ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನ್ವಿ: ಚೀಕಲಪರ್ವಿ ಬಳಿ ಬ್ರಿಜ್ ಕಮ್ ಬ್ಯಾರೇಜ್‌

₹397.50 ಕೋಟಿ ವೆಚ್ಚದ ಕಾಮಗಾರಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ
ಬಸವರಾಜ ಭೋಗಾವತಿ
Published : 24 ಆಗಸ್ಟ್ 2024, 6:40 IST
Last Updated : 24 ಆಗಸ್ಟ್ 2024, 6:40 IST
ಫಾಲೋ ಮಾಡಿ
Comments

ಮಾನ್ವಿ: ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರುವ ಮೂಲಕ ಈ ಭಾಗದ ಜನರ ದಶಕಗಳ ಬೇಡಿಕೆ ಸ್ಪಂದಿಸಿದಂತಾಗಿದೆ.

ಗುರುವಾರ ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟದ ಸಭೆಯಲ್ಲಿ ಚೀಕಲಪರ್ವಿ ಬಳಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ₹397.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.


ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಈ ಯೋಜನೆಗೆ ಸರ್ಕಾರದ ಆಡಳಿತಾತ್ಮಕ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣದ ಮೂಲಕ ಸರ್ಕಾರ ತುಂಗಭದ್ರಾ ನದಿ ಪಾತ್ರದಲ್ಲಿರುವ ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕಿನ ಚೀಕಲಪರ್ವಿ, ಯಡಿವಾಳ, ಆಯನೂರು, ಚಿಂತಮಾನದೊಡ್ಡಿ, ಚಿತ್ರಾಲಿ ಮತ್ತಿತರ ಗ್ರಾಮಗಳು ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಕೆಲವು ಗ್ರಾಮಗಳು ಸೇರಿ ಸುಮಾರು ಇಪ್ಪತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ, ಅಂತರ್ಜಲಮಟ್ಟ ಹೆಚ್ಚಳ ಹಾಗೂ ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಿಂದ ಆಂಧ್ರಪ್ರದೇಶದ ಗಡಿ ಭಾಗದ ಗ್ರಾಮಗಳಿಗೂ ಸಂಪರ್ಕ ದೊರೆಯಲಿದೆ.

ಇದುವರೆಗೆ ಮಾನ್ವಿ ತಾಲ್ಲೂಕಿನ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳ ಗ್ರಾಮಸ್ಥರು ಚೀಕಲಪರ್ವಿ ಗ್ರಾಮದ ಬಳಿ ಹರಿಗೋಲು ಮೂಲಕ ತುಂಗಭದ್ರಾ ನದಿಯನ್ನು ದಾಟುವ ಮೂಲಕ ತಮ್ಮ ಸ್ಥಳಗಳಿಗೆ ತೆರಳುತ್ತಿದ್ದಾರೆ. ಸೇತುವೆ ನಿರ್ಮಾಣವಾದರೆ ಎರಡೂ ಕಡೆಯ ಗ್ರಾಮಗಳ ಜನರಿಗೆ ನೆರವಾಗಲಿದೆ.

ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿ ಮತ್ತು ದಾಟಲು ಬಳಸುವ ಹರಿಗೋಲು
ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿ ಮತ್ತು ದಾಟಲು ಬಳಸುವ ಹರಿಗೋಲು

ಮಾನ್ವಿಯಿಂದ ಆಂಧ್ರಪ್ರದೇಶದ ಮಂತ್ರಾಲಯ, ಆದೋನಿ, ಕರ್ನೂಲ್ ನಗರಗಳಿಗೆ ರಸ್ತೆ ಮಾರ್ಗದಲ್ಲಿ ಸಂಚಾರದ ದೂರ ಹಾಗೂ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಪ್ರತಿ ವರ್ಷ ಸ್ಥಳೀಯ ಹಾಗೂ ನಾಡಿನ ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಮಾನ್ವಿ ಪಟ್ಟಣದ ಜಗನ್ನಾಥದಾಸರ ಮಂದಿರ, ಸಂಜೀವರಾಯ ದೇವಸ್ಥಾನ, ಕಲ್ಲೂರು ಮಹಾಲಕ್ಷ್ಮೀ ದೇವಸ್ಥಾನ, ವಿಜಯದಾಸರ ಜನ್ಮಸ್ಥಳ ಹಾಗೂ ರುದ್ರಮುನೀಶ್ವರ ಮಠದ ದರ್ಶನಕ್ಕೆ ‌ಬರುತ್ತಾರೆ. ನಂತರ ರಾಯಚೂರು ತಾಲ್ಲೂಕಿನ ಪಂಚಮುಖಿ ಗಾಣದಾಳ, ಆಂಧ್ರಪ್ರದೇಶದ ಮಂತ್ರಾಲಯ, ಉರುಕುಂದಿ ಈರಣ್ಣ ದೇವಸ್ಥಾನಗಳಿಗೆ ತೆರಳುತ್ತಾರೆ. ಈ ಎಲ್ಲ ಯಾತ್ರಾಸ್ಥಳಗಳಿಗೆ ಕಡಿಮೆ ಅವಧಿಯಲ್ಲಿ ತೆರಳಲು ಈ ಸೇತುವೆ ಅನುಕೂಲವಾಗಲಿದೆ ಹಾಗೂ ಸ್ಥಳೀಯವಾಗಿ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಈ ಭಾಗದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಮನವಿ ಮಾಡಿದ್ದಾರೆ.

ಚೀಕಲಪರ್ವಿ ಬಳಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ಮಾನ್ವಿ ತಾಲ್ಲೂಕಿನಲ್ಲಿ ಕೃಷಿ ಹಾಗೂ ವಾಣಿಜ್ಯ ಕ್ಷೇತ್ರಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಬಿ.ಲಿಂಗಾರೆಡ್ಡಿ ಪಾಟೀಲ ಮಾನ್ವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಕರ್ನಾಟಕ ರಾಜ್ಯ ರೈತ ಸಂಘ
ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ಆಂಧ್ರದ ಗಡಿಭಾಗದ ಗ್ರಾಮಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿದೆ.
ಮಹ್ಮದ್ ಮುಜೀಬ್ ಮಾಜಿ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು, ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT