ಸೋಮವಾರ, ಜೂನ್ 14, 2021
21 °C
ಜಿಲ್ಲೆಯಾದ್ಯಂತ ಈದ್‌ ಉಲ್‌ ಫಿತ್ರ್‌ ಸರಳ ಆಚರಣೆ

ರಾಯಚೂರು: ದೂರದಿಂದಲೇ ಶುಭಾಶಯ ವಿನಿಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಮುಸ್ಲಿಮರು ತಮ್ಮ ಮನೆಗಳಲ್ಲಿಯೇ‌ ಪ್ರಾರ್ಥನೆ ಮಾಡುವ ಮೂಲಕ ‘ಈದ್‌ ಉಲ್‌ ಫಿತ್ರ್‌’ ಹಬ್ಬವನ್ನು ಶುಕ್ರವಾರ ಸರಳವಾಗಿ ಆಚರಿಸಿದರು.

ಕೋವಿಡ್‌ ಎರಡನೇ ಅಲೆ ತಡೆಗಾಗಿ ಲಾಕ್‌ಡೌನ್ ಇರುವುದರಿಂದ ಮಸೀದಿ ಹಾಗೂ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ. ಹೀಗಾಗಿ ಕುಟುಂಬ ಸದಸ್ಯರೊಂದಿಗೆ ಸಾಮೂಹಿಕವಾಗಿ ಮನೆಯೊಳಗೆ ಹಾಗೂ ಛಾವಣಿಗಳ ಮೇಲೆ ಪ್ರಾರ್ಥನೆ ಸಲ್ಲಿಸಿದರು.

ಪರಸ್ಪರ ಅಲಿಂಗನ, ಕೈ ಕುಲುಕಿಸದೇ ದೂರದಿಂದಲೇ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು ಮಾತ್ರ ಹೊಸಬಟ್ಟೆ ಧರಿಸಿದ್ದರು.‌ ಮನೆಯ ಸದಸ್ಯರು ಬಹುತೇಕ ಈ ವರ್ಷ ಹೊಸ ಬಟ್ಟೆ ಖರೀದಿಸುವುದಕ್ಕೆ ಸಾಧ್ಯವಾಗಲಿಲ್ಲ.

ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ನೆರೆಹೊರೆಯವರನ್ನು ಹೆಚ್ಚಾಗಿ ಕರೆಯಲಿಲ್ಲ. ಕುಟುಂಬದ ಬಂಧುಗಳನ್ನು ಮಾತ್ರ ಮನೆಗಳಿಗೆ ಕರೆದು ಶಿರ್ ಖುರ್ಮಾ ವಿಶೇಷ ಊಟ ಮಾಡಿಸಿದರು. ಕೆಲವರಿಗೆ ಮನೆಗಳಿಗೆ ತೆರಳಿ ಸಿಹಿ ಹಂಚಿದರು. ಹಬ್ಬದ ದಿನದಂದು ತಮ್ಮ ಹಿರಿಯರ ಸಮಾಧಿಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವುದು ಸಂಪ್ರದಾಯ. ಆದರೆ ಈ ಬಾರಿ ಕೋವಿಡ್‌ ಇರುವುದರಿಂದ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸಮಾಧಿಗೆ ಭೇಟಿ ಸಾಧ್ಯವಾಗಲಿಲ್ಲ. ಕುಟುಂಬದ ಒಬ್ಬರು ಸದಸ್ಯರು ಮಾತ್ರ ತೆರಳಿ‌ ಹೂ ಹಾಕಿ‌ ಪ್ರಾರ್ಥನೆ ಮಾಡಿದರು.

ಲಾಕ್‌ಡೌನ್‌ನಿಂದಾಗಿ‌ ವಿವಿಧ ಕಡೆ ಇರುವ ಸಂಬಂಧಿಕರು ಮನೆಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಸಾಮಾಜಿಕ ಜಾಲತಾಣದ ಮೂಲಕವೇ ಶುಭಾಶಯ ವಿನಿಮಯ ಮಾಡಿಕೊಂಡರು. ಒಂದು ತಿಂಗಳು ಉಪವಾಸ ವ್ರತಾಚರಣೆ ಮೂಲಕ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ವಿಶೇಷ ಮಾಸ ರಂಜಾನ್‌, ಈದ್‌ ಉಲ್‌ ಫಿತ್ರ್‌ ಆಚರಣೆಯೊಂದಿಗೆ ಮುಕ್ತಾಯವಾಯಿತು.

ಧಾನ್ಯ, ಮಟನ್‌, ಚಿಕನ್‌ ಹಾಗೂ ನಗದು ದಾನವನ್ನು ತಮ್ಮ ಮನೆಗಳ ಎದುರಿನಲ್ಲಿಯೇ ಉಳ್ಳವರು ಇಲ್ಲದವರಿಗೆ ನೀಡುತ್ತಿರುವುದು ಕೆಲವು ಬಡಾವಣೆಗಳಲ್ಲಿ ಕಂಡುಬಂತು. ಮುಸ್ಲಿಮರು ತಾವು ಗಳಿಸಿದ ಸಂಪತ್ತಿನ ಒಂದಿಷ್ಟು ಭಾಗವನ್ನು ಬಡವರಿಗೆ ದಾನ ಮಾಡುವುದು ಈದ್‌ ಉಲ್‌ ಫಿತ್ರ್‌ ಹಬ್ಬ ಆಚರಣೆಯ ಒಂದು ಭಾಗ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು