ಗುರುವಾರ , ಆಗಸ್ಟ್ 11, 2022
23 °C
ಯುದ್ಧೋಪಾದಿಯಲ್ಲಿ ಚಿಕಿತ್ಸೆ ನೀಡುತ್ತಿರುವ ಪಶು ವೈದ್ಯರ ತಂಡ

PV Web Exclusive: ಜಾನುವಾರುಗಳಿಗೂ ಕಾಡುತ್ತಿದೆ ಅಂಟುರೋಗ!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಎತ್ತು, ಎಮ್ಮೆ ಸೇರಿದಂತೆ ರೈತರು ಸಾಕಾಣಿಕೆ ಮಾಡುವ ಜಾನುವಾರುಗಳಲ್ಲಿ ವಿಚಿತ್ರವಾದ ಅಂಟುರೋಗವೊಂದು ಕಾಣಿಸಿಕೊಂಡಿದೆ. ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶು ವೈದ್ಯರು ಈಗಾಗಲೇ ಚಿಕಿತ್ಸೆ ಆರಂಭಿಸಿದ್ದು, ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.

‌ರಾಯಚೂರು ಹಾಗೂ ದೇವದುರ್ಗ ತಾಲ್ಲೂಕುಗಳ ಜಾನುವಾರುಗಳಲ್ಲಿ ಅಧಿಕ ಪ್ರಮಾಣದಲ್ಲಿ ರೋಗ ಕಾಣಿಸಿಕೊಂಡಿದೆ. ಎತ್ತುಗಳ ಮೈತುಂಬಾ ದದ್ದುಗಳು ಬಂದಿದ್ದು, ನಿಶ್ಯಕ್ತಿಯಿಂದ ಬಳಲಾರಂಭಿಸಿವೆ. ಮೇವು ತಿನ್ನುವುದನ್ನು ನಿಲ್ಲಿಸಿದ್ದರಿಂದ ರೈತರು ಗಾಬರಿಯಾಗಿ ಪಶುವೈದ್ಯರಲ್ಲಿಗೆ ಧಾವಿಸುತ್ತಿದ್ದಾರೆ. ರೋಗ ಆರಂಭವಾಗಿ ಒಂದು ತಿಂಗಳಾಗಿದ್ದು, ವೇಗವಾಗಿ ಹರಡುತ್ತಿದೆ.

ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವೈದ್ಯರು ಹೇಳುವಂತೆ, ಒಟ್ಟು 4900 ಕ್ಕೂ ಅಧಿಕ ಜಾನುವಾರುಗಳಿಗೆ ರೋಗ ಬಂದಿದೆ ಎನ್ನುವ ಪ್ರಾಥಮಿಕ ಮಾಹಿತಿ ಇದೆ. ಈಗಾಗಲೇ 4,700 ರಷ್ಟು ದನಕರುಗಳಿಗೆ ಚಿಕಿತ್ಸೆ ಆರಂಭಿಸಲಾಗಿದೆ. ದನಗಳು ಇದರಿಂದ ಸಾಯುವ ಭಯವಿಲ್ಲ. ಆದರೆ, ರೋಗ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಕೊಡಸಲೇಬೇಕು. ನಿರ್ಲಕ್ಷ್ಯ ವಹಿಸಿದರೆ ಇತರೆ ಜಾನುವಾರುಗಳಿಗೂ ಹರಡುತ್ತದೆ. ಚಿಕಿತ್ಸೆ ನೀಡಿದರೆ ಒಂದು ವಾರದಲ್ಲಿ ಜಾನುವಾರು ಗುಣಮುಖವಾಗುತ್ತದೆ.

ಜಿಲ್ಲೆಯಲ್ಲಿರುವ 107 ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಪ್ರತಿ ತಾಲ್ಲೂಕಿನಲ್ಲಿ ಪ್ರತಿದಿನ ಒಂದು ಗ್ರಾಮದಲ್ಲಿ ಕ್ಯಾಂಪ್‌ ಮಾಡಿ ಜಾನುವಾರುಗಳಿಗೆ ಆ್ಯಂಟಿಬಯೋಟಿಕ್ಸ್‌ ಇಂಜೆಕ್ಷನ್‌ ಕೊಡಲಾಗುತ್ತಿದೆ. ಲಂಪಿ ಸ್ಕಿನ್‌ ಡಿಸೀಜ್‌ (ಎಲ್‌ಎಸ್‌ಬಿ) ವೈರಲ್‌ ರೋಗ ಇದಾಗಿದ್ದು, ನಿರ್ದಿಷ್ಟವಾದ ಔಷಧಿಗಳಿಲ್ಲ. ದದ್ದುಗಳು ಕಾಣಿಸಿಕೊಂಡ ಜಾನುವಾರುಗಳಲ್ಲಿ ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಇದರಿಂದ ಇತರೆ ಬ್ಯಾಕ್ಟೇರಿಯಾ ರೋಗಗಳು ಆರಂಭವಾಗುತ್ತವೆ.

ಇದು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ರೋಗ. ಇದೇ ಮೊದಲ ಸಲ ಕರ್ನಾಟಕದಲ್ಲಿ ಆರಂಭವಾಗಿದೆ. ರೋಗದ ಕುರಿತಾಗಿ ಇನ್ನಷ್ಟು ಸಂಶೋಧನೆಗಳು, ಔಷಧಿಗಳು ಬರಬೇಕಿದೆ. ಇದಕ್ಕಾಗಿ ಪಶುವೈದ್ಯಕೀಯ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಕೆಲಸವನ್ನು ಪಶುವೈದ್ಯಕೀಯ ಇಲಾಖೆ ಆರಂಭಿಸಿದೆ. ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳ ಜಾನುವಾರುಗಳಲ್ಲಿಯೂ ರೋಗ ಬಂದಿದೆ. ಮುಖ್ಯವಾಗಿ ತೆಲಂಗಾಣ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿಜಿಲ್ಲೆಯಲ್ಲಿ ಸದ್ಯಕ್ಕೆ ಹೆಚ್ಚಾಗಿದೆ. ಇತರೆ ಜಿಲ್ಲೆಗಳಿಗೂ ವ್ಯಾಪಿಸಿಕೊಳ್ಳುತ್ತಿದೆ. ರೋಗಕ್ಕೆ ನಿರ್ದಿಷ್ಟವಾದ ಹೆಸರು ಇಲ್ಲ ಎಂದು ಪಶುವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ವಹಿಸಬೇಕಾದ ಎಚ್ಚರ: ಜಾನುವಾರದ ಮೈಯಲ್ಲಿ ದದ್ದು (ಗಂಟು) ಕಾಣಿಸಿದ ತಕ್ಷಣ ಅದನ್ನು ಪ್ರತ್ಯೇಕಗೊಳಿಸಬೇಕು. ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ಕನಿಷ್ಠ ಒಂದು ವಾರ ಚಿಕಿತ್ಸೆ ನೀಡುವ ಅಗತ್ಯವಿದೆ.

‘ರಾಯಚೂರಿನ ಪಶುವೈದ್ಯರು ವಿವಿಧ ಕಡೆ ಕ್ಯಾಂಪ್‌ಗಳನ್ನು ಮಾಡಿ ಪಶುಗಳಿಗೆಲ್ಲ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಪ್ರತಿ ತಾಲ್ಲೂಕಿನಲ್ಲಿ ತಲಾ 15 ಕಡೆಗಳಲ್ಲಿ ಕ್ಯಾಂಪ್‌ಗಳನ್ನು ಮಾಡಲಾಗಿದೆ. ಮಂಜೂರಿಯಾದ 88 ಪಶುವೈದ್ಯರ ಹುದ್ದೆಗಳ ಪೈಕಿ 42 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇತರೆ 480 ಸಿಬ್ಬಂದಿ ಹುದ್ದೆಗಳ ಪೈಕಿ 260 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪಶುಗಳ ಚಿಕಿತ್ಸೆಗೆ ಅಗತ್ಯ ಔಷಧಿಗಳಿಗೆ ಕೊರತೆಯಿಲ್ಲ’ ಎಂದು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಶಿವಣ್ಣ ತಿಳಿಸಿದರು.

ಪಶುಚಿಕಿತ್ಸೆ ಹಾಗೂ ರೋಗದ ಇತರೆ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080 23417100/ 18004250012 ಗೆ ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು