ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆಗೆ ಭತ್ತ ಖರೀದಿ: ನಾಳೆಯಿಂದ ನೋಂದಣಿ

Last Updated 3 ಡಿಸೆಂಬರ್ 2018, 11:38 IST
ಅಕ್ಷರ ಗಾತ್ರ

ಶಿವಮೊಗ್ಗ: ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಭತ್ತ ಮಾರಾಟ ಮಾಡಲು ಇಚ್ಚಿಸುವ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರು ಡಿ. 5ರಿಂದ 15ರವರೆಗೆ ಹೆಸರು ನೋಂದಾಯಿಸಬಹುದು.

ನೋಂದಣಿ ಹಾಗೂ ಭತ್ತದ ಗುಣಮಟ್ಟ ಪರೀಕ್ಷೆಗಾಗಿ ಜಿಲ್ಲೆಯ ಎಲ್ಲ ಕೃಷಿ ಉತ್ಪನ್ನ ಮಾರಾಟ ಸಂಸ್ಥೆಗಳಲ್ಲಿ ಪ್ರತ್ಯೇಕ ಕಚೇರಿ ತೆರೆಯಲಾಗಿದೆ. ಅಲ್ಲಿ ಗುಣಮಟ್ಟ ಪರೀಕ್ಷೆಯ ಚೀಟಿ ಪಡೆದ ನಂತರ ಸೂಚಿಸಿದ ಅಕ್ಕಿಗಿರಣಿಗಳಿಗೆ ಭತ್ತ ನೀಡಬೇಕು. ಒಟ್ಟು 43 ಗಿರಣಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಖರೀದಿಯಬಾಬ್ತುರೈತರ ಖಾತೆಗೆ ನೇರವಾಗಿ ಗಿರಣಿ ಮಾಲೀಕರೆ ಜಮೆ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ಹೊಸನಗರ ಮತ್ತು ತೀರ್ಥಹಳ್ಳಿ ಎಪಿಎಂಸಿಗಳಲ್ಲಿ ನೋಂದಣಿ ಕಾರ್ಯ ಡಿ. 5ರಿಂದ ಆರಂಭವಾಗಲಿದೆ. ಸಾಮಾನ್ಯ ಭತ್ತಕ್ಕೆ ₨ 1750 ಹಾಗೂ ‘ಎ’ ಗ್ರೇಡ್ ಭತ್ತಕ್ಕೆ ₨ 1770 ನಿಗದಿಪಡಿಸಲಾಗಿದೆ. ನೋಂದಣಿ ಸಮಯದಲ್ಲೇ ರೈತರು ಅರ್ಧ ಕೆ.ಜಿಯಷ್ಟು ಭತ್ತದ ಸ್ಯಾಂಪಲ್ ನೀಡಬೇಕು. ಗುಣಮಟ್ಟ ಪರೀಕ್ಷೆಯ ನಂತರ ನೀಡುವ ಚೀಟಿಯಲ್ಲಿ ಇರುವಂತಹ ಭತ್ತವನ್ನೇ ಅಕ್ಕಿ ಗಿರಣಿಗಳಿಗೆ ನೇರವಾಗಿ ನೀಡಬೇಕು. ಕಳಪೆ ಗುಣಮಟ್ಟದ ಭತ್ತ ಕಂಡುಬಂದರೆ ತಿರಸ್ಕರಿಸುವ ಅಧಿಕಾರ ಗಿರಣಿ ಮಾಲೀಕರಿಗೆ ಇದೆ ಎಂದರು.

ದಾಖಲೆಗಳ ಸಲ್ಲಿಕೆ: ರೈತರು ನೋಂದಣಿ ಸಮಯದಲ್ಲಿ ಪಹಣಿ, ಸಣ್ಣ, ಅತಿ ಸಣ್ಣ ರೈತರ ಹಿಡುವಳಿ ಪ್ರಮಾಣ ಪತ್ರ, ಭತ್ತದ ಸ್ಯಾಂಪಲ್ ಒದಗಿಸಬೇಕು. ಹಿಡುವಳಿ ಪ್ರಮಾಣ ಪತ್ರ ವಿತರಿಸಲು ತಾಲ್ಲೂಕು ಕಚೇರಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ಒಂದು ಅಥವಾ ಎರಡು ದಿನಗಳಲ್ಲಿ ಪ್ರಮಾಣ ಪತ್ರ ದೊರೆಯಲಿದೆ ಎಂದು ವಿವರ ನೀಡಿದರು.

ಬೆಂಬಲ ಬೆಲೆ ಯೋಜನೆ ಅನ್ವಯ ಪ್ರತಿ ರೈತರು ಗರಿಷ್ಠ 40 ಕ್ವಿಂಟಲ್ ಭತ್ತ ಮಾರಾಟ ಮಾಡಬಹುದು. ಭತ್ತ ಖರೀದಿಸಿದ ಅಕ್ಕಿ ಗಿರಣಿ ಮಾಲೀಕರು ಮಾಹಿತಿ ಆನ್‌ಲೈನ್‌ನಲ್ಲಿಅಪ್‌ಲೋಡ್ ಮಾಡಬೇಕು.ಬೇರೆ ಜಿಲ್ಲೆಗಳ ರೈತರ ಭತ್ತ ಖರೀದಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ರೈತರು ಭತ್ತ ತಂದ ಪ್ರತಿ ಖಾಲಿ ಚೀಲಕ್ಕೆ ಗಿರಣ ಮಾಲೀಕರು ₨ 6ರಂತೆ ಪಾವತಿಸುತ್ತಾರೆ ಎಂದು ಮಾಹಿತಿ ನೀಡಿದರು.

ಅಕ್ರಮ ಎಸಗಿದರೆ ಕಠಿಣ ಕ್ರಮ: ಭತ್ತ ಖರೀದಿ ಪ್ರಕ್ರಿಯೆಯಲ್ಲಿ ಗಿರಣಿ ಮಾಲೀಕರು ಅಕ್ರಮ ಎಸಗಿದರೆ, ರೈತರ ಹೆಸರು ದುರ್ಬಳಕೆ ಮಾಡಿಕೊಂಡು ಮಧ್ಯವರ್ತಿಗಳಿಂದ ಖರೀದಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಭತ್ತ ಖರೀದಿ ಪ್ರಕ್ರಿಯೆ ಡಿ. 16ರಿಂದ ಮಾರ್ಚ್‌ 31ರವರೆಗೂ ನಡೆಯಲಿದೆ. ಗಿರಣಿ ಮಾಲೀಕರು ಖರೀದಿಸಿದ ಭತ್ತ ಹಲ್ಲಿಂಗ್ ಮಾಡಿ ಆಹಾರ ನಿಗಮಕ್ಕೆ ನೀಡಲಿದ್ದಾರೆ. ಈ ಅಕ್ಕಿ ಅನ್ನಭಾಗ್ಯ ಯೋಜನೆಗೆ ಬಳಕೆಯಾಗಲಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜೆ. ಅನುರಾಧ, ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ ಜಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT