ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ಆರಂಭಕ್ಕೆ ಇದು ಸಕಾಲ

ಜಿಲ್ಲೆಯಲ್ಲಿ ವಿಶೇಷ ದೇಶಿ ತಳಿಗಳ ಸಂವರ್ಧನೆಯಿಂದ ಅನುಕೂಲ
Last Updated 6 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಆಸಕ್ತಿ ಇರುವವರು ವಾಣಿಜ್ಯ ಉದ್ದೇಶಕ್ಕಾಗಿ ಅಥವಾ ಕೃಷಿ ಕುಟುಂಬದ ನೆರವಿಗಾಗಿ ಗೋವು ಹಾಗೂ ಎಮ್ಮೆಗಳನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಹೈನುಗಾರಿಕೆ ಮಾಡುವುದಕ್ಕೆ ಇದು ಸಕಾಲ!

ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಹಾಲು ಒಕ್ಕೂಟದ ಅಧಿಕಾರಿಗಳು ಹೇಳುವ ಮಾತಿದು. ಬದ್ಧತೆಯಿಂದ ಹೈನುಗಾರಿಕೆ ಮಾಡುವವರಿಗೆ ಸಾಲ ಒದಗಿಸುವುದು ಹಾಗೂ ಇತರೆ ತಾಂತ್ರಿಕ ಸಹಾಯ ಮಾಡುವುದಕ್ಕೆ ಅಧಿಕಾರಿಗಳು ಯೋಜನೆ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ಕೂಡಾ ಈ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದೆ.

ಈಗ ಹೈನುಗಾರಿಕೆ ಆರಂಭಿಸುವುದರಿಂದ ಮುಂದಿನ ಎರಡು ವರ್ಷಗಳ ನಂತರ ಭಾರಿ ಪ್ರಮಾಣದಲ್ಲಿ ಲಾಭ ಪಡೆಯಬಹುದಾಗಿದೆ. ಕರ್ನಾಟಕದಲ್ಲಿರುವ ಎಮ್ಮೆ ಹಾಗೂ ಗೋವಿನ ತಳಿಗಳು ದಿನಕ್ಕೆ ಗರಿಷ್ಠ 4 ರಿಂದ 5 ಲೀಟರ್‌ ಮಾತ್ರ ಹಾಲು ಕೊಡುತ್ತವೆ. ಆದರೆ, ಉತ್ತರ ಭಾರತದ ವಿಶೇಷ ಗೋ ತಳಿಗಳಾದ ’ಗಿರ್‌’ ಹಾಗೂ ’ಥಾರ್‌ಪಾರ್ಕರ್‌’ ತಳಿಗಳು ದಿನಕ್ಕೆ 8 ರಿಂದ 10 ಲೀಟರ್‌ ಹಾಲು ಒದಗಿಸುತ್ತವೆ. ಜಿಲ್ಲೆಯಲ್ಲಿ ಹೈನುಗಾರಿಕೆ ಉತ್ತೇಜಿಸುವುದಕ್ಕೆ ಹಾಗೂ ಉತ್ತರ ಭಾರತದ ತಳಿಗಳನ್ನು ರಾಯಚೂರು ಜಿಲ್ಲೆಯಲ್ಲಿಯೇ ಸಂವರ್ಧನೆ ಮಾಡುವ ಕಾರ್ಯವನ್ನು ಪಶುವೈದ್ಯಕೀಯ ಸೇವಾ ಇಲಾಖೆಯು ಮೂರು ವರ್ಷಗಳಿಂದ ಕೈಗೊಂಡಿದೆ.

ಮೊದಲ ವರ್ಷ 75 ಗ್ರಾಮಗಳಲ್ಲಿ, ಎರಡನೇ ವರ್ಷ 100, ಮೂರನೇ ವರ್ಷ 250 ಹಾಗೂ ಈ ವರ್ಷ 300 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗೋವು ಮತ್ತು ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗುತ್ತಿದೆ. ಅದರಲ್ಲೂ ಹಾಲು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ತಳಿಗಳ ವಿರ್ಯ ಸಂಗ್ರಹದ ನಳಿಕೆಗಳನ್ನು ಮಾತ್ರ ಕೃತಕ ಗರ್ಭಧಾರಣೆಗೆ ಕಳೆದ ವರ್ಷದಿಂದ ಬಳಸಲಾಗುತ್ತಿದೆ. ಇದರಿಂದ ಸ್ಥಳೀಯ ಗೋವು ಮತ್ತು ಎಮ್ಮೆಗಳು ವಿಶೇಷ ತಳಿಗಳ ಕರುಗಳಿಗೆ ಜನ್ಮ ನೀಡಲಾರಂಭಿಸಿವೆ..

ಎಮ್ಮೆಗಳಿಗೆ ‘ಮುರ್ರಾ’ ತಳಿಯ ವಿರ್ಯ ಸಂಗ್ರಹ ನಳಿಕೆಗಳನ್ನು ಕೃತಕ ಗರ್ಭಧಾರಣೆಗೆ ಬಳಸಲಾಗುತ್ತಿದೆ. ಈಗಾಗಲೇ ಲಿಂಗಸುಗೂರು ಹಾಗೂ ದೇವದುರ್ಗ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕಳೆದ ವರ್ಷ ಕೃತಕ ಗರ್ಭಧಾರಣೆಮಾಡಲಾಗಿತ್ತು. ನೂರಾರು ಗೋವು ಮತ್ತು ಎಮ್ಮೆಗಳು ಈಗಾಗಲೇ ಕರುಗಳಿಗೆ ಜನ್ಮ ನೀಡಿವೆ. ಈ ವರ್ಷದಿಂದ ಜಿಲ್ಲೆಯ ಬಹುತೇಕ ಕಡೆ ಕೃತಕ ಗರ್ಭಧಾರಣೆ ಆರಂಭಿಸಲಾಗಿದೆ. ಮುಂದಿನ ವರ್ಷ ವಿಶೇಷ ತಳಿಯ ಕರುಗಳು ಜನ್ಮಪಡೆಯುವ ಸಂಖ್ಯೆ ಸಾವಿರಾರು ಆಗಲಿದೆ. ಈ ಕರುಗಳು ಗರ್ಭಧರಿಸುವುದಕ್ಕೆ ಒಂದು ವರ್ಷ ಬೇಕಾಗುತ್ತದೆ. ಈ ವಿಶೇಷ ತಳಿಗಳು ಇನ್ನೊಂದು ಕರುವಿಗೆ ಜನ್ಮನೀಡಿದ ಬಳಿಕ ಅಧಿಕ ಹಾಲು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇದಕ್ಕಾಗಿ ಎರಡು ವರ್ಷ ಕಾಯಬೇಕು.

ವಿಶೇಷ ದೇಶಿ ತಳಿಗಳನ್ನು ಸಂವರ್ಧನೆ ಮಾಡುವುದಕ್ಕೆ ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಕೃತಕ ಗರ್ಭಧಾರಣೆ ಯೋಜನೆ’ಯನ್ನು ಘೋಷಿಸಿದೆ. ಸದ್ಯಕ್ಕೆ ರಾಜ್ಯದ 17 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ರಾಯಚೂರು ಪಶುವೈದ್ಯಕೀಯ ಸೇವಾ ಇಲಾಖೆಯು ಗುಜರಾತಿನ ಸಬರಮತಿಯಿಂದ ವಿಶೇಷ ತಳಿಗಳ ವಿರ್ಯ ಸಂಗ್ರಹ (ಇನ್‌ಸೆಮಿನೆಷನ್‌) ನಳಿಕೆಗಳನ್ನು ತರಿಸಿಕೊಳ್ಳುತ್ತಿದೆ. ಚೆನ್ನೈ ಲ್ಯಾಬ್‌ನಿಂದ ‘ಮುರ್ರಾ’ ತಳಿಗಳ ವಿರ್ಯ ಸಂಗ್ರಹ ನಳಿಕೆಗಳನ್ನು ತರಿಸಿಕೊಳ್ಳುತ್ತಿದೆ. ಜಿಲ್ಲೆಯಾದ್ಯಂತ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಈ ವಿಶೇಷ ತಳಿಗಳ ಕೃತಕ ಗರ್ಭಧಾರಣೆ ಮಾಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT