ಶುಕ್ರವಾರ, ಫೆಬ್ರವರಿ 3, 2023
23 °C
ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಪುರಾಣ ಮಂಗಲ

ಮಸ್ಕಿ: ಜಂಬೂ ಸವಾರಿ, ರಥೋತ್ಸವ ಇಂದು

ಪ್ರಕಾಶ ಮಸ್ಕಿ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ಎರಡನೇ ಶ್ರೀಶೈಲ ಎಂದೇ ಖ್ಯಾತಿ ಪಡೆದ ಪಟ್ಟಣದ ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ ಭಾನುವಾರ ಪುರಾಣ ಮಂಗಲ, ಜಂಬೂ ಸವಾರಿ ಹಾಗೂ ಮಹಿಳೆಯರಿಂದಲೇ ರಥೋತ್ಸವವು ನಡೆಯಲಿದೆ.

ಬೆಳಿಗ್ಗೆ ಗಂಗಾಸ್ಥಳದಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಕುಂಭ ಹಾಗೂ ಕಳಸದೊಂದಿಗೆ ಪಾಲ್ಗೊಳ್ಳಲಿದ್ದಾರೆ. ಅಶೋಕ ವೃತ್ತದಿಂದ ಆರಂಭವಾಗುವ ಜಂಬೂ ಸವಾರಿಗೆ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಪಣೆ ಮಾಡಿ ಚಾಲನೆ ನೀಡುವರು.

ಸಂಡೂರಿನ ಚಂದ್ರಶೇಖರಯ್ಯರ ವೀರಗಾಸೆ ನೃತ್ಯ, ವಿಜಯಕುಮಾರ ತಂಡದ ಡೊಳ್ಳು, ಶಿವರಾಜ ಕೊಟ್ಟೂರು ತಂಡ ನಂದಿಧ್ವಜ, ಬಸವರಾಜ ಸಿಂಧನೂರು ತಂಡದ ಮಹಿಳಾ ವೀರಗಾಸೆ ಹಾಗೂ ಅಮರೇಶ ಹಸಮಕಲ್ ತಂಡ ಗೊಂಬೆಗಳ ಕುಣಿತ ಸೇರಿದಂತೆ ಕಲಾ ತಂಡಗಳು ಭಾಗವಹಿಸಲಿವೆ.

ಭ್ರಮರಾಂಬಾ ದೇವಿಗೆ ಅಭಿಷೇಕ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ. ಸಂಜೆ 5 ಗಂಟೆಗೆ ಭ್ರಮರಾಂಬಾ ದೇವಿಯ ರಥವನ್ನು ಮಹಿಳೆಯರು ಎಳೆಯುವ ಮೂಲಕ ನವರಾತ್ರಿ ಉತ್ಸವಕ್ಕೆ ವೈಭವದ ತೆರೆ ಬಿಳಲಿದೆ.

ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನೀರಿಕ್ಷೆ ಇದ್ದು ಪೊಲೀಸ್ ಇಲಾಖೆ ಬೀಗಿ ಬಂದೋಬಸ್ತ್ ಮಾಡಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಸಂಜೀವ್ ಕುಮಾರ ತಿಳಿಸಿದ್ದಾರೆ.

ಭ್ರಮರಾಂಬಾ ದೇವಿಯ ಪುರಾಣ ಪ್ರವಚನಕ್ಕೆ 52 ವರ್ಷಗಳ ಇತಿಹಾಸ ಇದೆ. ಎರಡು ವರ್ಷಗಳ ಹಿಂದೆಯೇ 50ನೇ ವರ್ಷಾಚರಣೆಯನ್ನು ಅದ್ದೂರಿಯಾಗಿ ನಡೆಸಬೇಕಾಗಿತ್ತು. ಕೊವಿಡ್ ಕಾರಣದಿಂದ ಕಾರ್ಯಕ್ರಮ ರದ್ದಾಯಿತು.

1971 ರಲ್ಲಿ ಶಂಕರಗೌಡ ಪೊಲೀಸ್ ಪಾಟೀಲ್, ಅಮರೇಗೌಡ ಪಾಟೀಲ್, ಕೊಟ್ರಯ್ಯ ಸ್ವಾಮಿ, ಜೊತಾನ್ ಕಳಕಪ್ಪ, ಸೇರಿದಂತೆ ಹಲವು ಮುಖಂಡರು ಮಲ್ಲಿಕಾರ್ಜುನ ಬೆಟ್ಟದ ಕೆಳಗಡೆ ಇರುವ ಚಿಕ್ಕದಾದ ಭ್ರಮರಾಂಬಾ ದೇವಸ್ಥಾನದಲ್ಲಿ ಮೊದಲಿಗೆ ಪುರಾಣ ಪ್ರಾರಂಭಿಸಿದ್ದರು. ನಂತರ ಭಕ್ತರ ಸಂಖ್ಯೆ ಹೆಚ್ಚಾಯಿತು. ಭಕ್ತರು ಸೇರಿಕೊಂಡು ಕಟ್ಟಿಗೆಯಲ್ಲಿದ್ದ ಭ್ರಮರಾಂಬಾ ದೇವಿಯ ವಿಗ್ರಹವನ್ನು ಕಲ್ಲಿನ ಶಿಲೆಯಲ್ಲಿ ಮಾಡಿಸಿ ಪ್ರತಿಷ್ಠಾಪಿಸಿದರು.

ರಾಯಚೂರು ಜಿಲ್ಲೆ ಅಷ್ಟೇ ಅಲ್ಲ ಕಲ್ಯಾಣ ಕರ್ನಾಟಕದ ಜಿಲ್ಲೆಯ ಭಕ್ತರೂ ಇಲ್ಲಿಗೆ ಬಂದು ದೇವಿಯನ್ನು ಪೂಜಿಸುತ್ತಾರೆ. 

ಬೃಹತ್ ಮಂದಿರ ನಿರ್ಮಿಸಲಾಗಿದೆ. ದೇವಿಗೆ ಚಿನ್ನದ ಕಿರಿಟವಿದೆ. ದೇವಾಲಯವು ರಥ ಹೊಂದಿದೆ. ಪ್ರತಿ ನವರಾತ್ರಿ ಸಂದರ್ಭದಲ್ಲಿ ಪುರಾಣ ಪ್ರವಚನ, ಜಂಬೂ ಸವಾರಿ ಹಾಗೂ ರಥೋತ್ಸವವು ಮೈಸೂರು ದಸರಾ ಮಾದರಿಯಲ್ಲಿ ನಡೆಯುತ್ತಿರುವುದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು