ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಪಡಬೇಕಿಲ್ಲ; ಎಚ್ಚರಿಕೆ ಬಿಡುವಂತಿಲ್ಲ: ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌

’ಪ್ರಜಾವಾಣಿ’ ಕಚೇರಿಯಲ್ಲಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಫೋನ್‌ ಇನ್‌ ಕಾರ್ಯಕ್ರಮ
Last Updated 5 ಮೇ 2020, 15:10 IST
ಅಕ್ಷರ ಗಾತ್ರ

ರಾಯಚೂರು: ‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಇದುವರೆಗೂ ನಿಯಂತ್ರಿಸಲು ಸಾಧ್ಯವಾಗಿದೆ. ಇನ್ನು ಮುಂದೆಯೂ ಆತಂಕ ಪಡುವ ಅಗತ್ಯವಿಲ್ಲ; ಆದರೂ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಲುಕಿರುವ ಜನರಿಂದ ಬಂದ ಅಹವಾಲುಗಳನ್ನು ಶಾಂತಚಿತ್ತದಿಂದ ಆಲಿಸಿದ ಜಿಲ್ಲಾಧಿಕಾರಿ, ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ಜಿಲ್ಲೆಯ ವಿವಿಧೆಡೆಯಿಂದ ಹಾಗೂ ಹೊರರಾಜ್ಯದಲ್ಲಿರುವ ಜಿಲ್ಲೆಯ ಜನರೂ ಕರೆ ಮಾಡಿದ್ದರು.

*ರಂಗಣ್ಣ ಸಿರವಾರ: 58 ಕ್ವಿಂಟಲ್‌ ಈರುಳ್ಳಿ ಬೆಳೆದಿದ್ದು, ಮಾರಾಟ ಹೇಗೆ?

– ಲಾಕ್‌ಡೌನ್‌ ಇದ್ದರೂ ಕೃಷಿ ಉತ್ಪನ್ನ ಮಾರಾಟಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ರಾಯಚೂರು ಎಪಿಎಂಸಿಗೆ ತೆಗೆದುಕೊಂಡು ಬರಲು ಅವಕಾಶವಿದೆ. ಪ್ರತಿದಿನ ರೈತರು ಬರುತ್ತಿದ್ದಾರೆ. ಮೊದಲಿನಂತೆಯೇ ರೈತರು ಕೃಷಿ ಉತ್ಪನ್ನ ಮಾರಾಟ ಮಾಡಬಹುದು.

*ಉಮೇಶ, ಮುದಗಲ್‌: ಗ್ರಾಮೀಣ ಪ್ರದೇಶದಲ್ಲಿ‌ವ್ಯಾಪಾರಿಗಳು ವ್ಯಕ್ತಿಗತ ಅಂತರ ಪಾಲನೆ ಮಾಡುತ್ತಿಲ್ಲ.

–ಈ ಬಗ್ಗೆ ಕ್ರಮ ಜರುಗಿಸಲು ಪೊಲೀಸರು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಎಲ್ಲರೂ ಮಾಸ್ಕ್‌ ಧರಿಸುವುದು ಕಡ್ಡಾಯ. ಗ್ರಾಮಗಳಲ್ಲಿ ಮಾಸ್ಕ್‌ ಧರಿಸದವರಿಂದ ₹100 ದಂಡ ವಸೂಲಿಗೆ ಟಾಸ್ಕ್‌ಫೋರ್ಸ್‌ ಕಮೀಟಿಗೆ ಅಧಿಕಾರವಿದೆ. ಬೈಕ್‌ನಲ್ಲಿ ಒಬ್ಬರೆ ಸಂಚರಿಸಬೇಕು. ಅಂಗಡಿಗಳ ಎದುರು ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡುವುದು ವ್ಯಾಪಾರಿಗಳ ಜವಾಬ್ದಾರಿ, ಒಂದು ವೇಳೆ ಪಾಲನೆಯಾಗದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಜನರು ಕೂಡಾ ಜವಾಬ್ದಾರಿ ವಹಿಸಬೇಕು.

*ಬಸವರಾಜ ಸಿಂಧನೂರು (ಬೆಂಗಳೂರಿನಿಂದ): ಬೆಂಗಳೂರಿನಿಂದ ಸಿಂಧನೂರಿಗೆ ಪತ್ನಿಯನ್ನು ತಲುಪಿಸಿ ಬರಬೇಕಿದೆ, ಏನು ಮಾಡಬೇಕು?

–ಬೆಂಗಳೂರಿನಿಂದ ಸಿಂಧನೂರಿಗೆ ಬರಲು ಡಿಸಿಪಿ ಅವರಿಂದ ಪಾಸ್‌ ಪಡೆದುಕೊಳ್ಳಬೇಕು. ಅಲ್ಲಿಂದ ಬಂದು ವಾಪಸ್‌ ಹೋಗುವುದನ್ನು ಅವಕಾಶವಿಲ್ಲ. ಒನ್ ವೇ ಮಾತ್ರ ಪಾಸ್‌ ಸಿಗುತ್ತದೆ.

*ಹಣಮಂತರಾಯ, ಲಿಂಗಸುಗೂರು: ರೈತರು ಬೇರೆ ಊರುಗಳಿಗೆ ಹೋಗಿ ಕೃಷಿ ಪರಿಕರ ಖರೀದಿಸಬಹುದೇ?

–ರೈತರು ಕೃಷಿ ಸಂಬಂಧಿತ ಪರಿಕರಗಳನ್ನು ಅಥವಾ ಕೃಷಿ ಉತ್ಪನ್ನ ಖರೀದಿಗಾಗಿ ಬೇರೆ ಊರುಗಳಿಗೆ ಹೋಗಿ ಬರಬಹುದು. ಈ ಸಂಬಂಧ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಪತ್ರಿಕಾ ಪ್ರಕಟಣೆ ನೀಡುತ್ತೇವೆ.

*ಶರಣಬಸವ, ಸಿಂಧನೂರು (ಬೆಂಗಳೂರಿನಿಂದ): ಬೆಂಗಳೂರಿನಿಂದ ಬರಲು ಯಾರನ್ನು ಭೇಟಿ ಮಾಡಬೇಕು?

–ಬೆಂಗಳೂರಿನಲ್ಲಿ ಏಳು ಮಂದಿ ಡಿಸಿಪಿಗಳಿದ್ದಾರೆ. ಆಯಾ ಏರಿಯಾಗೆ ಸಂಬಂಧಿಸಿದ ಡಿಸಿಪಿ ಅವರನ್ನು ಭೇಟಿ ಮಾಡಬೇಕು. ಅವರು ಪಾಸ್‌ ಕೊಡುತ್ತಾರೆ. ಆನ್‌ಲೈನ್‌ನಲ್ಲಿಯೇ ಪಾಸ್‌ ಕೊಡುವ ವ್ಯವಸ್ಥೆ ಶುರುವಾಗಿದೆ. ರಾಯಚೂರಿನಿಂದ ಹೋಗಿ ಕರೆತರಲು ಅವಕಾಶವಿಲ್ಲ

*ರಮೇಶ ಮೇರವಾಡೆ, ನಿವೃತ್ತ ಪ್ರಾಧ್ಯಾಪಕ ರಾಯಚೂರು: ಮಗಳು ಹೆರಿಗೆಗಾಗಿ ಬಂದಿದ್ದು ಈಗ ಬೆಂಗಳೂರಿಗೆ ಬಿಟ್ಟು ಬರಬೇಕಿದೆ. ಪಾಸ್‌ ಸಿಗಬಹುದೆ?

–ರಾಯಚೂರಿನಿಂದ ವಾಹನದಲ್ಲಿ ಕರೆದುಕೊಂಡು ಹೋಗಿ ಬಿಟ್ಟುಬಿರಲು ಅವಕಾಶವಿದೆ. ಸಾಮಾನ್ಯವಾಗಿ ವಾಪಸಾಗಲು ಚಾಲಕರಿಗೆ ಮಾತ್ರ ಅವಕಾಶವಿದ್ದು, ಇದು ಹೆರಿಗೆಗೆ ಸಂಬಂಧಿಸಿದ ವಿಷಯ ಆಗಿರುವುದರಿಂದ ಒಬ್ಬರು ಜೊತೆಯಲ್ಲಿ ಹೋಗಿ ವಾಪಸ್‌ ಬರಲು ಪಾಸ್‌ ಒದಗಿಸಲಾಗುವುದು.

*ವಿಕ್ರಮ ಲಿಂಗಸುಗೂರು: ತೆಲಂಗಾಣದ ಐಜಾ ಗ್ರಾಮದಿಂದ ಕಾರ್ಯಕ್ರಮಕ್ಕಾಗಿ ಬಂದಿದ್ದು, 45 ದಿನಗಳಿಂದ ಇಲ್ಲೇ ಉಳಿದಿದ್ದೇವೆ. ವಾಪಸ್‌ ಹೋಗಬೇಕಿದೆ.

–ತೆಲಂಗಾಣ ಸರ್ಕಾರ ಆ್ಯಪ್‌ ರೂಪಿಸಿದ್ದು, ಅದರಲ್ಲಿ ಆನ್‌ಲೈನ್ ನೋಂದಣಿ ಮಾಡಬೇಕು. ಇಲ್ಲದಿದ್ದರೆ ಇಲ್ಲಿಂದ ಬಾಡಿಗೆ ವಾಹನ ಮಾಡಿಕೊಂಡು ಹೋಗುವುದಕ್ಕೆ ಪಾಸ್‌ ನೀಡಲಾಗುವುದು. 24 ಗಂಟೆಯೊಳಗೆ ವಾಹನಸಮೇತ ಚಾಲಕ ಮರಳಬೇಕು.

*ಶಿವಕುಮಾರ್‌ ಮುದಗಲ್‌: ನವೋದಯ ಶಾಲೆಯಿಂದ ಹೊರರಾಜ್ಯಕ್ಕೆ ಹೋಗಲು 30 ಜನರಿಗೆ ಹೇಗೆ ಅನುಮತಿ ನೀಡಲಾಗಿದೆ?

–ಹರಿಯಾಣದ ಪಾಣಿಪತ್‌ಗೆ 30 ವಿದ್ಯಾರ್ಥಿಗಳು ತೆರಳುವುದಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಪರವಾನಗಿ ನೀಡಲಾಗಿದೆ. ಒಮ್ಮುಖ ಸಂಚಾರಕ್ಕೆ ಮಾತ್ರ ಅವಕಾಶವಿದೆ.

*ತಿರುಮಲರೆಡ್ಡಿ ರಾಯಚೂರು: ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದರಿಂದ ಅಂತರ ಕಾಯ್ದುಕೊಳ್ಳದೆ ಜನರು ಓಡಾಡುತ್ತಿದ್ದಾರೆ.

–ಆರ್ಥಿಕ ಚಟುವಟಿಕೆ ಹಾಗೂ ಕೃಷಿ ಚಟುವಟಿಕೆ ಶುರು ಮಾಡುವುದಕ್ಕೆ ಸಡಿಲಿಕೆ ಮಾಡಲಾಗಿದೆ. ಜನರು ಯಾವಾಗ ಬೇಕಾದರೂ, ಯಾವುದಕ್ಕೆ ಬೇಕಾದರೂ ಓಡಾಡುವುದಕ್ಕೆ ಅವಕಾಶವಿಲ್ಲ. ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಬರಬೇಕು. ಗರ್ಭಿಣಿಯರು, 65 ವಯಸ್ಸು ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳು, ವಿವಿಧ ಅನಾರೋಗ್ಯ ಕಾರಣ ಇರುವವರು ಆದಷ್ಟು ಮನೆಯಿಂದ ಹೊರ ಬರಬಾರದು ಎಂದು ಸರ್ಕಾರದ ನಿರ್ದೇಶನ ಇದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಇನ್ನು ಮುಂದೆ ಶುರುವಾಗಲಿದೆ.

*ಅಮರೇಶ ಕವಿತಾಳ: ಮದ್ಯದಂಗಡಿಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ.

– ಎಲ್ಲಾ ಮದ್ಯದಂಗಡಿಗಳ ಎದುರು ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಮದ್ಯದಂಗಡಿ ಮುಚ್ಚಲಾಗುವುದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಸರದಿಯಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮೊದಲ ದಿನ ಮಾತ್ರ ಸಂಜೆ 7 ರವರೆಗೂ ಮದ್ಯದಂಗಡಿಗಳಿಗೆ ಅವಕಾಶವಿತ್ತು. ಮಂಗಳವಾರದಿಂದ ಮಧ್ಯಾಹ್ನ 2 ಗಂಟೆಗೆ ಬಂದ್ ಮಾಡಲಾಗುತ್ತಿದೆ.

*ಮಂಜುನಾಥ ಅರಕೇರಾ: ಸರಕು ವಾಹನಗಳಲ್ಲಿ ಬಿಡಿಭಾಗಗಳನ್ನು ತೆಗೆದುಕೊಂಡು ಬರುವುದಕ್ಕೆ ಅವಕಾಶ ನೀಡುತ್ತಿಲ್ಲ.

–ಸರಕು ವಾಹನಗಳ ಸಂಚಾರಕ್ಕೆ ಎಲ್ಲಿಯೂ ಅಡ್ಡಿ ಮಾಡುವುದಿಲ್ಲ. ಬಿಡಿಭಾಗಗಳನ್ನು ಖರೀದಿಸಿದ ಬಿಲ್‌ ತೋರಿಸಿದರೆ, ಸಂಚಾರಕ್ಕೆ ಅವಕಾಶ ನೀಡುತ್ತಾರೆ. ಇದಕ್ಕೆ ಪಾಸ್‌ ಅಗತ್ಯ ಇರುವುದಿಲ್ಲ.

*ಅಮರನಾಥ ರಾಯಚೂರು: ಗುಂತಕಲ್‌ಗೆ ಪ್ರವಾಸಕ್ಕೆ ಹೋಗಿದ್ದ ಮಕ್ಕಳು ಅಲ್ಲಿಯೇ ಉಳಿದುಕೊಂಡಿದ್ದಾರೆ. ಅವರನ್ನು ಕರೆತರುವುದು ಹೇಗೆ?

– ‘ಸೇವಾಸಿಂಧು’ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿ ಕಾಯಬೇಕು. ಅದರಲ್ಲಿ ಪಾಸ್‌ ಒದಗಿಸುವ ವ್ಯವಸ್ಥೆ ಇದೆ.

*ದೇವೆಂದ್ರ ಬಾಗಲವಾಡ: ಆಂಧ್ರದ ಗುಂಟೂರಿನಲ್ಲಿ ಕಾರ್ಮಿಕರು ಉಳಿದುಕೊಂಡಿದ್ದು, ಅವರನ್ನು ಕರೆತರಬೇಕಿದೆ.

– ಸೇವಾಸಿಂಧು ಅ್ಯಪ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ, ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಾಗದಿದ್ದರೆ 1950 (08532) ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆದುಕೊಳ್ಳಬಹುದು. ನೋಂದಣಿ ಮಾಡಿಕೊಂಡರೆ, ಪಾಸ್‌ ಸಿಗುತ್ತದೆ.

*ವೆಂಕಟೇಶ ನಾಯಕ, ದೇವಸುಗೂರು: ಕೃಷ್ಣಾನದಿಯಲ್ಲಿ ಹಾರುಬೂದಿ ಮಿಶ್ರಣವಾಗುತ್ತಿದ್ದು, ಅದೇ ನೀರನ್ನು ದೇವುಸುಗೂರಿಗೆ ಕುಡಿಯಲು ಪೂರೈಸುತ್ತಿದ್ದಾರೆ. ಕ್ರಮ ಕೈಗೊಳ್ಳಿ.

– ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಲಾಗುವುದು.

*ಶಂಕರಗೌಡ ರಾಯಚೂರು: ಕರ್ನಾಟಕ ಒನ್‌ನಲ್ಲಿ ಪಾಸ್‌ಗಾಗಿ ಅರ್ಜಿ ಸಲ್ಲಿಸಿದ್ದು, ಇನ್ನೂ ಸಿಕ್ಕಿಲ್ಲ. ಬಿಹಾರಗೆ ಹೋಗಿ ನಮ್ಮವರನ್ನು ಕರೆದುಕೊಂಡು ಬರುತ್ತೇವೆ.

– ಪಾಸ್‌ ಸಿಗುತ್ತದೆ, ಕಾಯಬೇಕು. ರಾಜ್ಯದ ನೋಡಲ್‌ ಅಧಿಕಾರಿ ಅದಕ್ಕೆ ಅನುಮೋದನೆ ನೀಡಿದ ತಕ್ಷಣ ಪಾಸ್‌ ಸಿಗುತ್ತದೆ. ಬೇರೆ ರಾಜ್ಯಗಳಿಗೆ ಸಂಬಂಧಿಸಿದ ಪಾಸ್‌ ದೊರೆಯಲು ಎರಡು ದಿನ ತಡವಾಗುತ್ತದೆ.

*ಬುಡ್ಡಪ್ಪ, ಬಳಗಾನೂರು: ಬೆಂಗಳೂರಿನಲ್ಲಿ ಕೆಲಸ ಮಾಡುವ ಕಂಪನಿ ಪ್ರಾರಂಭವಾಗಿದ್ದು, ಹೋಗುವುದಕ್ಕೆ ಪಾಸ್‌ ಸಿಗುತ್ತಿಲ್ಲ.

– ಒಮ್ಮುಖ ಸಂಚಾರಕ್ಕೆ ಪಾಸ್‌ ಸಿಗುತ್ತದೆ. ತಾಲ್ಲೂಕು ಕಚೇರಿಯಲ್ಲಿಯೂ ಅರ್ಜಿ ಸಲ್ಲಿಸಬಹುದು. ಬಸ್‌ ಸೌಕರ್ಯ ಇನ್ನೂ ಆರಂಭಿಸಿಲ್ಲ. ಅಂತರಜಿಲ್ಲಾ ಬಸ್‌ ಸಂಚಾರ ಇನ್ನೂ ತಡವಾಗುತ್ತದೆ. ಬಾಡಿಗೆ ವಾಹನದಲ್ಲಿ ಹೋಗುವುದಕ್ಕೆ ನಿಮಗೆ ಅವಕಾಶವಿದೆ.

*ವಿಜಯಲಕ್ಷ್ಮೀ ರಾಯಚೂರು: ಮಗ, ಸೊಸೆ ಬಿಹಾರದಲ್ಲಿ ಉಳಿದುಕೊಂಡಿದ್ದಾರೆ. ಅವರನ್ನು ಕರೆತರಲು ಅವಕಾಶ ಕೊಡಿ.

– ಅಲ್ಲಿಂದ ಬಾಡಿಗೆ ವಾಹನ ಪಡೆದುಕೊಂಡು ಬರಲು ಸೂಚಿಸಿ. ಸೇವಾಸಿಂಧು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಪಾಸ್‌ ಕೊಡಲು ಸ್ವಲ್ಪ ವಿಳಂಬವಾಗುತ್ತದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಇಲ್ಲಿಂದಲೇ ವಾಹನ ತೆಗೆದುಕೊಂಡು ಹೋಗಿ ಕರೆತರಲು ಅವಕಾಶವಿಲ್ಲ. ಆದರೂ ಪರಿಶೀಲಿಸುತ್ತೇನೆ.

*ಎಚ್‌.ಶಿವರಾಜ, ದೇವದುರ್ಗ: ಅಂತರ ಕಾಯ್ದುಕೊಳ್ಳಲು ದೇವದುರ್ಗ ತಾಲ್ಲೂಕು ಹಿನ್ನೆಡೆಯಲ್ಲಿದೆ. ಈ ಬಗ್ಗೆ ಏನು ಹೇಳುತ್ತೀರಿ?

– ಅಂತರ ಕಾಯ್ದುಕೊಳ್ಳುವ ವಿಷಯದಲ್ಲಿ ಜಿಲ್ಲೆಯಲ್ಲಿ ಬಹಳಷ್ಟು ಬೇಗನೆ ಕ್ರಮಗಳನ್ನು ಆರಂಭಿಸಲಾಗಿತ್ತು. ದೇಶದಲ್ಲಿ ಆರಂಭದಲ್ಲೇ ಕ್ರಮ ವಹಿಸಿದ ಜಿಲ್ಲೆಗಳ ಪೈಕಿ ರಾಯಚೂರು ಕೂಡಾ ಒಂದು. ಅಂತರ ಕಾಯ್ದುಕೊಳ್ಳುವ ವಿಷಯದಲ್ಲಿ ಜನರು ಕೂಡಾ ತಿಳಿದುಕೊಳ್ಳಬೇಕು. ಅಂತರ ಕಾಯ್ದುಕೊಳ್ಳದಿದ್ದರೆ ಕ್ರಮಗಳನ್ನು ಬಿಗಿಗೊಳಿಸಲಾಗುವುದು

ಪ್ರಶ್ನೆ ಕೇಳಿದವರು–ತಾಯಣ್ಣ ಅರೋಲಿ, ಗುರುರಾಜ ಮಾನ್ವಿ, ಜಾಲಹಳ್ಳಿ ನರಸಣ್ಣ, ಗುರುಸ್ವಾಮಿ ರಾಯಚೂರು, ನಿಂಗಣ್ಣ ಮೊಕಾಶಿ ಜಾಲಹಳ್ಳಿ, ಶರಣಬಸವ ರಾಯಚೂರು, ಹನುಮಂತ ದೇವದುರ್ಗ, ಇಮಾಮಸಾಬ್‌ ಸಿಂಧನೂರು, ವೆಂಕಟೇಶ ಸಿರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT