ಶನಿವಾರ, ಡಿಸೆಂಬರ್ 14, 2019
25 °C
ಮಲೆನಾಡು

ನಾಯಿಗಳಿಗೆ ಹುಲಿವೇಷ: ಮಂಗಗಳ ಹಾವಳಿ ತಪ್ಪಿಸಲು ರೈತರ ವಿನೂತನ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಲೆನಾಡಿನ ರೈತರು ತಮ್ಮ ಬೆಳೆಗಳನ್ನು ಮಂಗಗಳ ಹಾವಳಿಯಿಂದ ಉಳಿಸಿಕೊಳ್ಳಲು ವಿಭಿನ್ನ ಪ್ರಯೋಗಕ್ಕೆ ಕೈಹಾಕಿದ್ದು, ತಕ್ಕ ಮಟ್ಟಿಗೆ ಯಶಸ್ಸು ಕಂಡಿದ್ದಾರೆ.

ರೈತರು ತಮ್ಮ ಸಾಕು ನಾಯಿಗಳಿಗೆ ‘ಹುಲಿಗಳ ರೂಪ’ ಕೊಡುವ ಮೂಲಕ ಮಂಗನ ಹಾವಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಕಾಡುಪ್ರಾಣಿಗಳ ಹಾವಳಿಯಿಂದ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹೊಲ, ಗದ್ದೆಗಳಲ್ಲಿ ದೃಷ್ಟಿಗೊಂಬೆಗಳನ್ನು ಇಡುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಈ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

‘ಮಂಗಗಳು ಅತ್ಯಂತ ಸೂಕ್ಷ್ಮ ಪ್ರಾಣಿಗಳು. ಅವು ನಮ್ಮ ಎಲ್ಲಾ ತಂತ್ರಗಳನ್ನು ಕೂಡಲೇ ಅರ್ಥೈಸಿಕೊಳ್ಳುತ್ತವೆ. ನಾವು ಆಗಾಗ ತಂತ್ರಗಾರಿಕೆ ಬದಲಿಸಿಕೊಳ್ಳಬೇಕು. ಅವು ಹುಲಿಗೆ ಹೆದರಿದಷ್ಟು ಬೇರೆ ಯಾವುದಕ್ಕೂ ಹೆದರುವುದಿಲ್ಲ. ಇದನ್ನು ನಾನು ಅರ್ಥ ಮಾಡಿಕೊಂಡು ನಮ್ಮ ನಾಯಿಗಳಿಗೆ ಹುಲಿಯ ರೂಪ ನೀಡಿ, ಯಶಸ್ವಿಯಾದೆ’ ಎಂದು ತೀರ್ಥಹಳ್ಳಿ ತಾಲ್ಲೂಕಿನ ನಾಲೂರಿನ ಗೋವಾ ಉದ್ಯಮಿ ಶ್ರೀಕಂಠ ಗೌಡ ಹೇಳಿದರು.

ಶ್ರೀಕಂಠ ಗೌಡರು 53 ಎಕರೆ ಪ್ರದೇಶದಲ್ಲಿ ಅಡಕೆ ತೋಟ, ಬಾಳೆ, ಕಾಫಿ ಬೆಳೆಯನ್ನು ಬೆಳೆದಿದ್ದಾರೆ. ಮಂಗಗಳ ಹಾವಳಿಯಿಂದ ಆಗುತ್ತಿದ್ದ ನಷ್ಟವನ್ನು ತಪ್ಪಿಸಲು ಈ ಮೂಲಕ ಹೊಸ ಉಪಾಯ ಹುಡುಕಿಕೊಂಡಿದ್ದಾರೆ.

ಗೋವಾದಲ್ಲಿ ಉದ್ಯಮಿಯಾಗಿದ್ದ ಅವರು ಅಲ್ಲಿಂದ ಹುಲಿಯ ಗೊಂಬೆಯನ್ನು ತಂದು ತೋಟದಲ್ಲಿ ಇರಿಸಿದರು. ನಿರೀಕ್ಷೆಯಂತೆ ಮಂಗಗಳು ಅದನ್ನು ನೋಡಿದ ದಿನದಿಂದ ಹೆದರಿ ತೋಟಕ್ಕೆ ಬರುವುದನ್ನೇ ನಿಲ್ಲಿಸಿದವು. ಮಳೆಗಾಲದಲ್ಲಿ ಬಣ್ಣ ಮಾಸುವುದರಿಂದ ಮನೆಯ ಸಾಕು ನಾಯಿಗಳಿಗೆ ಹೇರ್‌ ಡೈ ಹಚ್ಚುವ ಮೂಲಕ ಹುಲಿ ಪಟ್ಟೆ ಬರೆದು, ಹುಲಿ ರೂಪ ನೀಡಿದರು. ಇದೇ ಪದ್ಧತಿಯನ್ನು ತೀರ್ಥಹಳ್ಳಿ ತಾಲ್ಲೂಕಿನ ಹೆಗ್ಗೋಡಿನ ರೈತರೊಬ್ಬರು ನಾಯಿಗೆ ಬಣ್ಣ ಬಳಿದು ಹುಲಿ ಮಂಗಗಳ ಕಾಟಕ್ಕೆ ಪರಿಹಾರ ಕಂಡುಕೊಂಡಿದ್ದಾರೆ.

ಇನ್ನು ಸೊರಬ ತಾಲ್ಲೂಕು ಕಕ್ಕರಸಿ ಗ್ರಾಮದ ಜೆ.ಎಸ್. ಚಿದಾನಂದ ಗೌಡರದ್ದು ಭಿನ್ನ ಪ್ರಯತ್ನ. ಕಳೆದ ವರ್ಷ 4 ಎಕರೆ ಜಾಗದಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಕಾಡುಕೋಣ, ಜಿಂಕೆ, ಮಂಗಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ನಾಯಿ ಬೊಗಳುವುದನ್ನು ರೆಕಾರ್ಡ್ ಮಾಡಿ ಜಮೀನೊಳಗೆ ಸ್ಪೀಕರ್ ಇಟ್ಟು ನಾಯಿ ಬೊಗಳುವ ಶಬ್ದ ಬರುವಂತೆ ನೋಡಿಕೊಂಡರು. ಮಧ್ಯೆ ಮಧ್ಯೆ ಹುಲಿ, ಸಿಂಹಗಳ ಚಿತ್ರಪಟ ನೇತು ಹಾಕಿದರು. ನಂತರ ಪ್ರಾಣಿಗಳ ಹಾವಳಿ ಕಡಿಮೆಯಾಯಿತು ಎನ್ನುತ್ತಾರೆ ಅವರು.

ಮಲೆನಾಡಿನಲ್ಲಿ ಈಗ ಮಂಕಿ ಪಾರ್ಕ್‌ ಸ್ಥಾಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮಖ ವಾಗಿದೆ. ಮಂಕಿ ಪಾರ್ಕ್ ಬಗ್ಗೆ ಅಧ್ಯಯನ ಮಾಡಲು ಹಿಮಾಚಲ ಪ್ರದೇಶಕ್ಕೆ ಒಂದು ತಂಡವನ್ನು ಕಳುಹಿಸಲು ಸಿದ್ಧತೆ ನಡೆದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು