಳುಹಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದ ಸೌಹಾರ್ದಕ್ಕೂ ಆಪತ್ತು ತಂದಿರುವ ಬಿಜೆಪಿಗೆ 3ನೇ ಬಾರಿ ಅವಕಾಶ ನೀಡಬಾರದು. ಜೆಡಿಎಸ್‌ಗೂ ಬೆಂಬಲ ಬೇಡ. ಚಿಕ್ಕಬಳ್ಳಾಪುರದಲ್ಲಿ ಸಿಪಿಐಎಂ ಪಕ್ಷದ ಅಭ್ಯರ್ಥಿಗೆ ಹಾಗೂ ಉಳಿದೆಡೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಂ.ಬಸವಯ್ಯ, ಪ್ರಧಾನ ಕಾರ್ಯದರ್ಶಿ ನವೀನ್‌ ಕುಮಾರ್‌ ಚಿಕ್ಕಬಾಗಿಲು, ಖಜಾಂಚಿ ಸೋಮಶಂಕರ್‌, ತಾಲ್ಲೂಕು ಕಾರ್ಯದರ್ಶಿ ಕೆ.ಸಿ.ಕೃಷ್ಣ, ಜಟ್ಟಿಹುಂಡಿ ಘಟಕದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT