ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವ ಉಳಿಸಲು ಎನ್‌ಡಿಎ ಸೋಲಿಸಿ: ಹಿರೇಮಠ

ಸಮಾಜದಲ್ಲಿ ವಿಷ ಬಿತ್ತುತ್ತಿರುವ ಬಿಜೆಪಿ, ಆರ್‌ಎಸ್‌ಎಸ್: ಆರೋಪ
Published 24 ಫೆಬ್ರುವರಿ 2024, 15:16 IST
Last Updated 24 ಫೆಬ್ರುವರಿ 2024, 15:16 IST
ಅಕ್ಷರ ಗಾತ್ರ

ರಾಯಚೂರು: ‘ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸಾಂವಿಧಾನಿಕ ಮಾರ್ಗದಲ್ಲಿ ನಡೆದಿದೆ. ರೈತ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಬೇಕು’ ಎಂದು ಸಮಾಜ ಪರಿವರ್ತನಾ ಸಮಿತಿ ಹಾಗೂ ಸಿಟಿಜನ್ ಫಾರ್ ಡೆಮಾಕ್ರಸಿ ಸಂಘದ ಅಧ್ಯಕ್ಷ ಎಸ್.ಆರ್.ಹಿರೇಮಠ ಮನವಿ ಮಾಡಿದರು.

‘ಪ್ರಜಾಪ್ರಭುತ್ವದಲ್ಲಿ ಮತದಾರರೇ ಸಾರ್ವಭೌಮರು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ದಿಸೆಯಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು. ಲೋಕಸಭೆಗೆ ಅರ್ಹರನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು’ ಎಂದು ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ಕೇಂದ್ರದ ಎನ್‌ಡಿಎ ಸರ್ಕಾರ ಸಿಬಿಐ, ಇ.ಡಿ., ಆದಾಯ ತೆರಿಗೆ ಇಲಾಖೆ ಹಾಗೂ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಪ್ರಧಾನಿ ಮೋದಿ ಅವರು ಸರ್ಕಾರದ ವಿರುದ್ಧ ಪ್ರಶ್ನೆ ಮಾಡಿದವರ ಧ್ವನಿ ಅಡಗಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಚುನಾವಣಾ ಬಾಂಡ್’ ಎಂಬ ಅಸಾಂವಿಧಾನಿಕ ಯೋಜನೆಯ ಮೂಲಕ ಕಾರ್ಪೊರೇಟ್ ಕಂಪನಿಗಳಿಂದ ಕೋಟ್ಯಂತರ ರೂಪಾಯಿ ಹಣ ಪಡೆಯಲಾಗಿದೆ. ಚುನಾವಣಾ ಬಾಂಡ್‌ಕ್ಕಿಂತ ದೊಡ್ಡ ಭ್ರಷ್ಟಾಚಾರ ಇನ್ನೊಂದಿಲ್ಲ. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ ಅನ್ನು ಸಂವಿಧಾನ ವಿರೋಧಿ ಯೋಜನೆ ಎಂದು ಉಲ್ಲೇಖಿಸಿ ರದ್ದುಪಡಿಸಿದ್ದು ಅಘೋಷಿತ ತುರ್ತುಪರಿಸ್ಥಿತಿಯ ಕಾಲದಲ್ಲಿ ಸಣ್ಣದೊಂದು ಆಶಾಭಾವನೆ ಮೂಡಿಸಿದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪುನಿಂದ ಬಿಜೆಪಿ,‌ ಸಂಘ ಪರಿವಾರದ ಯೋಜನೆಗೆ ದೊಡ್ಡ ಹೊಡೆತವಾಗಿದೆ’ ಎಂದು ತಿಳಿಸಿದರು.

‘ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ)ಜಾರಿ ಮಾಡುವಂತೆ ಸಂಯುಕ್ತ‌ ಕಿಸಾನ್ ಮೋರ್ಚಾ‌ದಿಂದ ರೈತರು ನಡೆಸುತ್ತಿರುವ ದೆಹಲಿ ಚಲೋ ಹೋರಾಟವನ್ನು ಪೊಲೀಸ್ ಪಡೆಯ ಮೂಲಕ ಹತ್ತಿಕ್ಕಲಾಗುತ್ತಿದೆ. ರೈತರ ಪರವಾಗಿ ನಿಲ್ಲಬೇಕಿದ್ದ ಎನ್‌ಡಿಎ ಸರ್ಕಾರ ಕಾರ್ಪೊರೇಟ್‌ಗಳ ಪರವಾಗಿ ನಿಂತಿದೆ. ದೇಶದ ರೈತರು ಶಕ್ತಿಯುತವಾಗಿ ಹೋರಾಟ ನಡೆಸಿದ್ದಾರೆ. ರೈತರ ಹೋರಾಟಕ್ಕೆ ನಮ್ಮ ಸಂಘದಿಂದ ಸಂಪೂರ್ಣ ಬೆಂಬಲ ಇದೆ’ ಎಂದು ಹೇಳಿದರು.

‘ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಚುನಾವಣೆ ಅಧಿಕಾರಿಯೇ ಕಾನೂನು ವಿರೋಧಿಯಾಗಿ ನಡೆದುಕೊಂಡರು. ಪ್ರಕರಣಕ್ಕೆ ಸಂಬಂಧ ಸುಪ್ರೀಂಕೋರ್ಟ್‌ನ ‌ಐವರು ನ್ಯಾಯಮೂರ್ತಿಗಳ ಪೀಠ ಬಿಜೆಪಿ ಅಭ್ಯರ್ಥಿಯ ಗೆಲುವು ರದ್ದುಪಡಿಸಿ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಆಯ್ಕೆಯನ್ನು ಪ್ರಕಟಿಸಿತು. ಸುಪ್ರೀಂ ಕೋರ್ಟ್‌ನಿಂದಾಗಿ ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದೆ’ ಎಂದು ತಿಳಿಸಿದರು.

‘ಆರ್‌ಎಸ್‌ಎಸ್ ಸಮಾಜದಲ್ಲಿ ವಿಷಯದ ಬೀಜ ಬಿತ್ತುತ್ತಿದೆ. ಅಭಿವೃದ್ಧಿ ಬದಿಗೊತ್ತಿ ಜಾತಿ ಧರ್ಮದ ವಿಷಯಗಳ ವಿವಾದ ಹರಿಯಬಿಟ್ಟು ಜನರ ದಾರಿ ತಪ್ಪಿಸುತ್ತಿದೆ. ಈ ನಡುವೆ ತಮಗೆ ಅನುಕೂಲಕರವಾಗುವ ರೀತಿಯಲ್ಲಿ ಕಾರ್ಯಸೂಚಿ ಅನುಷ್ಠಾನಗೊಳಿಸುತ್ತಿದೆ. ಮತದಾರರು ಫ್ಯಾಸಿಸ್ಟ್ ಸರ್ಕಾರವನ್ನು ಜನರು ಅಧಿಕಾರದಿಂದ ಕೆಳಗಿಳಿಸಬೇಕು’ ಎಂದು ಕೋರಿದರು.

ಜನ ಸಂಗ್ರಾಮ ಪರಿಷತ್‌ನ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಖಾಜಾ ಅಸ್ಲಂಅಹ್ಮದ್, ಜಾನ್ ವೆಸ್ಲಿ, ಮಾರೆಪ್ಪ ಹರವಿ, ಆಂಜನೇಯ ಕುರುಬದೊಡ್ಡಿ ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವ ಕೊಂದುಹಾಕಲು ನರೇಂದ್ರ ಮೋದಿ ನಿರಂಕುಶಾಧಿಕಾರದ ಹಾದಿ ಹಿಡಿದಿದ್ದಾರೆ. ಈ ಕುರಿತು ಲೇಖಕ ಜಾನ್‌ ಕೀನ್‌ ಅವರು 2021ರಲ್ಲೇ ಪುಸ್ತಕ ಬರೆದಿದ್ದಾರೆ

-ಎಸ್‌.ಆರ್‌.ಹಿರೇಮಠ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT