ನಿರ್ವಹಣೆ: ಚಂದ್ರಕಾಂತ ಮಸಾನಿ
ರಾಯಚೂರು: ಜಿಲ್ಲೆಯಲ್ಲಿ ಶೇಕಡ 69ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. 1.72 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 1,161 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಹಾಗೂ 67 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.
ಆಗಸ್ಟ್ ಕೊನೆಯ ವಾರದಲ್ಲಿ ಮಳೆಯ ಕೊರತೆ ಉಂಟಾಗಿ ಖುಷ್ಕಿ ಪ್ರದೇಶದಲ್ಲಿನ ತೊಗರಿ, ಹತ್ತಿ, ಹೆಸರು ಹಾಗೂ ಜೋಳಕ್ಕೆ ಕೀಟಬಾಧೆ ಕಾಣಿಸಿಕೊಂಡಿದೆ. ರೈತರಿಗೆ ನೆರವಾಗುವ ದಿಸೆಯಲ್ಲಿ ಮಂಗಳವಾರ ‘ಪ್ರಜಾವಾಣಿ’ ವತಿಯಿಂದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ರೈತರು ಕರೆ ಮಾಡಿ ಭರಪೂರ ಮಾಹಿತಿ ಹಾಗೂ ಪರಿಹಾರ ಕಂಡುಕೊಂಡರು.
ರೈತರ ಬಹುತೇಕ ಪ್ರಶ್ನೆಗಳಿಗೆ ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಜಯಪ್ರಕಾಶ ಉತ್ತರಿಸಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ರೋಗಶಾಸ್ತ್ರಜ್ಞ ಅಜಿತಕುಮಾರ, ಬೇಸಾಯ ಶಾಸ್ತ್ರಜ್ಞ ಬಸವಣ್ಣೆಪ್ಪ ಹಾಗೂ ನಿವೃತ್ತ ಕೀಟಶಾಸ್ತ್ರಜ್ಞ ಭೀಮಣ್ಣ ಎಂ. ರೈತರಿಗೆ ಪರಿಹಾರೋಪಾಯಗಳನ್ನು ಸೂಚಿಸಿದರು.
ಪ್ರಶ್ನೆ: ಹೊಲದಲ್ಲಿ ಕಳೆದ ವರ್ಷ ಹತ್ತಿ ಬೆಳೆಸಿದ್ದೆ. ಈ ವರ್ಷ ತೊಗರಿ ಬಿತ್ತನೆ ಮಾಡಿದರೂ ತೊಗರಿಗೆ ಕೀಟಬಾಧೆ ಕಾಣಿಸಿಕೊಂಡಿದೆ ಏಕೆ? – ಸುಧಾಕರ, ರಾಯಚೂರು ತಾಲ್ಲೂಕಿನ ಗೋನಾಳ
ಉತ್ತರ: ತೊಗರಿಗೆ 2 ಗ್ರಾಂ ಕಾರ್ಬನ್‌ಡೈಸಿಟ್ ಪುಡಿಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೋಗ ಕಾಣಿಸಿಕೊಂಡ ಗಿಡಿದ ಸುತ್ತ ನೆಲ ತೊಯ್ಯುವ ಹಾಗೆ ಸಿಂಪರಣೆ ಮಾಡಬೇಕು. ನಿಧಾನವಾಗಿ ರೋಗ ನಿಯಂತ್ರಣಕ್ಕೆ ಬರಲಿದೆ.
