ಲಿಂಗಸುಗೂರು: ‘ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಏನನ್ನೂ ಹೇಳುವುದಿಲ್ಲ. ತನಿಖೆಯಲ್ಲಿ ತಪ್ಪು ಮಾಡಿದ್ದು ಸಾಬೀತಾದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ’ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ‘ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಈ ಹಿಂದೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿದ ಸಾಧನೆಗಳ ಕಾರಣಕ್ಕೆ ಜನ ಮತ್ತೊಂದು ಅವಧಿಗೆ ಬಿಜೆಪಿಗೆ ಆಶೀರ್ವಾದ ಮಾಡಲು ಸಿದ್ಧರಾಗಿದ್ದಾರೆ. ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಗೆಲವು ಸಾಧಿಸಲಿದ್ದೇವೆ’ ಎಂದರು. ಯುವಕ ಯುವತಿಯರು ಸೆಲ್ಫಿ ತೆಗೆಯಿಸಿಕೊಳ್ಳಲು ನೂಕು ನುಗ್ಗಲು ನಡೆಸಿದಾಗ ಬಿ.ವೈ.ವಿಜಯೇಂದ್ರ ಅವರೇ ಮೊಬೈಲ್ ಪಡೆದು ಎಲ್ಲರೊಂದಿಗೆ ಸೆಲ್ಫಿ ತೆಗೆದಿದ್ದು ಗಮನ ಸೆಳೆಯಿತು. ಯುವಕರು ವಿಜಯೇಂದ್ರ ಪರ ಘೋಷಣೆ ಹಾಕಿ ಕುಣಿದು ಕುಪ್ಪಳಿಸಿದರು.