ಪ್ರಶ್ನೆ: ಟಿಎಸ್3ಆರ್ ತಳಿಯ ತೊಗರಿ ಚೆನ್ನಾಗಿ ಬಂದರೂ, ಎಲೆಗಳಿಗೆ ಕೆಂಪು ರೋಗ ಕಾಣಿಸಿಕೊಂಡಿದ್ದು ನಿಯಂತ್ರಣಕ್ಕೆ ಏನು ಮಾಡಬೇಕು? – ರಾಜೇಶ, ಕವಿತಾಳ
ಉತ್ತರ: 2 ಗ್ರಾಂ ಕಾರ್ಬನ್‌ಡೈಸಿಟ್ ಪುಡಿಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ನೆಲ ತೊಯ್ಯುವ ಹಾಗೆ ಸಿಂಪಡಿಸಬೇಕು. ಮುಂದಿನ ವರ್ಷವೂ ತೊಗರಿಯನ್ನೇ ಬಿತ್ತನೆ ಮಾಡಬೇಕೆಂದರೆ 5 ಗ್ರಾಂ ಟ್ರೈಕೊ ಡರ್ಮಾ ಜೈವಿಕ ಶಿಲೀಂಧ್ರ ನಾಶಕವನ್ನು ಒಂದು ಕೆ.ಜಿ ಬೀಜಕ್ಕೆ ಬೆರೆಸಬೇಕು.
ಪ್ರಶ್ನೆ:ತೊಗರಿಗೆ ರೋಗ ಬಾಧೆ ಕಾಣಿಸಿಕೊಂಡಿದೆ. – ಬೂದೆಪ್ಪ, ಕವಿತಾಳ
ಉ: ಪ್ರತಿ ವರ್ಷ ಒಂದೇ ಬೆಳೆ ಮಾಡುವುದರಿಂದ ಕೀಟಬಾಧೆ ಕಾಣಿಸಿ ಕೊಳ್ಳುತ್ತದೆ. ಒಂದು ವರ್ಷ ಪರ್ಯಾಯ ಬೆಳೆ ಬಿತ್ತನೆ ಮಾಡ ಬೇಕು. ಇದರಿಂದ ರೋಗ ಬಾಧೆಯೂ ಕಾಣಿಸಿಕೊಳ್ಳು ವುದಿಲ್ಲ.
ಪ್ರಶ್ನೆ: ತೊಗರಿಗೆ ಗೊಡ್ಡು ರೋಗ ಬಂದಿದೆ. ಹೂವು ಬಿಡುತ್ತಿಲ್ಲ, ಕಾಯಿ ಬಿಡುತ್ತಿಲ್ಲ ಏನು ಮಾಡಬೇಕು?–ಲಿಂಗಣ್ಣ ನಾಯಕ, ದೇವದುರ್ಗ ತಾಲ್ಲೂಕಿನ ಕಕ್ಕೇರಾ
ಉ: ನುಶಿಯಿಂದ ರೋಗ ಹರಡುತ್ತಿದೆ. ನೀರಿನಲ್ಲಿ ಕರಗುವ ಗಂಧಕ ಬಳಿಸಿ ನುಶಿಯನ್ನು ನಾಶಪಡಿಸಬೇಕು. ಜಮೀನು ಸುತ್ತ ಎರಡು ಸಾಲು ಜೋಳ ಬೆಳೆಸಬೇಕು.
ಪ್ರಶ್ನೆ: ಹೆಸರು, ತೊಗರಿ ಬಿತ್ತನೆ ಮಾಡಿರುವೆ. ಈಗ ಕಾಣಿಸಿಕೊಂಡ ನಂಜಾನು ರೋಗ ನಿಯಂತ್ರಣಕ್ಕೆ ಏನು ಮಾಡಬೇಕು? – ಶಿವಪುತ್ರ ಗೌಡ, ಲಿಂಗಸುಗೂರು ತಾಲ್ಲೂಕಿನ ಜಾಗೀರನಂದಿಹಾಳ
ಉ: 2 ಮಿಲಿ ಪ್ರಫೆನ್ನಾಫಾಸ್ ಒಂದು ಲೀಟರ್‌ಗೆ ಬೆರೆಸಿ ಸಿಂಪರಿಸಬೇಕು. ಇದರಿಂದ ರೋಗವನ್ನು ಬಹುಬೇಗ ನಿಯಂತ್ರಿಸಲು ಸಾಧ್ಯವಾಗಲಿದೆ.
ಪ್ರಶ್ನೆ: ನಾಲ್ಕು ಎಕರೆ ಪ್ರದೇಶದಲ್ಲಿ ಹೆಸರು ಬೆಳೆದಿದ್ದು, ಎಲೆ ಉದುರುವಿಕೆ ತಡೆಯಲು ಏನು ಕ್ರಮ ಕೈಗೊಳ್ಳಬೇಕು? – ರಾಮಣ್ಣ ಎಂ. ಗಣೇಕಲ್, ದೇವದುರ್ಗ
ಉ: ಬಿಳಿನೊಣದಿಂದ ಹೆಸರು ಬೆಳೆಗೆ ರೋಗ ಬರುತ್ತಿದೆ. ಬಿತ್ತನೆ ಮಾಡಿ 40 ದಿನ ದಾಟಿದ್ದರೆ ಗಿಡಗಳು ಬೆಳೆಯುವುದಿಲ್ಲ. ಅವುಗಳ ಪಾಡಿಗೆ ಬಿಟ್ಟುಬಿಡುವುದು ಒಳ್ಳೆಯದು.
ಪ್ರಶ್ನೆ: ತಡ ಮಾಡಿ ಹತ್ತಿ, ತೊಗರಿ, ಹೆಸರು ಬಿತ್ತನೆ ಮಾಡಿರುವೆ. ರೋಗ ಕಾಣಿಸಿಕೊಂಡಿದೆ. – ಶಾಂತಕುಮಾರ, ದೇವದುರ್ಗ ಹೊನ್ನಟಗಿ
ಉ: ತಡಮಾಡಿ ಬಿತ್ತನೆ ಮಾಡ ಬಾರದಿತ್ತು. ಹತ್ತಿಗೆ ಜಿಗುಟು ರೋಗ ಕಾಣಿಸಿಕೊಳ್ಳುತ್ತದೆ. ಇಮಿಡಾಕ್ಲೋಪ್ರಿಡ್ 0.5 ಎಂ.ಎಲ್ ಅಥವಾ ತಯಾಮಿ ಮಿಥಾನ್‌ಜಾನ್ 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು.
ಪ್ರಶ್ನೆ: ತೊಗರಿ ಬೆಳೆದು 55 ದಿನ ಆಗಿದೆ. ಒಮ್ಮೆ ಕುಡಿ ಚಿವುಟಲಾಗಿದೆ. ಮತ್ತೆ ಚಿವುಟಬೇಕೆ?
– ಜಿ.ರಾಜಶೇಖರ, ಸಿಂಧನೂರು ತಾಲ್ಲೂಕಿನ ತುರ್ವಿಹಾಳ
ಉ: ತೊಗರಿ ಬೆಳೆದ 55ರಿಂದ 60ನೇ ದಿನಕ್ಕೆ ಒಂದು ಬಾರಿ ಮಾತ್ರ ಕುಡಿ ಚಿವುಟಬೇಕು. ಅಂದಾಗ ಗಿಡ ಟಿಸಿಲೊಡೆದು ಹೆಚ್ಚು ಕಾಯಿಬಿಡುತ್ತವೆ. ಎರಡನೇ ಬಾರಿ ಚಿವುಟುವುದು ಬೇಡ.
ಪ್ರಶ್ನೆ: ರೈತ ಸಂಪರ್ಕ ಕೆಂದ್ರದಲ್ಲಿ ಭತ್ತದ ಬಗ್ಗೆ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ. – ರಮೇಶ ವೀರಾಪುರ ಗೆಜ್ಜಲ್‌ಗಟ್ಟ
ಉ: ಜಿಲ್ಲೆಯ ರೈತ ಸಂಪರ್ಕ ಕೇಂದ್ರ ಗಳಲ್ಲಿ ಎಲ್ಲ ರೀತಿಯ ಮಾಹಿತಿ ಕೊಡು ವಂತೆ ಸೂಚಿಸಲಾಗುವುದು. ಸಜ್ಜೆ, ತೊಗರಿ, ಭತ್ತ, ಹೆಸರು ಬೆಳೆಯ ಮಾಹಿತಿ ಯೂ ದೊರಕುತ್ತದೆ. ಬೀಜ ಹಾಗೂ ಕ್ರಿಮಿನಾಶಕಗಳು ಸಹ ಲಭ್ಯ ಇವೆ.
ಪ್ರಶ್ನೆ: ಮೆಕ್ಕೆಜೋಳ ಬಿತ್ತಿ ಎರಡು ತಿಂಗಳಾಗಿದೆ. ಹುಳು ಬಾಧೆ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ಸಲಹೆ ಕೊಡಿ. – ಮಲ್ಲನಗೌಡ ಪಾಟೀಲ, ಲಿಂಗಸುಗೂರು
ಉ: 55 ದಿನಗಳು ಆದ ಮೇಲೆ ಸಹಜವಾಗಿ ಕಡಿಮೆಯಾಗಲಿದೆ. ಆರಂಭದಲ್ಲೇ ಸುಳಿಯಲ್ಲಿ ಔಷಧ ಸಿಂಪರಣೆ ಮಾಡಿದ್ದರೆ ಕಡಿಮೆಯಾಗುತ್ತಿತ್ತು. ಇನ್ನು ನೈಸರ್ಗಿಕ ವಾಗಿ ಕಡಿಮೆಯಾಗಲಿದೆ.
ಪ್ರಶ್ನೆ: ಹತ್ತಿ ಬೆಳೆಗೆ 50 ದಿನ ಆಗಿದೆ. ಮುಟುರು ರೋಗ ತಡೆಯಲು ಸಲಹೆ ಕೊಡಿ? –ನರಸಪ್ಪ, ಎನ್. ಗಣೇಕಲ್
ಉ: ಮುಂದೆ ಬರುತ್ತ ನಿಧಾನ ವಾಗಿ ಕಡಿಮೆಯಾಗಲಿದೆ. ಡಯೆನೋಟಾ ಫರಂ ಅಥವಾ ಫೋನಿಕ್‌ಅಮಿಡ್ 3 ಗ್ರಾಂ ಅನ್ನು ಪ್ರತಿ ಲೀಟರ್‌ಗೆ ಬೆರೆಸಿ ಸಿಂಪಡಿಸಬೇಕು. ಕಡಿಮೆಯಾಗಲಿದೆ.
ಪ್ರಶ್ನೆ: ಪಿ.ಎಂ. ಫಸಲ್ ವಿಮಾ ಯೋಜನೆ ಪ್ರತಿವರ್ಷ ಹಣ ತುಂಬುತ್ತೇವೆ. ವಿಮೆಯನ್ನು ಹೇಗೆ ಪರಿಗಣಿಸುತ್ತೀರಿ? – ವೀರೇಶ ಅಂಗಡಿ, ಲಿಂಗಸೂರಿನ ಗೌಡರು ಗ್ರಾಮ,
ಉತ್ತರ: ಕಳೆದ ವರ್ಷದ ಇಳುವರಿಯೊಂದಿಗೆ ಹೊಂದಾಣಿಕೆ ಮಾಡಿ ಸಿಸಿಪ್ಲಾಟ್‌ನಲ್ಲಿ ದಾಖಲಾದ ಅಂಶಗಳನ್ನೂ ಪರಿಗಣಿಸಿ ಬೆಳೆ ವಿಮೆ ಪಾವತಿಸಲಾಗುತ್ತಿದೆ. ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ವಿಚಾರಿಸಿದರೆ ಹೆಚ್ಚಿನ ಮಾಹಿತಿ ದೊರೆಯಲಿದೆ.
ಪ್ರಶ್ನೆ: ಜೋಳ ಖರೀದಿ ಕೇಂದ್ರದಿಂದ ಈವರೆಗೂ ರೈತರಿಗೆ ಹಣ ಪಾವತಿಯಾಗಿಲ್ಲ ಏಕೆ?
– ಬಸವರಾಜ, ಚೆನ್ನನಗೌಡ, ಸಿಂಧನೂರು ತಾಲ್ಲೂಕಿನ ಬನ್ನಿಗನೂರು
ಉತ್ತರ: ಜೋಳ ಖರೀದಿಸಿದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಜೋಳ ಖರೀದಿಸಿದ ಹಣ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು.
ಗೋವಿನ ಜೋಳಕ್ಕೆ ಸೈನಿಕ ಹುಳುಕಾಟ
ಗೋವಿನ ಜೋಳದಲ್ಲಿ ಫಾಲ್ ಸೈನಿಕ ಮರಿ ಹುಳುಗಳು ಎಲೆಗಳ ಮೇಲ್ಮೈಯನ್ನು ತಿನ್ನುತ್ತವೆ. ಡೊಡ್ಡ ಹುಳುಗಳು, ಕೇಂದ್ರ ಸುಳಿ ಮತ್ತು ತೆನೆಗಳನ್ನು ತಿಂದು ಹಾಕುತ್ತವೆ.
ಕೀಟದ ಹರಡುವಿಕೆ ತಡೆಯಲು ಕೀಟದ ಮೊಟ್ಟೆಯ ಗುಂಪು ಮತ್ತು ಮರಿ ಹುಳುಗಳನ್ನು ಆರಿಸಿ ತೆಗೆದು ನಾಶಪಡಿಸಬೇಕು. ಕೀಟದ ಬಾಧೆ ಕಡಿಮೆ ಇದ್ದಾಗಲೇ ಮರಿ ಹುಳುಗಳ ನಿಯಂತ್ರಣಕ್ಕೆ ಬೇವಿನ ಮೂಲದ ಕೀಟನಾಶಕ ಅಜಾಡಿರಕ್ಟಿನ್ 1500 ಪಿಪಿಎಂ 2 ಮಿಲಿ ಲೀಟರ್ ಅಥವಾ ಜೈವಿಕ ಶಿಲೀಂಧ್ರ ಕೀಟ ನಾಶಕ ಮೆಟಾರೈಜಿಯಮ್ ರಿಲೇ 2 ಗ್ರಾಂ ಅಥವಾ ಮೆಟಾರೈಜಿಯಮ್ ಅನಿಸೊಪ್ಪಿಎ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕೀಟದ ತೀವ್ರತೆ ಹೆಚ್ಚಾದಾಗ ಹುಳುಗಳನ್ನು ನಿಯಂತ್ರಿಸಲು ಲ್ಯಾಮ್ಡಸಹಲೋಥ್ರಿನ್ 1 ಎಂ.ಎಲ್ ಅಥವಾ ಇಮಾಮೆಕ್ಟಿನ್ ಬೆಂಜೋಯಿಟ್ ಶೇಕಡ 5ರಷ್ಟು ಎಸ್.ಜಿ. 0.4 ಗ್ರಾಂ ಅಥವಾ ಕ್ಲೊರಾಂತ್ರಿನಿಲಿಪ್ರೆಲ್ 18.5 ಎಸ್.ಸಿ. 0.3 ಮಿ.ಲೀ. ಅಥವಾ ಸೈನೋಸ್ಯಾಡ್ 45 ಎಸ್.ಸಿ 0.3 ಎಂ.ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು.
ಹೆಸರು ಬೆಳೆಯಲ್ಲಿ ಹಳದಿ ನಂಜುರೋಗ
ಬಿಳಿ ನೊಣದಿಂದಾಗಿ ಹೆಸರು ಬೆಳೆಯಲ್ಲಿ ಹಳದಿ ನಂಜು ರೋಗಬಾಧೆ ಕಾಣಿಸಿಕೊಂಡಿದೆ. ಬೆಮೆಸಿಯಾ ಟೆಬ್ಯಾಸಿ ಕೀಟವು ಎಲೆಗಳಿಂದ ಮತ್ತು ಗಿಡದ ಇತರೆ ಭಾಗಗಳಿಂದ ರಸಹೀರಿ ನೇರವಾಗಿ ಹಾಗೂ ತನ್ನ ಜೊಲ್ಲಿನ ಮೂಲಕ ಹಳದಿ ನಂಜು ರೋಗದ ನಂಜಾಣುವನ್ನು ಗಿಡದಲ್ಲಿ ಸೇರಿಸಿ ಪರೋಕ್ಷವಾಗಿಯೂ ಕೂಡ ಬಾಧೆ ಉಂಟು ಮಾಡುತ್ತದೆ.
ಬಾಧೆ ಕಾಣಿಸಿಕೊಂಡಾಗ ಮೊದಲು ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆ ಲಕ್ಷಣಗಳು ಕಾಣುತ್ತವೆ. ನಂತರ ಇವು ಹೆಚ್ಚಾಗಿ ಹಳದಿ-ಹಸಿರು ಮೊಜಾಯಿಕ್ ಲಕ್ಷಣಗಳು ಕಂಡುಬರುತ್ತವೆ. ಕೊನೆಗೆ ಇಡೀ ಗಿಡದ ಎಲೆಗಳು ಮತ್ತು ಕಾಯಿಗಳು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿ ಬಾಧೆ ಉಂಟು ಮಾಡುತ್ತದೆ. ಸಂಪೂರ್ಣ ಬೆಳೆ ಹಳದಿ ಬಣ್ಣಕ್ಕೆ ತಿರುಗಿ ಹೂಬಿಡುವುದಿಲ್ಲ. ಕಾಯಿಗಳು ಕಾಳು ಕಟ್ಟುವುದಿಲ್ಲ. ಗಿಡ ಸಂಪೂರ್ಣ ಹಳದಿಯಾಗುತ್ತದೆ.
ಹಳದಿ ನಂಜು ರೋಗ ಬಾಧಿತ ಗಿಡಗಳನ್ನು ಹೊಲದಿಂದ ಕಿತ್ತು ಸುಟ್ಟು ಹಾಕಬೇಕು. ಅಂತರ ವ್ಯಾಪಿ ಕೀಟನಾಶಕದಿಂದ ಬೀಜೋಪಚಾರ ಇಮಿಡಾಕ್ಲೋಪ್ರಿಡ್ 48ಇ 10 ಮಿ.ಲೀ ಪ್ರತಿ ಕಿ.ಗ್ರಾಂ ಬೀಜಕ್ಕೆ ಬೀಜೋಪಚಾರ. ಹೊಲದಲ್ಲಿ 8–10 ಹಳದಿ ಅಂಟು ಬಲೆಗಳನ್ನು ಬೆಳೆಗಳಿಗಿಂತ 1 ಅಡಿ ಮೇಲೆ ಇರುವಂತೆ ಹಾಕಬೇಕು. ಶೇ 5ರಷ್ಟು ಬೇವಿನ ಬೀಜದ ಕಷಾಯ ಅಥವಾ ಆಸಿಟಮಪ್ರಿಡ್ ಅಥವಾ ಇಮಿಡಾಕ್ಲೋಪ್ರಿಡ್ ಇಲ್ಲವೆ ಥಯಾಮಿಥೋಕ್ಸಾಮ್ ಅನ್ನು ನಿಗದಿಪಡಿಸಿದ ಪ್ರಮಾಣದಲ್ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದೇ ಸಿಂಪಡಣೆಯನ್ನು 15 ದಿವಸದ ನಂತರ ಮತ್ತೊಮ್ಮೆ ಮಾಡಬೇಕು.
ಸೂರ್ಯಕಾಂತಿಗೆ ನಂಜಾಣು ರೋಗ
ಸೂರ್ಯಕಾಂತಿ ಬೆಳೆಯಲ್ಲಿ ನೆಕ್ರೋಸಿಸ್ ನಂಜಾಣು ರೋಗ ಕಾಣಿಸಿಕೊಂಡಿದೆ. ಸೂರ್ಯಕಾಂತಿ ಬೆಳೆಯಲ್ಲಿ ನೆಕ್ರೋಸಿಸ್ ನಂಜಾಣು ರೋಗವು ಎಲೆಗಳ ಅಂಚಿನಿಂದ ಒಣಗುವಿಕೆ ಆರಂಭಗೊಂಡು ಕಾಂಡದ ಮೂಲಕ ಬೆಳೆಯುವ ಚಿಗುರಿಗೆ ವ್ಯಾಪಿಸಿಕೊಳ್ಳುತ್ತದೆ. ಗಿಡಗಳು ಮುರುಟಾಗಿ ಬೆಳವಣಿಗೆ ನಿಲ್ಲುತ್ತದೆ ಹಾಗೂ ಕಾಳು ಕಟ್ಟುವುದಿಲ್ಲ.
ರೋಗ ನಿಯಂತ್ರಣಕ್ಕೆ ಪ್ರತಿ ಕೆ.ಜಿ. ಬೀಜಕ್ಕೆ 5 ಗ್ರಾಂ. ಇಮಿಡಾಕ್ಲೋಪ್ರಿಡ್ 70 ಡಬ್ಲೂಎಸ್ ಕೀಟನಾಶಕದ ಬೀಜೋಪಚಾರ ಮಾಡಬೇಕು. ಹೊಲದಲ್ಲಿ ರೋಗಗ್ರಸ್ಥ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಹೊಲದ ಸುತ್ತಲೂ 3–4 ಸಾಲು ಎತ್ತರಕ್ಕೆ ಬೆಳೆಯುವ ಜೋಳ ಅಥವಾ ಮೆಕ್ಕೆಜೋಳ ಅಥವಾ ಸಜ್ಜೆಯನ್ನು15 ದಿನಗಳ ಮುಂಚೆ ಬಿತ್ತಬೇಕು. ಬಿತ್ತಿದ 30 ದಿನಗಳ ನಂತರ 0.25 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪಾರ್ಥೇನಿಯಂ ಮತ್ತು ಕಾಂಥಿಯ ಕಳೆಗಳ ಜತೆಗೆ ರೋಗಗ್ರಸ್ಥ ಗಿಡಗಳನ್ನು ಕಿತ್ತು ನಾಶಪಡಿಸಬೇಕು.
ತೊಗರಿಗೆ ಕಾಣಿಸಿದ ಗೊಡ್ಡು ರೋಗ
ತೊಗರಿಗೆ ಗೊಡ್ಡುರೋಗ ಕಾಣಿಸಿಕೊಂಡಿದೆ. ರೋಗಕ್ಕೆ ತುತ್ತಾಗಿರುವ ಗಿಡದ ಎಲೆಗಳು ಹಸಿರು ಮತ್ತು ಹಳದಿ ಬಣ್ಣಕ್ಕೆ ತಿರುಗಿ ಒಣಗುವ ಲಕ್ಷಣಗಳು ಕಂಡುಬರುತ್ತವೆ. ಗಿಡದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಗಳು ಇದ್ದರೂ ಹೂ ಮತ್ತು ಕಾಯಿಗಳಾಗುವುದಿಲ್ಲ. ಗಿಡಗಳು ಗೊಡ್ಡಾಗುತ್ತವೆ. ರೋಗದಿಂದಾಗಿ ಗಿಡದ ಕಾಂಡಗಳು ಬೆಳೆಯದೇ ಸಣ್ಣ ಟೊಂಗೆಗಳಾಗಿ, ಎಲೆಗಳ ಬೆಳೆವಣಿಗೆ ಕುಂಠಿತವಾಗಿ ಎಲೆಗಳು ಮುಟುರಿಕೊಳ್ಳುತ್ತವೆ.
ರೋಗ ನಿಯಂತ್ರಣಕ್ಕೆ ಬಾಧಿತ ಗಿಡಗಳನ್ನು ಕಿತ್ತು ಒಂದು ಗೋಣಿ ಚೀಲದಲ್ಲಿ ಸಂಗ್ರಹಿಸಿ ಹೊಲದಿಂದ ಬೇರೆಡೆ ಒಯ್ದು ಭೂಮಿಯಲ್ಲಿ ಹುಗಿಯಬೇಕು. ನುಶಿ ನಾಶಕ ಅಥವಾ ನೀರಿನಲ್ಲಿ ಕರಗುವ ಗಂಧಕ 3 ಗ್ರಾಂ ಜೊತೆಗೆ ಸ್ಯಾಂಡೋವಿಟ್ 1 ಮಿ.ಲೀ ಪ್ರತಿ ಲೀಟರ್ ನೀರಿಗೆ ಸೇರಿಸಿ ಚೆನ್ನಾಗಿ ಸಿಂಪಡಣೆ ಮಾಡಬೇಕು.
ಸಹಕಾರ: ಬಾವಸಲಿ, ಶ್ರೀನಿವಾಸ ಇನಾಮದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.